ಕಪ್ಪು ಬಂಗಾರ :ಆಮದು ತಂದ ಆತಂಕ
‘ಕಪ್ಪು ಬಂಗಾರ’ ವೆಂದೇ ಪ್ರಸಿದ್ಧಿಯಾಗಿರುವ ಕಾಳು ಮೆಣಸಿನ ಧಾರಣೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ.ಬರ ಪರಿಸ್ಥಿತಿ ಹಾಗೂ ಇಳುವರಿ ಕುಸಿತದ ನಡುವೆ ಬೆಲೆಯಾದರೂ ಕೈಹಿಡಿಯಲಿದೆ ಎಂಬ ಬೆಳೆಗಾರನ ನಿರೀಕ್ಷೆ ಸುಳ್ಳಾಗಿದೆ.
ಕೊಡಗು,ಚಿಕ್ಕಮಗಳೂರು,ಬೇಲೂರು ಹಾಗೂ ಸಕಲೇಶಪುರ ಭಾಗದಲ್ಲಿ ಹೆಚ್ಚಾಗಿ ಕಾಳು ಮೆಣಸು ಬೆಳೆಯಲಾಗುತ್ತದೆ. ಜನವರಿಯಲ್ಲಿ ಕೊಯ್ಲು ಮಾಡಿ ಒಣಗಿಸಿ ದಾಸ್ತಾನು ಮಾಡಿದ್ದರು. ಇಂದಲ್ಲ ನಾಳೆ ಉತ್ತಮ ಧಾರಣೆಯ ನಿರೀಕ್ಷೆಯಲ್ಲಿದ್ದ ಬಹುತೇಕ ಬೆಳೆಗಾರರು,ಈಗ ಚಿಂತೆಗೆ ಒಳಗಾಗಿದ್ದಾರೆ.
ಕಾಫೀ ಬೆಳೆಯುವ ಬಾಗದಲ್ಲಿ ಕಳೆದ ಮೂರ್ನಾಕು ವರ್ಷದಿಂದ ಸರಿಯಾಗಿ ಮಳೆ ಬಾರದೆ ಬರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬರದ ಛಾಯೆಯಲ್ಲೂ ಕಷ್ಟಪಟ್ಟುಉಳಿಸಿಕೊಂಡ ಕಾಫೀ ಹಾಗೂ ಮೆಣಸಿನ ಗಿಡದಿಂದ ಅಲ್ಪ ಸಲ್ಪ ಬೆಳೆ ಪಡೆದುಕೊಂಡಿದ್ದರು.ಮೊದಲೇ ಕಾಫೀ ಧಾರಣೆ ಕುಸಿತದಿಂದ ಕಂಗಾಲಾಗಿದ್ದ ಬೆಳೆಗಾರನಿಗೆ ಈಗ ಮೆಣಸಿನ ಧಾರಣೆ ಕುಸಿತ ಗಾಯದ ಮೇಲೆ ಭರೆ ಎಳೆದಂತಾಗಿದೆ .
ಏಪ್ರಿಲ್ ತಿಂಗಳ ಆರಂಭದಲ್ಲಿ ಕೊಡಗು, ಸೋಮವಾರಪೇಟೆ, ಸಕಲೇಶಪುರದ ಮಾರುಕಟ್ಟೆಗಳಲ್ಲಿ ಕ್ವಿಂಟಲ್‌ಗೆ 52,500ರಿಂದ 54,500ಕ್ಕೆ ಖರೀದಿ ಮಾಡುತ್ತಿದ್ದರು. ಅದೇ ಏಪ್ರಿಲ್ ಕೊನೆಯಲ್ಲಿ 44 ಸಾವಿರಕ್ಕೆ ಬಂದು ನಿಂತಿರುವುದು ಬೆಳೆಗಾರರ ದುಗುಡ ಹೆಚ್ಚಿಸಿದೆ. ಇಪ್ಪತ್ತು ದಿನಗಳ ಅಂತರದಲ್ಲಿ ಕ್ವಿಂಟಲ್‌ಗೆ 10 ಸಾವಿರದಷ್ಟು ಬೆಲೆ ಕುಸಿದಿದೆ. ಈಗ ವ್ಯಾಪಾರಿಗಳು ಪ್ರತಿ ಕೆ.ಜಿಗೆ 420ಕ್ಕೆ ಕೇಳುತ್ತಿರುವುದು ಮತ್ತಷ್ಟು ನೆಮ್ಮದಿ ಕೆಡಿಸಿದೆ.
‘ನದಿ,ತೋಡು ಹಾಗೂ ತೆರೆದಬಾವಿಗಳೂ ಬತ್ತಿ ಹೋಗಿದ್ದವು. ಕಾಫಿ ಗಿಡ, ಕಾಳು ಮೆಣಸಿನ ಬಳ್ಳಿಯನ್ನು ಉಳಿಸಿಕೊಳ್ಳುವುದೂ ಕಷ್ಟವಾಗಿತ್ತು. ಎಲ್ಲ ಸಂಕಷ್ಟಗಳ ನಡುವೆಯೂ ಅಲ್ಪಸ್ವಲ್ಪ ಇಳುವರಿ ಬಂದಿತ್ತು. ಕಾಫಿಯ ಜತೆಗೆ ಕಾಳು ಮೆಣಸಿನ ಧಾರಣೆಯೂ ಕುಸಿತದ ಹಾದಿ ಹಿಡಿದಿರುವುದು ನಮ್ಮನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ’ ಎಂದು ನಾಪೋಕ್ಲು ಕಾಫಿ ಬೆಳೆಗಾರ ಕೆ.ಪೂವಣ್ಣ ತಿಳಿಸಿದರು.
‘ವಿಯೆಟ್ನಾಂ ಸೇರಿದಂತೆ ಇತರೆ ದೇಶಗಳಿಂದ ಕಾಳು ಮೆಣಸು ಆಮದಾಗುತ್ತಿರುವುದು ಸ್ಥಳೀಯ ಮಾರುಕಟ್ಟೆಗಳಲ್ಲಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.ಇಡೀ ದೇಶದಲ್ಲಿ ಮಳೆಯ ಕೊರತೆಯಿದೆ. ಜತೆಗೆ, ನೋಟು ರದ್ದತಿಯ ದೊಡ್ಡ ಹೊಡೆತದಿಂದ ಮಾರುಕಟ್ಟೆ ಇನ್ನೂ ಚೇತರಿಸಿಕೊಂಡಿಲ್ಲ. ಖರೀದಿದಾರರಿಗೂ ನಷ್ಟವಾಗುತ್ತಿದೆ. ಜೂನ್ ಅಥವಾ ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ’ ಎನ್ನುತ್ತಾರೆ ಮಡಿಕೇರಿ ವ್ಯಾಪಾರಿ ಕೆ.ಅಬ್ದುಲ್ಲಾ.
Read more here: 1.Prajavani