ಸೋಮವಾರಪೇಟೆ:ಕಾಫಿ ಗಿಡಗಳಿಗೆ ಭಾರಿ ಹಾನಿ
ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಕಾಫಿ ತೋಟದಲ್ಲಿ ಭೂಮಿಯೊಳಗಿನಿಂದ ನೀರು ಉಕ್ಕಿ ಹರಿದ ಪರಿಣಾಮ ಒಂದು ಎಕರೆಯಷ್ಟು ಕಾಫಿ ತೋಟ ನಾಶವಾಗಿರುವ ಘಟನೆ ಸಮೀಪದ ತಲ್ತಾರೆಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಕೆ.ಪಿ.ಬಸಪ್ಪ ಎಂಬುವವರ ಕಾಫಿ ತೋಟದಲ್ಲಿ 15 ವರ್ಷದ 800 ಅರೇಬಿಕಾ ಕಾಫಿ ಗಿಡಗಳು ಬುಡಸಮೇತ ನೆರಕ್ಕುರುಳಿವೆ. ಕಾಳು ಮೆಣಸು, ಕಿತ್ತಳೆ ಗಿಡಗಳು, ಬಾಳೆ ಎಲ್ಲವೂ ನಾಶವಾಗಿದ್ದು, ಸುಮಾರು ₹ 1.95 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
‘ಧಾರಾಕಾರ ಮಳೆ ಸುರಿಯುತ್ತಿದ್ದ ಸಂದರ್ಭ ರಾತ್ರಿ ಘಟನೆ ಸಂಭವಿಸಿದ್ದು, ಬೆಳಿಗ್ಗೆ ತೋಟದ ಮಾಲೀಕರು ಹೋಗಿ ನೋಡಿದಾಗ ಕಾಫಿ ಗಿಡಗಳು ನಾಶವಾಗಿರುವುದು ಕಂಡುಬಂದಿದೆ. ಆದರೆ, ನೀರು ಉಕ್ಕಿರುವ ಗುಂಡಿ ಮಾತ್ರ ಕಂಡಿದ್ದು, ನೀರು ಉಕ್ಕುವುದು ಸಂಪೂರ್ಣವಾಗಿ ನಿಂತಿದೆ.
ಕಾಫಿ ತೋಟ ಎತ್ತರದ ಪ್ರದೇಶದಲ್ಲಿದ್ದು ಇದುವರಗೆ ಆ ಜಾಗದಲ್ಲಿ ಮಳೆಗಾಲದಲ್ಲಿ ಜಲ ಬಂದಿರುವ ನಿದರ್ಶನಗಳಿಲ್ಲ’ ಎಂದು ಕಾಫಿ ಬೆಳೆಗಾರ ಬಸಪ್ಪ ಹೇಳಿದ್ದಾರೆ. ರಾತ್ರಿ ಘಟನೆ ಸಂಭವಿಸಿರುವ ಕಾರಣ, ನೀರು ಹರಿಯುವುದನ್ನು ಕಾಣಲು ಸಾಧ್ಯವಾಗಿಲ್ಲ. ಪರಿಹಾರಕ್ಕಾಗಿ ಕಾಫಿ ಮಂಡಳಿಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು.
ಪ್ರಜಾವಣಿ