CoffeeFeatured News

20 ಸಾವಿರ ತಲುಪುವ ಮೂಲಕ ದಾಖಲೆ ಸೃಷ್ಟಿಸಿದ ರೊಬಸ್ಟಾ ಪಾರ್ಚ್ಮೆಂಟ್‌

ಭಾರತದ ಕಾಫಿಗೆ ಐತಿಹಾಸಿಕ ಧಾರಣೆ ಸಿಗುವ ಮೂಲಕ ದಾಖಲೆ ನಿರ್ಮಿಸಿದೆ. ಅರೆಬಿಕಾ ಕಾಫಿಗಿಂತ ಕಡಿಮೆ ಧಾರಣೆ ಹೊಂದಿರುತ್ತಿದ್ದ ರೊಬಸ್ಟಾ ಪಾರ್ಚ್ಮೆಂಟ್‌ ಈ ವರ್ಷ 20,000 ರೂ.ಗಳಿಗೆ ತಲುಪುವ ಮೂಲಕ ಭಾರತದ ಕಾಫಿ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದೆ.
ಜಗತ್ತಿನಲ್ಲೇ ಅತಿ ಹೆಚ್ಚು ಕಾಫಿ ಉತ್ಪಾದಿಸುವ ಬ್ರೆಜಿಲ್‌, ವಿಯೆಟ್ನಾಂನಲ್ಲಿ ಹವಾಮಾನ ವೈಪರೀತ್ಯದಿಂದ ಇಳುವರಿ ಸಂಪೂರ್ಣ ಕುಂಠಿತವಾಗಿದೆ. ಭಾರತದಲ್ಲೂ ವಾರ್ಷಿಕ ಉತ್ಪಾದನೆಯ ಗುರಿ ತಲುಪಿಲ್ಲ. ಇದರಿಂದ ಲಂಡನ್‌ ಮಾರುಕಟ್ಟೆಯಲ್ಲಿ ಕಾಫಿಗೆ ಬೇಡಿಕೆ ಹೆಚ್ಚಾಗಿದ್ದು, ಧಾರಣೆ ಏರಿಕೆಗೆ ಕಾರಣವಾಗಿದೆ.
ಕಾಫಿ ಧಾರಣೆ ಹೆಚ್ಚಾಗುತ್ತಿದ್ದಂತೆ ಇತ್ತ ಕಾಫಿಪುಡಿ ಬೆಲೆಯೂ ಗಗನಕ್ಕೇರಿದೆ.

ಕಾಫಿಪುಡಿ ದುಬಾರಿ
ಕಾಫಿ ಪುಡಿ ತಯಾರಿಕಾ ಘಟಕಗಳಲ್ಲಿ ಕೆಲವರು ಮಾತ್ರ ಸ್ವಂತ ತೋಟದ ಕಾಫಿ ಬೀಜಗಳನ್ನು ದಾಸ್ತಾನಿರಿಸಿಕೊಂಡು ತಯಾರಿಸುತ್ತಾರೆ. ಆದರೆ, ಬಹುತೇಕ ಕಾಫಿಪುಡಿ ಉತ್ಪಾದನಾ ಘಟಕಗಳು ಕಾಫಿಬೀಜಗಳನ್ನು ಖರೀದಿಸಿಯೇ ತಯಾರಿಸಬೇಕು. ಕಾಫಿಧಾರಣೆ 20,000ಕ್ಕೆ ತಲುಪಿರುವ ಜತೆಗೆ ಕೊರತೆಯೂ ಉಂಟಾಗಿದೆ.ಇದರಿಂದ ಬೆಂಗಳೂರಿನಲ್ಲಿ ಕಾಫಿಪುಡಿ ದರ ಒಂದು ಕೆ.ಜಿ.ಗೆ 100 ರೂ. ಹೆಚ್ಚಾಗಿದೆ. ಚಿಕ್ಕಮಗಳೂರಿನಲ್ಲಿ ಉತ್ತಮ ಗುಣಮಟ್ಟದ ಕಾಫಿಪುಡಿಯನ್ನು ಕೆ.ಜಿ.ಗೆ 480ರೂ. ದರದಲ್ಲಿಮಾರಾಟ ಮಾಡಲಾಗುತ್ತಿದೆ. ಇನ್ನೆರಡು ದಿನದಲ್ಲಿ ಕಾಫಿಪುಡಿ ದರವನ್ನು 530 ರೂ.ಗಳಿಗೆ ಹೆಚ್ಚಿಸಲು ಕಾಫಿ ವರ್ಕ್ಸ್‌ ಮಾಲೀಕರು ಚಿಂತನೆ ನಡೆಸಿದ್ದಾರೆ.

ಬೆಳೆಗಾರರ ಬಳಿ ಕಾಫಿ ಇಲ್ಲ, ಮಾರುಕಟ್ಟೆಯಲ್ಲಿಯೂ ಕಾಫಿ ಸಿಗುತ್ತಿಲ್ಲ. ಕಾಫಿ ಕ್ಯೂರರ್ಸ್ ಬಳಿ ಒಂದಷ್ಟು ದಾಸ್ತಾನಿದೆ. ಅದು ಶೀಘ್ರದಲ್ಲೇ ಖಾಲಿಯಾಗುವ ಸಾಧ್ಯತೆ ಇದೆ. ರೊಬಸ್ಟಾ ಕಾಫಿ ಎಲ್ಲಿಯೂ ಸಿಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಕಾಫಿ ಪುಡಿ ಉತ್ಪಾದನೆಯನ್ನು ಸಹ ನಿಲ್ಲಿಸುವ ಸಾಧ್ಯತೆ ಇದೆ. ಇನ್ನು ಆರು ತಿಂಗಳು ಕಾಫಿ ದರದಲ್ಲಿಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.- ಶ್ರೀಧರ್‌, ಪಾಂಡುರಂಗ ಕಾಫಿ ವರ್ಕ್ಸ್‌, ಚಿಕ್ಕಮಗಳೂರು

Also read  Coffee Prices (Karnataka) on 20-12-2022