Featured NewsKrushi

ಬೆಳ್ಳುಳ್ಳಿ ಹಾಗೂ ಸಾಬೂನು ಮಿಶ್ರಣದಿಂದ ಕೀಟನಾಶಕ ತಯಾರಿಸುವ ವಿಧಾನ ಹಾಗೂ ಬಳಕೆ ಹೇಗೆ?

ಕೃಷಿ ರಾಸಾಯನಿಕಗಳ ಸತತ ಹಾಗೂ ಅವ್ಯವಸ್ಥಿತ ಬಳಕೆಯಿಂದ ಮಾನವನ ಆರೋಗ್ಯ ಹಾಗೂ ವಾತಾವರಣದ ಮೇಲೆ ತುಂಬಾ ಅಪಾಯಕಾರಿ ಪರಿಣಾಮಗಳು ಉಂಟಾಗುತ್ತಿವೆ. ಕೃಷಿ ರಾಸಾಯನಿಕ ಗಳಿಂದಾಗುವ ತೊಂದರೆಗಳನ್ನು ತಡೆಯಲೆಂದೆ ಅನೇಕ ಸಸ್ಯಜನ್ಯ ಕೀಟನಾಶಕಗಳ ಆವಿಷ್ಕಾರಗಳು ಪ್ರಾರಂಭವಾಗಿವೆ. ನೈಸರ್ಗಿಕ ಸಸ್ಯ ಸಂಪನ್ಮೂಲಗಳು ಹೊಸ ಕೃಷಿ ರಾಸಾಯನಿಕಗಳ ಪ್ರಮುಖ ಮೂಲಗಳಾಗಿದ್ದು, ಸಸ್ಯದ ರೋಗ ಹಾಗೂ ಕೀಟಬಾಧೆ ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸಸ್ಯದಿಂದ ತಯಾರಿಸಲ್ಪಡುವ ದ್ರಾವಣವು ಪರಿಸರದ ದೃಷ್ಟಿಯಲ್ಲಿ ಸುರಕ್ಷಿತವಾಗಿದ್ದು ಸಮಗ್ರ ಕೀಟ ನಿರ್ವಹಣೆ ನಿರ್ವಹಣೆಯಲ್ಲಿ ಯಲ್ಲಿ ಅಳವಡಿಸಬಹುದಾಗಿವೆ.

ಅನೇಕ ಸಸ್ಯ(ಬೇವಿನ ಮರ, ಹೊಂಗೆ, ಸೇವಂತಿಗೆ) ರಸಗಳು ಕೀಟನಾಶಕ ಗುಣಧರ್ಮವನ್ನು ಹೊಂದಿವೆ. ಅವುಗಳಲ್ಲಿ ಬೆಳ್ಳುಳ್ಳಿಯ ದ್ರಾವಣ ಅತಿ ಮುಖ್ಯವಾಗಿದೆ.

ಬೆಳ್ಳುಳ್ಳಿಯು ಅನೇಕ ಔಷಧೀಯ ಉಪಯೋಗ ಗಳನ್ನು ಹೊಂದಿದ್ದು ವೈದ್ಯಕೀಯ ವಿಜ್ಞಾನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆಂಟಿಫಿಡಂಟ್, ಬ್ಯಾಕ್ಟಿರಿಯಾ ನಾಶಕ, ಶಿಲೀಂಧ್ರ ನಾಶಕ, ಕೀಟನಾಶಕ, ದುಂಡಾಣು ನಾಶಕ, ಕೀಟನಿವಾರಕದಂತಹ ಗುಣಗಳನ್ನು ಹೊಂದಿದೆ. ಅನೇಕ ರೋಗಗಳು, ಕೀಟಗಳು ತಡೆಯುವುದರಲ್ಲಿ ಬೆಳ್ಳುಳ್ಳಿಯು ಬಹಳ ಪರಿಣಾಮಕಾರಿಯಾಗಿದೆ. ಇರುವೆ, ಸಸ್ಯಹೇನು, ಸೈನಿಕ ಹುಳು, ಕಂಬಳಿಹುಳು, ಕೊಲೊರ‍್ಯಾಡೋ ಬೀಟಲ್, ವಜ್ರದ ಬೆನ್ನಿನ ಪತಂಗ, ಬಿಳಿನೊಣ, ಇಲಿ, ನುಸಿ, ಹೆಗ್ಗಣ, ಹಣ್ಣು ಕೊರೆಯುವ ಹುಳು, ಗೆದ್ದಲುಗಳನ್ನು ತಡೆಯಲು ಬಳಸುತ್ತಾರೆ. ದುಂಡಾಣುಗಳನ್ನು ನಿಯಂತ್ರಿಸಲು ಬೆಳ್ಳುಳ್ಳಿಯ ರಸವನ್ನು ಮಣ್ಣಿನಲ್ಲಿ ಬೆರೆಸುತ್ತಾರೆ.

ಬೀಜದಿಂದ ಪ್ರಸಾರವಾಗುವ ರೋಗಕಾರಕಗಳನ್ನು ತಡೆಗಟ್ಟಿ ಬೀಜದ ಗುಣಮಟ್ಟ ಮತ್ತು ಬೀಜದ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿ ಸಾರವನ್ನು ಮಣ್ಣಿನಲ್ಲಿ ಬೆರೆಸುವುದರಿಂದ ಪಿಥಿಯಂ, ಫೈಟಾಪ್ತೇರಾ, ಪ್ಯೂಜೆರಿಯಂ, ರೈಜೋಕ್ಟೋನಿಯಾದಂತಹ ಮಣ್ಣು ಜನಿತ ರೋಗಕಾರಕ ಗಳನ್ನು ತಡೆಯಬಹುದು. ಬೆಳ್ಳುಳ್ಳಿಯ ದ್ರಾವಣವು ಸಸ್ಯ ಪ್ರಚೋದಕವಾಗಿಯು ಕೂಡ ಕೆಲಸ ನಿರ್ವಹಿಸುತ್ತದೆ.

ತಯಾರಿಸುವ ವಿಧಾನ ಹಾಗೂ ಬಳಕೆ ಹೇಗೆ?

ಬೆಳ್ಳುಳ್ಳಿಯ ಸಾರವನ್ನು ನೇರವಾಗಿ ಸಿಂಪರಣೆ ಮಾಡಲು ಹಾಗೂ ಮಣ್ಣಿನಲ್ಲಿ ಬೆರೆಸಲು/ಮಣ್ಣಿಗೆ ಸಿಂಪರಣೆ ಮಾಡಲು ಬಳಸುವರು. ಒಣ ಬೆಳ್ಳುಳ್ಳಿ ಪುಡಿ ಅಥವಾ ಬೆಳ್ಳುಳ್ಳಿ ದ್ರಾವಣ ಅಥವಾ ಬೆಳ್ಳುಳ್ಳಿ ತೈಲವನ್ನು ಅವಶ್ಯಕತೆ ತಕ್ಕಂತೆ ಉಪಯೋಗಿಸ ಕೊಳ್ಳಬಹುದು. ಇವುಗಳ ಸಿಂಪರಣೆಯನ್ನು ವಾರಕ್ಕೆ ಒಂದು ಸಾರಿಯಂತೆ ಕೀಟ ನಿವಾರಣೆಯಾಗುವವರೆಗೂ ಸಿಂಪಡಿಸಬಹುದು.

ತಯಾರಿಸುವ ವಿಧಾನಗಳಿದ್ದು ಅವುಗಳ ಸಮಗ್ರ ಮಾಹಿತಿ ಈ ಕೆಳಗಿನಂತಿವೆ.

1. ಬೆಳ್ಳುಳ್ಳಿ ಪುಡಿ ಸಿಂಪರಣೆ

ಎರಡು ಟೀ ಚಮಚ ದ್ರವರೂಪದ ಸಾಬೂನನ್ನು 4.5 ಲೀಟರ್ ನೀರಿನಲ್ಲಿ ಸೇರಿಸಿ ಸಂರ್ಪೂಣವಾಗಿ ಮಿಶ್ರಣವಾಗುವವರೆಗೆ ಕಲಕಬೇಕು. ಈ ಮಿಶ್ರಣವನ್ನು ಸಿಂಪರಣೆ ಮಾಡುವ ಮೊದಲು ತೆಳುವಾದ ಬಟ್ಟೆಯಿಂದ ಸೋಸಬೇಕು. ಇದಕ್ಕಾಗಿ ಟ್ಯಾಂಕಿನ ಬಾಯಿಗೆ ತೆಳುವಾದ ಬಟ್ಟೆಯನ್ನು ಕಟ್ಟಿ ಅದರ ಮೇಲೆ 1 ಟೀ ಚಮಚದಷ್ಟು ಬೆಳ್ಳುಳ್ಳಿ ಪುಡಿಯನ್ನು ಹಾಕಬೇಕು. ಅದರ ಮೇಲೆ ಸಾಬೂನು ನೀರಿನ ಮಿಶ್ರಣವನ್ನು ನಿಧಾನವಾಗಿ ಸುರಿಯಬೇಕು. ಈ ರೀತಿ ಮಾಡುವುದರಿಂದ ಬೆಳ್ಳುಳ್ಳಿ ಪುಡಿ ಗಂಟು ಗಂಟಾಗಿ ಟ್ಯಾಂಕಿನ ರಂಧ್ರಗಳಲ್ಲಿ ಸಿಲುಕುವುದು ತಪ್ಪಿಸಬಹುದು ಮತ್ತು ಬೆಳ್ಳುಳ್ಳಿ ಪುಡಿ ಸಂರ್ಪೂಣವಾಗಿ ಸಾಬೂನಿನ ನೀರಿನಲ್ಲಿ ಕರಗುವುದು.

2. ತಾಜಾ ಬೆಳ್ಳುಳ್ಳಿ ಸಿಂಪರಣೆ

ಇದನ್ನು ಹಲವಾರು ರೀತಿಯಲ್ಲಿ ತಯಾರಿಸಬಹುದು. ಒಂದು ಕಪ್ ನೀರನ್ನು ಕುದಿಯಲು ಇಡಬೇಕು ಕುದಿಯುತ್ತಿರುವ ನೀರಿಗೆ ಸಣ್ಣ ಸಣ್ಣ ತುಣುಕು ಮಾಡಿದ ತಾಜಾ ಬೆಳ್ಳುಳ್ಳಿಯನ್ನು ಹಾಕಬೇಕು. ಬೆಳ್ಳುಳ್ಳಿಯ ಚೂರುಗಳು ಸರಿಯಾಗಿ ಬೇಯುವವರೆಗೂ(ಕನಿಷ್ಠ 15 ನಿಮಿಷ) ಬಿಡಬೇಕು. ತದನಂತರ ಈ ನೀರು ಹಾಗೂ ಬೆಳ್ಳುಳ್ಳಿಯ ಮಿಶ್ರಣವನ್ನು ಸಿಂಪರಣೆಗೆ ಸಿದ್ದಪಡಿಸಿದ ಟ್ಯಾಂಕ್‌ನಲ್ಲಿ ಸೋಸಿ ಹಾಕಬೇಕು.

* 1೦೦ ಗ್ರಾಂ ಚಚ್ಚಿ ಪುಡಿ ಮಾಡಿದ ತಾಜಾ ಬೆಳ್ಳುಳ್ಳಿಯನ್ನು ೦.5 ಲೀಟರ್ ನೀರಿನಲ್ಲಿ ಹಾಕಬೇಕು ಮತ್ತು ಇದರ ಜೊತೆಗೆ 10 ಗ್ರಾಂ ಸಾಬೂನನ್ನು ಸೇರಿಸಿ ಚೆನ್ನಾಗಿ ಮಿಶ್ರಣವಾಗುವರೆಗೂ ಕಲಕಬೇಕು. ಸಂಪೂರ್ಣವಾಗಿ ಮಿಶ್ರಣವಾದ ಬಳಿಕ ತೆಳುವಾದ ಬಟ್ಟೆಯಿಂದ ಸೋಸಬೇಕು ತದನಂತರ ಈ ಮಿಶ್ರಣವನ್ನು 5 ಲೀಟರ್ ನೀರಿನ ಜೊತೆ ಬೆರೆಸಿ ಸಿಂಪಡಿಸಬೇಕು.

3. ಬೆಳ್ಳುಳ್ಳಿ ಹಾಗೂ ಮೆಣಸಿನಕಾಯಿ ಸಿಂಪರಣೆ

ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಮೂಲತಃ ಕೀಟ ನಿವಾರಕಗಳು. ಜೀರುಂಡೆಹುಳು, ಕಾಯಿಕೊರೆಯುವ ಹುಳು, ಜಿಗಿಹುಳು ಹತೋಟಿಗೆ ತುಂಬಾ ಪರಿಣಾಮಕಾರಿಯಾಗಿವೆ.

2 ಬೆಳ್ಳುಳ್ಳಿ ಗಡ್ಡೆ ಮತ್ತು 2 ಮೆಣಸಿನಕಾಯಿನ್ನು ಚೆನ್ನಾಗಿ ಜಜ್ಜಿ 1 ಕಪ್ ನೀರಿನಲ್ಲಿ ಮಿಶ್ರಣ ಮಾಡಿ ತೆಳುವಾದ ಬಟ್ಟೆಯಿಂದ ಸೋಸಬೇಕು. ಈ ಮಿಶ್ರಣವನ್ನು ಸಿಂಪರಣೆಗೆ ಮೊದಲು ಡೈಲ್ಯೂಟ ಮಾಡಿಕೊಳ್ಳಬೇಕು. ಪ್ರತಿ 4 ಲೀಟರ್ ನೀರಿಗೆ 1/4 ಮಿಶ್ರಣವನ್ನು ಸೇರಿಸಬೇಕು. ಅದರ ಜೊತೆಗೆ 2 ಟೀ ಚಮಚದಷ್ಟು ತರಕಾರಿ ತೈಲ ಸೇರಿಸಿ ಸಿಂಪಡಿಸುವುದರಿಂದ ಪ್ರಬಲವಾದ ಪರಿಣಾಮ ಪಡೆಯಬಹುದು.

4. ಬೆಳ್ಳುಳ್ಳಿ ಎಣ್ಣೆಯ ಸಿಂಪರಣೆ

1೦೦ ಗ್ರಾಂ ಬೆಳ್ಳುಳ್ಳಿ ಗಡ್ಡೆಯನ್ನು ಚೆನ್ನಾಗಿ ಜಜ್ಜಿ ಸ್ವಲ್ಪ ಪ್ರಮಾಣದ ಎಣ್ಣೆಯಲ್ಲಿ (ಅಡುಗೆಎಣ್ಣೆ) 24 ಗಂಟೆಗಳ ಕಾಲ ನೆನೆಸಿಡಬೇಕು ತದನಂತರ ತೆಳುವಾದ ಬಟ್ಟೆಯಿಂದ ಸೋಸಬೇಕು(ಹಿಂಡ ಬೇಕು). ಇದಕ್ಕೆ ನೀರು ಹಾಗೂ ಸ್ವಲ್ಪ ಪ್ರಮಾಣದ ಸಾಬೂನಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ಸಸ್ಯಹೇನು, ಬಿಳಿ ನೊಣ, ಜೇಡ, ನುಸಿಬಾಧೆಯನ್ನು ಹತೋಟಿ ಮಾಡಬಹುದು.

5. ಬೆಳ್ಳುಳ್ಳಿ ಹಾಗೂ ಮೀನಿನ ಎಣ್ಣೆ ಸಿಂಪರಣೆ

1 ಟೀ ಚಮಚ ಮೀನಿನ ಎಣ್ಣೆ ಹಾಗೂ 1 ಟೀ ಚಮಚದಷ್ಟು ಸಾಬೂನು ಪುಡಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುಲುಕಿಸಬೇಕು. ಈ ಮಿಶ್ರಣವನ್ನು ಬೆಳ್ಳುಳ್ಳಿ ಎಣ್ಣೆಯೊಂದಿಗೆ ಸೇರಿಸಿ ಕೆಲವು ತಿಂಗಳುಗಳ ಕಾಲ ಗಾಜಿನ ಜಾರಿನಲ್ಲಿ ಹಾಕಿ ಶೇಖರಿಸಿ ಇಡಬಹುದು. ಕೀಟಗಳ ಬಾಧೆ ಹೆಚ್ಚಾದಾಗ 2 ಟೀ ಚಮಚದಷ್ಟು ಈ ಮಿಶ್ರಣವನ್ನು ೦.5 ಲೀ. ನೀರಿನಲ್ಲಿ ಬೆರಿಸಿ ಸಿಂಪಡಿಸಬಹುದು. ಈ ಬೆಳ್ಳುಳ್ಳಿ ಹಾಗೂ ಮೀನಿನ ಎಣ್ಣೆ ಸಿಂಪರಣೆಯನ್ನು ಸಸ್ಯಹೇನು, ನುಸಿ, ಬಿಳಿನೋಣ, ಕ್ಯಾಬೇಜ್ ಎಲೆತಿನ್ನುವ ಕೀಟ, ತಿಗಣೆ, ಇಲಿಗಳು, ಸಿಂಬಳಹುಳು ಹಾಗೂ ಶಿಲೀಂಧ್ರಗಳಿಂದ ಬರುವ ರೋಗಗಳನ್ನು ತಡೆಯಲು ಬಳಸಬಹುದಾಗಿದೆ.

6. ಬೆಳ್ಳುಳ್ಳಿ ಡ್ರೆಂಚ್

ಬೆಳ್ಳುಳ್ಳಿ ಕಷಾಯವನ್ನು ಮಣ್ಣಿನಲ್ಲಿ ಡ್ರೆಂಚ್ ಮಾಡುವುದರಿಂದ ಮಣ್ಣಿನಲ್ಲಿರುವ ರೋಗಾಣುಗಳನ್ನು, ದುಂಡಾಣುಗಳನ್ನು, ಕೀಟಗಳನ್ನು, ಹತೋಟಿ ಮಾಡಲು ತುಂಬಾ ಸಹಕಾರಿ.

ಬೆಳ್ಳುಳ್ಳಿಯ ಉತ್ಪನ್ನಗಳನ್ನು ಉಪಯೋಗಿಸುವ ಮೊದಲು ಗಮನಿಸಬೇಕಾದ ಅಂಶಗಳು

• ಬೆಳ್ಳುಳ್ಳಿಯಿಂದ ತಯಾರಿಸಿದ ಕಷಾಯ ಹಾಗೂ ಇತರ ಉತ್ಪನ್ನಗಳನ್ನು ತಯಾರಿಸಿದ ಕೂಡಲೆ ಉಪಯೋಗಿಸಬೇಕು. ಇಲ್ಲದಿದ್ದರೆ ಅದರ ಶಕ್ತಿ ಸಾಮರ್ಥ್ಯ ಕುಂದುತ್ತದೆ.
• ಈ ಉತ್ಪನ್ನಗಳನ್ನು ವಾರದಲ್ಲಿ ಒಂದು ಬಾರಿ ಮಾತ್ರ ಉಪಯೋಗಿಸಬೇಕು. ಇನ್ನು ಮಳೆಗಾಲದಲ್ಲಿ ವಾರದಲ್ಲಿ ಎರಡು ಬಾರಿ ಉಪಯೋಗಿಸಬೇಕು.
• ಬೆಳೆಯು ಕೊಯ್ಲಿಗೆ ಬರುವ ಹಂತದಲ್ಲಿ ಇದನ್ನು ಸಿಂಪರಣೆ ಮಾಡಬಾರದು.
• ಇದೊಂದು ಪ್ರಬಲವಾದ ಕೀಟನಾಶಕವಾಗಿರುವುದರಿಂದ ಕೇವಲ ಕೀಟಬಾಧೆಗೆ ತುತ್ತಾಗಿರುವ ಸಸ್ಯದ ಭಾಗಗಳಿಗೆ ಸಿಂಪಡಿಸಬೇಕು, ಇಲ್ಲದಿದ್ದರೆ ಅನೇಕ ಉಪಯುಕ್ತ ಕೀಟಗಳಿಗೆ ತೊಂದರೆಯಾಗುತ್ತದೆ.
• ಸಾವಯವ ಕೃಷಿಯಲ್ಲಿ ಬೆಳೆದ ಬೆಳ್ಳುಳ್ಳಿಗೆ ಸೂಕ್ಷ್ಮ ರಾಸಾಯನಿಕ ಗೊಬ್ಬರವನ್ನು ಹಾಕುವುದರಿಂದ ಬೆಳ್ಳುಳ್ಳಿಯಲ್ಲಿರುವ ಕೀಟನಾಶಕ ಶಕ್ತಿ ಕುಂದುತ್ತದೆ.
• ರಂಜಕವನ್ನು ಹೊಂದಿರುವ ಸಾಬೂನು ಉಪಯೋಗಿಸುವುದು ಸೂಕ್ತ. ಇತ್ತೀಚಿನ ಆಧುನಿಕ ಮಾರ್ಜಕ ಪುಡಿಯು ಕಾಸ್ಟಿಕ್ ಸೋಡಾ ಹೊಂದಿರುವುದರಿಂದ ಸಸ್ಯಗಳಿಗೆ ಅಪಾಯಕಾರಿ. ಅಂತಹ ಸಾಬೂನು ಉಪಯೋಗಿಸಲು ಸೂಕ್ತವಲ್ಲ.

ಅಂತರಬೆಳೆ

ಬೆಳ್ಳುಳ್ಳಿಯು ಕೂಡ ಅಂತರ ಬೆಳೆಯಾಗಿ ಬೆಳೆಯಲು ಯೋಗ್ಯವಾಗಿದೆ. ಬೆಳ್ಳುಳ್ಳಿಯು ತನ್ನ ಪ್ರಬಲ ವಾಸನೆಯಿಂದ ಮುಖ್ಯ ಬೆಳೆಯ ವಾಸನೆಯನ್ನು ಮರೆಮಾಚಿ ಕೀಟಗಳ ಹತೋಟಿಗೆ ಹಾಗೂ ಕೀಟ ನಿವಾರಕ ಕೆಲಸ ಮಾಡುತ್ತದೆ. ಬೆಳ್ಳುಳ್ಳಿಯನ್ನು ಕ್ಯಾಬೆಜ್‌ನಲ್ಲಿ ಅಂತರ ಬೆಳೆಯಾಗಿ ಬೆಳೆಯುವುದರಿಂದ ವಜ್ರದ ಬೆನ್ನಿನ ಪತಂಗ ಹತೋಟಿ ಮಾಡಬಹುದು. 4 ಜೋಳದ ಸಾಲು 7 ಬೆಳ್ಳುಳ್ಳಿ ಸಾಲು ಬೆಳೆಯುವುದರಿಂದ ಜೋಳದ ಕಾಂಡ ಕೊರಕ ಹತೋಟಿ ಮಾಡಬಹುದು.

• ಬೆಳ್ಳುಳ್ಳಿಯನ್ನು ಹಣ್ಣು ಮರದ ಸುತ್ತಲು ಬೆಳೆಯುವುದರಿಂದ ಸಸ್ಯಹೇನು, ರಂಧ್ರಕೊರಕ ಗೆದ್ದಲು, ಇಲಿಗಳು ಹಾಗೂ ಇತರ ಕೀಟಗಳನ್ನು ನಿಯಂತ್ರಿಸಬಹುದು.
• ಗುಲಾಬಿ, ಟೊಮಾಟೊ ಗಿಡದ ಸುತ್ತಲು ಬೆಳ್ಳುಳ್ಳಿ ಬೆಳೆಯುವುದರಿಂದ ಕೆಂಪು ನುಸಿ ಹಾಗೂ ಸಸ್ಯ ಹೇನು ನಿಯಂತ್ರಿಸಬಹುದು.

ಬೆಳ್ಳುಳ್ಳಿ ಬ್ಯಾಕ್ಟಿರಿಯಾನಾಶಕ, ಶಿಲೀಂಧ್ರನಾಶಕ, ಕೀಟನಾಶಕ, ದುಂಡಾಣು ನಾಶಕ ಮತ್ತು ಕೀಟನಿವಾರಕದಂತಹ ಮುಖ್ಯ ಗುಣಗಳನ್ನು ಹೊಂದಿದ್ದು ಅತ್ಯಂತ ಅದ್ಭುತವಾದ ಪೀಡೆನಾಶಕವಾಗಿದೆ.

ವರಧಿ :

ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿ, ಧಾರವಾಡ.

1.ಬಸವರಾಜ,

2.ಧನರಾಜ್ ಪಿ.

3.ಚೇತನ ಕುಮಾರ ಎಸ್.

4.ಚಂದ್ರಕಾಂತ ಕಾಂಬಳೆ

Also read  ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ

Leave a Reply