ಕರಾವಳಿಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ; ಕಾವೇರಿ ತೀರದಲ್ಲಿ ಪ್ರವಾಹದ ಎಚ್ಚರಿಕೆ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ನಿರಂತರವಾಗಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಂಗಳವಾರ ಬೆಳಿಗ್ಗೆ ಕರಾವಳಿ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ತುರ್ತು ಮುನ್ನೆಚ್ಚರಿಕೆ ಸಂದೇಶ ರವಾನಿಸಿದೆ.
‘ಮುಂದಿನ 24 ಗಂಟೆಗಳ ಕಾಲ ಕರಾವಳಿ ಪ್ರದೇಶದಲ್ಲಿ ಯಾವುದೇ ಮೀನುಗಾರರು ಸಮುದ್ರ ಅಥವಾ ನದಿಗಳಲ್ಲಿ ಮೀನುಗಾರಿಕೆಗೆ ತೆರಳಬಾರದು. ತಗ್ಗು ಪ್ರದೇಶ ಮತ್ತು ನದಿ ತೀರದಲ್ಲಿ ವಾಸಿಸುತ್ತಿರುವ ಜನರು ಪ್ರವಾಹ ಸ್ಥಿತಿ ಇರುವ ತಗ್ಗು ಪ್ರದೇಶ ಅಥವಾ ನದಿಗೆ ತೆರಳಬಾರದು. ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ನೀಡಿದ್ದು, ಮಕ್ಕಳು ನೀರು ತುಂಬಿರುವ ತಗ್ಗು ಪ್ರದೇಶ ಅಥವಾ ನದಿ ತೀರಕ್ಕೆ ತೆರಳದಂತೆ ಪೋಷಕರು ಎಚ್ಚರಿಕೆ ವಹಿಸಬೇಕು’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರಿಗೆ ಮಳೆಯಿಂದ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 1077ಗೆ ಕರೆಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಮಲೆನಾಡಿನಲ್ಲಿ ಮುಂದುವರಿದ ವರುಣನ ಆರ್ಭಟ– ಅಪಾರ ಹಾನಿ: ಚಿನ್ನಿಗಾ ಸರ್ಕಾರಿ ಶಾಲೆಯ ಕೊಠಡಿ ನೆಲಸಮ
ಮೂಡಿಗೆರೆ ತಾಲ್ಲೂಕಿನಾದ್ಯಂತ ಮಳೆ ಮುಂದುವರೆದಿದ್ದು, ಜನ್ನಾಪುರ ಗ್ರಾಮದ ಚಿನ್ನಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಪೂರ್ಣ ಕುಸಿದಿದೆ.
7ನೇ ತರಗತಿ ವಿದ್ಯಾರ್ಥಿಗಳಿಗೆ ಇದೇ ಕೊಠಡಿಯಲ್ಲಿ ತರಗತಿ ನಡೆಸಲಾಗುತ್ತಿದ್ದು, ಮಂಗಳವಾರ ಶಾಲೆಗೆ ರಜೆ ಇದ್ದಿದ್ದರಿಂದ ಬಾರಿ ದುರಂತ ತಪ್ಪಿದಂತಾಗಿದೆ ಎಂದು ಹಳೆ ವಿದ್ಯಾರ್ಥಿ ಜಯಪಾಲ್ ತಿಳಿಸಿದರು.