Featured NewsKrushi

ಮಲೆನಾಡಿನಲ್ಲಿ ಅರಳಿ ಮುಗುಳ್ನಗುತ್ತಿವೆ ಸುಂದರ ಅಂಥೋರಿಯಂ

ಕಾಫಿ, ಕಾಳು ಮೆಣಸು,ಅಡಿಕೆ ಬೆಳೆಗೆ ಹೆಸರಾದ ಪಶ್ಚಿಮಘಟ್ಟಗಳ ಸಾಲಿನ ಮಲೆನಾಡಿನಲ್ಲಿ ಈಗ ಸುಂದರ ಹೂವುಗಳು ಅರಳಿ ಮುಗುಳ್ನಗುತ್ತಿವೆ. ಜಗತ್ತಿನಲ್ಲಿ ಅಲಂಕಾರಿಕ ಪುಷ್ಪಗಳ ಸಾಲಿನಲ್ಲಿ ತನ್ನದೇ ಖ್ಯಾತಿಯನ್ನು ಪಸರಿಸಿರುವ ಅಂಥೋರಿಯಂ ಹೂಗಳ ಕೃಷಿಯನ್ನು ಮಾಡಿ ಯಶಸ್ವಿಪಡೆದಿರುವ ಎರಡು ಕೃಷಿಕರ ಪರಿಚಯವನ್ನು ಇಲ್ಲಿ ಮಾಡಿಕೊಡಲಾಗುತಿದ್ದೆ .

೧. ಮೂಡಿಗೆರೆ ಸಮೀಪದ ಮಾಕೋನಹಳ್ಳಿ ಗ್ರಾಮದ ಶೋಭಾ ಗಾರ್ಡನ್‌

ಮೂಡಿಗೆರೆ ಸಮೀಪದ ಮಾಕೋನಹಳ್ಳಿ ಗ್ರಾಮದಲ್ಲಿ ಐದು ಎಕರೆ ಭೂಮಿಯಲ್ಲಿ ಸುಂದರ ಹೂವುಗಳು ಬೆಳೆದಿರುವ ಕೃಷಿಕ ಸಹೋದರರಾದ ಸುಕೇಶ್, ದಿನೇಶ್ ಹಾಗು ಕಲ್ಲೇಶ್ ಅವರು ತಮ್ಮ ಶೋಭಾ ಗಾರ್ಡನ್‌ನಲ್ಲಿ ಬೆಳೆಯುತ್ತಿರುವ ಈ ಆರ್ಥಿಕ ಬೆಳೆ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.

ಅಂಥೋರಿಯಂ ಕೃಷಿಯಲ್ಲಿ ಸುಕೇಶ್ ಸೋದರರು ಪಳಗಿದ್ದಾರೆ. ಕಾರಣ, ಈ ಕೃಷಿಯಲ್ಲಿ ಅವರಿಗೆ ಸುಮಾರು 10 ವರ್ಷಗಳ ಸಮೃದ್ಧ ಅನುಭವವಿದೆ. ಹತ್ತು ವರ್ಷಗಳ ಹಿಂದೆಯೇ 2.5 ಎಕರೆಯಷ್ಟು ಸುಮಾರು 23 ಬಣ್ಣಗಳಲ್ಲಿ ಅಂಥೋರಿಯಂ ತಳಿಗಳನ್ನು ಬೆಳೆಯಲು ಆರಂಭಿಸಿದವರಿವರು. ಇದೀಗ ಮಾಕೋನಹಳ್ಳಿಯಲ್ಲಿ ಬೆಳೆದ ತರಹೇವಾರಿ ಹೂವುಗಳು ಅರಬ್ ರಾಷ್ಟ್ರಗಳು ಮಾತ್ರವಲ್ಲದೆ ಜರ್ಮನಿ, ಆಸ್ಟ್ರೇಲಿಯ, ದುಬೈ, ಸಿಂಗಾಪುರ, ಮಲೇಶ್ಯಾದಂಥ ದೇಶಗಳಿಗೂ ರಫ್ತಾಗುತ್ತಿದೆ. ಅಲ್ಲದೆ ದೇಶದ ಸಂಸತ್ ಭವನದ ಶೃಂಗಾರಕ್ಕೂ ಬಳಕೆಯಾಗುವ ಈ ಹೂವುಗಳು ಪ್ರತಿ ಬುಧವಾರ ದಿಲ್ಲಿ ತಲುಪುತ್ತಿವೆ.

Also read  Coffee Board ask Centre to rise subsidy for small growers

ಮೂಲತಃ ಹಾಲೆಂಡ್‌ನ ಗಿಡಗಳಿವು. ಕಡಪ ಕಲ್ಲಿನಲ್ಲಿ ಇಪ್ಪತ್ತು ಅಡಿ ಉದ್ದ, ಮೂರು ಅಡಿ ಅಗಲದ ಮಡಿಗಳನ್ನು ನಿರ್ಮಿಸಿ, ಕೆಳಗಡೆ ಪ್ಲಾಸ್ಟಿಕ್ ಕವರ್ ಹಾಕಲಾಗುತ್ತದೆ. ಅದರೊಳಗೆ ತೆಂಗಿನ ಮಟ್ಟೆಗಳನ್ನು ಜೋಡಿಸಿ, ಮೇಲೆ ತೆಂಗಿನಹೊಟ್ಟು ಹಾಕಲಾಗುತ್ತದೆ. ತೆಂಗಿನ ಕತ್ತದ ಪುಡಿಯನ್ನು ಕಾಂಪೋಸ್ಟ್ ಮಾಡಿದ ಗೊಬ್ಬರದೊಂದಿಗೆ ಮಡಿಗಳಲ್ಲಿ ಹಾಕಿ ಗಿಡಗಳನ್ನು ನೆಡಲಾಗಿದೆ. ವಿಶೇಷವೆಂದರೆ, ಇವರು ಅಂಥೋರಿಯಂ ಗಿಡಗಳನ್ನು ಬೆಳೆಸಲು ಮಣ್ಣೇ ಬಳಸಿಲ್ಲ!

ಉತ್ತಮವಾದ ನೆರಳು ಹಾಗೂ ತಂಪು ವಾತಾವರಣ ಬೇಡುವ ಅಂಥೋರಿಯಂಗೆ ಶೇಡ್ ನೆಟ್, ಪಾಲಿ ಹೌಸ್ ವ್ಯವಸ್ಥೆ ಮಾಡಲಾಗಿದೆ. ದಿನನಿತ್ಯ ನಿರುಣಿಸಲು ಆರು ಅಡಿ ಅಂತರದಲ್ಲಿ ಜೆಟ್‌ಗಳನ್ನು ತೂಗು ಹಾಕಲಾಗಿದೆ. ಇಸ್ರೇಲ್ ತಂತ್ರಜ್ಞಾನದಡಿ ಜೆಟ್‌ನಲ್ಲಿ ಗೊಬ್ಬರ, ಪೋಷಕಾಂಶ ಪೂರೈಸಲಾಗುತ್ತದೆ. ಬೇಸಿಗೆಯಲ್ಲಿ ಬಿಸಿಲ ಬೇಗೆಯಿಂದ ವಾತಾವರಣದಲ್ಲಿ ತಾಪ ಹೆಚ್ಚಾದಾಗ ಈ ಜೆಟ್‌ಗಳಲ್ಲಿ ಸುಮಾರು ಎರಡರಿಂದ ಐದು ನಿಮಿಷಗಳ ಕಾಲ ನೀರು ಹಾಯಿಸಿ ತಂಪು ಮಾಡಲಾಗುತ್ತದೆ. ವಾತಾವರಣದ ಉಷ್ಣತೆಯನ್ನು ಶೇ.20ರ ಆಸುಪಾಸಿನಲ್ಲಿ ಇಡಲು ಈ ಕ್ರಮ ಅನುಸರಿಸಲಾ ಗುತ್ತದೆ.

ಕಟಾವು ಮಾಡಿ ಪ್ಯಾಕ್ ಮಾಡಿದ ಹೂವುಗಳನ್ನು ಸುಮಾರು ಐದು ವಿಭಾಗಗಳಲ್ಲಿ ವಿಂಗಡಿಸುತ್ತಾರೆ. ಅವುಗಳಲ್ಲಿ 7-9, 9-11, 11-13 ಇಂಚು ವಿಭಾಗಗಳಲ್ಲಿ ಹೂವುಗಳನ್ನು ವಿಂಗಡಿಸಲಾಗುತ್ತದೆ. ಅವೆಲ್ಲಕ್ಕಿಂತ ದೊಡ್ಡ ಹೂವು ಪ್ರಥಮ ಗ್ರೇಡ್‌ಗೆ ಬರುತ್ತವೆ. ಇಲ್ಲಿ ಒಂದು ಹೂವಿಗೆೆ ಸರಾಸರಿ 20-25 ರೂ. ಸಿಗುತ್ತಿದ್ದು, ವಾರದಲ್ಲಿ ಮೂರು ದಿನ ತಲಾ ಐದು ಸಾವಿರ ಹೂವುಗಳನ್ನು ಪ್ಯಾಕ್ ಮಾಡಿ ಮಾರಾಟಕ್ಕೆ ಕಳುಹಿಸಲಾಗುತ್ತದೆ.

Also read  Over 100 Animals Dead due to Dust storms:Thunderstorm May Hit 12 States Today, Says NDMA

ಹೂವುಗಳನ್ನು ಅವುಗಳ ಎತ್ತರಕ್ಕೆ ತಕ್ಕಂತೆ ವರ್ಗೀಕರಿಸಿ, ನೀರಿನಿಂದ ಒರೆಸಿ, ಕಾಂಡಗಳಿಗೆ ನೀರಿನಲ್ಲಿ ಅದ್ದಿದ ಹತ್ತಿಯನ್ನು ಸುತ್ತಿ ಪ್ಲಾಸ್ಟಿಕ್‌ನಿಂದ ಕವರ್ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ 15 ದಿನಗಳ ಕಾಲ ಹೂಗಳು ಬಾಡುವುದಿಲ್ಲ. ಇದು ಕೃಷಿ ಕಾರ್ಮಿಕರು ಹಾಗೂ ಬಂಡವಾಳವನ್ನು ಬೇಡುವ ಕೃಷಿಯಾಗಿರುವುದರಿಂದ ಸಣ್ಣ ಮಟ್ಟದಲ್ಲಿ ಮಾಡಿದರೆ ಗಿಟ್ಟುವುದಿಲ್ಲ. ನಮ್ಮಲ್ಲಿ ಪ್ಲಾಂಟರ್‌ಗಳು, ಬಂಡವಾಳ ಹಾಕಬಲ್ಲವರು ಅಂಥೋರಿಯಂ ಕೃಷಿ ಮಾಡಬಹುದು. ಆದರೆ ಅವುಗಳನ್ನು ಮಕ್ಕಳಂತೆ ಆರೈಕೆ ಮಾಡಬೇಕು ಎನ್ನುತಾರೆ ಸಹೋದರರು.

ನಿಮೆಗೆನಾದ್ರು ಅಂಥೋರಿಯಂ ಕೃಷಿ ಬಗ್ಗೆ ಮಾಹಿತಿ ಬೇಕಿದ್ದರೆ ಈ ಮೊಬೈಲ್ ಸಂ ಸಂಪರ್ಕಿಸಿ : ಕಲ್ಲೇಶ್ 94480 00057

೨. ತೀರ್ಥಹಳ್ಳಿಯ ಆಶಾ ಶೇಷಾದ್ರಿಯವರ ಅಂಥೋರಿಯಂ ಕೃಷಿ

ಆಶಾ ಅವರು ತೀರ್ಥಹಳ್ಳಿ – ಮಾಲೂರು ಮಾರ್ಗದಲ್ಲಿರುವ ಕನ್ನಂಗಿ ಪೇಟೆಯವರು. ಅಡಿಕೆ ಕೃಷಿಯ ಜತೆ ವೈವಿಧ್ಯತೆ ಇರಲಿ, ಏಕ ಬೆಳೆ ನಂಬಿ ಬೇಸಾಯ ಮಾಡಬಾರದು ಎಂಬ ಚಿಂತನೆಯಲ್ಲಿ ಪುಷ್ಪ ಕೃಷಿ ಕೈಗೊಂಡಿದ್ದಾರೆ. ಅಂಥೋರಿಯಂ ಕೃಷಿ ಆರಂಭಿಸಿ 18 ವರ್ಷಗಳು ಕಳೆದಿದ್ದರೆ.ಅಂಥೋರಿಯಂ ಕೃಷಿ ಆರಂಭವಾದದ್ದು 1998ರಲ್ಲಿ. 2004ರಿಂದ ಆರ್ಕಿಡ್‌ ಬೆಳೆಯುತ್ತಿದ್ದಾರೆ. ವಾಣಿಜ್ಯ ಉದ್ಯೇಶಕ್ಕೆ ಹೂವುಗಳನ್ನು ಬೆಳೆಯುತ್ತಿರುವುದರಿಂದ ಗ್ರೀನ್‌ ಹೌಸ್‌ನಲ್ಲಿ ಬೆಳೆಯುತ್ತಾರೆ. ಹವ್ಯಾಸಕ್ಕಾಗಿ ಅಂಥೋರಿಯಂ ಬೆಳೆಯುವುದಾದರೆ ಶೇಡ್‌ನೆಟ್‌ನಲ್ಲಿ ಬೆಳೆಯಬಹುದು ಎಂಬುದು ಅವರ ಅಭಿಮತ. 2 ಎಕರೆ ಜಾಗದಲ್ಲಿ ಹಸಿರುಮನೆ ನಿರ್ಮಿಸಿ ಅಂಥೋರಿಯಂ ಹಾಗೂ ಆರ್ಕಿಡ್‌ ಬೆಳೆಯುತ್ತಿದ್ದಾರೆ.

ನಿಯಂತ್ರಿತ ವಾತಾವರಣ ಅಂಗಾಂಶ ಕೃಷಿ ವಿಧಾನದಲ್ಲಿ ಬೆಳೆಸಿದ ಅಂಥೋರಿಯಂ ಗಿಡವನ್ನು ಹಾಲೆಂಡ್‌ನಿಂದ ಏಜೆಂಟರ ಮೂಲಕ ತರಿಸಿಕೊಂಡಿದ್ದಾರೆ.

ಗ್ರೀನ್‌ಹೌಸ್‌ನಲ್ಲಿ 14 ಇಂಚು ಅಗಲದ ಬೆಡ್‌ (ಏರಿ) ನಿರ್ಮಿಸಿ ಅದಕ್ಕೆ ತೆಂಗಿನ ಕಾಯಿ ಸಿಪ್ಪೆ, ತೆಂಗಿನ ನಾರಿನ ಮಿಶ್ರಣ ಸೇರಿಸಿ ಗಿಡಗಳನ್ನು ನಾಟಿ ಮಾಡಿದ್ದಾರೆ. ನೀರು ಪೂರೈಸಲು ಸ್ಪಿಂಕ್ಲಲ್‌ ಅಳವಡಿಸಿದ್ದಾರೆ. ಹೆಚ್ಚಿನ ನೀರು ಬಸಿದು ಹೋಗಲು ತೂತು ಮಾಡಿದ ಪಿವಿಸಿ ಪೈಪ್‌ಗಳಿವೆ. ರಸಗೊಬ್ಬರ (ರಸಾವರಿ) ಪೂರೈಸಲು ಪ್ರತ್ಯೇಕ್‌ ಪೈಪ್‌ ವ್ಯವಸ್ಥೆಯಿದೆ. ತಿಂಗಳಿಗೊಮ್ಮೆ ನೀರಿನ ಮೂಲಕ ರಸಾವರಿ ಪೂರೈಸುತ್ತಾರೆ.

Also read  Tips On Control Of Phytophthora Foot Rot And Slow Decline Diseases Of Black Pepper

ಆಶಾ ಅವರು ಹೇಳುವಂತೆ ಅಂಥೋರಿಯಂ ಗಿಡ ನಾಟಿ ಮಾಡಿದ 16 ತಿಂಗಳಲ್ಲಿ ಹೂವು ಬಿಡಲು ಆರಂಭವಾಗುತ್ತದೆ. ನಂತರ ವರ್ಷದ ಅವಧಿಯಲ್ಲಿ ಒಂದು ಗಿಡದಲ್ಲಿ 5 ಹೂ ಬಿಡುತ್ತದೆ.

ಅಂಥೋರಿಯ ಹೂವಿನ ಜತೆ ಎಲೆಗಳಿಗೂ ಬೇಡಿಕೆಯಿದೆ. 2 ಎಲೆಗೆ 1 ರಿಂದ 1.50 ರೂ. ದರ ಸಿಗುತ್ತದೆ. 2 ಎಕರೆ ಹಸಿರು ಮನೆಯಲ್ಲಿ 60,000 ಅಂಥೋರಿಯಂ ಗಿಡಗಳಿವೆ.ಒಂದು ಅಂಥೋರಿಯಂ ಹೂವಿಗೆ 10ರಿಂದ 25 ರೂಪಾಯಿ ದರ ಸಿಗುತ್ತದೆ.

ಅಂಥೋರಿಯಂ ಹೂವುಗಳನ್ನು ಬೆಂಗಳೂರು, ಹೈದ್ರಾಬಾದ್‌ನ ಹೋಲ್‌ಸೇಲ್‌ ಹೂವು ಮಾರಾಟಗಾರರಿಗೆ ನೀಡುತ್ತಾರೆ.

1 ಎಕರೆಯಲ್ಲಿ ಗ್ರೀನ್‌ ಹೌಸ್‌ ನಿರ್ಮಿಸಿ ಅಂಥೋರಿಯಂ ಬೆಳೆಯಲು ಸುಮಾರು 75 ಲಕ್ಷ ರೂ. ಬಂಡವಾಳ ಬೇಕು. (ಗ್ರೀನ್‌ ಹೌಸ್‌, ಗಿಡಗಳ ವೆಚ್ಚ, ನೀರಾವರಿ ವ್ಯವಸ್ಥೆ, ಫಾಗಿಂಗ್‌, ವಾತಾನುಕೂಲ ವ್ಯವಸ್ಥೆ, ಬೆಡ್‌ ನಿರ್ಮಾಣ ಹೀಗೆ ಎಲ್ಲ ವೆಚ್ಚವೂ ಸೇರಿ)

 ಪುಷ್ಪ ಅಲಂಕಾರದಲ್ಲಿ ಬಳಸುವ ಅಲಂಕಾರಿಕ ಗಿಡಗಳಾದ ಝಂಡೂ, ಸಾಂಗ್‌ ಆಫ್‌ ಇಂಡಿಯಾ, ಸಾಂಗ್‌ ಆಫ್‌ ಜಮೈಕಾ, ಡ್ರೆಸ್ಸೀನಿಯಾ ಇವುಗಳನ್ನೂ ಗ್ರೀನ್‌ ಹೌಸ್‌ನಲ್ಲಿ ಬೆಳೆಯುತ್ತಾರೆ. ಹೂವಿನ ಗಿಡಗಳ ನಿರ್ವಹಣೆ, ಕೊಯ್ಲು, ಪ್ಯಾಕಿಂಗ್‌ ಹೀಗೆ ಪುಷ್ಪ ಕೃಷಿ ನಿರ್ವಹಣೆಗೆ 10 ಕಾರ್ಮಿಕರಿದ್ದಾರೆ.

ಅಂಥೋರಿಯ್‌ ಅಥವಾ ಆರ್ಕಿಡ್‌ ಬೆಳೆಯಲು ಸ್ವಲ್ಪ ಜಾಸ್ತಿ ಬಂಡವಾಳ ಬೇಕು. ಹೂವು ಬಿಡಲು ಆರಂಭವಾದ 3 ವರ್ಷಗಳ ನಂತರ ಬರುವ ಆದಾಯದಿಂದ ಲಾಭ ಸಿಗುತ್ತದೆ. ಗಿಡಗಳಿಗೆ ರೋಗ ಬಾರದಂತೆ ನೋಡಿಕೊಳ್ಳಬೇಕು. ಒಮ್ಮೆ ರೋಗ ಬಂದರೆ ಎಲ್ಲ ಗಿಡಗಳೂ ನಾಶವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಆಶಾ ಶೇಷಾದ್ರಿ.

ಪಾಟ್‌ ವಿತ್‌ ಫ್ಲವರ್‌ ಆರ್ಕಿಡ್‌

ಆಶಾ ಅವರು ಬೆಳೆಯುತ್ತಿರುವುದು ಫಿಲೋನಾಪ್‌ಸಿಸ್‌ ತಳಿಯ ಆರ್ಕಿಡ್‌. 4 ಸಾವಿರ ಆರ್ಕಿಡ್‌ ಸಸಿಗಳಿವೆ. ಆರ್ಕಿಡ್‌ ಹೂವು ಮಾತ್ರವಲ್ಲದೇ ‘ಪಾಟ್‌ ವಿತ್‌ ಫ್ಲವರ್‌’ ಪದ್ಧತಿ ಈಚಿಗೆ ಜನಪ್ರಿಯವಾಗಿದೆ. ಅಂದರೆ, ಪಾಟ್‌ನಲ್ಲಿ ಬೆಳೆಸಿದ ಗಿಡ ಸಮೇತ ಹೂವು ಮಾರಾಟ ಮಾಡುವುದು. ಮಹಾನಗರಗಳಲ್ಲಿ ‘ಪಾಟ್‌ ವಿತ್‌ ಫ್ಲವರ್‌’ ಬೇಡಿಕೆಯಿದೆ. ಇದು ಒಂದು ರೀತಿಯಲ್ಲಿ ಬೊಕ್ಕೆಗಳನ್ನು ನೀಡಿದಂತೆ. ಫಿಲೋನಾಪ್‌ಸಿಸ್‌ ಆರ್ಕಿಡ್‌ ಹೂವು 2ರಿಂದ 3 ತಿಂಗಳ ಕಾಲ ಚೆನ್ನಾಗಿ ಇರುತ್ತದೆ. ಹೀಗಾಗಿ ಈ ಹೂವಿಗೆ ಬೇಡಿಕೆ ಹೆಚ್ಚು. ಪಾಟ್‌ ವಿಥ್‌ ಫ್ಲವರ್‌ಅನ್ನು 350 ರಿಂದ 500 ರೂಪಾಯಿ ದರದಲ್ಲಿ ಮಾರಾಟ ಮಾಡುತ್ತಾರೆ.

ಆಶಾ ಅವರ ಪತಿ ಶೇಷಾದ್ರಿ ಅವರು ಕೂಡ ಕೃಷಿಕರು. ತೀರ್ಥಹಳ್ಳಿಯಲ್ಲಿ ಮೊಟ್ಟ ಮೊದಲು ವೆನಿಲ್ಲಾ ಬೆಳೆದ ಖ್ಯಾತಿ ಅವರದ್ದು.

ಹೆಚ್ಚಿನ ಮಾಹಿತಿಗೆ ಮೊ. 94480 93033.

Also read  ಬಿಳಿಗಿರಿರಂಗನಬೆಟ್ಟ : ಹಿಂಗಾರು ಮಳೆ ಕೊರತೆಯಿಂದ ಹೂವಿನ ಎರೆಗಳು ಕಾಣಿಸದೆ ಕರಿಮೆಣಸು ಇಳುವರಿ ಕುಸಿಯುವ ಆತಂಕ

Leave a Reply