Featured NewsKrushi

ಅಪರೂಪದ ಸೌತೆಕಾಯಿ ತಳಿ ಮಗೆಕಾಯಿ ಮತ್ತು ರುಚಿಕರ ವೈವಿಧ್ಯ ಅಡುಗೆಗಳು

‘ಮಗೇಕಾಯಿ’ – ಮಗೇಕಾಯಿ ಎನ್ನುವಾಗ ತಲೆ ತುರಿಸಿಕೊಂಡು ಇದು ಯಾವ ಕಾಯಿ ಎಂದು ಚಿಂತಿಸಲೇಬೇಕು. ಆದರೆ ಇದು ಸಾಂಬಾರು ಸೌತೆಕಾಯಿಯ ಒಂದು ವಿಭಿನ್ನ ತಳಿ. ಉತ್ತರ ಕನ್ನಡಕ್ಕೇ ಸೀಮಿತವಾದ ವಿಶಿಷ್ಟ ಸೌತೇಕಾಯಿ.

ಒಂದು ವರ್ಷಕ್ಕಿಂತ ಹೆಚ್ಚು ಕಾಲ ಅದರ ಸುತ್ತಲೂ ಬಾಳೆಯ ನಾರು ಕಟ್ಟಿ ಗಳುವಿಗೆ ತೂಗಾಡಿಸಿ ದಾಸ್ತಾನಿಡಬಹುದು. ಎಳೆಯ ಕಾಯಿಯಿಂದ ಆರಂಭವಾಗುವ ಬಳಕೆ ಹಣ್ಣಿನವರೆಗೂ ಮುಂದುವರಿಯುತ್ತದೆ. ಕೇವಲ ಮಜ್ಜಿಗೆಹುಳಿ, ಸಾಂಬಾರುಗಳಿಗೇ ಇದರ ಉಪಯೋಗ ಸೀಮಿತವಲ್ಲ. ಉಪ್ಪಿನಕಾಯಿ, ದೋಸೆ, ಕಡುಬು, ಗುಳಿಯಪ್ಪ ಹೀಗೆ ಹತ್ತು ಹಲವು ವಿಧದ ಪದಾರ್ಥಗಳಿಗೂ ಅದು ರುಚಿ ಕೊಡುತ್ತದೆ.

ಕ್ರಮಶಃ ಅಳಿವಿನ ಅಂಚು ತಲಪಿರುವ ಮಗೆಕಾಯಿಯನ್ನು ಪ್ರತಿವರ್ಷವೂ ಬೆಳೆಯುತ್ತಿರುವ ಅಪರೂಪದ ರೈತರಲ್ಲಿ ಕಡಬಾಳದ ರಘುಪತಿ ಹೆಗಡೆಯವರೂ ಒಬ್ಬರು. ಅದನ್ನು ಹತ್ತು ಗುಂಟೆ ಜಾಗದಲ್ಲಿ ಕೃಷಿ ಮಾಡುತ್ತಾರೆ. ಹಿಂದಿನ ವರ್ಷದ ಮಗೆಕಾಯಿಯ ಬೀಜಗಳನ್ನು ಒಣಗಿಸಿ ಗಾಳಿಯಾಡದಂತೆ ಸಂರಕ್ಷಣೆ ಮಾಡಿ ಇಡುತ್ತಾರೆ. ಮಾರ್ಚ್ ತಿಂಗಳ ಮಧ್ಯಾವಧಿಯ ಬಳಿಕ ಕೃಷಿಗೆ ಸಕಾಲ. ಈ ಬೀಜಗಳನ್ನು ಒಣಗಿದ ಸೆಗಣಿ ಹುಡಿಯೊಂದಿಗೆ ಬೆರೆಸಿ ಬಟ್ಟೆಯಲ್ಲಿ ಕಟ್ಟುತ್ತಾರೆ. ನೀರಿನಲ್ಲಿ ಬಟ್ಟೆಯನ್ನು ನೆನೆಸಿಟ್ಟು ಮೂರು ದಿನಗಳ ಬಳಿಕ ನೋಡಿದರೆ ಮೊಳಕೆಯೊಡೆದಿರುತ್ತದೆ. ನಾಲ್ಕಡಿ ಉದ್ದ, ಎರಡು ಅಡಿ ಅಗಲದ ಪಾತಿ ತಯಾರಿಸಿ ಅದಕ್ಕೆ ಸೆಗಣಿ ಗೊಬ್ಬರದ ಹುಡಿ ಹರಡುತ್ತಾರೆ. ಈ ಮೊಳಕೆಗಳನ್ನು ಎಚ್ಚರಿಕೆಯಂದ ಪಾತಿಗಳಲ್ಲಿ ನಾಟಿ ಮಾಡಿ ದಿನವೂ ನೀರನ್ನು ಹನಿಹನಿಯಾಗಿ ಚಿಮುಕಿಸುತ್ತಾರೆ. ಹತ್ತು ದಿನಗಳಲ್ಲಿ ಗಿಡಗಳು ಸಾಲುಗಳಲ್ಲಿ ನೆಡಲು ಸಿದ್ಧವಾಗುತ್ತವೆ.

Also read  ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ:ರಾಜ್ಯದ 18 ಸಾವಿರ ರೈತರಿಗೆ ಬಂತು 2000 ರೂ.

ಒಂದು ಅಡಿ ಅಗಲದ ಉದ್ದನೆಯ ಸಾಲುಗಳು. ಎರಡು ಸಾಲುಗಳ ನಡುವೆ ನಾಲ್ಕು ಅಡಿ ಅಂತರ. ಅನಂತರದ ಸಾಲಿಗೆ ಎರಡೂವರೆ ಅಡಿ ಅಂತರ. ನಾಲ್ಕು ಅಡಿ ಅಂತರವಿರುವಲ್ಲಿ ಎರಡೂ ಸಾಲುಗಳ ಮಗೆಕಾಯಿ ಬಳ್ಳಿ ಹರಡಬೇಕು. ಎರಡೂವರೆ ಅಡಿ ಅಂತರವಿರುವಲ್ಲಿ ನಿರ್ವಹಣೆಗೆ ಹೋಗಬೇಕು. ಸಾಲುಗಳಿಗೆ ಒಣಗಿದ ಅಡಕೆ ಸಿಪ್ಪೆಗಳನ್ನು ಹರಡಿ ಬೆಂಕಿ ಹಚ್ಚಿ ಸುಡುತ್ತಾರೆ. ನೆಡುವ ಮೊದಲು ಕೊಟ್ಟಿಗೆ ಗೊಬ್ಬರ ಹರಡುತ್ತಾರೆ. ಅರ್ಧ ಅಡಿಗೊಂದರಂತೆ ಗಿಡದ ನಾಟಿ. ಹತ್ತು ದಿನಗಳ ವರೆಗೆ ಬಿಸಿಲಿಗೆ ಒಣಗಲು ಬಿಡದೆ ನೀರು ಚಿಮುಕಿಸಬೇಕು. ಬಳಿಕ ಮೂರು ದಿನಕ್ಕೊಮ್ಮೆ ನೀರುಣಿಸಿದರೆ ಸಾಕು. ಗಿಡ ಬೆಳೆದ ಮೇಲೆ ಪುನಃ ಗಿಡಕ್ಕೆ ಒಂದು ಕಿಲೋ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಪೂರೈಸಿ ಅತಿ ಕಡಮೆ ಪ್ರಮಾಣದಲ್ಲಿ ಸಂಯುಕ್ತ ರಸಗೊಬ್ಬರ ಹಾಕುತ್ತಾರೆ. ಸಾಲುಗಳ ಸುತ್ತಲಿನ ಮಣ್ಣನ್ನೇ ಏರು ಹಾಕುತ್ತಾರೆ. ಗಿಡಗಳು ಮಣ್ಣಿನಿಂದ ಮುಚ್ಚದಂತೆ ತೆಳ್ಳಗೆ ತರಗೆಲೆಗಳನ್ನು ಮುಚ್ಚುತ್ತಾರೆ.

ಎರಡೂವರೆ ತಿಂಗಳ ಅವಧಿಯಲ್ಲಿ ಕೊಯ್ಲಿಗೆ ಬರುವ ಕಾಯಿ ಇದು. ತೊಟ್ಟಿನ ಬಳಿ ಜೇನಿನ ವರ್ಣ ಕಂಡರೆ ಅದು ಕೊಯ್ಲಿಗೆ ಸಿದ್ಧವಾಗಿರುವ ಗುರುತು ಎನ್ನುತ್ತಾರೆ ಹೆಗಡೆಯವರು. ಸಾಂಬಾರು ಸೌತೆಯ ಹಾಗೆ ಈ ಕಾಯಿಯಲ್ಲಿ ಬಣ್ಣದ ಪಟ್ಟಿಗಳಿರದ ಕಾಯಿಗಳೂ ಇವೆ. ಬಣ್ಣ ಕೊಂಚ ಕಪ್ಪುಮಿಶ್ರಿತ ಹಸಿರಾಗಿರುತ್ತದೆ. ಹಣ್ಣಾದರೆ ಕಂದು ವರ್ಣವಾಗುತ್ತದೆ. ಎರಡು ಕಿಲೋಗಿಂತ ಕಮ್ಮಿ ತೂಕದ ಕಾಯಿಗಳಿಲ್ಲ. ಗರಿಷ್ಠ ಐದೂವರೆ ಕಿಲೋ ತನಕ ತೂಗುತ್ತದೆ. ಕಿಲೋಗೆ ಸಿಗುವ ಬೆಲೆ ಹದಿನೈದು ರೂಪಾಯಿ. ಹತ್ತು ಗುಂಟೆಗಳಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಕಾಯಿಗಳನ್ನು ಹೆಗಡೆ ಕೊಯ್ಯುತ್ತಾರೆ. ಇಡೀ ವರ್ಷ ದಾಟುವ ತನಕ ನಿತ್ಯ ಬಳಕೆಗೆ ಬೇಕಾದಷ್ಟು ಉಳಿಸಿಕೊಂಡು ಉಳಿದುದನ್ನು ಮಾರುತ್ತಾರೆ. ಮಗೆಕಾಯಿಯನ್ನು ಹುಡುಕಿಕೊಂಡು ಗ್ರಾಹಕರು ಮನೆಗೆ ಬರುವ ಕಾರಣ ಸಂತೆ ಸುತ್ತುವ ಕೆಲಸವಿಲ್ಲ. ಸಣ್ಣ ಗಾತ್ರದ ಕಾಯಿಗೆ ಬೇಡಿಕೆಯೂ ಅಧಿಕ. ಆರೋಗ್ಯಕ್ಕೆ ಹಿತಕರವಾದ ಮಗೆಕಾಯಿ ಅಲ್ಪ ಅವಧಿಯಲ್ಲಿ ದೊಡ್ಡ ಲಾಭ ತರುವ ತರಕಾರಿ ಎನ್ನುತ್ತಾರೆ ಹೆಗಡೆ.

(ಹೆಚ್ಚಿನ ಮಾಹಿತಿಗೆ ಹೆಗಡೆಯವರನ್ನು ಸಂರ್ಪಸಿ- 8762148813)

ಈ ಲೇಖನವನ್ನು ವಿಜಯವಾಣಿಯಿಂದ ತೆಗೆದುಕೊಳ್ಳಲಾಗಿದೆ.

ಮಗೆಕಾಯಿಯಲ್ಲಿ ರುಚಿಕರ ವೈವಿಧ್ಯ

ಮಗೆಕಾಯಿ (ಮಂಗಳೂರು ಸೌತೆಕಾಯಿ) ತಂಪು ಗುಣದ್ದಾಗಿದೆ. ಜೊತೆಗೆ ಪಿತ್ತ ನಿವಾರಕ ಗುಣವೂ ಇದೆ. ಇದನ್ನು ಬೇಸಿಗೆಯಲ್ಲೂ ಮಳೆಗಾಲದಲ್ಲೂ ಉಪಯೋಗಿಸಬಹುದು.

ತೌತೆ ಕೊದ್ದೆಲ್ (ಮಗೆ ಕಾಯಿ ಸಾರು)

ಬೇಕಾಗುವ ಪದಾರ್ಥಗಳು:1 ಮೀಡಿಯಮ್ ಮಂಗಳೂರು ಸೌತೆಕಾಯಿ (ಬೀಜಗಳನ್ನು ತೆಗೆದು ಸಿಪ್ಪೆ ಸಮೇತ ಕತ್ತರಿಸಬೇಕು),2 1/2 ಕಪ್ ಹುಣಸೆ ರಸ ,1 ಟೀ ಚಮಚ ಅರಶಿಣ ಹುಡಿ,1/2 ಕಪ್ ತೊಗರಿಬೇಳೆ,ರುಚಿಗೆ ತಕ್ಕಷ್ಟು ಉಪ್ಪು,ಅಡುಗೆ ಎಣ್ಣೆ

ರುಬ್ಬಿಕೊಳ್ಳಲು : 1 ಟೇಬಲ್ ಚಮಚ ಕೊತ್ತಂಬರಿ ಬೀಜ,1 ಟೀ ಚಮಚ ಜೀರಿಗೆ ,1/2 ಟೀ ಚಮಚ ಮೆಂತ್ಯ,1 ಟೀ ಚಮಚ ಉದ್ದಿನ ಬೇಳೆ,1/2 ಟೀ ಚಮಚ ಕಾಳುಮೆಣಸು,1 ಕಪ್ ತೆಂಗಿನ ತುರಿ,3 ಕೆಂಪು ಬ್ಯಾಡಗಿ ಮೆಣಸು,2 ಎಳೆ ಬೆಳ್ಳುಳ್ಳಿ
ಒಗ್ಗರಣೆಗೆ:
1 ಟೀ ಚಮಚ ಅಡುಗೆ ಎಣ್ಣೆ,1/2 ಟೀ ಚಮಚ ಸಾಸಿವೆ,1 ಟೀ ಚಮಚ ಉದ್ದಿನ ಬೇಳೆ,2 ಒಣ ಕೆಂಪು ಮೆಣಸು,2 ಎಳೆ ಬೆಳ್ಳುಳ್ಳಿ,ಸ್ವಲ್ಪ ಕರಿಬೇವಿನ ಎಲೆ
ತಯಾರಿಸುವ ವಿಧಾನ :ಮೊದಲು ಕುಕ್ಕರ್ ನಲ್ಲಿ ತೊಗರಿಬೇಳೆಯನ್ನು 1 1/2 ಕಪ್ ನೀರು, ಅರಶಿಣ ಹುಡಿ ಮತ್ತು ಉಪ್ಪು ಸೇರಿಸಿ ಮೆದುವಾಗುವ ತನಕ ಚೆನ್ನಾಗಿ ಬೇಯಿಸಿಕೊಂಡು ಕುಕ್ಕರ್ ನಿಂದ ಇಳಿಸಿ ಪಕ್ಕದಲ್ಲಿಡಿ.
ನಂತರ ಅದೇ ಕುಕ್ಕರ್ ನಲ್ಲಿ ತುಂಡರಿಸಿದ ಮಂಗಳೂರು ಸೌತೆಕಾಯಿಯನ್ನು ಹುಣಸೆಹಣ್ಣಿನ ರಸ ಮತ್ತು ಉಪ್ಪು ಸೇರಿಸಿ 2 ವಿಶಲ್ ಆಗುವ ತನಕ ಹದವಾಗಿ ಬೇಯಿಸಿಕೊಳ್ಳಿ.
ಮುಂದಿನ ಹಂತ ಮಸಾಲೆ ತಯಾರಿಸುವುದು. ಒಂದು ಪಾತ್ರೆಯಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಉದ್ದಿನ ಬೇಳೆ, ಮೆಂತ್ಯ ಕಾಳು, ಕಾಳುಮೆಣಸಿನ ಬೀಜ ಮತ್ತು ಕೆಂಪು ಮೆಣಸನ್ನು ಎಣ್ಣೆಯನ್ನು ಉಪಯೋಗಿಸದೆ ಪರಿಮಳ ಬರುವ ತನಕ ಹುರಿಯಿರಿ ನಂತರ ಹುರಿದ ವಸ್ತುಗಳನ್ನು, ತೆಂಗಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ ನುಣ್ಣಗೆ ರುಬ್ಬಿ.
ಈಗ ಪದಾರ್ಥ ಮಾಡುವ ಪಾತ್ರೆಯಲ್ಲಿ, ಬೇಯಿಸಿದ ತೊಗರಿಬೇಳೆ, ಸೌತೆಕಾಯಿ ಮತ್ತು ರುಬ್ಬಿದ ಮಸಾಲೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮೀಡಿಯಮ್ ಬೆಂಕಿಯಲ್ಲಿ ಕುದಿಸುತ್ತಿರಿ.
ಇನ್ನೊಂದು ಕಡೆ ಒಗ್ಗರಣೆ ತಯಾರಿಸಿಕೊಳ್ಳಿ, ಸಣ್ಣ ಪಾತ್ರೆಯಲ್ಲಿ ಒಗ್ಗರಣೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಹಾಕಿ ಅದು ಸಿಡಿಯುವ ತನಕ ಹುರಿಯಿರಿ.
ಈಗ ಈ ಒಗ್ಗರಣೆಯನ್ನು ಕುದಿಯುತ್ತಿರುವ ಸೌತೆಕಾಯಿ ಸಾರು (ತೌತೆ ಕೊದ್ದೆಲ್) ಗೆ ಹಾಕಿ ಮುಚ್ಚಿಬಿಡಿ.
ತಯಾರಾದ , ರುಚಿರುಚಿಯಾದ ಸೌತೆಕಾಯಿ ಸಾರು (ತೌತೆ ಕೊದ್ದೆಲ್) ನ್ನು ಅನ್ನ ಅಥವಾ ದೊಸೆಯ ಜೊತೆ ಸವಿಯಲು ಕೊಡಿ.

Also read  Black pepper in Chikmagalur trading steady

ಮಗೆಕಾಯಿ ಸುರ್ನಳಿ
ಬೇಕಾಗುವ ಸಾಮಗ್ರಿ: 2 ಕಪ್‌ ಬೆಳ್ತಿಗೆ ಅಕ್ಕಿ, 1/2 ಕಪ್‌ ಕಾಯಿತುರಿ, 1/2 ಕಪ್‌ ಅವಲಕ್ಕಿ ಇಲ್ಲವೆ ಹೊದಲು, 1 ಕಪ್‌ ಮಗೆಕಾಯಿ ಹೋಳು, 1 ಚಮಚ ಅರಸಿನ ಪುಡಿ, 1 ಚಿಟಿಕೆ ಉಪ್ಪು , ಸ್ವಲ್ಪ ತುಪ್ಪ ಇಲ್ಲವೆ ಎಣ್ಣೆ ದೋಸೆ ತೆಗೆಯಲು.

ತಯಾರಿಸುವ ವಿಧಾನ: ಅಕ್ಕಿಯನ್ನು ಮೂರು ಗಂಟೆ ನೀರಲ್ಲಿ ನೆನೆಸಿಡಿ. ನಂತರ ನೀರು ಬಸಿದು ತೆಗೆದು ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಹೋಳು ಮಾಡಿಟ್ಟ ಮಗೆಕಾಯಿ, ತೆಂಗಿನತುರಿಯನ್ನು ಮಿಕ್ಸಿಯಲ್ಲಿ ಇಲ್ಲವೆ ಒರಳಲ್ಲಿ ಹಾಕಿ ನಯವಾಗಿ ರುಬ್ಬಿ. ತೆಗೆಯುವ ಮೊದಲು ಅವಲಕ್ಕಿಯನ್ನು ತೊಳೆದು ಹಿಟ್ಟಿಗೆ ಹಾಕಿ. ಪುನಃ ರುಬ್ಬಿ ತೆಗೆದು ಪಾತ್ರೆಗೆ ಹಾಕಿರಿ. ಬೆಲ್ಲದ ಹುಡಿ, ಅರಸಿನ ಹುಡಿ, ಉಪ್ಪು ಹಾಕಿ ಮುಚ್ಚಿ ಇಡಿ. ಹಿಟ್ಟನ್ನು ತೆಳು ಮಾಡಕೂಡದು (ಇಡ್ಲಿ ಹಿಟ್ಟಿನ ಹದವಿರಲಿ). ಮರುದಿನ ಬೆಳಿಗ್ಗೆ ದೋಸೆ ಕಾವಲಿ ಕಾದ ಮೇಲೆ ಸ್ವಲ್ಪ ತುಪ್ಪ ಸವರಿ ದೋಸೆ ಹಾಕಿ ಮುಚ್ಚಿ. ಇದನ್ನು ಎರಡೂ ಬದಿ ಕಾಯಿಸಬೇಕಾಗಿಲ್ಲ. ಬೆಣ್ಣೆ ಹಾಕಿ ತಿನ್ನಲು ಬಲು ರುಚಿ.

ಮಗೆಕಾಯಿ ಸುಟ್ಟವು
ಬೇಕಾಗುವ ಸಾಮಗ್ರಿಗಳು: ಒಂದು ಗಂಟೆ ನೆನೆಸಿದ 1 ಲೋಟ ಅಕ್ಕಿ, 1 ಮಗೆಕಾಯಿ, ಅರ್ಧ ಲೋಟ ಬೆಲ್ಲ, ಸ್ವಲ್ಪ ಉಪ್ಪು.
ತಯಾರಿಸುವ ವಿಧಾನ : ಮಗೆಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ನೆನೆಸಿದ ಅಕ್ಕಿ, ಬೆಲ್ಲ, ಸ್ವಲ್ಪ ಉಪ್ಪು ಬೆರೆಸಿ ದೋಸೆ ಹಿಟ್ಟಿನ ಹದದಲ್ಲಿ ರುಬ್ಬಿಕೊಳ್ಳಬೇಕು. ನಂತರ, ಸಣ್ಣಗೆ ಹೆಚ್ಚಿದ ಮಗೆಕಾಯಿಯನ್ನು ಒಂದು ಬಾಣಲೆಯಲ್ಲಿ ಹಾಕಿ, ರುಬ್ಬಿಕೊಂಡದನ್ನು ಬಾಣಲೆಗೆ ಹಾಕಿ ಕೈಯಾಡಿಸುತ್ತಿರಬೇಕು (ಹಿಟ್ಟನ್ನು ಕೈಯಾಡಿಸುವುದು, ಮಗೆಕಾಯಿ ಅದರ ನೀರು ಬಿಡುವುದರಿಂದ ದೋಸೆ ಹಿಟ್ಟಿನ ಹದಕ್ಕೆ ಬರುತ್ತದೆ). ಇದನ್ನು ಸಣ್ಣ ಆಕಾರದಲ್ಲಿ ದೋಸೆ ರೀತಿಯಲ್ಲಿಯೇ ಬಾಣಲೆಯಲ್ಲಿ ಎರೆಯಬೇಕು. ಇದನ್ನು ಚಟ್ನಿಯೊಂದಿಗೆ ತಿಂದರೆ ಬಹಳ ರುಚಿಯಾಗಿರುತ್ತದೆ.

ಮಗೆಕಾಯಿ ಪಾನಕ
ಬೇಕಾಗುವ ಸಾಮಗ್ರಿ: ಹೊಂಬಣ್ಣದ ಮಗೆಕಾಯಿ 1/2, ಬೆಲ್ಲ 1 ಕಪ್‌, ಸ್ವಲ್ಪ ಏಲಕ್ಕಿ.
ತಯಾರಿಸುವ ವಿಧಾನ: ಮಗೆಕಾಯಿಯನ್ನು ತುರಿಮಣೆಯಲ್ಲಿ ತುರಿದು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಬೆಲ್ಲದ ಹುಡಿ, ಏಲಕ್ಕಿ ಹುಡಿ ಹಾಕಿ ಬೇಕಾದಷ್ಟು ತೆಳು ಮಾಡಿ ಕಡೆಯಿರಿ. ಪ್ರಿಜ್‌jನಲ್ಲಿಟ್ಟು ತಂಪು ಮಾಡಿ ಕುಡಿಯಬಹುದು. ಬಿಸಿಲ ಬೇಗೆಗೆ ತಂಪಾದ ಪಾನೀಯವಾಗಿದೆ. ಇದಕ್ಕೆ ಅವಲಕ್ಕಿ ಹಾಕಿ ತಿಂದರೆ ಹಸಿವೆ ನೀಗಿಸಬಹುದು. ಮಗೆಕಾಯಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಮಾಡಿಯೂ ಪಾನಕ ತಯಾರಿಸಬಹುದು.

ಮಗೆಕಾಯಿ ತಂಬುಳಿ
ಬೇಕಾಗುವ ಸಾಮಗ್ರಿ: ಮಗೆಕಾಯಿ 1/2, ಜೀರಿಗೆ 1 ಚಮಚ, ಮೆಣಸಿನಕಾಯಿ 2, ಮೊಸರು 1/2 ಕಪ್‌, ಕಾಯಿತುರಿ 1 ಕಪ್‌, ಉಪ್ಪು ರುಚಿಗೆ, ಒಗ್ಗರಣೆಗೆ ಎಣ್ಣೆ , ಸಾಸಿವೆ, ಕರಿಬೇವಿನ ಸೊಪ್ಪು
ತಯಾರಿಸುವ ವಿಧಾನ: ಮಗೆಕಾಯಿಯ ತಿರುಳು, ಸಿಪ್ಪೆ ತೆಗೆದು ತುರಿದಿಟ್ಟುಕೊಳ್ಳಿ. ಅದಕ್ಕೆ ಜೀರಿಗೆ, ಹಸಿಮೆಣಸು, ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿ . ಉಪ್ಪು ಮೊಸರು ಹಾಕಿ ಒಗ್ಗರಣೆ ಕೊಡಿ. ಊಟದೊಂದಿಗೆ ರುಚಿಕರವಾಗಿರುತ್ತದೆ.

ಮಗೆಕಾಯಿ ಇಡ್ಲಿ
ಬೇಕಾಗುವ ಸಾಮಗ್ರಿ: 1/2 ಮಗೆಕಾಯಿ, 3 ಕಪ್‌ ಅಕ್ಕಿ ರವೆ, 1 ಕಪ್‌ ಕಾಯಿತುರಿ, 1 ಕಪ್‌ ಬೆಲ್ಲದ ಹುಡಿ, 1 ಚಿಟಿ ಉಪ್ಪು, 1 ಚಮಚ ಏಲಕ್ಕಿ ಹುಡಿ (ಸ್ವಲ್ಪ ಗೇರುಬೀಜದ ಚೂರು ಇಷ್ಟವಿದ್ದಲ್ಲಿ).
ತಯಾರಿಸುವ ವಿಧಾನ: ಮಗೆಕಾಯಿ ತುರಿದು ಒಂದು ಪಾತ್ರೆಗೆ ಹಾಕಿ. ಅಕ್ಕಿ ರವೆ ಹುರಿದು ಪರಿಮಳ ಬಂದ ಮೇಲೆ ತಣ್ಣಗಾಗಲು ಬಿಡಿ. ಬೆಲ್ಲದ ಹುಡಿ, ಕಾಯಿತುರಿ, ಉಪ್ಪು , ಏಲಕ್ಕಿ, ಮಗೆಕಾಯಿ ತುರಿ, ಅಕ್ಕಿ ರವೆ ಒಟ್ಟಿಗೆ ಹಾಕಿ ಸ್ವಲ್ಪ ನೀರು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕದಡಿಕೊಳ್ಳಿ. ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಕುದಿ ಬಂದಾಗ ಇಡ್ಲಿ ತಟ್ಟೆಗಳಿಗೆ ತುಪ್ಪ ಸವರಿ ಅದರಲ್ಲಿ ಹಿಇಟ್ಟು ಹಾಕಿ ಬೇಯಿಸಲು ಇಡಿ. ತುಪ್ಪ ಇಲ್ಲವೆ ಬೆಣ್ಣೆಯೊಂದಿಗೆ ಇಲ್ಲವೆ ಕೊತ್ತಂಬರಿ ಸೊಪ್ಪಿನ ಚಟ್ನಿಯೊಂದಿಗೆ ತಿನ್ನಲು ರುಚಿ.

ಮಗೆ ಕಾಯಿ ಕೊಚ್ಚುಳಿ
ಬೇಕಾಗುವ ಸಾಮಗ್ರಿಗಳು:ಸಾಂಬಾರ್ ಸೌತೆ ಅಥವಾ ಮದ್ರಾಸ್ ಸೌತೆ – ಮೀಡಿಯಂ ಗಾತ್ರದ ಸೌತೆಕಾಯಿಯ ಅರ್ಧಭಾಗ ,ಒಣ ಮೆಣಸು – 1,ಹಸಿಮೆಣಸು – 2 ,ನಿಂಬೆಹಣ್ಣು – ಅರ್ಧಭಾಗ ,ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ: ಎಣ್ಣೆ – 3 ಚಮಚ, ಉದ್ದಿನಬೇಳೆ – 1/2 ಚಮಚ, ಸಾಸಿವೆ – 1/2 ಚಮಚ, ಒಂದು ದೊಡ್ಡ ಚಿಟಿಕೆ ಇಂಗು, ಕರಿಬೇವು – 1 ಎಸಳು
ತಯಾರಿಸುವ ವಿಧಾನ :ಸೌತೆಕಾಯಿಯ ಬೀಜ ಮತ್ತು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸನ್ನು ಹೆಚ್ಚಿಟ್ಟುಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಇಂಗು ಹಾಕಿ ಚಟಪಟ ಎಂದಮೇಲೆ ಹಸಿಮೆಣಸು, ಕರಿಬೇವು ಸೇರಿಸಿ ಕೈಯಾಡಿಸಿ.ನಂತರ ಇದಕ್ಕೆ ಹೆಚ್ಚಿದ ಸೌತೆಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆರಸ ಸೇರಿಸಿ ಕೈಯಾಡಿಸಿ 3 – 4 ನಿಮಿಷ ಮುಚ್ಚಳ ಮುಚ್ಚದೆ ಬೇಯಿಸಿ, ಉರಿಯನ್ನು ಆಫ್ ಮಾಡಿ.
ಊಟಕ್ಕೆ ಈ ಪಲ್ಯ ಒಳ್ಳೆಯ ಕಾಂಬಿನೇಶನ್. ಅನ್ನದೊಡನೆ ಕಲಸಿಕೊಳ್ಳಬಹುದು ಅಥವಾ ಹಾಗೇ ತಿನ್ನಬಹುದು.

ಮಗೆ ಕಾಯಿ ಸಿಪ್ಪೆ ಸುಟ್ಟು ಹುಳಿ
ಬೇಕಾಗುವ ಸಾಮಗ್ರಿಗಳು: ಚಿಕ್ಕ ಮಂಗಳೂರು ಸೌತೆ -1,ಒಣ ಮೆಣಸಿನಕಾಯಿ 5-6,ಉದ್ದಿನ ಬೇಳೆ ಒಂದು ಚಮಚ (tbsp),ಕಡಲೆ ಬೇಳೆ ಒಂದು ಅರ್ಧ ಚಮಚ,ಮೆಂತ್ಯೆ ಅರ್ಧ ಚಮಚ,ಕೊತ್ತುಂಬರಿ ಬೀಜ ಹಾಗು ಜೀರಿಗೆ ಒಂದು ಚಮಚ,ಹಸಿ ಕೊಬ್ಬರಿ ಒಂದು cup ನೀರು ಹಾಗು ಉಪ್ಪು
ಒಗ್ಗರಣೆಗೆ -ಎಣ್ಣೆ, ಸಾಸಿವೆ, ಕರಿಬೇವು, ಒಣಮೆಣಸು ಮತ್ತು ಇಂಗು.
ತಯಾರಿಸುವ ವಿಧಾನ :ಸೌತೆಕಾಯಿಯನ್ನು ತೊಳೆದು, ತುದಿ ಕತ್ತರಿಸಿ, ಬೀಜ ಹಾಗು ತಿರುಳನ್ನು ತೆಗೆದು, ಚಿಕ್ಕ ಹೋಳುಗಳಾಗಿ ಕತ್ತರಿಸಿ.
ಮಿಕ್ಕ ಎಲ್ಲ ಸಾಮಗ್ರಿಗಳನ್ನು ಹುರಿದುಕೊಂಡು ಕೊಬ್ಬರಿಯ ಜೊತೆ ರುಬ್ಬಿಕೊಳ್ಳಿ. ಒಂದು ದೊಡ್ಡ ಪಾತ್ರೆಯಲ್ಲಿ ಒಗ್ಗರಣೆ ಹಾಕಿ, ಅದೇ ಪಾತ್ರೆಯಲ್ಲಿ ಸೌತೆಕಾಯಿ ಹೋಳುಗಳನ್ನು ಹಾಕಿ, ಅದರ ಸಿಪ್ಪೆ ಸುಟ್ಟು ಕಪ್ಪಗುವವರೆಗೂ ಹುರಿಯಿರಿ. ಅರ್ಧ ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ತರಕಾರಿ ಬೇಯಲು ಬಿಡಿ. ರುಬ್ಬಿಕೊಂಡ ಮಸಾಲೆಯನ್ನು ಬೆಂದ ಹೋಳುಗಳಿಗೆ ಹಾಕಿ ಚೆನ್ನಾಗಿ ಕುಡಿಸಿ. ಇದನ್ನು ರೊಟ್ಟಿ, ದೋಸೆ, ಬಿಸಿ ಅನ್ನದೊಂದಿಗೆ ಉಣಬಡಿಸಿ.

Also read  24hrs Rain Map of Karnataka

 

Leave a Reply