Featured NewsKrushi

ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮನವಿ:ಕರ್ನಾಟಕ ಬೆಳೆಗಾರರ ಒಕ್ಕೂಟ

ಪಕ್ಷಗಳು ಪ್ರಣಾಳಿಕೆಯಲ್ಲಿ ಕೃಷಿಕರ ಮನವಿಗಳನ್ನು ಸೇರಿಸಬೇಕು ಎಂದು ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರಿಗೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಿಂದ ಮನವಿ.

ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ, ಕಾಫಿ ಬೆಳೆಗಾರರ ಸಾಲ ಮನ್ನಾ, ವನ್ಯಜೀವಿಗಳಿಂದ ಬೆಳೆ ಮತ್ತು ರೈತರ ಜೀವ ರಕ್ಷಣೆ, ಕಾಫಿ ಬೆಳೆಗಾರರಿಗೆ ವಿದ್ಯುತ್ ಉಚಿತ ಪೂರೈಕೆ, ಕೃಷಿ ಪತ್ತಿನ ಸಹಕಾರ ಸಂಸ್ಥೆಗಳಲ್ಲಿ ₹ 10 ಲಕ್ಷದವರೆಗೆ ಪಡೆದ ಬೆಳೆಸಾಲಕ್ಕೆ ಶೇ 3 ಬಡ್ಡಿ ದರ ನಿಗದಿ, ಕೃಷಿಕರಿಗೆ ಅಗತ್ಯವಾಗಿರುವ ಕಂದಾಯ ದಾಖಲಾತಿಗಳನ್ನು ಒಂದೇ ನಮೂನೆಯಲ್ಲಿ ನಮೂದಿಸುವ ವ್ಯವಸ್ಥೆ ಜಾರಿ, ಸಹಕಾರ ಸಂಸ್ಥೆ ಪುನಃಶ್ಚೇತನ ವಿಷಯಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ನಿಟ್ಟಿನಲ್ಲಿ ಕೇರಳ, ತಮಿಳುನಾಡಿನಲ್ಲಿ ಸರ್ಕಾರಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಿರುವಂತೆ ಕರ್ನಾಟಕದಲ್ಲೂ ಗುತ್ತಿಗೆ ಆಧಾರದಲ್ಲಿ ನೀಡಬೇಕು. ಭೂಕಬಳಿಕೆ ಕಾಯ್ದೆಗೆ ತಿದ್ದುಪಡಿ ತರಬೇಕು. ರೈತರು 5 ಎಕರೆವರೆಗಿನ ಒತ್ತುವರಿ ಜಮೀನನ್ನು ಸಕ್ರಮಗೊಳಿಸಬೇಕು. 5 ಎಕರೆವರೆಗೆ ಎಕೆರೆಗೆ ವಾರ್ಷಿಕ ₹1ಸಾವಿರ, 5ರಿಂದ 10 ಎಕರೆವರೆಗೆ ಎಕರೆಗೆ ₹ 5ಸಾವಿರ, ಹಾಗೂ 10ರಿಂದ 25 ಎಕರೆವರೆಗೆ ಎಕರೆಗೆ ₹ 10ಸಾವಿರ ಗುತ್ತಿಗೆ ಶುಲ್ಕ ನಿಗದಿಗೊಳಿಸಬೇಕು.

25 ಎಕರೆಗಿಂತ ಹೆಚ್ಚಿನದಕ್ಕೆ ಎಕರೆಗೆ ₹ 15 ಸಾವಿರ ಗುತ್ತಿಗೆ ಶುಲ್ಕ ನಿಗದಿ ಗೊಳಿಸಬೇಕು. 90 ವರ್ಷ ಅವಧಿಗೆ ಕೃಷಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಬೇಕು.

ಕಾಫಿ ಮಂಡಳಿಯು 10 ಹೆಕ್ಟೇರ್‌ ವರೆಗಿನ ಬೆಳೆಗಾರರನ್ನು ಸಣ್ಣ ಬೆಳೆಗಾರರೆಂದು ಗುರುತಿಸಿದೆ. ಈ ಬೆಳೆಗಾರರಿಗೆ ಕಾಫಿಯ ಗುಣಮಟ್ಟ ಕಾಪಾಡಿಕೊಳ್ಳಲು ಕಣ, ಗೋದಾಮು, ಕೂಲಿಲೈನು, ಪಲ್ಪರ್ ಘಟಕ ಮೂಲಸೌಕರ್ಯಕ್ಕೆ ಸಹಾಯಧನ ಒದಗಿಸುತ್ತಿದೆ. ಮೂಲಸೌಕರ್ಯಕ್ಕಾಗಿ ಒತ್ತುವರಿಯಾಗಿರುವ ಎರಡು ಹೆಕ್ಟೇರ್‌ವರೆಗಿನ ಸರ್ಕಾರಿ ಜಾಗವನ್ನು ಸಕ್ರಮ ಮಾಡಿಕೊಡಬೇಕು.

ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಇದೆ. ಕಾಡುಪ್ರಾಣಿಗಳ ದಾಳಿಯಲ್ಲಿ ಆಸ್ತಿಪಾಸ್ತಿ, ಜೀವಹಾನಿಗಳು ಸಂಭವಿಸಿವೆ. ವನ್ಯಜೀವಿ ಮತ್ತು ಮಾನವ ಸಂಘರ್ಷವನ್ನು ಪರಿಹರಿಸಬೇಕು. ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಿಸಬೇಕು. ಕೃಷಿ ಪತ್ತಿನ ಸಹಕಾರ ಸಂಸ್ಥೆಗಳಲ್ಲಿ ₹10 ಲಕ್ಷದವರೆಗೆ ಪಡೆದ ಬೆಳೆಸಾಲಕ್ಕೆ ಶೇ 3 ಬಡ್ಡಿದರ ವಿಧಿಸಬೇಕು.

ಪಹಣಿ, ಇಸಿ, ಮ್ಯುಟೆಷನ್ ಮೊದಲಾದ ದಾಖಲೆಗಳೆಲ್ಲವೂ ಒಂದೇ ನಮೂನೆಯಲ್ಲಿ ನಮೂದಾಗುವ ವ್ಯವಸ್ಥೆ ಜಾರಿ ಮಾಡಬೇಕು. ಸಹಕಾರ ಸಂಸ್ಥೆಗಳಿಗೆ ಹಣ ಒದಗಿಸಿ, ಸಂಸ್ಥೆಗಳ ಆರ್ಥಿಕ ವಹಿವಾಟು ಸುಗಮವಾಗಿ ಸಾಗಲು, ಪುನಃಶ್ಚೇತನಕ್ಕೆ ನೆರವು ನೀಡಬೇಕು ಎಂದು ಮನವಿ ಪತ್ರದಲ್ಲಿ ಕೋರಿದ್ದಾರೆ.

Source:ಪ್ರಜಾವಾಣಿ

Also read  ಇನ್ನೂ ಮುಂದೆ ಕಾಫೀ ಕುಡಿದು ಓಡಾಡ್ತವಂತೆ ಬಸ್ಸುಗಳು

One thought on “ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮನವಿ:ಕರ್ನಾಟಕ ಬೆಳೆಗಾರರ ಒಕ್ಕೂಟ

Leave a Reply