CoffeeKrushi

ಹನಿ ನೀರಾವರಿ ಪದ್ಧತಿಯಲ್ಲಿ ಕಾಫಿ ಬೆಳೆ

‘ಹನಿ ನೀರಾವರಿ ಪದ್ಧತಿಯಿಂದ ಕೃಷಿ ಆರಂಭಿಸಿದ ಮೇಲೆ ನಮ್ಮ ಅವಿಭಕ್ತ ರೈತ ಕುಟುಂಬದಲ್ಲಿ ನೆಮ್ಮದಿ, ಸುಖ ಕಾಣುತ್ತಿದ್ದೇವೆ…’ ಹೀಗೆ ವಿವರಿಸುತ್ತಾ ಹೋದರು ಶನಿವಾರಸಂತೆ ಸಮೀಪದ ಶಿಡಿಗಳಲೆ ಗ್ರಾಮದ 34ರ ಹರೆಯದ ಯುವ ಕೃಷಿಕ ಎಸ್.ಪಿ.ಸಾಗರ್.

ಪದವಿ ಮುಗಿಸಿದ ಸಾಗರ್ ಉನ್ನತ ವಿದ್ಯಾಭ್ಯಾಸವನ್ನಾಗಲೀ ಉದ್ಯೋಗ ವನ್ನಾಗಲಿ ಇಚ್ಛಿಸಲಿಲ್ಲ. ಹಿರಿಯರು ಮಾಡುತ್ತಿದ್ದ ಕೃಷಿಯಲ್ಲೇ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ನಿರ್ಧರಿಸಿ, ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ.

2003ರಲ್ಲಿ ಪದವಿ ಮುಗಿಯಿತು. ಮುಂದೇನು ಎಂದು ಸಾಗರ್ ಆಲೋಚಿಸುತ್ತಿರುವಾಗಲೇ ಇತ್ತ ಕೃಷಿಕ ತಂದೆ ಎಸ್.ಪಿ. ಫಾಲಾಕ್ಷ ಕೂಲಿ ಕಾರ್ಮಿಕರ ಕೊರತೆಯಿಂದ ಕಂಗೆಟ್ಟಿದ್ದರು. ತಂದೆಯ ಬವಣೆ ನೀಗಲು ತಾವೂ ಕೃಷಿಯಲ್ಲಿ ತೊಡಗಿಸಿಕೊಂಡು ನೆರವಾಗಲು ನಿರ್ಧರಿಸಿದರು. ತಂದೆ ಫಾಲಾಕ್ಷರ ಮಾರ್ಗದರ್ಶನದಲ್ಲಿ ಕೃಷಿ ಜೀವನ ಆರಂಭಿಸಿದರು. ಪಿತ್ರಾರ್ಜಿತ ಐದೂವರೆ ಎಕರೆ ಭೂಮಿಯಲ್ಲಿ ಗದ್ದೆ– ಕಾಫಿ ತೋಟದಲ್ಲಿ ದುಡಿಮೆ ಆರಂಭಿಸಿದರು; ನಿರಂತರ ಶ್ರಮದ ದುಡಿಮೆ ಕೈ ಹಿಡಿಯಿತು.

ಐದೂವರೆ ಎಕರೆ ಇಂದು ಇಪ್ಪತ್ತ ಮೂರು ಎಕರೆಯಾಗಿ ಅಭಿವೃದ್ಧಿ ಕಂಡಿದೆ. ಅದರಲ್ಲಿ 18 ಎಕರೆ ಕಾಫಿ ತೋಟದಲ್ಲಿ ಕಾಫಿಯೊಂದಿಗೆ ತೆಂಗು, ಅಡಿಕೆ, ಕಿತ್ತಳೆ, ಕಾಳು ಮೆಣಸನ್ನು ಉಪ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಕೃಷಿಯ ಆರಂಭದಲ್ಲಿ ಆದಾಯ ಗಳಿಸುವುದಕ್ಕಿಂತ ಉಳಿಸಿಕೊಳ್ಳುವ ಉತ್ಸಾಹ ಮೂಡಿತ್ತು. 

ತೋಟದಲ್ಲಿ ಅರೇಬಿಕಾ, ರೋಬಸ್ಟ ಕಾಫಿ ಗಿಡದೊಂದಿಗೆ ಅಡಿಕೆ, ತೆಂಗು, ಕಿತ್ತಳೆ, ಕಾಳುಮೆಣಸು ಬೆಳೆ ಬೆಳೆಯುತ್ತಾರೆ. ಕೃಷಿಯ ಸಮೃದ್ಧಿಗಾಗಿ ತೋಡಿಸಿದ ಕೊಳವೆಬಾವಿಯಲ್ಲಿ ನೀರು ಕಡಿಮೆ. ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಿದರೂ ಸಾಕಾಗುವುದಿಲ್ಲ ಎನಿಸತೊಡಗಿತು. ಆಗ ಸಾಗರ್ ಹನಿ ನೀರಾವರಿ ಪದ್ಧತಿ ಅನುಸರಿಸಲು ನಿರ್ಧರಿಸಿದರು.

ಹನಿ ನೀರಾವರಿ ಪದ್ಧತಿ ಅಳವಡಿಕೆ ಯಿಂದ ತೋಟ ಅಭಿವೃದ್ಧಿ ಕಂಡಿದೆ. ತುಂಬಾ ಅನುಕೂಲಕರವಾಗಿದೆ. ಮಳೆ ಬಾರದಿದ್ದರೂ ಚಿಂತೆಯಿಲ್ಲ. ಬೆಳೆಯ ಬುಡಕಷ್ಟೆ ನೀರು ಹನಿಯುವುದರಿಂದ ಕಳೆ ಸಸ್ಯದ ಭಯವಿಲ್ಲ. ಬೆಳೆಗೆ ಸಾವಯವದೊಂದಿಗೆ ರಾಸಾಯನಿಕ ಗೊಬ್ಬರ ಬಳಕೆ. ಗದ್ದೆ ಉಳುಮೆಗಾಗಿ ಟ್ರ್ಯಾಕ್ಟರ್, ಕಾಫಿ ಪಲ್ಪರ್, ಕಳೆ ಕೊಚ್ಚುವ ಯಂತ್ರ, ಕಟಾವು ಯಂತ್ರ, ಪವರ್ ಸ್ಪ್ರೆ, ಪಂಪ್‌ಸೆಟ್ ಎಲ್ಲವೂ ಇದೆ.

‘ಹನಿ ನೀರಾವರಿ ಪದ್ಧತಿಗೆ ಒಮ್ಮೆ ಬಂಡವಾಳ ತೊಡಗಿಸಿಕೊಂಡರೆ ಸಾಕು ನೀರು ಪೋಲಾಗುವುದಿಲ್ಲ. ಗಿಡಕ್ಕೆ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತದೆ. ಕಳೆ ಕಡಿಮೆ, ಗೊಬ್ಬರ ನಿರ್ವಹಣೆಯಾಗುತ್ತದೆ. ತೋಟದ ಖರ್ಚು–ವೆಚ್ಚ ಕಳೆದು ವಾರ್ಷಿಕ ಆದಾಯ ₹ 6 ಲಕ್ಷ ಉಳಿತಾಯವಾಗುತ್ತದೆ. ಪಶು ಪಾಲನೆಯೂ ಇದೆ’ ಎಂದು ಸಾಗರ್ ಹೇಳುತ್ತಾರೆ.

* *

ಎಷ್ಟೋ ಮಂದಿ ಯುವಕರು ಕೃಷಿ ಲಾಭವಿಲ್ಲವೆಂದು ಮಹಾನಗರಿಗಳಿಗೆ ತೆರಳುತ್ತಾರೆ. ಆದರೆ, ಶ್ರಮಪಟ್ಟು ದುಡಿದರೆ ಕೃಷಿಯಲ್ಲೂ ಲಾಭ ಗಳಿಸಲು ಸಾಧ್ಯ ಎಂಬುದಕ್ಕೆ ಸಾಗರ್‌ ಅವರೇ ಉದಾಹರಣೆ

ಮೋಹನ್, ಶಿಡಿಗಳಲೆ ಗ್ರಾಮದ ಪ್ರಗತಿಪರ ಕೃಷಿಕ

ಕೃಪೆ : ಪ್ರಜಾವಾಣಿ 

 

Also read  Coffee futures update – 07/March/18

Leave a Reply