ಇಂದಿನಿಂದ ಬೆಂಗಳೂರು ‘ಕೃಷಿ ಮೇಳ’
ಇಂದಿನಿಂದ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ(ಜಿಕೆವಿಕೆ)ನಾಲ್ಕು ದಿನಗಳ ಕೃಷಿ ಮೇಳ ಆರಂಭಗೊಳ್ಳಲಿದೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಚ್. ಶಿವಣ್ಣ, ‘ಈ ವರ್ಷ ಸುಮಾರು 12 ಲಕ್ಷ ಜನರು ಬರುವ ನಿರೀಕ್ಷೆ ಇದೆ’ ಎಂದರು.
ಸುಧಾರಿತ ಕೃಷಿ ಯಂತ್ರೋಪಕರಣಗಳ 175 ಮಳಿಗೆಗಳು, ಪಶು ಸಂಗೋಪನೆಯ 65 ಮಳಿಗೆಗಳು, ರಸಗೊಬ್ಬರ, ಬೀಜ, ವಿವಿಧ ತಳಿ, ಬೆಳೆ ಪ್ರಾತ್ಯಕ್ಷಿಕೆ, ರೈತ ಸಲಹಾ ಕೇಂದ್ರ ಸೇರಿದಂತೆ 700 ಮಳಿಗೆಗಳು ಮೇಳದಲ್ಲಿ ಇರಲಿವೆ.
8 ಸುಧಾರಿತ ತಳಿಗಳ ಬಿಡುಗಡೆ: ಕಬ್ಬು (ವಿಸಿಎಫ್ 0517)ತಳಿ, ಮೇವಿನ ಅಲಸಂದೆ (ಎಂಎಫ್ಸಿ-09.1), ಮುಸುಕಿನ ಜೋಳದ ಸಂಕರಣ ತಳಿ (ಎಂಎಎಚ್ 14.5), ತೊಗರಿ (ಬಿಆರ್‌ಜಿ 3), ಅಲಸಂದೆ (ಎವಿ 6), ಬೀಜದ ದಂಟು (ಕೆಬಿಜಿಎ 4), ನೇರಳೆ (ಚಿಂತಾಮಣಿ ಸೆಲೆಕ್ಷನ್ 1), ಸ್ವೀವಿಯ ರೆಬುಡಿನ: ಮಿಕ್ಸಾಪ್ಲಡ್ ಎಂಬ ನೂತನ ಸುಧಾರಿತ ತಳಿಗಳನ್ನು ಮೇಳದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಹವಾಮಾನ ವೈಪರೀತ್ಯದ ಕೃಷಿ, ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕೃರಣೆ ಮತ್ತು ಮೌಲ್ಯವರ್ಧನೆ, ಸಾವಯವ ಕೃಷಿ ಪದ್ಧತಿ, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿಗಳು, ಸಣ್ಣ ಸಣ್ಣ ಕೈತೋಟಗಳ ಪರಿಕರಗಳು, ಬಿತ್ತನೆ ಬೀಜ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮಾರಾಟ, ಗಾರ್ಡನಿಂಗ್ ಸಸಿಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸಾಂಸ್ಕೃತಿಕ ಮತ್ತು ಜಾನಪದ ಕಲೆಗಳ ಪ್ರದರ್ಶನ ಕೃಷಿ ಮೇಳದಲ್ಲಿ ನಡೆಯಲಿದ್ದು, ಮೇಳಕ್ಕೆ ಬರುವವರಿಗೆ ಸಾಂಸ್ಕೃತಿಕ ರಸದೌತಣ ನೀಡಲಿವೆ. ಕೋಲಾಟ, ಯಕ್ಷಗಾನ, ಗೊಂಬೆಯಾಟ, ತೊಗಲು ಗೊಂಬೆಯಾಟ, ಜನಪದ ಗೀತೆ ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕೃಷಿ ಮೇಳಕ್ಕೆ ಬರುವವರಿಗೆ ಪ್ರವೇಶ ಉಚಿತವಾಗಿದೆ. ಜಿಕೆವಿಕೆಯ ಮಹಾದ್ವಾರದಿಂದ ಕೃಷಿ ಮೇಳದ ದಾಖಲಾತಿ ಸ್ಥಳಕ್ಕೆ ತಲುಪಲು ಕೃಷಿ ವಿಶ್ವವಿದ್ಯಾಲಯದ ಬಸ್ಸುಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಇರುತ್ತದೆ. ಪ್ರತ್ಯೇಕ ನಿಲುಗಡೆ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.