Featured NewsKrushi

ಹುಲುಸಾಗಿ ಬೆಳೆದ ಹಾಲು ಕೆಸು

ಕಳೆದ 3-4 ವರ್ಷಗಳಿಂದ ಮಲೆನಾಡು ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ.ಹೆಚ್ಚು ಮಳೆ ನೀರು ಬಯಸುವ ಶುಂಠಿ, ಅರಿಶಿಣ, ಭತ್ತ, ಕಬ್ಬು, ಬಾಳೆ ಇತ್ಯಾದಿ ಕೃಷಿ ಬದಲು ಕಡಿಮೆ ಮಳೆಯಲ್ಲೂ ಅಧಿಕ ಫಸಲು ದೊರೆಯುವ ಬೆಳೆಯತ್ತ ರೈತರು ಚಿತ್ತ ಹರಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದ ಪ್ರಗತಿಪರ ಕೃಷಿಕ ಮಂಜುನಾಥ ಶೇಟ್ ತಮ್ಮ ಖುಷ್ಕಿ ಹೊಲದಲ್ಲಿ ಈ ವರ್ಷ ಹಾಲುಗೆಸುವಿನ ಕೃಷಿ ಕೈಗೊಂಡಿದ್ದು ಗಿಡ ಹುಲುಸಾಗಿ ಬೆಳೆದು ಬಂಪರ್ ಫಸಲು ಬಿಟ್ಟಿದೆ.

ಅವರು ಆನಂದಪುರಂ- ಬಳ್ಳೀಬೈಲು ರಸ್ತೆಯ ತ್ಯಾವರೆಹಳ್ಳಿ ಗ್ರಾಮದ ತಮ್ಮ ಹೊಲದಲ್ಲಿ ಹಾಲುಗೆಸುವಿನ ಕೃಷಿ ನಡೆಸಿದ್ದಾರೆ. ‘ಅತ್ಯಧಿಕ ಗೊಬ್ಬರ ಅಗತ್ಯವಿಲ್ಲದ ಈ ಕೃಷಿಯಲ್ಲಿ ಕಳೆ ತೆಗೆಯುವ ಕಾರ್ಯ ಇಲ್ಲ. ಯಾವುದೇ ರೋಗಭಾದೆ ಇಲ್ಲದ ಕಾರಣ ಕೀಟ ನಾಶಕ ಸಿಂಪಡಣೆ ಇತ್ಯಾದಿ ಕಿರಿ ಕಿರಿ ಇಲ್ಲವೇ ಇಲ್ಲ’ ಎನ್ನುತ್ತಾರೆ ಮಂಜುನಾಥ್.

Also read  ಚಿಕ್ಕಮಗಳೂರು ವರ್ಷದ ಮೊದಲ ಮಳೆ:ಬೆಳೆಗಾರರಿಗೆ ಖುಶಿ ಮತ್ತು ಸಂಕಷ್ಟ

ಕೃಷಿ ಹೇಗೆ:

25 ವರ್ಷಗಳ ಹಿಂದೆ ಬಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಅವರು 15 ವರ್ಷಗಳ ಹಿಂದೆ ಕೃಷಿ ಕಾರ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಖುಷ್ಕಿ ಭೂಮಿ ಪಡೆದುಕೊಂಡು ಪ್ರತಿ ವರ್ಷ ಮಳೆಯಾಧಾರಿತವಾಗಿ ಮೆಕ್ಕೆಜೋಳ, ಸುವರ್ಣಗಡ್ಡೆ, ಅರಿಶಿಣ, ಶುಂಠಿ ಇತ್ಯಾದಿ ಕೃಷಿ ನಡೆಸುತ್ತಿದ್ದು, ಸುತ್ತಮುತ್ತಲಿನವರ ಗಮನ ಸೆಳೆಯುತ್ತಿದ್ದಾರೆ.
ಜೂನ್ ಆರಂಭದಲ್ಲಿ ಒಂದು ಅರ್ಧ ಅಡಿ ಆಳ, ಅರ್ಧ ಅಡಿ ಸುತ್ತಳತೆಯ ಗುಂಡಿ ನಿರ್ವಿುಸಿ, ಗಿಡದಿಂದ ಗಿಡಕ್ಕೆ ಸರಿ ಸುಮಾರು 2 ಅಡಿ ಅಂತರದಲ್ಲಿ ಬರುವಂತೆ ಸರಾಸರಿ 200 ಗ್ರಾಂ ಗಾತ್ರದ ಕೆಸುವಿನ ಬೀಜಗಳನ್ನು ನಾಟಿ ಮಾಡಿದ್ದಾರೆ. ನಾಟಿ ಮಾಡುವಾಗ ಸಗಣಿ ಗೊಬ್ಬರ, ದರಗಲೆಲೆ ಹಾಕಿದ್ದರು. 15 ರಿಂದ 20 ದಿನದಲ್ಲಿ ಗಡ್ಡೆ ಚಿಗುರಿ 3 ರಿಂದ 4 ಎಲೆ ಕಾಣಿಸಿಕೊಳ್ಳುತ್ತಿದ್ದಂತೆ ಸರಾಸರಿ 50 ಗ್ರಾಂ ಡಿ.ಎ.ಪಿ.ಗೊಬ್ಬರ ನೀಡಿದ್ದರು. ನಂತರ ಪ್ರತಿ 25 ದಿನಕ್ಕೆ ಒಮ್ಮೆ ಎರಡು ಸಲ ಗೊಬ್ಬರ ನೀಡಿ ಮಣ್ಣು ಏರಿಸಿ ಕೃಷಿ ಮಾಡಿದ್ದಾರೆ. ತಮ್ಮ ವಿಶಾಲವಾದ ಹೊಲದಲ್ಲಿ ಒಂದು ಕಾಲು ಎಕರೆ ವಿಸ್ತೀರ್ಣದಲ್ಲಿ ಮಾತ್ರ ಈ ಕೃಷಿ ನಡೆಸಿದ್ದಾರೆ. 12 ಕ್ವಿಂಟಾಲ್ ಕೆಸುವಿನ ಬೀಜ ಖರೀದಿಸಿ 7000 ಗಿಡಗಳನ್ನು ಬೆಳೆಸಿದ್ದಾರೆ.

Also read  ಜೀರಿಗೆ ಮೆಣಸು - ಈ ಛೋಟ್ ಮೆಣಸಿನಕಾಯಿ ಬಲು ಕಾರ

ಲಾಭ ಹೇಗೆ:

ಕ್ವಿಂಟಾಲ್ ಒಂದಕ್ಕೆ 1000 ರೂಪಾಯಿಯಂತೆ 10 ಕ್ವಿಂಟಾಲ್ ಕೆಸುವಿನ ಬೀಜ ಖರೀದಿಸಿದ್ದಾರೆ. ಇದರಿಂದ 7000 ಕೆಸುವಿನ ಗಿಡ ಬೆಳೆಸಿದ್ದಾರೆ. ಪ್ರತಿ ಗಿಡದಿಂದ ಸರಾಸರಿ 3ರಿಂದ 4 ಕಿಲೋ ಕೆಸುವಿನ ಗಡ್ಡೆ ಫಸಲಾಗಿದೆ. 7000 ಗಿಡದಿಂದ 200 ಕ್ವಿಂಟಾಲ್ ಕೆಸುವಿನ ಫಸಲು ದೊರೆಯುತ್ತದೆ. ಕೆಸುವಿಗೆ ಮಾರುಕಟ್ಟೆಯಲ್ಲಿ ಸರಾಸರಿ ಕಿಲೋಗೆ 15 ರೂಪಾಯಿ ದರ ದೊರೆಯುತ್ತದೆ. ಮಂಗಳೂರು, ಕೇರಳಗಳಲ್ಲಿ ಒಳ್ಳೆಯ ಮಾರುಕಟ್ಟೆಯಿದೆ. 200 ಕ್ವಿಂಟಾಲ್ ಕೆಸುವಿನ ಫಸಲಿನಿಂದ ಇವರಿಗೆ 3 ಲಕ್ಷ ರೂಪಾಯಿ ಆದಾಯ ದೊರೆಯುಲಿದೆ. ಗೊಬ್ಬರ, ಬೀಜ ಖರೀದಿ, ಕೃಷಿ ಕೆಲಸದ ಕೂಲಿ ಎಲ್ಲ ಲೆಕ್ಕ ಹಾಕಿದರೂ 80,000 ರೂ. ಖರ್ಚು ತಗಲಿದೆ. ಆದರೂ ಸಹ 2.2 ಲಕ್ಷ ರೂಪಾಯಿ ಲಾಭ ದೊರೆಯುತ್ತದೆ. ಕೆಸುವಿನ ಕೃಷಿ ಆರಂಭಿಸಿದಾಗ ಗೇಲಿ ಮಾಡಿದ್ದ ಸುತ್ತಮುತ್ತಲ ಕೃಷಿಕರು ಗಿಡದ ಬೆಳವಣಿಗೆ ಮತ್ತು ಫಸಲಿನ ಲಕ್ಷಣ ನೋಡಿ ಈಗ ಅಚ್ಚರಿಗೊಂಡಿದ್ದಾರೆ.

Also read  ಇಂದಿನಿಂದ ಬೆಂಗಳೂರು ‘ಕೃಷಿ ಮೇಳ’

ಈ ಲೇಖನವನ್ನು ವಿಜಯವಾಣಿಯಿಂದ ತೆಗೆದುಕೊಳ್ಳಲಾಗಿದೆ.

Leave a Reply