ಕೃಷಿಯಲ್ಲಿ ಅಡುಗೆ ಎಣ್ಣೆ ಹಾಗೂ ಕೋಳಿ ಮೊಟ್ಟೆ ಮಿಶ್ರಣ ಬಳಕೆಯಿಂದ ಉತ್ತಮ ಇಳುವರಿ.. ಹೇಗೆ?
ಅಡುಗೆ ಎಣ್ಣೆಗಳಾದ ಪಾಮ್,ಶೇಂಗಾ,ಕೊಬ್ಬರಿ ಹಾಗೂ ಹತ್ತಿ ಕಾಳು ಎಣ್ಣೆ,ಸೋಯಾಬಿನ್ ಎಣ್ಣೆ ಹೀಗೆ ಹಲವಾರು ಎಣ್ಣೆಗಳಿಗೆ ಕೋಳಿ ಮೊಟ್ಟೆ ಮಿಶ್ರಣ ಮಾಡಿ ವಾರಕ್ಕೊಮ್ಮೆ ಸಿಂಪಡಣೆ ಮಾಡುವುದರಿಂದ ಭತ್ತ,ಹತ್ತಿ ಹಾಗೂ ಮೆಣಸಿನಕಾಯಿ ಬೆಳೆಗಳಿಗೆ ಮುಖ್ಯವಾಗಿ ಮುರುಟು ರೋಗ,ಜೀಗಿ ರೋಗ ಸೇರಿದಂತೆ ವಿವಿಧ ರೋಗಗಳನ್ನು ನಿಯಂತ್ರಣ ಮಾಡಬಹುದು.ಅಲ್ಲದೆ ಬೆಳೆಗಳಿಗೆ ಅಧಿಕ ಪೋಷಕಾಂಶ ನೀಡಬಹುದು ಎನ್ನುವುದನ್ನು ಬಿಸಿಲನಾಡು ರಾಯಚೂರು ಜಿಲ್ಲೆಯ ರೈತರು ಕಂಡುಕೊಂಡಿದ್ದಾರೆ.
ರಾಸಾಯನಿಕ ಗೊಬ್ಬರ ಹಾಗೂ ಕೀಟ ನಾಶಕ ಬಳಸಿ ಕೃಷಿ ಮಾಡುವ ಪದ್ಧತಿಯ ಖರ್ಚಿಗಿಂತ ಎಣ್ಣೆ ಬಳಸಿ ಕೃಷಿ ಮಾಡುವುದರಿಂದ ಕೇವಲ ಶೇ.10ರಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ.
ಕೃಷಿಯಲ್ಲಿ ಅಡುಗೆಎಣ್ಣೆ ಬಳಸುವ ಮೂಲಕ ಎಕರೆಗೆ ಕೇವಲ 5 ರಿಂದ 8 ಸಾವಿರ ರೂ.ಖರ್ಚು ಬರುತ್ತಿದೆ.ಅಡುಗೆ ಎಣ್ಣೆಯನ್ನು ಕ್ರಿಮಿನಾಶಕವಾಗಿ,ಪೋಷಾಕಾಂಶ ನೀಡುವ ಔಷಧಿಯಾಗಿಯೂ ಬಳಕೆ ಮಾಡಬಹುದು ಎಂಬದನ್ನು ರಾಯಚೂರು ರೈತರು ಕಂಡುಕೊಂಡಿದ್ದಾರೆ.
ಮಿಶ್ರಣ ಹೇಗೆ?
ಮೆಣಸಿನಕಾಯಿ,ಹತ್ತಿ ನಾಟಿ ಅಥವಾ ಬಿತ್ತನೆ ಮಾಡಿದ ನಂತರ ಬೆಳೆ ಬೆಳೆಯುತ್ತಿರುವಾಗ ಪ್ರತಿ ವಾರಕ್ಕೊಮ್ಮೆ ಈ ಔಷಧಿಯನ್ನು ಸಿಂಪಡಣೆ ಮಾಡಬೇಕು, ಇಲ್ಲಿ ಮುಖ್ಯವಾಗಿ ಅಡುಗೆ ಎಣ್ಣೆಯೊಂದಿಗೆ ನೀರು ಮಿಶ್ರಣ ಮಾಡಲು ಒಂದು ಮೀಡಿಯೇಟರ್ ಬೇಕು. ಅದಕ್ಕೆ ಅವರು ಕೋಳಿ ಮೊಟ್ಟೆಯನ್ನು ಮಿಶ್ರಣ ಮಾಡುತ್ತಾರೆ.
ಪ್ರತಿ ಎಕರೆಗೆ ಒಂದು ಕೆಜಿ ಅಡುಗೆ ಎಣ್ಣೆ ಹಾಗೂ ಅದಕ್ಕೆ ಆರು ಕೋಳಿ ಮೊಟ್ಟೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ 19 ಲೀಟರ್ ನಂತೆ ನೀರನ್ನ ಬೆರೆಸಿ ಆರು ಟ್ಯಾಂಕ್ ಗಳ ಔಷಧಿಯನ್ನು ಸಿಂಪಡಣೆ ಮಾಡಬೇಕು. ನಿಗಿದಿತ ಸಮಯಕ್ಕೆ ಸರಿಯಾಗಿ ಸಿಂಪಡಣೆ ಮಾಡಿದರೆ ಉತ್ತಮ ಇಳುವರಿ ಬರುತ್ತದೆ. ಪ್ರತಿ ಬಾರಿಯೂ ಔಷಧಿಗಾಗಿ ಅಡುಗೆ ಎಣ್ಣೆ ಪ್ರತಿ ಕೆಜಿಗೆ 60 ರಿಂದ 120 ರೂಪಾಯಿ, ಆರು ಮೊಟ್ಟೆಗಳಿಗೆ 40 ರೂಪಾಯಿ, ಕೂಲಿ 300 ರೂಪಾಯಿ ಹೀಗೆ ಕೇವಲ 450 ರೂಪಾಯಿಯಲ್ಲಿ ಔಷಧಿಯನ್ನು ಸಿಂಪಡಣೆ ಮಾಡಬಹುದು, ಆದೇ ರಸಾಯನಿಕ ಬಳಸಿದರೆ ಪ್ರತಿ ಲೀಟರ್ ಗೆ 1000-1500 ರೂಪಾಯಿ ಹಾಗು ರಸಗೊಬ್ಬರಕ್ಕೆ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ.
ಈ ಹಿಂದೆ ಇಸ್ರೇಲಿನ ಕೃಷಿ ವಿಜ್ಞಾನಿಯೊಬ್ಬರು ಪ್ರಯೋಗ ಮಾಡಿ ಯಶಸ್ವಿಯಾಗಿದ್ದರಂತೆ. ತೆಲಂಗಾಣದಲ್ಲೂ ರೈತರು ಈ ಪ್ರಯೋಗದಿಂದ ಯಶಸ್ಸು ಕಂಡಿದ್ದು ಕಳೆದ ಕೆಲ ವರ್ಷಗಳಿಂದ ಇಲ್ಲಿನ ರೈತರು ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.