ಕಾಫಿ ವ್ಯಾಪಾರಿಗಳಿಂದ ಮುಗ್ಧ ಬೆಳೆಗಾರರ ಲೂಟಿ
1994 ಕ್ಕೆ ಮೊದಲು ಕೇವಲ 2 ರೂಪಾಯಿ ಮೌಲ್ಯದ ಒಂದು ಕಟ್ಟು ಬೀಡಿ ಕೊಂಡುಕೊಳ್ಳಲು ಪರದಾಡುತ್ತಿದ್ದ ಕೆಲವು ಪಡ್ಡೆ ಹುಡುಗರು, ಕಾಫಿ ಮುಕ್ತ ಮಾರುಕಟ್ಟೆಗೆ(Open Market) ಬಂದ ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಗಳಾಗಿರುವುದನ್ನೂ, ಮತ್ತೆ ಕೆಲವರು ರಾಜಕಾರಣಿ ಗಳಾಗಿ ಮೆರೆಯುತ್ತಿರುವುದನ್ನೂ ನೋಡಿದರೆ, ಇವರು ಯಾವ ಪರಿಯಲ್ಲಿ(ರೀತಿಯಲ್ಲಿ) ಮುಗ್ಧ ಕಾಫಿ ಬೆಳೆಗಾರರನ್ನು ವಂಚಿಸಿರಬಹುದೆಂಬುದನ್ನು ಊಹಿಸಲೂ ಅಸಾಧ್ಯ.
ಅತಿವೃಷ್ಠಿ, ಅನಾವೃಷ್ಠಿ, ಅಕಾಲಿಕ ಮಳೆ, ಕಾಡು ಪ್ರಾಣಿಗಳ ಹಾವಳಿ, ಸರ್ಕಾರದ ಕೆಟ್ಟ ನೀತಿ, ಅತಿಯಾದ ವೆಚ್ಚ (ಕೂಲಿ, ಗೊಬ್ಬರ, ಕೀಟ ನಾಶಕ ಇತ್ಯಾದಿ) ಮೊದಲಾದವು ಗಳಿಂದ ಕಂಗಾಲಾಗಿರುವ ಕಾಫಿ ಬೆಳೆಗಾರರಿಗೆ ವ್ಯಾಪಾರಿಗಳ ವಂಚನೆ ಗಾಯದ ಮೇಲೆ ಎಳೆದ ಬರೆಯಂತಾಗಿದೆ.
ಎಷ್ಟೇ ಚೆನ್ನಾಗಿ ಕಾಫಿಯನ್ನು ತೆಗೆದುಕೊಂಡು ಹೋದರೂ, OT, Moisture, Dust, Black bean ಮೊದಲಾದ ಸಬೂಬು(ಕಾರಣ)ಗಳನ್ನು ಹೇಳುತ್ತಾ Cherry ಮೂಟೆಯೊಂದರ ಮೇಲೆ ಕನಿಷ್ಠ 400 ರೂ. ಗಳನ್ನು ಕಳೆಯಲಾಗುತ್ತದೆ. Parchment ಮೂಟೆಯೊಂದರ ಮೇಲೆ ಕನಿಷ್ಠ 1000 ರೂ. ಗಳನ್ನು ಕಳೆಯಲಾಗುತ್ತದೆ. ಜತೆಗೆ ತೂಕದಲ್ಲಿ ಮೋಸ; ಕನಿಷ್ಟ ಒಂದರಿಂದ ಒಂದೂವರೆ KG ವಂಚಿಸಲಾಗುತ್ತದೆ. ಹೀಗೆ ರಸ್ತೆ ಬದಿಯ ಸಾಮಾನ್ಯ ವ್ಯಾಪಾರಿಯೊಬ್ಬ ಯಾವುದೇ ಶ್ರಮವಿಲ್ಲದೆ, ಕುಳಿತಲ್ಲೆ ಮೂಟೆಯೊಂದರ(ಚೆರಿ) ಮೇಲೆ ಕನಿಷ್ಠ 600 ರಿಂದ 800 ರೂ. ಜೇಬಿಗಿಳಿಸುತ್ತಾನೆ. Parchment ಮೂಟೆಯೊಂದರ ಮೇಲೆ ಇದರ ಎರಡು ಪಟ್ಟು ಲಾಭ ಗಳಿಸುತ್ತಾನೆ. ಕಾಫಿ Curing works ನವರು ಮೂಟೆಯೊಂದರ(Cherry) ಮೇಲೆ 1400 ರಿಂದ 1600 ರೂಗಳ ವರೆಗೆ ಲಾಭ ಗಳಿಸುತ್ತಾರೆ. Parchment ಮೂಟೆಯೊಂದರ ಮೇಲೆ ಕನಿಷ್ಠ 3000 ರೂ. ಗಳವರೆಗೆ ಲಾಭ ಗಳಿಸುತ್ತಾರೆ.
ಕಾಫಿ ವ್ಯಾಪಾರಿಗಳಿಂದ ಸಾಲ ತೆಗೆದುಕೊಂಡಿದ್ದರಂತೂ ದೇವರೆ ಗತಿ; ವಾರ್ಷಿಕ ಶೇ. 24 ರಿಂದ ಶೇ. 36 ಬಡ್ಡಿ ತೆರಬೇಕಾಗುತ್ತದೆ. ಕೆಲವು ವ್ಯಾಪಾರಿಗಳಂತೂ ರೈತರಿಗೆ ಗೊತ್ತಿಲ್ಲದಂತೆ ಎರಡರಷ್ಟನ್ನು(100% ಬಡ್ಡಿ) ವಸೂಲಿ ಮಾಡಿರುತ್ತಾರೆ. ಸಾಲ ತೆಗೆದುಕೊಂಡ ರೈತ ಮುಂದಿನ ವರ್ಷದಲ್ಲಿ ಕಾಫಿ ತೆಗೆದುಕೊಂಡು ಹೋದಾಗ ವ್ಯಾಪಾರಿ ಕೇಳಿದ ರೇಟಿಗೆ ಕೊಡಬೇಕಾಗುತ್ತದೆ. ಅರ್ಥಾತ್ ಯುದ್ಧದಲ್ಲಿ ಸೋತ ರಾಜ ಗೆದ್ದ ರಾಜನ ಎದುರು ಶಸ್ತ್ರಾಸ್ತ್ರ ವನ್ನಿಟ್ಟು ಶರಣಾಗುವಂತೆ, ಕಾಫಿ ಬೆಳೆಗಾರ ವ್ಯಾಪಾರಿಯ ಎದುರು ಶರಣಾಗುತ್ತಾನೆ.