ರೋಬಸ್ಟಾ ಕಾಫಿ ಬೆಳೆಯಲ್ಲಿ ಕೃತಕ ಹೂಮಳೆ ಮತ್ತು ಹಿಮ್ಮಳೆ (ಬ್ಯಾಕಿಂಗ್) ಕೊಡುವುದು
ಸಾಮಾನ್ಯವಾಗಿ ರೋಬಸ್ಟಾ ಕಾಫಿಯಲ್ಲಿ ಫೆಬ್ರವರಿ 15 ರಿಂದ ಮಾರ್ಚ್ ತಿಂಗಳ 15 ರ ಒಳಗೆ ಮೊಗ್ಗುಗಳು ಪ್ರೌಢಾವಸ್ಥೆಗೆ ಬಂದಿರುತ್ತವೆ. ಈ ಸಮಯದಲ್ಲಿ ಕೃತಕ ನೀರಾವರಿಯನ್ನು ಮಾಡಬಹುದು. ರೋಬಸ್ಟಾ ಕಾಫಿಯು ತುಂತುರು ನೀರಾವರಿಗೆ ಚೆನ್ನಾಗಿ ಸ್ಪಂದಿಸುತ್ತದೆ. ತುಂತುರು ನೀರಾವರಿಯನ್ನು ಮುಖ್ಯವಾಗಿ ಒಳ್ಳೆಯ ಹೂಮಳೆ ಅಥವಾ ಹಿಮ್ಮಳೆಯಾಗದಿದ್ದಾಗ ಗಿಡಗಳಿಗೆ ಕೊಡಬಹದು. ಹೂಮಳೆ ಸರಿಯಾಗಿ ಬಂದಿಲ್ಲದ ಸಮಯದಲ್ಲಿ ಅಥವಾ ಅಲ್ಪ ಪ್ರಮಾಣದಲ್ಲಿ ಆಗಿದ್ದಲ್ಲಿ ಮೊಗ್ಗು ಅರಳದೆ ತಿಳಿ ಗುಲಾಬಿ ಬಣ್ಣಕ್ಕೆ ತಿರುಗಿ ಉದುರುತ್ತದೆ. ಇಂತಹ ಸಮಯದಲ್ಲಿ ಪೂರಕವಾಗಿ ತುಂತುರು ನೀರಾವರಿಯನ್ನು ಕೊಡುವುದರಿಂದ ಆಗುವ ಹಾನಿಯನ್ನು ತಪ್ಪಿಸಬಹುದು. ಹಾಗೆಯೇ ಮಳೆ ಬಂದಿಲ್ಲದಿದ್ದರೆ ಹೂ ಬಿಟ್ಟ 15 ರಿಂದ 20 ದಿನಗಳ ಒಳಗೆ ಬೆಂಬಲ (ಬ್ಯಾಕಿಂಗ್) ನೀರಾವರಿಯನ್ನು ಕೊಡಬೇಕು. ನೀರಾವರಿಗಾಗಿ ರೈನ್ ಗನ್ ಉಪಯೋಗಿಸಬಹುದು.

ಸರಿಯಾಗಿ ಆರೋಗ್ಯಕರವಾಗಿ ಹೂವು ಅರಳಲು ಒಂದು ಇಂಚು ನೀರಿನ ಪ್ರಮಾಣ ಬೇಕಾಗುತ್ತದೆ. ಹಾಗೆಯೇ 1 ಇಂಚು ಪ್ರಮಾಣದ ನೀರು ಬೆಂಬಲ ನೀರಾವರಿಗೆ ಬೇಕಾಗುತ್ತದೆ. ನೀರಾವರಿ ಮಾಡುವ ತೋಟಗಳಲ್ಲಿ,ಹೂಮಳೆ ನೀರಾವರಿ ಮಾಡಿದ ಮರುದಿನ ಗೊಬ್ಬರವನ್ನು ಹಾಕಬಹುದು. ಅಥವಾ ನೀರಾವರಿ ಮಾಡುವ ಮುಂಚೆ ಗೊಬ್ಬರ ಹಾಕುವ ನಿರ್ಧಾರ ಮಾಡಿದ್ದರೆ, ಒಂದು ದಿನ ಮುಂಚೆ ಗೊಬ್ಬರವನ್ನು ಶಿಫಾರಸ್ಸು ಮಾಡಿದ ರೀತಿಯಲ್ಲಿ ಹಾಕಿ ದರಗಿನಿಂದ ಮುಚ್ಚಬೇಕು.
ಕಾಫಿ ಬಳೆಗಾರರು ಗಮನಿಸಬೇಕಾದ ಅಂಶಗಳು
- ರೋಬಸ್ಟ ಕಾಫಿಯು ಮಳೆಗೆ ಬಹಳ ಸೂಕ್ಷ್ಮವಾಗಿ ಸ್ಪಂದಿಸುವ ಬೆಳೆ .
- ರೋಬಸ್ಟಾ ಕಾಫಿಗೆ ಸರಿಯಾದ ಸಮಯದಲ್ಲಿ ಹೂವು ಅರಳಲು ಮಳೆಯಾಗಬೇಕು.
- ಅರಳಿದ ನಂತರ ಸರಿಯಾದ ಕಾಲದಲ್ಲಿ ಹಿಮ್ಮಳೆ ಆಗಬೇಕು.
- ಒಂದು ವೇಳೆ ಹೂಮಳೆ ಮಾರ್ಚ್ 15ರ ಒಳಗೆ ಬಂದಿಲ್ಲದಿದ್ದರೆ ಆ ದಿನದಿಂದ ಪ್ರತಿ ವಾರಕ್ಕೆ ಗಣನೀಯವಾಗಿ ಬೆಳೆ ಕಡಿಮೆಯಾಗುತ್ತದೆ. ಆದುದರಿಂದ ರೋಬಸ್ಟ ಜಾಗಗಳಲ್ಲಿ ಸಾಕಷ್ಟು ನೀರಿನ ಆಸರೆಗಳಿದ್ದು ನೀರಾವರಿ ಸೌಲಭ್ಯಗಳು ಇರುವುದು ಮುಖ್ಯ. ಇದು ಹೂಮಳೆ ಸರಿಯಾದ ಸಮಯದಲ್ಲಿ ಬರದಿದಾಗ ಮತ್ತು ಹೂಮಳೆ ಬಂದು ಹಿಮ್ಮಳೆ ಸರಿಯಾದ ಸಮಯದಲ್ಲಿ ಆಗದಿದಾಗ ಉಪಯೋಗಕ್ಕೆ ಬರುತ್ತದೆ.
- ಸರಿಯಾದ ಸಾಕಷ್ಟು ನೀರಿನ ಆಸರೆ ಇಲ್ಲದ ಜಾಗಗಳಲ್ಲಿ ರೋಬಸ್ಟಾ ಕಾಫಿ ಬೆಳೆಯುವುದನ್ನು ಮಾಡಬಾರದು.
- ನೀರಿನ ಆಸರೆ ಇಲ್ಲದ ಜಾಗಗಳಲ್ಲಿ ಈಗಾಗಲೇ ತೋಟಗಳು ಇದ್ದರೆ ಒಣ ಹವೆಯಿಂದ ಗಿಡಗಳನ್ನು ಕಾಪಾಡಲು ಪೌಷ್ಟಿಕಾಂಶ ಮಿಶ್ರಣವನ್ನು ಎಲೆಗಳಲ್ಲಿ ಸಿಂಪಡಿಸದೆ. ಈ ಮಿಶ್ರಣವನ್ನು ಒಂದು ಕಿಲೋ ಯೂರಿಯ, ಒಂದು ಕಿಲೋ ಸೂಪರ್ ಫಾಸ್ಫೇಟ್, 250 ಗ್ರಾಂ ಮ್ಯುರೇಟ್ ಪೊಟಷ್ ಮತ್ತು ಒಂದು ಕಿಲೋ ಜಿಂಕ್ ಸಲ್ಫೇಟ್ ಗಳನ್ನು 2೦೦ ಲೀಟರ್ ನೀರಿನಲ್ಲಿ ಕರಗಿಸಿ ತಯಾರಿಸಬಹುದು. ಮೊದಲನೇ ಸಿಂಪರಣೆ ಹಿಂಗಾರು ಮಳೆ ನಿಂತ 45 ದಿನಗಳ ನಂತರ ಎರಡನೇ ಸಿಂಪರಣೆ ಮೊದಲನೇ ಸಿಂಪರಣೆಯ 3೦-4೦ ದಿನಗಳ ನಂತರ ಗಿಡಗಳಿಗೆ ಒಂದು ಲೀಟರ್ ನಂತೆ ಸಿಂಪಡಿಸಬೇಕು.
- ಸೂಚನೆ: ಬೆಳಗಾರರಿಗೆ ಹೂಮಳೆ ಮತ್ತು ಹಿಮ್ಮಳೆ ವಿಫಲವಾದರೆ ಬೆಳೆ ವಿಮೆಯ ಸೌಕರ್ಯ ಇರುವುದರಿಂದ ಇದರ ಸದುಪಯೋಗ ಪಡೆದುಕೊಳ್ಳಬೇಕಾಗುತ್ತದೆ.