Black pepperFeatured News

700 ರೂಪಾಯಿ ತಲುಪಿದ ಕಾಳುಮೆಣಸಿನ ಬೆಲೆ

ಕಪ್ಪು ಚಿನ್ನ ಕಾಳುಮೆಣಸಿನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ,ಕಳೆದ ಜನವರಿ ತಿಂಗಳಿನಲ್ಲಿ ಕಿಲೋಗೆ 500-520 ರ ಸಮೀಪ ಇದ್ದ ಕಾಳು ಮೆಣಸಿನ ದರ ಈಗ ಕೆಜಿಗೆ 700 ಕ್ಕೆ ತಲುಪಿದೆ. ಬುಧವಾರ ಕೊಚಿನ್‌, ಸಕಲೇಶಪುರ ಹಾಗೂ ಚಿಕ್ಕಮಗಳೂರಿನ ಮಾರುಕಟ್ಟೆಗಳಲ್ಲಿ ಕಾಳು ಮೆಣಸು 700 ರೂಪಾಯಿಗಳವರೆಗೆ ಮಾರಾಟವಾಯಿತು.ಕೊಡಗಿನ ವಿವಿದ ಪಟ್ಟಣಗಳಲ್ಲಿ ಮೆಣಸಿನ ಬೆಲೆ 680-695 ರ ವರೆಗೆ ಇತ್ತು.

ಬೆಳೆಗಾರರ ಮುಖದಲ್ಲಿ ಮಂದಹಾಸ

ಈ ಮೊದಲು 2018 ರಲ್ಲಿ ಮೆಣಸು ಸರ್ವಕಾಲಿಕ ದಾಖಲೆಯ 800 ರೂಪಾಯಿಗಳ ವರೆಗೆ ತಲುಪಿತ್ತು. ನಂತರ ವಿಯಟ್ನಾಂ ಮತ್ತು ಶ್ರೀಲಂಕಾದಿಂದ ಅಗ್ಗದ ಕಾಳು ಮೆಣಸು ಆಮದಾಗಿ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಾಳು ಮೆಣಸಿಗೆ ಬೇಡಿಕೆ ಕಡಿಮೆಯಾಗಿ ಬೆಲೆ ಕುಸಿತ ಕಂಡಿದ್ದು ಬೆಳೆಗಾರರಲ್ಲಿ ಆತಂಕವನ್ನೂಮೂಡಿಸಿತ್ತು.ಇದೀಗ ಬೆಲೆ ಮತ್ತೆ ಏರುಮುಖವಾಗುತ್ತಿರುವುದು ಬೆಳೆಗಾರರ ಮುಖದಲ್ಲಿ ಮಂದಹಾಸವನ್ನು ಮೂಡಿಸಿದೆ.

ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಇತರ ಹವಾಮಾನ ಸಂಬಂಧಿತ ಬದಲಾವಣೆಯಿಂದ ಕಾಳುಮೆಣಸು ಉತ್ಪಾದಿಸುವ ವಿಯೆಟ್ನಾಂ, ಇಂಡೋನೇಷಿಯಾ, ಮಲೇಷಿಯಾ, ಬ್ರೆಜಿಲ್‌ನಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಬ್ರೆಜಿಲ್‌ನಲ್ಲಿ ಅಸಾಧಾರಣ ಉಷ್ಣ ಹವಾಮಾನದಿಂದ ಶೇ.15 ರಷ್ಟು ಕುಸಿದಿದೆ ಎನ್ನಲಾಗಿದೆ. ಇಂಡೋನೇಷ್ಯಾ ಮತ್ತು ಮಲೇಷ್ಯಾದಲ್ಲಿ ಕೋಕೋ, ತಾಳೆ ಎಣ್ಣೆ ಮತ್ತು ದುರಿಯನ್ ಬೆಳೆ ರೈತರಲ್ಲಿ ಹೆಚ್ಚು ಜನಪ್ರಿಯವಾಗಿದ್ದು, ಸದಾ ರೋಗಬಾಧೆಗೆ ತುತ್ತಾಗುವ ಕಾಳುಮೆಣಸು ಕೃಷಿಯನ್ನು ತ್ಯಜಿಸುತ್ತಿರುವುದರಿಂದ ಕಾಳುಮೆಣಸಿಗೆ ಬೇಡಿಕೆ ಜಾಸ್ತಿಯಾಗಿ, ಬೆಲೆ ಏರಿಕೆಯಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಅಭಿಪ್ರಾಯಿಸಿದ್ದಾರೆ.

ಭಾರೀ ಮಳೆಯಿಂದಾಗಿ ಕೇರಳದಲ್ಲಿ ಮೆಣಸು ಉತ್ಪಾದನೆ ಕುಸಿತ

ಭಾರತದಲ್ಲಿ ವರ್ಷಕ್ಕೆ 70 ಸಾವಿರ ಟನ್ ಕಾಳುಮೆಣಸಿನ ಬೆಳೆಯುತ್ತಿದ್ದು, ರಾಜ್ಯದಲ್ಲಿ 36 ಸಾವಿರ ಟನ್‌ ಉತ್ಪಾದನೆ ಆಗುತಿದ್ದು ಕೇರಳದಲ್ಲಿ ಸುಮಾರು 25 ಸಾವಿರ ಟನ್‌ ಉತ್ಪಾದನೆ ಆಗುತ್ತಿದೆ. ಆದರೆ ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದಾಗಿ ಕೇರಳದಲ್ಲಿ ಮೆಣಸು ಉತ್ಪಾದನೆ ಶೇಕಡಾ 20 ರಿಂದ 25 ರಷ್ಟು ನಾಶವಾಗಲಿದೆ ಎಂದು ಹೇಳಲಾಗಿದೆ. ಶೀತ ವಾತಾವರಣವು ದೇಶೀಯ ಕಾಳುಮೆಣಸು ಬಳಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ ಉತ್ತಮ ಗುಣಮಟ್ಟದ ಮೆಣಸು ರೂ. ಪ್ರತಿ ಕಿಲೋಗ್ರಾಂಗೆ 690-700 ರೂಪಾಯಿವರೆಗೆ ಏರಿಕೆ ಆಗಿದೆ.

ವಿಪರೀತ ಬಿಸಿಲಿನ ಪರಿಣಾಮ ಕೊಡಗಿನಲ್ಲಿ ಉತ್ಪಾದನೆ ಕುಸಿತ

ಪ್ರಸಕ್ತ ಸಾಲಿನಲ್ಲಿ ವಿಪರೀತ ಬಿಸಿಲಿನ ಪರಿಣಾಮ ಕೆಲ ಭಾಗದಲ್ಲಿ ಮೆಣಸು ಬಳ್ಳಿಗಳು ಸಂಪೂರ್ಣ ಒಣಗಿ ಹೋಗಿವೆ. ಫಸಲು ಹಾನಿಯಾಗಿತ್ತು.ವಿಯೆಟ್ನಾಂ ಮಾದರಿಯಲ್ಲಿಯೇ ಕೊಡಗಿನಲ್ಲೂ ಹವಾಮಾನ ವೈಪರೀತ್ಯದಿಂದ ಕಾಳುಮೆಣಸು ಉತ್ಪಾದನೆ ಕುಸಿದಿದೆ. ಇತ್ತೀಚಿನ ವರ್ಷಗಳಲ್ಲಿ ಅಕಾಲಿಕ ಮಳೆ, ವಿಪರೀತ ಸುರಿಯುವ ಮುಂಗಾರು ಮಳೆ, ಹೆಚ್ಚಿನ ಬಿಸಲು ಇವೆಲ್ಲಾ ಕಾರಣಗಳಿಂದ ಬಳ್ಳಿಗಳು ರೋಗಬಾಧೆಯಿಂದ ಒಣಗುತ್ತಿವೆ.

ದೇಶೀಯ ಮತ್ತು ಆಮದು ಮಾಡಿದ ಕಾಳುಮೆಣಸಿನ ಪರಿಣಾಮ, ಸಂಭಾವ್ಯ ಬೆಲೆ ಕುಸಿತವನ್ನು ತಪ್ಪಿಸಲು ಅನೇಕ ರೈತರು ವರ್ಷದ ಆರಂಭದಲ್ಲಿ ತಮ್ಮ ದಾಸ್ತಾನನ್ನು ಮಾರಾಟ ಮಾಡಿದ್ದರಿಂದ ಇಡುಕ್ಕಿ ಯ ಕಾಳುಮೆಣಸು ಲಭ್ಯತೆ ಸೀಮಿತವಾಗಿದೆ. ಮಾರುಕಟ್ಟೆಯು ಈಗ ಆಮದು ಮಾಡಿದ ಕಾಳುಮೆಣಸಿನ ಮೇಲೆ ಹೆಚ್ಚು ಅವಲಂಬಿತವಾಗಿದೆ, ಶ್ರೀಲಂಕಾ ಮತ್ತು ವಿಯೆಟ್ನಾಂ ಕಾಳುಮೆಣಸಿನ ಬೆಲೆಗಳು ಜನವರಿಯಿಂದ ಪ್ರಸ್ತುತ ಅವಧಿಯವರೆಗೆ ಗಣನೀಯವಾಗಿ ಏರಿದೆ, ಆದರೆ ಗುಣಮಟ್ಟದಲ್ಲಿ ಕಡಿಮೆ ದರ್ಜೆ ಇರುವುದರಿಂದ ಇದಕ್ಕೆ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕುತ್ತಿಲ್ಲ. ಆದರೆ ಭಾರತೀಯ ಮೆಣಸು ಗುಣಮಟ್ಟದಲ್ಲಿ ಉತ್ಕೃಷ್ಟ ದರ್ಜೆಯದಾಗಿರುವುದರಿಂದ ಬೇಡಿಕೆ ಹೆಚ್ಚಾಗಿದು ದುಬಾರಿಯೂ ಆಗಿದೆ.

Also read  Coffee Prices (Karnataka) on 06-11-2021