ಭರದಿಂದ ಸಾಗುತ್ತಿದೆ ಬ್ರೆಜಿಲ್ ರೋಬಸ್ಟಾ ಕೊಯ್ಲು — ನಿರೀಕ್ಷೆಗೂ ಮೀರಿದ ಇಳುವರಿ ಹೆಚ್ಚಳ
ಬ್ರೆಜಿಲ್‌ನಲ್ಲಿ 2025ರ ರೊಬಸ್ಟಾ ಕಾಫಿಯ ಕೊಯ್ಲು ಬರದಿಂದ ಸಾಗುತ್ತಿದ್ದು ,ಈ ಬಾರಿ ಬೆಳೆ ಉತ್ಪಾದನೆ ಮುಂಚಿತ ಅಂದಾಜುಗಳನ್ನು ಮೀರಬಹುದೆಂಬ ನಿರೀಕ್ಷೆ ತಜ್ಞರಲ್ಲಿ ಮೂಡಿದೆ. ಉತ್ತಮ ಹವಾಮಾನ ಮತ್ತು ಉತ್ತಮ ತೋಟಗಳ ಸ್ಥಿತಿ ಕಾರಣದಿಂದ ಹೆಚ್ಚು ಕಾಫಿ ಲಭ್ಯವಾಗುವ ಸಾಧ್ಯತೆ ಇದೆ. ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಯಬಹುದಾಗಿದೆ.
“ತೋಟಗಳಿಂದ ಸಿಕ್ಕ ಮಾಹಿತಿಗಳ ಪ್ರಕಾರ ಈ ವರ್ಷ ಉತ್ತಮ ಕೊಯ್ಲು ಸಾಧ್ಯತೆ ಇದೆ. ಮೊದಲು ಮಾಡಿದ್ದ ಅಂದಾಜುಗಳನ್ನು ಮೀರಬಹುದು.”-ಕಾಫಿ ತಜ್ಞ ಜೋನಾಸ್ ಫೆರಾರೆಸ್ಸೊ. ಸಾರ್ವಜನಿಕ ಮತ್ತು ಖಾಸಗಿ ಮೂಲಗಳು ದಾಖಲೆಯ ಬೆಳೆಯನ್ನು ತೋರಿಸುತ್ತಿವೆ ಎಂದು ಫೆರಾರೆಸ್ಸೊ ಹೇಳಿದರು.
ಎಸ್ಪಿರಿಟೊ ಸಾಂಟೋ ಎಂಬ ಪ್ರಮುಖ ಕಾಫಿ ಬೆಳೆ ಪ್ರದೇಶದಲ್ಲಿ, ಬ್ರೆಜಿಲ್‌ನ ಅತಿದೊಡ್ಡ ಕೊನಿಲಾನ್ ಸಹಕಾರಿ ಸಂಸ್ಥೆಯಾದ Cooabriel ನ ಅಧ್ಯಕ್ಷ ಲೂಯಿಸ್ ಕಾರ್ಲೋಸ್ ಬಾಸ್ಟಿಯಾನೆಲ್ಲೊ ಅವರು ಹೇಳುವ ಪ್ರಕಾರ “ಈವರೆಗೆ ಸುಮಾರು 25% ಕೊಯ್ಲು ಮುಗಿದಿದೆ. ಈ ರಾಜ್ಯದಲ್ಲಿ 17 ಮಿಲಿಯನ್ 60-ಕೆಜಿ ಚೀಲಗಳಷ್ಟು ಉತ್ಪಾದನೆಯ ನಿರೀಕ್ಷೆಯಿದೆ, ಇದು 2022ರ 16 ಮಿಲಿಯನ್ ಚೀಲಗಳಿಗಿಂತ ಹೆಚ್ಚು.”
ಈ ಬಾರಿ ಮಳೆಯ ಅಡಚಣೆ ಆಗಿಲ್ಲ. ಇದರಿಂದ 2026ರ ಕೊನಿಲಾನ್ ಬೆಳೆಗೆ ಸಹ ಅನುಕೂಲವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ಕಾಫಿ ಮಾರುಕಟ್ಟೆಗೆ ಬರತೊಡಗಿರುವುದರಿಂದ, ಇತ್ತೀಚೆಗೆ ರೊಬಸ್ಟಾ ಕಾಫಿಯ ಬೆಲೆ ಇಳಿಕೆಯಾಗಿದೆ. ಈ ವಾರದ ಆರಂಭದಲ್ಲಿ ICE ಪೇಟೆಯಲ್ಲಿ ಪ್ರತಿ ಮೆಟ್ರಿಕ್ ಟನ್‌ಗೆ $4,550 ಕ್ಕೆ ತಲುಪಿದ್ದು, ಇದು 5.5 ತಿಂಗಳ ಕನಿಷ್ಠ ಮಟ್ಟವಾಗಿದೆ.
ಹೆಚ್ಚು ಉತ್ಪಾದನೆಯ ನಿರೀಕ್ಷೆಯಿಂದ ರೈತರು ತಮ್ಮ ತೋಟಗಳಲ್ಲಿ ಚುರುಕಿನಿಂದ ಕೊಯ್ಲು ಕಾರ್ಯವನ್ನು ಮುಗಿಸಲು ತೊಡಗಿದ್ದಾರೆ.