ಕಾಳು ಮೆಣಸಿನಲ್ಲಿ ಸಸ್ಯಾಭಿವೃದ್ಧಿ – ಒಂಟಿಗಣ್ಣಿನ ಪದ್ಧತಿ
ಕಾಳುಮೆಣಸು ಪೈಪರ್ ನೈಗ್ರಮ್ ಸಸ್ಯನಾಮದ ಪೈಪೆರೇಸಿ ಸಸ್ಯ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಸಾಂಬಾರು ಬೆಳೆ. ಇದನ್ನು ಸಾಂಬಾರು ಬೆಳೆಗಳ ರಾಜ ಮತ್ತು ಕಪ್ಪು ಬಂಗಾರ ಎಂದು ಕರೆಯುತ್ತಾರೆ. ಕಾಳುಮೆಣಸನ್ನು ಸಾಂಬಾರು ವಸ್ತುವಾಗಿ ಅಡುಗೆ, ತಿಂಡಿ-ತಿನಿಸುಗಳಲ್ಲಿ ಬಳಸುವುದಲ್ಲದೆ ಇದರಿಂದ ಓಲಿಯೋರೆಸಿನ್ ಎಂಬ ಅಂಶವನ್ನು ಬೇರ್ಪಡಿಸಿ ಔಷಧಿ,ಸುಗಂಧ ದ್ರವ್ಯ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ.
ಸಸ್ಯಾಭಿವೃದ್ಧಿ
ಕಾಳುಮೆಣಸಿನ ಗಿಡಗಳನ್ನು ಬೀಜ ಹಾಗೂ ಕಾಂಡಗಳಿಂದ ಅಭಿವೃದ್ದಿಗೊಳಿಸಲಾಗುವುದು.ಆದರೆ ವಾಣಿಜ್ಯವಾಗಿ ಹೆಚ್ಚಿನ ಇಳುವರಿಯನ್ನು ಪಡೆಯಲು ಹರಿದಾಡುವ ಕಾಂಡದ ತುಂಡುಗಳನ್ನು ಬಳಸುವುದು ಸೂಕ್ತ.
ವಿವಿಧ ಬಗೆಯ ಕಾಂಡಗಳು
ಕಾಳುಮೆಣಸಿನಲ್ಲಿ ಐದು ವಿವಿಧ ಬಗೆಯ ಕಾಂಡಗಳನ್ನು ಗುರುತಿಸಬಹುದು.ಈ ಕಾಂಡಗಳು ಜೀವಶಾಸ್ತ್ರೀಯವಾಗಿ ವಿಭಿನ್ನ ಕಾರ್ಯಗಳನ್ನು ನಿರ್ವಹಿಸುತ್ತವೆ.
1. ಮುಖ್ಯ ಕಾಂಡಗಳು: ಇದು ಭೂಮಿಯಿಂದ ನೇರವಾಗಿ ಬೆಳೆದು ಆಧಾರ ಮರಕ್ಕೆ ಅಂಟಿಕೊಂಡಿರುತ್ತದೆ.
2. ಹರಿದಾಡುವ ಕಾಂಡಗಳು: ಇದು ಮುಖ್ಯವಾಗಿ ಕಾಂಡದ ಕೆಳಭಾಗದಲ್ಲಿ ನೆಲದ ಮೇಲೆ ಹರಡಿಕೊಂಡು ಹೋಗುತ್ತವೆ. ಇಂತಹ ಹರಿದಾಡುವ ಕಾಂಡಗಳನ್ನು ಕಾಳುಮೆಣಸಿನ ಗಿಡಗಳನ್ನು ಉತ್ಪಾದಿಸಲು ಬಳಸಬೇಕು.
3. ಫಸಲು ಬಿಡುವ ಕಾಂಡಗಳು: ಈ ಕಾಂಡಗಳಿಂದ ಕಾಳುಮೆಣಸಿನ ಹೂಗೊಂಚಲುಗಳು ಉದ್ಭವವಾಗುತ್ತವೆ. ಆದ್ದರಿಂದ ಫಸಲು ಬಿಡುವ ಕಾಂಡಗಳನ್ನು ಪೊದೆ ಮೆಣಸು ಗಿಡಗಳನ್ನು ಉತ್ಪಾದಿಸಲು ಬಳಸಬೇಕು.
4. ಮೇಲಕ್ಕೆ ಹಬ್ಬುವ ಕಾಂಡಗಳು (ಚಿಗುರು ಬಳ್ಳಿ): ಈ ಕಾಂಡಗಳು ಮುಖ್ಯ ಕಾಂಡದಿಂದ ನೇರ ಆಧಾರವಾಗಿ ಮರಕ್ಕೆ ಅಂಟಿಕೊಂಡು ಬೆಳೆಯುತ್ತವೆ.
5. ನೇತಾಡುವ ಕಾಂಡಗಳು: ಈ ಕಾಂಡಗಳು ಫಸಲನ್ನು ಬಿಡದೆ ಭೂಮಿಯ ಕಡೆ ನೇತಾಡುತ್ತಿರುತ್ತವೆ. ಆದ್ದರಿಂದ ಕಾಳುಮೆಣಸಿನ ಸಸ್ಯಾಭಿವೃದ್ದಿಗಾಗಿ ಹರಿದಾಡುವ ಕಾಂಡಗಳನ್ನು ಮಾತ್ರ ಉಪಯೋಗಿಸಬೇಕು.
ಸಸ್ಯಾಭಿವೃದ್ದಿ ಕ್ರಮಗಳ ವಿವಿಧ ಹಂತಗಳು
ಅಧಿಕ ಇಳುವರಿ ಕೊಡುವ ತಾಯಿ ಬಳ್ಳಿಯನ್ನು ಗುರುತಿಸುವುದು:
ಸಸ್ಯಾಭಿವೃದ್ಧಿಗಾಗಿ ವಿಶೇಷವಾದ ಗುಣಗಳಿರುವ ತಾಯಿ ಬಳ್ಳಿಗಳನ್ನು ಗುರುತಿಸಬೇಕು.ಅಂದರೆ ಅಧಿಕ ಇಳುವರಿ ಕೊಡುವ 5 ರಿಂದ 12 ವರ್ಷದೊಳಗಿನ ಸದೃಢವಾಗಿ ಬೆಳೆದ,ಅತಿ ಹೆಚ್ಚು ಕಾಯಿಗೊಂಚಲುಗಳಿರುವ ಹಾಗೂ ರೋಗ ಮುಕ್ತ ಮತ್ತು ರೋಗಗಳನ್ನು ಸಹಿಸಿಕೊಳ್ಳುವ, ನೆಲದ ಮೇಲೆ ಹರಿದು ಹೋಗುವ ಹಂಬು ಬಳ್ಳಿಗಳನ್ನು ಗುರುತಿಸಬೇಕು. ಗುರುತಿಸಿದ ಬಳ್ಳಿಗಳನ್ನು ಡಿಸೆಂಬರ್ ಜನವರಿ ತಿಂಗಳಿನಲ್ಲಿ ಸುರಳಿ ಸುತ್ತಿ ಆಧಾರ ಮರಕ್ಕೆ ಕಟ್ಟಿ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಗುರುತಿಸಿದ ಹಂಬು ಬಳ್ಳಿಯು ನೆಲದಲ್ಲಿ ಹರಡಿ ಬೇರು ಬಿಡದ ಹಾಗೆ ನೋಡಿಕೊಳ್ಳಬೇಕು.
ಮಿಶ್ರಣ ತಯಾರಿಕೆ:
ಕಾಡು ಮಣ್ಣು, ಕೊಟ್ಟಿಗೆ ಗೊಬ್ಬರ ಹಾಗೂ ಮರಳನ್ನು 2:1:1 ರ ಪ್ರಮಾಣದಲ್ಲಿ ಪದರ ಪದರವಾಗಿ ಹಾಕಿ 30 ದಿನಗಳವರೆಗೆ ಬಿಡಬೇಕು. ಈ ಮಿಶ್ರಣದ ಮೇಲೆ ಚೆನ್ನಾಗಿ ನೀರನ್ನು ಹಾಕಿದ ಮೇಲೆ ಕಪ್ಪು ಪಾಲಿಥೀನ್ ಹಾಳೆಯಿಂದ ಗಾಳಿ ಹೋಗದಂತೆ 30 ದಿನಗಳು ಮುಚ್ಚುವುದರಿಂದ ಮಿಶ್ರಣದ ಉಷ್ಣಾಂಶ ಹೆಚ್ಚಾಗಿ ಕಳೆಯ ಬೀಜಗಳು ಹಾಗೂ ಮಣ್ಣಿನಲ್ಲಿರುವ ಕೀಟಗಳ ಮೊಟ್ಟೆಗಳು ಮತ್ತು ರೋಗಾಣುಗಳು ಸಾಯುತ್ತವೆ. ಈ ರೀತಿ ಮಾಡಿದ ಮಿಶ್ರಣದಿಂದ ರಂಧ್ರವಿರುವ 5 x 3 ಇಂಚುಗಳ ಅಳತೆಯಿರುವ ಪಾಲಿಥೀನ್ ಚೀಲಗಳನ್ನು ಬಿಗಿಯಾಗಿ ತುಂಬಿಸಬೇಕು. ಈ ಮಿಶ್ರಣವನ್ನು ಪಾಲಿಥೀನ್ ಚೀಲಗಳಿಗೆ ತುಂಬುವ ಮೊದಲು ಸ್ವಲ್ಪ ಪ್ರಮಾಣದ ಶಿಲಾರಂಜಕ ಮತ್ತು ಟ್ರೈಕೊಡರ್ಮಾ ಜೈವಿಕ ಜೀವಾಣು ಅಥವಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಮಿಶ್ರಣಕ್ಕೆ ಸೇರಿಸಿ ಪಾಲಿಥೀನ್ ಚೀಲಗಳಿಗೆ ತುಂಬಬೇಕು.
ಕಾಂಡಗಳ ತಯಾರಿಕೆ:
ಆಯ್ಕೆ ಮಾಡಿದ ಹಂಬು ಬಳ್ಳಿಯ ಕಾಂಡಗಳನ್ನು ತಾಯಿ ಬಳ್ಳಿಯಿಂದ ಬೇರ್ಪಡಿಸಿ 1/3 ನೇ ಮಧ್ಯ ಭಾಗದ ತುಂಡುಗಳನ್ನು ಕತ್ತರಿಸಿ ತೆಗೆಯಬೇಕು. ಯಾಕೆಂದರೆ ಗೆಡ್ಡೆಯ ಹಾಗೂ ತುದಿಯ ಭಾಗದ ತುಂಡುಗಳಿಂದ ಸರಿಯಾದ ಬೇರುಗಳು ಮೂಡುವುದಿಲ್ಲ. ಮಧ್ಯಭಾಗದ ತುಂಡುಗಳಿಂದ ಎಲ್ಲಾ ಎಲೆಗಳನ್ನು ಬೇರ್ಪಡಿಸಿ ಒಂದು ಗೆಣ್ಣಿರುವಂತೆ ಕತ್ತರಿಸಿ, ತುಂಡಿನ ಕೆಳಭಾಗವನ್ನು (ನೆಡುವ ಭಾಗ) ಚೂಪಾಗಿಸಬೇಕು. ಇದು ಹೆಚ್ಚು ಬೇರು ಬಿಡುವಿಕೆಯಲ್ಲಿ ಸಹಕಾರಿಯಾಗುತ್ತದೆ.
ಕಾಂಡಗಳ ಉಪಚಾರ:
ನಾಟಿಗೆ ಉಪಯೋಗಿಸುವ ತುಂಡುಗಳ ತೇವಾಂಶವು ಕಡಿಮೆಯಾಗದಂತೆ ಎಚ್ಚರ ವಹಿಸಬೇಕು. ಈ ಕಾಂಡದ ತುಂಡುಗಳನ್ನು ನರ್ಸರಿಗಳಲ್ಲಿರುವ ಪಾಲಿಥೀನ್ ಚೀಲಗಳಲ್ಲಿ ನಾಟಿ ಮಾಡುವ ಮೊದಲು 2 ಗ್ರಾಂ ಕಾರ್ಬೆಂಡೈಜಿಮ್ ಎಂಬ ಶಿಲೀಂಧ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿದ ದ್ರಾವಣದಲ್ಲಿ 15 ನಿಮಿಷಗಳ ಕಾಲ ಅದ್ದಬೇಕು. ಇದರಿಂದ ಶಿಲೀಂಧ್ರದಿಂದ ಬರುವ ರೋಗಗಳನ್ನು ಹತೋಟಿಯಲ್ಲಿಡಬಹುದು. ಅನಂತರ ಶಿಲೀಂಧ್ರದ ದ್ರಾವಣದಲ್ಲಿ ಉಪಚರಿಸಿದ ಕಾಂಡದ ತುಂಡುಗಳನ್ನು ಹೊರ ತೆಗೆದು, ಶೀಘ್ರವಾಗಿ ಬೇರು ಬರಲು ಕಾಂಡದ 3 ಸೆಂ.ಮೀ. ಕೆಳಭಾಗವನ್ನು 1 ನಿಮಿಷಗಳ ಕಾಲ 1000 ಪಿ.ಪಿ.ಎಂ ಐ.ಬಿ.ಎ ಎಂಬ ಬೇರು ಪ್ರಚೋದಕದಲ್ಲಿ ಬಳ್ಳಿಯ ಕಡ್ಡಿಯನ್ನು ತಾಕಿಸಬೇಕು. 1000 ಪಿ.ಪಿ.ಎಂ ಐ.ಬಿ.ಎ ದ್ರಾವಣವನ್ನು ತಯಾರಿಸಲು 1 ಗ್ರಾಂ ಐ.ಬಿ.ಎ ಪುಡಿಯನ್ನು ಸ್ವಲ್ಪ ಆಲ್ಕೋಹಾಲ್ನಲ್ಲಿ ಕರಗಿಸಿ 1 ಲೀಟರ್ ಸ್ವಚ್ಚವಾದ ನೀರಿನಲ್ಲಿ ಚೆನ್ನಾಗಿ ಬೆರೆಸಬೇಕು.
ಕಾಂಡದ ತುಂಡುಗಳನ್ನು ನಾಟಿಮಾಡುವುದು.ಸುಧಾರಿತ ಪದ್ಧತಿಯನ್ನು ಅನುಸರಿಸಿ ತಯಾರಿಸಿ ತುಂಬಿದ ಪಾಲಿಥೀನ್ ಚೀಲಗಳಲ್ಲಿ ಉಪಚಾರ ಮಾಡಿದ ಒಂದು ಕಣ್ಣಿನ 2 ತುಂಡುಗಳನ್ನು ಚೀಲದ ಮಧ್ಯಭಾಗದಲ್ಲಿರಿಸಿ ಉಳಿದ ಪಾಲಿಥೀನ್ ಚೀಲದ ಭಾಗವನ್ನು ಮಿಶ್ರಣದಿಂದ ತುಂಬಿಸಬೇಕು. ಇದು ಚಿಗುರೊಡೆಯಲು ಹಾಗೂ ಬೇರು ಬಿಡಲು ಸಹಕಾರಿಯಾಗುತ್ತದೆ.
ಪಾಲಿಥೀನ್ ಚೀಲಗಳ ಜೋಡಣೆ:
ನಾಟಿ ಮಾಡಿದ ಪಾಲಿಥೀನ್ ಚೀಲಗಳಿಗೆ ಚೆನ್ನಾಗಿ ನೀರು ಉಣಿಸಿ ನಂತರ ಪಾಲಿಥೀನ್ ಚೀಲಗಳನ್ನು ಸಾಲಾಗಿ ಜೋಡಿಸಿ ಪಾಲಿಥೀನ್ ಹಾಳೆಯಿಂದ ಕಮಾನು ಆಕಾರದಲ್ಲಿ ಮುಚ್ಚಬೇಕು.
15 ರಿಂದ 20 ದಿನಗಳ ನಂತರ ಪಾಲಿಥೀನ್ ಹಾಳೆಯನ್ನು ತೆಗೆದು ಬೆಳೆದಿರುವ ಕಳೆಗಳನ್ನು ತೆಗೆದು ನೀರು ಕೊಟ್ಟು ಪುನಃ ಮುಚ್ಚಬೇಕು. ನೀರನ್ನು ಕೊಡುವುದರಿಂದ ಆರ್ದ್ರತೆ ಹೆಚ್ಚಾಗಿ 25 ರಿಂದ 30 ದಿನಗಳಲ್ಲಿ ಚಿಗುರೊಡೆದು ಬೇರನ್ನು ಬಿಡಲಾರಂಬಿಸುತ್ತವೆ.
ಈ ಹಂತದಲ್ಲಿ ಮುಚ್ಚಿದ ಪಾಲಿಥೀನ್ ಹಾಳೆಯನ್ನು ತೆಗೆದು ನೀರನ್ನು ಕೊಡಲು ಪ್ರಾರಂಭಿಸಬೇಕು. ತದನಂತರ ಬೆಳೆದು ತೋಟದಲ್ಲಿ ನಾಟಿ ಮಾಡಲು ಸಿದ್ಧವಾಗುತ್ತವೆ.
ಗಿಡಗಳ ನಿರ್ವಹಣೆ:
ಕಾಂಡದ ತುಂಡುಗಳು ಬೇರು ಬಿಟ್ಟು ಚಿಗುರಿ 3-4 ಎಲೆಗಳು ಬಂದ ಮೇಲೆ ಗಿಡಗಳು ಸದೃಢವಾಗಿ ಬೆಳೆಯಲು ನೀರಿನಲ್ಲಿ ಕರಗುವ ರಸಗೊಬ್ಬರವಾದ 19:19:19 (5 ಗ್ರಾಂ ಪ್ರತಿ ಲೀ. ನೀರಿಗೆ) ದ್ರಾವಣವನ್ನು 2 ರಿಂದ 3 ಬಾರಿ 15 ದಿನಗಳ ಅಂತರದಲ್ಲಿ ಎಲೆಗಳ ಮೇಲೆ ಸಿಂಪಡಿಸಬೇಕು.
ನರ್ಸರಿಯಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆ-ಬೇರು ಬಿಟ್ಟ ಕಾಂಡಗಳನ್ನು ಅತಿ ಹೆಚ್ಚು ನೆರಳಿರುವ ಪ್ರದೇಶಗಳಲ್ಲಿ ಇಟ್ಟರೆ ರಸ ಹೀರುವ ಕೀಟಗಳಾದ ಥ್ರೀಪ್ಸ್ ಮತ್ತು ಹಿಟ್ಟು ತಿಗಣೆಗಳ ಬಾಧೆಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವುಗಳ ಹತೋಟಿಗಾಗಿ 2 ಮಿ.ಲೀ. ಡೈಮಿಥೋಯೆಟ್ ಅಥವಾ 0.5 ಲೀ. ಇಮೀಡಾಕ್ಲೋಪ್ರಿಡ್ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ ಬೆರಸಿ ಸಿಂಪಡಿಸಬೇಕು. ನರ್ಸರಿ ಪ್ರದೇಶದಲ್ಲಿ ಅತಿಯಾದ ನೆರಳು ಮತ್ತು ಆರ್ದ್ರತೆ ಇದ್ದರೆ ಶಿಲೀಂಧ್ರದಿಂದ ಬರುವ ರೋಗಗಳಾದ ಎಲೆಕೊಳೆ ರೋಗ ಹಾಗೂ ಬೇರು ಕೊಳೆ ರೋಗ ಕಾಣಿಸಿಕೊಳ್ಳುತ್ತದೆ. ಇವುಗಳ ಹತೋಟಿಗಾಗಿ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ನ್ನು ಪ್ರತಿ ಲೀ. ನೀರಿಗೆ ಬೆರಸಿ ಸಿಂಪಡಿಸಬೇಕು.
ಕಾಳು ಮೆಣಸಿನಲ್ಲಿ ಸಸ್ಯಾಭಿವೃದ್ಧಿ ಕ್ರಮಗಳು
1. ಅಧಿಕ ಇಳುವರಿ ಕೊಡುವ ಆರೋಗ್ಯವಂತ ಬಳ್ಳಿ (ಗಿಡಗಳನ್ನು) ಗುರುತಿಸುವುದು.
2. ನೆಲದ ಮೇಲೆ ಹರಿದಾಡುವ ಬಳ್ಳಿಗಳನ್ನು ಚೂಪಾದ ಚಾಕುವಿನ ಸಹಾಯದಿಂದ ಬೇರ್ಪಡಿಸುವುದು.
3. ಬೇರ್ಪಡಿಸಿದ ಬಳ್ಳಿಯನ್ನು ಸುತ್ತಿ ಆಧಾರಮರಕ್ಕೆ ಕಟ್ಟಬೇಕು. ಇದರಿಂದ ಬಳ್ಳಿಯು ನೆಲವನ್ನು ಸ್ಪರ್ಶಿಸಿ ಬೇರು ಹೊರಹೊಮ್ಮುವುದು ನಿಯಂತ್ರಿತವಾಗುತ್ತದೆ.
3. ಫಲವತ್ತಾದ ಮಣ್ಣು, ಗೊಬ್ಬರ ಹಾಗೂ ಮರಳುಗಳನ್ನು 2:1:1 ಅನುಪಾತದಲ್ಲಿ ಮಿಶ್ರಣ ಮಾಡಿ ೩೦-೪೫ ದಿನಗಳವರೆಗೆ ತೆರೆದ ಸ್ಥಳದಲ್ಲಿ ಸೌರೀಕರಿಸುವುದು.
4. ಮೇಲಿನ ಮಿಶ್ರಣಕ್ಕೆ ಜೈವಿಕ ಶೀಲಿಂಧ್ರ ನಾಶಕಗಳ ಮಿಶ್ರಣ ಮಾಡುವುದು (ಟ್ರೈಕೊಡರ್ಮ, ಸೂಡೊಮೊನಸ್-1 ರಿಂದ 2 ಗ್ರಾಂ ಪ್ರತಿ ಕೆ.ಜಿ. ಮಿಶ್ರಣ)
5. ಜೈವಿಕ ಶಿಲೀಂಧ್ರ ನಾಶಕಗಕಗಳನ್ನೊಳಗೊಂಡ ಮಿಶ್ರಣವನ್ನು 15*10 ಸೆ.ಮೀ. ಗಾತ್ರದ ಪಾಲಿಥೀನ್ ಚೀಲಗಳಲ್ಲಿ ತುಂಬುವುದು.
6. ಬಳ್ಳಿಯಲ್ಲಿರುವ ಎಲೆಗಳನ್ನು ಹಾಗೂ ಮೃದು ಕಾಂಡವನ್ನು ಕತ್ತರಿಸಿ ತೆಗೆಯಬೇಕು.
7. ಬಳ್ಳಿಯನ್ನು 2-3 ಕಣ್ಣುಗಳಿರುವ ತುಂಡುಗಳನ್ನು ಕತ್ತರಿಸಬೇಕು.
8. ರೋಗಬಾರದಂತೆ ತಡೆಯಲು ಕಡ್ಡಿಗಳನ್ನು ಬ್ಯಾವಿಸ್ಟಿನ್ನಿಂದ (ಪ್ರತಿ ಲೀಟರ್ ನೀರಿಗೆ 2 ಗ್ರಾಂ) 20 ನಿಮಿಷಗಳ ಕಾಲ ನೆನೆಸಬೇಕು.
9. ಹೆಚ್ಚಿನ ಬೇರುಗಳನ್ನು ಭರಿಸಲು ಬಳ್ಳಿಯ ತುಂಡುಗಳ ಬುಡ ಭಾಗಗಳನ್ನು 100 ಪಿಪಿಎಮ್ ಸಾಮರ್ಥ್ಯದ ಐ.ಬಿ.ಎ ಯಿಂದ 10-15 ಸೆಕೆಂಡ್ ಕಾಲ ಉಪಚರಿಸಬೇಕು,
10. ಪಾಲಿಥೀನ್ ಚೀಲ ಹೀಗೆ ಕತ್ತರಿಸಿ ಉಪಚರಿಸಿದ ಕಡ್ಡಿಗಳನ್ನು ಒಂದು ಕಣ್ಣು ಮಣ್ಣಿನ ಒಳಗೆ ಇರುವಂತೆ ನೆಡಬೇಕು.
11. ಪ್ರತಿ ಬುಟ್ಟಿಯಲ್ಲಿ 2 ರಿಂದ 3 ಕಡ್ಡಿಗಳು ಇರುವಂತೆ ನೆಡಬೇಕು.
12. ಪಾಲಿಥೀನ್ ಟನಲ್ಹೌಸ್ ನಿರ್ಮಾಣ – ಬೇರು ಹಾಗೂ ಕಣ್ಣುಗಳು ಚಿಗುರಲು ಪಾಲಿಥೀನ್ ಹಾಳೆಯಿಂದ ನಿರ್ಮಿಸಿದ ಮಂಜಿನ ಛೆಂಬರ್ನಲ್ಲಿ 40 ದಿನಗಳ ಕಾಲ ನೆರಳಿನಲ್ಲಿ ಇಡಬೇಕು.
13. ಕಾಳುಮೆಣಸಿನ ಬಳ್ಳಿಯ ಕಡ್ಡಿಗಳನ್ನು ಒಳಗೊಂಡಿರುವ ಪಾಲಿಥೀನ್ ಚೀಲಗಳನ್ನು ಸಾಕಷ್ಟು ನೆರಳಿರುವ ಪ್ರದೇಶಗಳಲ್ಲಿ ಅಥವಾ ಹಸಿರುಮನೆಗಳಲ್ಲಿ ಜೋಡಿಸಿ ಮಿತವಾಗಿ ಪ್ರತಿ ದಿನ ನೀರನ್ನು ಒದಗಿಸಬೇಕು.
14. ನಿರಂತರವಾಗಿ ನೀರನ್ನು ಒದಗಿಸುವುದರಿಂದ ಆಧ್ರತೆಯನ್ನು ಹೆಚ್ಚಿಸಿ ತಾಪಮಾನವನ್ನು ಕಡಿಮೆ ಮಾಡಬಹುದು.
15. ಪೈಟಾಪ್ತೆರಾ ರೋಗ ಬರದಂತೆ ತಡೆಯಲು ಮುಂಚಿತವಾಗಿ ಶೇ. 0.2 ತಾಮ್ರದ ಆಕ್ಸಿ ಕ್ಲೊರೈಡ್ನ್ನು ಬಳ್ಳಿಗಳ ಬುಡವನ್ನು ನೆನೆಸಬೇಕು.
16. ಚಿಕ್ಕಟ ದುಂಬಿ, ಹಿಟ್ಟು ತಿಗಣೆ, ಕಾಂಡ ಕೊರೆಯುವ ಹುಳು ಹಾಗೂ ತ್ರಿಪ್ಸ್ ಕೀಟಗಳ ಬಾಧೆ ತಡೆಯಲು 1.7 ಮಿ.ಲೀ. ಡೈಮಿಥೋಯೆಟ್ (30 ಇ ಸಿ) ಅಥವಾ ಕ್ವಿನಾಲ್ಪಾಸ್ ೨ ಮಿ.ಲೀ. (25 ಇ ಸಿ) ಅಥವಾ ಮಿಥೈಲ್ ಪ್ಯಾರಥಿಯಾನ್ -1 ಮಿ.ಲೀ. (50 ಇ ಸಿ).
17. ಬಳ್ಳಿಗಳು ಸಮೃಧ್ಧವಾಗಿ ಬೆಳೆಯಲು ಪೆಪ್ಪರ್ ಸ್ಪೆಷಲ್-5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು.
18. ಮುಖ್ಯ ಕ್ಷೇತ್ರದಲ್ಲಿ ನಾಟಿಮಾಡುವವರೆಗೂ ನಿರಂತರವಾಗಿ ನೀರನ್ನು ಒದಗಿಸುವುದು.
19. ಆರೋಗ್ಯವಂತ ಹಾಗೂ ಹೆಚ್ಚಿನ ಬೇರು ಇರುವಂತಹ ಬಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಮುಖ್ಯ ಕ್ಷೇತ್ರದಲ್ಲಿ ನಾಟಿ ಮಾಡುವುದು.
20. ಹೆಚ್ಚು ಮಳೆ ಬಿಳುವ ಪ್ರದೇಶದಲ್ಲಿ ಆಗಸ್ಟ್ ತಿಂಗಳಲ್ಲಿ ನಾಟಿ ಮಾಡುವುದು ಉತ್ತಮ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ, ದೂರವಾಣಿ: 08274-247274