ಗಣೇಶ ಹಬ್ಬಕ್ಕೆ ‘ಗೌರಿ ಹೂ’..
ನಮ್ಮ ಧಾರ್ಮಿಕ ಪರಂಪರೆಯಲ್ಲಿ ಹೂವುಗಳಿಗೆ ಮಹತ್ವದ ಸ್ಥಾನವಿದೆ. ದೇವರಿಗೆ ಪುಷ್ಪಾರ್ಚನೆ ಮಾಡದೇ ಪೂಜೆ ಪೂರ್ಣಗೊಳ್ಳದು. ಹೀಗಾಗಿ ಹಬ್ಬಹರಿದಿನಗಳಲ್ಲಿ ಹೂವುಗಳಿಗೆ ಎಲ್ಲಿಲ್ಲದ ಬೇಡಿಕೆ. ಬ್ರಹ್ಮಕಮಲ, ಕೃಷ್ಣಕಮಲ, ಕುರಿಂಜಿ ಸೇರಿದಂತೆ ಹಲವಾರು ಹೂವುಗಳ ಹೆಸರಿನೊಂದಿಗೆ ದೇವತೆಗಳ ನಂಟು ಸೇರಿಕೊಂಡಿದೆ. ಅಂತಹ ಹೂಗಳ ಸಾಲಿನಲ್ಲಿ ಗೌರಿ ಹೂ ಸಹ ಸೇರುತ್ತದೆ. ನಾಳೆ ಗೌರಿ ಹಬ್ಬ. ಗೌರಿ ದೇವತೆಯ ಹೆಸರಿನಲ್ಲಿರುವ ಈ ವಿಶಿಷ್ಟ ಹೂವು ಈಗ ಎಲ್ಲೆಡೆ ಅರಳಿನಿಂತು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದೆ.
ಗೌರಿ ಹೂ ವೈಜ್ಞಾನಿಕ ಹೆಸರು ಗ್ಲೊರಿಯೊಸಾ ಸುಪರ್ಬಾ(Gloriosa superba). ಇಂಗ್ಲೀಷ್‌ನಲ್ಲಿ ಗ್ಲೋರಿ ಲಿಲ್ಲಿ, ಫ್ಲೆಮ್ ಲಿಲ್ಲಿ ಎಂದು ಕರೆಯುತ್ತಾರೆ. ದೇಶದ ವಿವಿಧ ಪ್ರದೇಶಗಳಲ್ಲಿ ಭಿನ್ನ ಹೆಸರುಗಳಿಂದ ಅದು ಗುರುತಿಸಲ್ಪಟ್ಟಿದೆ. ಅರಳಿ ನಿಂತ ಹೂಗಳು ಬೆಂಕಿಯ ಜ್ವಾಲೆಯಂತೆ ಕಾಣುವುದರಿಂದ ‘ಅಗ್ನಿಶಿಖೆ’ ಎಂದು, ಕೋಳಿ ಜುಟ್ಟಿನಂತೆ ಕಾಣುವುದರಿಂದ ಕೋಳಿಜುಟ್ಟಿನ ಹೂ, ಕೋಳಿಕುಟುಮ ಎಂದೂ ಕರೆಯುತ್ತಾರೆ.
ತುಳುಭಾಷೆಯಲ್ಲಿ ಈ ಹೂವನ್ನು ‘ತೋಕ್ ಪೂ’ ಅಂದರೆ ಕೋವಿ ಹೂ ಎಂದು ಕರೆಯುತ್ತಾರೆ. ಪ್ರತಿವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಕೊಡವರು ಕೈಲ್‌ಪೊಲ್ದ್ ಎಂಬ ಹಬ್ಬವನ್ನು ಆಚರಿಸುತ್ತಾರೆ. ಕೊಡಗಿನವರಿಗೆ ಇದು ಆಯುಧ ಪೂಜೆ ಇದ್ದಂತೆ. ಅಂದು ಅವರು ತೆಗೆದಿರಿಸಿದ್ದ ತಮ್ಮ ಎಲ್ಲಾ ಕೋವಿ, ಕತ್ತಿಗಳನ್ನು ತೊಳೆದು, ಪೂಜಿಸಿ ಅವುಗಳನ್ನು ಗೌರಿಹೂವುಗಳಿಂದ ಅಲಂಕರಿಸುವರು. ಹೀಗಾಗಿ ಕೊಡಗಿನಲ್ಲಿ ಈ ಹೂವುಗಳಿಗೆ ಎಲ್ಲಿಲ್ಲದ ಬೇಡಿಕೆ. ಆದರೆ, ಪ್ರವಾಹದಿಂದಾಗಿ ಈ ವರ್ಷ ಸರಳವಾಗಿ ಈ ಹಬ್ಬವನ್ನು ಆಚರಿಸಲಾಗಿದೆ. ಭಾದ್ರಪದ ಮಾಸದಲ್ಲಿ ಗೌರಿ ಹೂಗಳು ಅರಳಿ ನಿಂತು ನಿಸರ್ಗದ ಸೊಬಗಿಗೆ ಮೆರುಗು ನೀಡುತ್ತವೆ. ಈ ಸಂದರ್ಭದಲ್ಲಿ ಆಚರಿಸುವ ಗೌರಿ– ಗಣೇಶ ಹಬ್ಬದಲ್ಲಿ ಭಕ್ತರು ಗೌರಿ ಹೂಗಳನ್ನು ಗಣಪತಿಯ ಮುಡಿಗೇರಿಸಿ ಸಂಭ್ರಮಿಸುತ್ತಾರೆ.
ಇದೊಂದು ಸತ್ವಯುತ ಮೃದು ಕಾಂಡಗಳನ್ನು ಹೊಂದಿರುವ ಬಳ್ಳಿ. ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೂವಿನ ಮೊಗ್ಗು ಹಸಿರು ಬಣ್ಣದಿಂದ ಕೂಡಿದ್ದು, ಅರಳುವಾಗ ಹಸಿರು, ಹಳದಿ ಮಿಶ್ರಿತ ಬಣ್ಣದಿಂದ ಕೂಡಿರುತ್ತದೆ. ಎರಡನೇ ಹಂತದ ಬೆಳವಣಿಗೆಯಲ್ಲಿ ಹೂವಿನ ದಳಗಳ ಮೇಲ್ಭಾಗ ಕೆಂಪಾಗಿ ಕೆಳಭಾಗ ಹಳದಿ ಬಣ್ಣದಿಂದ ಕೂಡಿರುತ್ತವೆ. ಅಂತಿಮ ಹಂತದಲ್ಲಿ ರಕ್ತ ವರ್ಣ ಪಡೆದುಕೊಂಡು ಕಾಯಿಯಾಗಿ ಉದುರುತ್ತವೆ.
ಕೊಂಬೆಯಿಂದ ಟಿಸಿಲೊಡೆದ ಮೃದುವಾದ ಕಿರುಕೊಂಬೆಗಳ ತುತ್ತ ತುದಿಯಲ್ಲಿ ಹೂಗಳು ನಿಂತಿರುತ್ತವೆ. ಕಿರುಕೊಂಬೆಯು ಉದ್ದವಿರುವುದರಿಂದ ಹೂಗಳು ಕೈಬೀಸಿ ಕರೆಯುವ ರೀತಿಯಲ್ಲಿ ಗಾಳಿಗೆ ಅಲುಗಾಡುತ್ತಿರುತ್ತವೆ. ಹೂವುಗಳು ಕೆಳಮುಖವಾಗಿ ತಲೆಮಾಡಿರುತ್ತವೆ. ಪ್ರತಿ ಹೂವು 6 ದಳಗಳನ್ನು ಹೊಂದಿದ್ದು, ಅವು ಮುರುಟಿಕೊಂಡಂತೆ ಮೇಲ್ಮುಖವಾಗಿ ಅರಳಿ ನಿಲ್ಲುತ್ತವೆ. ಅದರ ಕೆಳಗೆ ಹೂವಿನ ಅಂಡಾಶಯ ಮತ್ತು ಅಂಡಾಶಯ ತುದಿಯಿಂದ ಶಲಾಕೆಯು ಚಾಚಿಕೊಂಡಿದೆ. ಅಂಡಾಶಯದ ಸುತ್ತ 6 ಕೇಸರಗಳು ವೃತ್ತಾಕಾರವಾಗಿ ಸುತ್ತುವರೆದಿವೆ. ಹೂವಿನ ಎಸಳುಗಳ ಕೆಳಭಾಗ ಹಳದಿ ಬಣ್ಣದಿಂದ ಕೂಡಿದ್ದು, ಮೇಲ್ಭಾಗ ಕೆಂಪು– ಕಿತ್ತಲೆ ಮಿಶ್ರಿತ ಬಣ್ಣದಿಂದ ಕೂಡಿದ್ದು, ಕನ್ನಡ ಬಾವುಟವನ್ನು ನೆನಪಿಸುತ್ತವೆ. ಇದರ ಕೆಂಪು ಬಣ್ಣದ ಹಣ್ಣುಗಳು ನೋಡಲು ಆಕರ್ಷಕವಾಗಿವೆ.
ಆದರೆ ಈ ಹೂವಿನ ಎಲ್ಲ ಭಾಗಗಳು ವಿಷಕಾರಿಯಾಗಿವೆ. ಆದರೂ ಇದೊಂದು ಔಷಧಿ ಸಸ್ಯವಾಗಿ ಜನಪ್ರಿಯವಾಗಿದೆ. ಸರ್ಪದ ವಿಷವನ್ನು ಮನುಷ್ಯ ಶರೀರದಿಂದ ತೆಗೆಯಬಲ್ಲ ಪ್ರತಿವಿಷವಾಗಿ ಆಯುರ್ವೇದ ವಿಜ್ಞಾನಿಗಳು ಇದನ್ನು ಬಳಸಿದ್ದಾರೆ. ಇದು ಚೇಳಿನ ಕಡಿತದ ನಂಜು ನಿವಾರಕವೂ ಹೌದು. ಧಾರ್ಮಿಕ ಮಹತ್ವ ಹೊಂದಿರುವ ಗೌರಿ ಹೂ ನಮ್ಮ ಪಕ್ಕದ ತಮಿಳುನಾಡು ರಾಜ್ಯದ ರಾಜ್ಯಪುಷ್ಪ ಗೌರವಕ್ಕೆ ಪಾತ್ರವಾಗಿರುವುದು ವಿಶೇಷ.