ಮಂಡ್ಯದ ತೆಂಗಿನ ಮರಗಳಿಗೆ ಕಪ್ಪುತಲೆ ಹುಳು ಹಾಗೂ ಸುರುಳಿಯಾಕಾರದ ಬಿಳಿ ನೊಣ ಹಾವಳಿ:ನಿಯಂತ್ರಣಕ್ಕೆ ಇಲ್ಲಿದೆ ಪರಿಹಾರ
ಮಂಡ್ಯ ಪಾಂಡವಪುರ,ಕೆ.ಆರ್.ಪೇಟೆ,ನಾಗಮಂಗಲ ಹಾಗೂ ಮದ್ದೂರು ತಾಲ್ಲೂಕಿನಲ್ಲಿ ಮೂರು ತಿಂಗಳಿಂದೀಚೆಗೆ ತೆಂಗಿನ ಮರಗಳಿಗೆ ಕಪ್ಪುತಲೆ ಹುಳು ಹಾಗೂ ಸುರುಳಿಯಾಕಾರದ ಬಿಳಿ ನೊಣ ಬಾಧೆ ಕಾಣಿಸಿಕೊಂಡಿದ್ದು,ಲಕ್ಷಕ್ಕೂ ಹೆಚ್ಚು ಮರಗಳು ಒಣಗಿ ಹೋಗಿವೆ. ಒಣಗಿದ ಮರಗಳನ್ನು ಕಡಿಯುತ್ತಿರುವ ರೈತರು ಸಾಮಿಲ್‌ಗಳಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ. ಕೀಟಬಾಧೆಯಿಂದಾಗಿ 45 ಸಾವಿರ ಮರಗಳ ಸುಳಿ ಸಂಪೂರ್ಣವಾಗಿ ಒಣಗಿವೆ.
ರೈತರಿಗೆ ಆರ್ಥಿಕ ಭದ್ರತೆ ನೀಡಿದ್ದ ತೆಂಗಿನಮರಗಳಿಗೆ ಕೀಟಬಾಧೆ ಉಂಟಾಗಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.ಈವರೆಗೆ 15 ಸಾವಿರಕ್ಕೂ ಹೆಚ್ಚು ಮರಗಳನ್ನು ಕತ್ತರಿಸಲಾಗಿದೆ.
ಈ ಬಗ್ಗೆ ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸುತ್ತಿದ್ದು 45 ಸಾವಿರ ಮರಗಳಿಗೆ ತಲಾ ₹ 400 ಪರಿಹಾರ ನೀಡುವುದಾಗಿ ಅಧಿಕಾರಿಗಳು ರೈತರಿಗೆ ಭರವಸೆ ನೀಡಿದ್ದಾರೆ. ತೋಟಕ್ಕೆ ವಿಮೆ ಮಾಡಿಸಿದ್ದರೆ ವಿಮಾ ಕಂಪನಿಯಿಂದಲೂ ಪರಿಹಾರ ಪಡೆಯಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಈ ಎರಡೂ ಕೀಟಗಳ ಕಾಟ ತಮಿಳುನಾಡಿನಲ್ಲಿ ಕಾಣಿಸಿಕೊಂಡ ಬಗ್ಗೆ ತೋಟಗಾರಿಕೆ ಇಲಾಖೆಯಲ್ಲಿ ಮಾಹಿತಿ ಇದೆ. ಕಪ್ಪುತಲೆ ಹುಳು ತೆಂಗಿನ ಗರಿಯ ಬುಡ ತಿನ್ನುವ ಕಾರಣ ಗರಿ ಒಣಗಿ ಬೀಳುತ್ತದೆ. ಸುರಳಿಯಾಕಾರದ ಬಿಳಿ ನೊಣದ ದಾಳಿಯಿಂದ ತೆಂಗಿನ ಮರದ ಸುಳಿ ಒಣಗಿ ಕಳಚುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.
ನಿರ್ವಹಣೆ ಹೇಗೆ?
- ಬೇವಿನ ಎಣ್ಣೆ ಸಿಂಪಡಿಸಲು ಸೂಚನೆ
ಕಪ್ಪುತಲೆ ಹುಳು ಹಾಗೂ ಸುರಳಿಯಾಕಾರದ ಬಿಳಿ ನೊಣದ ಬಾಧೆ ಹೆಚ್ಚಳವಾಗುತ್ತಿದ್ದಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ರೈತರು ಬೇವಿನ ಎಣ್ಣೆಯನ್ನು ವಾರದಲ್ಲಿ ಮೂರು ದಿನ ಸಿಂಪಡಣೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. - ಈ ಕುರಿತು ಅರಿವು ಮೂಡಿಸಲು ರೈತರಿಗೆ ಭಿತ್ತಿ ಪತ್ರ ಹಂಚುತ್ತಿದ್ದಾರೆ.
- ‘ಸಮಗ್ರ ನೀರು ನಿರ್ವಹಣೆ ಹಾಗೂ ಗೊಬ್ಬರ ನಿರ್ವಹಣೆ ಕೊರತೆಯಿಂದ ಕೀಟ ಬಾಧೆ ಕಾಣಿಸಿಕೊಂಡಿದೆ. ಇದೇ ಮೊದಲ ಬಾರಿಗೆ ನಮ್ಮ ಜಿಲ್ಲೆಯಲ್ಲಿ ಬಿಳಿ ನೊಣ ಕಾಣಿಸಿಕೊಂಡಿದೆ. ಈ ನೊಣ ಹೆಚ್ಚು ಕಾಲ ಜೀವಂತವಾಗಿರುವುದಿಲ್ಲ. ಹೀಗಾಗಿ ಇದನ್ನು ನಾಶ ಮಾಡುವುದು ಬಹಳ ಸುಲಭ. ರೈತರು ಆತಂಕಕ್ಕೆ ಒಳಗಾಗುವುದು ಬೇಡ. ಬೇವಿನ ಎಣ್ಣೆಯನ್ನು ಮೂರು ಬಾರಿ ಸಿಂಪಡಿಸಿದರೆ ರೋಗ ನಿಯಂತ್ರಿಸಬಹುದು’ ಎಂದು ತೋಟಗಾರಿಕೆ ಇಲಾಖೆ ಸೂಚನೆ ನೀಡಿದ್ದಾರೆ.
- ಮರ ಕಡಿಯದಿರಲು ಸಲಹೆ ಕೀಟಬಾಧೆಗೆ ಒಳಗಾದ ಮರಗಳನ್ನು ಕತ್ತರಿಸಬಾರದು.
- ತೆಂಗಿನ ಗರಿ ಒಣಗುತ್ತಿರುವುದು ಗೊತ್ತಾದ ಕೂಡಲೇ ಬೇವಿನ ಎಣ್ಣೆ ಸಿಂಪಪಡಿಸಬೇಕು.
- ಸುಳಿ ಒಣಗುವುದಕ್ಕೂ ಮೊದಲೂ ಈ ಕಾರ್ಯ ಮಾಡಿದರೆ ಮರ ರಕ್ಷಣೆ ಮಾಡಬಹುದು.
- ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಮದ್ದೂರು ತಾಲ್ಲೂಕಿನಿಂದ ಅರಿವಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
- ಬೆಳೆಗಾರರು ತೋಟಗಾರಿಕೆ ವಿಜ್ಞಾನಿಗಳ ಮಾರ್ಗದರ್ಶನ ಪಡೆದು ನೀರು, ಗೊಬ್ಬರ ನಿರ್ವಹಣೆ ಮಾಡಿದರೆ ತೆಂಗಿನಮರ ಮತ್ತೆ ಹಸಿರಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದರು.
ಸುರುಳಿಯಾಕಾರದ ಬಿಳಿ ನೊಣ ನಿರ್ವಹಣೆ
- ಕೀಟನಾಶಕಗಳ ಸಿಂಪರಣೆ ಮಾಡಬಾರದು.
- ಎಲೆಗಳ ಮೇಲೆ ಶೇ. ೧.೦ ಸ್ಟಾರ್ಚ್ (ಗಂಜಿ ತಿಳಿ) ಸಿಂಪರಣೆ ಮಾಡುವುದರಿಂದ ಕಪ್ಪು ಶಿಲೀಂಧ್ರ ಉದುರಿ ಹೋಗುವುದು.
- ಕಾಂಡದ ಮೇಲೆ ಹಳದಿ ಜಿಗುಟಾದ ಬೋರ್ಡ್ (ಟ್ರಾಪ್) ಅಳವಡಿಸಬೇಕು.
- ಪರಾವಲಂಬಿ ಜೀವಿ ಎನ್ಕಾರ್ಶೀಯಾ ಗ್ವಾಡಿಲೋಪೆ (Encarsia guadeloupae) ನ್ನು ವೃದ್ಧಿಸುವುದನ್ನು ಪ್ರೋತ್ಸಾಹಿಸುವುದು ಮತ್ತು ಪರಾವಲಂಬಿ ಜೀವಿಯ ಕೋಶಗಳನ್ನು, ರುಗೋಸ್ ಬಿಳಿ ನೊಣವು ಏಕಾಏಕಿ ಹೊರಹೊಮ್ಮುವ ಪ್ರದೇಶಗಳಲ್ಲಿ ಚದುರಿಸಿ ಬಿಡುವುದು.
- ಹೊಸ ಪ್ರದೇಶಗಳಿಗೆ ಕೀಟ ಹರಡುವುದನ್ನು ತಡೆಯಲು, ತೆಂಗಿನ ನರ್ಸರಿಗಳಲ್ಲಿ ಮಾತ್ರ ಇಮಿಡಾಕ್ಲೋಪ್ರಿಡ್ (Imidacloprid) ಅನ್ನು ಪ್ರತಿ ಲೀಟರ್ ನೀರಿಗೆ ೦.೫ ಮಿ.ಲೀ. ಬೆರೆಸಿ ಸಿಂಪಡಿಸಿ, ರುಗೋಸ್ ಬಿಳಿ ನೊಣವನ್ನು ನಾಶಪಡಿಸುವುದು.
- ತೋಟದ ಪರಿಸರದ ವ್ಯವಸ್ಥೆಯಲ್ಲಿ, ಕಪ್ಪು ಶಿಲೀಂಧ್ರವನ್ನು ಭಕ್ಷಿಸುವ ಜೀರುಂಡೆ ಲಿಯೋಕ್ರೀನಸ್ ನೀಲ್ಗೀರಿಯಾನಸ್ (Leiochrinus nilgirianus) ಹುಳಗಳನ್ನು ಸಂರಕ್ಷಿಸಬೇಕು.