Krushi

ಮಳೆ ಬಿಡುವು:ಕಾಫಿ,ಅಡಿಕೆ ತೋಟದಲ್ಲಿ ಪುನಃಶ್ಚೇತನ ಕೆಲಸ

ಕಳಸ ಹೋಬಳಿಯಲ್ಲಿ ಕಳೆದ ಸೋಮವಾರದಿಂದ ಕಡಿಮೆಯಾದ ಮಳೆಯ ಅಬ್ಬರ ತೋಟಗಾರಿಕಾ ಕೃಷಿಯಲ್ಲಿ ಚುರುಕು ತಂದಿದೆ.
2 ತಿಂಗಳಿನಿಂದ ಸತತವಾಗಿ ಸುರಿದ ಮಳೆ ಕೃಷಿ ಚಟುವಟಿಕೆಯನ್ನು ಸ್ಥಗಿತಗೊಳಿಸಿತ್ತು. ಹೆಚ್ಚಿದ ತೇವಾಂಶದಿಂದಾಗಿ ಮತ್ತು ಕೊಳೆ ರೋಗದಿಂದಾಗಿ ಕಾಫಿ ಫಸಲು ಉದುರುತ್ತಿತ್ತು. ಅಡಿಕೆ ಗೊನೆಗಳಿಗೂ ಕೊಳೆರೋಗ ವ್ಯಾಪಿಸಿ ಆತಂಕ ಸೃಷ್ಟಿಸಿತ್ತು. ಕಾಳುಮೆಣಸಿನ ಬಳ್ಳಿಗಳೂ ಕೊಳೆ ಮತ್ತು ಸೊರಗು ರೋಗಕ್ಕೆ ತುತ್ತಾಗಲಾರಂಭಿಸಿದ್ದವು.

ಇದೀಗ ಮಳೆ ತುಸು ಬಿಡುವು ನೀಡಿದ ಹಿನ್ನೆಲೆಯಲ್ಲಿ ಕಾಫಿ ಮತ್ತು ಅಡಿಕೆ ತೋಟದಲ್ಲಿ ಪುನಃಶ್ಚೇತನದ ಕೆಲಸಗಳು ಬಿರುಸಿನಿಂದ ನಡೆದಿವೆ. ಅಡಿಕೆ ಫಸಲಿಗೆ ಬೋರ್ಡೊ ಮಿಶ್ರಣವನ್ನು ಭರದಿಂದ ಸಿಂಪಡಿಸಲಾಗುತ್ತಿದೆ. ಅಡಿಕೆ ಮರ ಏರುವ ನುರಿತ ಕೆಲಸಗಾರರಿಗೆ ಈಗ ಭಾರಿ ಬೇಡಿಕೆ ಇದ್ದು ದಿನಕ್ಕೆ ₹1,500ರಿಂದ ₹2000 ಗಳಿಸುವ ಅವಕಾಶ ಇದೆ.

ಕೊಳೆ ರೋಗ ಪೀಡಿತ ಅಡಿಕೆ ಮರದಿಂದ ಸುತ್ತಮುತ್ತಲಿನ ಮರಗಳಿಗೆ ಅಥವಾ ಮರದ ತೊಂಡೆಗೆ ಕೊಳೆ ರೋಗ ವ್ಯಾಪಿಸದಂತೆ ತಡೆಯಲು ಕಟ್ಟೆಚ್ಚರ ವಹಿಸಲಾಗುತ್ತಿದೆ. ಮರಕ್ಕೆ ಪೋಷಕಾಂಶ ಇಲ್ಲದೆ ಉದುರುತ್ತಿರುವ ಹಸಿರು ಅಡಿಕೆ ತಡೆಯಲು ಅಡಿಕೆ ಮರಕ್ಕೆ ಈ ಬಿಡುವಿನಲ್ಲಿ ರಾಸಾಯನಿಕ ಗೊಬ್ಬರ ಕೊಡುತ್ತಿರುವುದು ಹೊಸ ಬೆಳವಣಿಗೆ.

ಕಾಫಿ ತೋಟದಲ್ಲಿ ಗಿಡಗಳ ಕೆಳಗೆ ಇದ್ದ ತರಗನ್ನೆಲ್ಲಾ ರಾಶಿ ಮಾಡಲಾಗುತ್ತಿದೆ. ಕಾಫಿ ಗಿಡದಲ್ಲೇ ಉಳಿದಿದ್ದ ಕೊಳೆ ಕಾಯಿ ಮತ್ತು ಕೊಳೆ ಸೊಪ್ಪನ್ನು ಗಿಡದಿಂದ ತೆಗೆದು ಕೊಳೆ ರೋಗ ನಿಯಂತ್ರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಫಸಲು ಉದುರುತ್ತಿರುವ ಹಿನ್ನೆಲೆಯಲ್ಲಿ ಕಾಫಿ ಗಿಡಕ್ಕೂ 100-150 ಗ್ರಾಂನಷ್ಟು ಯೂರಿಯಾ ಮತ್ತು ಪೊಟ್ಯಾಷ್ ಇರುವ ಗೊಬ್ಬರವನ್ನು ಬೆಳೆಗಾರರು ನೀಡುತ್ತಿದ್ದಾರೆ. ಗಿಡಕ್ಕೆ ಆಹಾರ ಸಿಗದೆ ಫಸಲು ಉದುರುತ್ತಿರುವ ಹಿನ್ನೆಲೆಯಲ್ಲಿ ಅಡಿಕೆ ಮತ್ತು ಕಾಫಿ ಗಿಡಕ್ಕೆ ತುರ್ತಾಗಿ ರಸಗೊಬ್ಬರ ನೀಡಿದರೆ ಫಸಲು ಉದುರುವುದನ್ನು ನಿಯಂತ್ರಿಸಬಹುದು ಎಂಬುದನ್ನು ಯುವ ಬೆಳೆಗಾರರ ಸಮೂಹ ತಂತ್ರಜ್ಞಾನದ ಫಲದಿಂದ ಕಂಡುಕೊಂಡಿದೆ.

ಕಾಳುಮೆಣಸಿಗೆ ಕೂಡ ಕೊಳೆ ರೋಗ ವ್ಯಾಪಿಸಿದ್ದು ಅದನ್ನು ತಡೆಯಲು ಶಿಲೀಂಧ್ರನಾಶಕಗಳನ್ನು ಸಿಂಪಡಣೆ ಮಾಡುವುದರ ಜತೆಗೆ ಗಿಡಗಳ ಬುಡಕ್ಕೆ ಔಷಧಿ ಮತ್ತು ಗೊಬ್ಬರದ ಸಮ್ಮಿಶ್ರ ದ್ರಾವಣ ಸುರಿಯುವ ಕೆಲಸವನ್ನೂ ಉತ್ಸಾಹಿ ಬೆಳೆಗಾರರು ಮಾಡುತ್ತಿದ್ದಾರೆ.

ಈಗ ನಾವು ಉದಾಸೀನ ಮಾಡಿದ್ರೆ ಮುಂದೆ ಫಸಲು ಕೊಯ್ಯುವಾಗ ಪಶ್ಚಾತ್ತಾಪ ಪಡಬೇಕಾಗುತ್ತದೆ’ ಎಂದು ಯುವ ಬೆಳೆಗಾರರು ಕೃಷಿಯಲ್ಲಿ ಪುನಃಶ್ಚೇತನ ಕಾರ್ಯವನ್ನು ಎಚ್ಚರಿಕೆಯಿಂದ ಮಾಡುತ್ತಿದ್ದಾರೆ. ಇನ್ನೊಂದೆಡೆ ‘ಯಾವ ಬೆಳೆಗೂ ಬೆಲೆ ಇಲ್ಲ. ಇಷ್ಟೆಲ್ಲಾ ಖರ್ಚು ಮಾಡಿದರೆ ನಮಗೆ ಆ ಹಣ ವಾಪಸ್ ಸಿಗಬೇಕಲ್ಲ’ ಎಂಬ ನಕಾರಾತ್ಮಕ ಧೋರಣೆಯಿಂದ ತೋಟವನ್ನು ನಿರ್ಲಕ್ಷ್ಯದಿಂದ ಕಾಣುವ ಬೆಳೆಗಾರರೂ ಇದ್ದಾರೆ. ಆದರೆ, ಈಗಿನ ಶ್ರಮದ ಬೆಲೆ ಅಡಿಕೆ- ಕಾಫಿ ಕೊಯ್ಲು ನಡೆಯುವ ಜನವರಿ ವೇಳೆಗೆ ಸಿಗುತ್ತದೆ ಎಂಬುದು ಮಾತ್ರ ಸತ್ಯ.

 ಪ್ರಜಾವಾಣಿ ವಾರ್ತೆ

Also read  ನಾಲ್ಕು ದಿನಗಳ ಕೃಷಿ ಜಾತ್ರೆ ಆರಂಭ:ಮೊದಲ ದಿನ ಒಂದು ಲಕ್ಷಕ್ಕೂ ಹೆಚ್ಚು ಜನರ ಭೇಟಿ

Leave a Reply