ಅಧಿಕ ಇಳುವರಿ ಕೊಡುವ ಕನಕಾಂಬರ – ‘ಅರ್ಕ ಚೆನ್ನ’ ತಳಿ
ಸಾಮಾನ್ಯವಾಗಿ ರೈತರು ಸ್ವಲ್ಪ ಜಮೀನಿನಲ್ಲಿ ಕಡಿಮೆ ಖರ್ಚು ಬಯಸುವ ಬೆಳೆಯನ್ನು ಹುಡುಕುವುದು ಸಹಜ. ಈ ನಿಟ್ಟಿನಲ್ಲಿ ಕನಕಾಂಬರ ಒಂದು ಉತ್ತಮ ಬೆಳೆಯಾಗಿದ್ದು, ಮಧ್ಯಮ ಹಾಗೂ ಸಣ್ಣ ರೈತರು ಇದನ್ನು ಹಳ್ಳಿ ಹಾಗೂ ನಗರದ ಸುತ್ತಮುತ್ತ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಕನಕಾಂಬರ ಬಿಡಿ ಹೂವಿಗಾಗಿ ಹೆಸರುವಾಸಿ ಪಡೆದಿದ್ದು, ಹೆಚ್ಚಿನದಾಗಿ ಹಾರ ಮಾಡಲು ಹಾಗೂ ದೇವರ ಪೂಜೆಗಳಿಗೆ ಬಳಸುವುದು ನಿತ್ಯ ರೂಢಿಯಲ್ಲಿದೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಈ ಹೂವನ್ನು ಬಯಸುವ ಹಾಗೂ ಬಳಸುವ ಜನರು ಸಾಕಷ್ಟು ಇರುವುದರಿಂದ ಇದರ ಬೇಡಿಕೆಯು ಮಾರುಕಟ್ಟೆಯಲ್ಲಿ ನಿರಂತರವಾಗಿರುತ್ತದೆ.
ಕನಕಾಂಬರ ಬೆಳೆಗೆ ಸೊರಗು ರೋಗ ಬರುತ್ತದೆ. ಹೂವು ಸಣ್ಣ ಇರುವುದರಿಂದ ಬಿಡಿಸಲು ಕಷ್ಟ ಎಂಬ ಕಾರಣಕ್ಕಾಗಿ ರೈತರು ಈ ಬೆಳೆ ಆಸಕ್ತಿ ತೋರುತ್ತಿರಲಿಲ್ಲ. ಇದೀಗ ಇದೆರಡಕ್ಕೂ ಪರಿಹಾರವಾಗಿ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ‘ಅರ್ಕ ಚೆನ್ನ‘ ಎಂಬ ಹೆಸರಿನ ಕನಕಾಂಬರ ಹೂವಿನ ತಳಿಯನ್ನು ಪರಿಚಯಿಸಿದೆ.
ಕನಕಾಂಬರವು ದೀರ್ಘಕಾಲಿಕ ಹಾಗೂ ಹೆಚ್ಚು ಸೂರ್ಯನ ಬೆಳಕನ್ನು ಬಯಸುವ ಬೆಳೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಅಭಾವದಿಂದ ಹೂ ಕಟಾವು ಮಾಡುವುದು ಕಷ್ಟ ಮತ್ತು ಸೊರಗು ರೋಗದ ಬಾಧೆಯಿಂದ ಬೆಳೆ ನಾಶವಾಗುತ್ತಿರುವುದರಿಂದ ಈ ಬೆಳೆಯ ಎಕರೆವಾರು ಪ್ರದೇಶ ಕಡಿಮೆಯಾಗುತ್ತಿದೆ. ಹೀಗಾಗಿ ಐಐಎಚ್‌ಆರ್ ರೋಗ ನಿರೋಧಕ ಶಕ್ತಿಯೊಂದಿಗೆ ಅಧಿಕ ಇಳುವರಿ ಕೊಡುವ ಕನಕಾಂಬರ ಅಭಿವೃದ್ಧಿಪಡಿಸಿದೆ.
ಈ ನಿಟ್ಟಿನಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬಹಳಷ್ಟು ಸಂಶೋಧನೆ ಮಾಡಿದ್ದು, ಇಲ್ಲಿನ ಡಾ. ಸಿ. ಅಶ್ವಥ್ ಅವರು ರೈತರಿಗಾಗಿ ಐದು ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವುಗಳೆಂದರೆ ಅರ್ಕ ಅಂಬರ, ಅರ್ಕ ಕನಕ, ಅರ್ಕ ಶ್ರೀಯ, ಅರ್ಕ ಶ್ರಾವ್ಯ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಹೊಸ ತಳಿ ಅರ್ಕ ಚೆನ್ನ. ಈ ತಳಿಗಳ ವಿಶೇಷತೆ ಎಂದರೆ, ಸ್ಥಳಿಯ ತಳಿಗಳಿಗಿಂತ ಮೂರು ಪಟ್ಟು ಹೆಚ್ಚಿನ ಇಳುವರಿ, ದಪ್ಪ ಹೂ, ಬಲಿಷ್ಟ ಕಾಂಡ ಮತ್ತು ಸೊರಗು ರೋಗ ನಿರೋಧಕ ಶಕ್ತಿ ಹೊಂದಿವೆ. ಈ ತಳಿಗಳು ಬೀಜಗಳಾಗಿ ಪರಿವರ್ತನೆ ಹೊಂದದ ಕಾರಣ ಬಿಡಿಸಲು ಸುಲಭ ಹಾಗೂ ಅಧಿಕ ಇಳುವರಿ ಪಡೆಯಬಹುದು.
2 ಅಥವಾ 3 ಅಡಿಗೆ ಒಂದರಂತೆ ಒಂದು ಎಕರೆಗೆ ಸುಮಾರು 8 ಸಾವಿರ ಗಿಡಗಳನ್ನು ನಾಟಿ ಮಾಡಬಹುದು. ನಾಟಿಗೆ ಕಡ್ಡಿಗಳ ಬಳಕೆ ಮಾಡಿ. ಸಾಲಿನಿಂದ ಸಾಲಿಗೆ ಸುಮಾರು 3 ರಿಂದ 5 ಅಡಿಯವರೆಗೆ ಅಂತರವಿದ್ದರೆ ಬೇಸಾಯ ಕ್ರಮಕ್ಕೆ ಯಂತ್ರೋಪಕರಣವನ್ನು ಬಳಸಲು ಹೆಚ್ಚು ಅನುಕೂಲ. ಅಂದ ಹಾಗೆ 2, 200 ಗಿಡಗಳಿಗೆ ವಾರಕ್ಕೆ ಎರಡು ಬಾರಿಯಂತೆ ಪ್ರತಿ ಬಾರಿ 25-30 ಕೆ.ಜಿ. ಹೂ ಸಿಗುತ್ತದೆ. (ಸಾಮಾನ್ಯ ಕನಕಾಂಬರ 8-10 ಕೆ.ಜಿ. ) ನಾಟಿ ಮಾಡಿದ 4 ನೆ ತಿಂಗಳಿಗೆ ಹೂವು ಬಿಡುತ್ತದೆ. ಆದರೆ ಆರಂಭದಲ್ಲಿ ಸುಮಾರು 4 ಕೆ.ಜಿ ಸಿಕ್ಕರೆ 8 ತಿಂಗಳ ಬಳಿಕ ಬರೋಬರಿ 50-60 ಕೆ.ಜಿ. ಯಷ್ಟು ಹೂ ಸಿಗುತ್ತದೆ. ಮಳೆಗಾಲದಲ್ಲಿ ಈ ಬೆಳೆಗೆ ಮೇಲೊದಿಕೆಯನ್ನು ಹಾಕಿದರೆ ಹೂವು ಕೊಳೆಯುವುದಿಲ್ಲ ಎನ್ನುತ್ತಾರೆ. ಐಐಎಚ್‌ಆರ್‌ನ ಪ್ರಧಾನ ವಿಜ್ಞಾನಿ ಡಾ. ಸಿ. ಅಶ್ವತ್ಥ್.
ಸಣ್ಣ ರೈತರು ಸುಮಾರು 500 ಗಿಡ ಬೆಳೆಸಿದರೆ ಸಾಕು,ವಾರಕ್ಕೆ 8-10 ಕೆ.ಜಿ. ಹೂವು ಸಿಗುತ್ತದೆ. ಆರ್ಥಿಕವಾಗಿ ಲಾಭ ಹೊಂದಬಹುದು. ಹನಿ ನೀರಾವರಿ ಈ ಬೆಳೆಗೆ ಹೆಚ್ಚುಸೂಕ್ತ.-ಡಾ. ಅಶ್ವತ್ಥ್ ಪ್ರಧಾನ ವಿಜ್ಞಾನಿ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ.
ಅರ್ಕ ಚೆನ್ನದ ವಿಶೇಷತೆ:
1.ಸ್ಥಳೀಯ ತಳಿಗಳಿಗಿಂತ ಮೂರು ಪಟ್ಟು ಹೆಚ್ಚಿನ ಇಳುವರಿ
2.ತುಸು ದಪ್ಪಹೂವು
3.ಬಲಿಷ್ಠ ಕಾಂಡ
4.ಸೊರಗು ರೋಗ ನಿರೋಧಕ ಶಕ್ತಿ ಇದೆ
5.ಗಿಡದಿಂದ ಕಿತ್ತ ನಂತರ 4 ದಿನ ತಾಜಾ ಇರುತ್ತದೆ
6.ಎಲ್ಲಾ ಬಗೆಯ ಮಣ್ಣಿನಲ್ಲೂ ಬೆಳೆಯಬಹುದು.
Crossandra variety: Arka Chenna
Flower of this variety is medium sized, 20 per cent bigger than the local. Petal colour is orange. Yield is 4 times higher than the local variety i.e., 40 kgs/ week per 1000 plants, The shelf life is 3.4 days. The stalk strength is 0.82kg/cm2 which is 20 per cent more than the local variety.
Source:
1.VijayaKarnataka
2.Negilamiditha.com
3.ICAR-Indian Institute of Horticultural Research