CardamomFeatured News

ಕೊಡಗಿನಿಂದ ದೂರ ಸರಿಯುತ್ತಿರುವ ಸಂಬಾರ ರಾಣಿ

ಕಳೆದ ಒಂದೆರಡು ದಶಕಗಳ ಹಿಂದಿನ ಮಾತು. ಆಗ ಕೊಡಗಿನಲ್ಲಿ ಸಂಬಾರ ರಾಣಿ ಏಲಕ್ಕಿಯದ್ದೇ ಹವಾ. ಉತ್ತಮ ದರ ದೊರೆಯುತ್ತಿದ್ದ ದಿನಗಳು. ಏಲಕ್ಕಿ ಬೆಳೆಗಾರನನ್ನು ಶ್ರೀಮಂತನೆಂದೇ ಭಾವಿಸಲಾಗುತ್ತಿತ್ತು. ಕನಿಷ್ಠ ಏನಿಲ್ಲವೆಂದರೂ ಒಂದು ಕೆಜಿ ಏಲಕ್ಕಿಗೆ ಸುಮಾರು 700 ರಿಂದ 1000 ರೂ. ತನಕ ಬೆಲೆಯಿತ್ತು.

ಅವತ್ತಿನ ದಿನಗಳಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಕೊಡುತ್ತಿದ್ದ ಕೃಷಿ ಎಂದರೆ ಅದು ಏಲಕ್ಕಿ ಕೃಷಿ ಎಂಬಂತಾಗಿತ್ತು. ಮಳೆಗಾಲದಲ್ಲಿ ಗಿಡ ನೆಟ್ಟು ಒಂದಷ್ಟು ಆರೈಕೆ ಮಾಡಿದರೆ ಒಂದೆರಡು ವರ್ಷದಲ್ಲಿ ಫಸಲು ನೀಡುತ್ತಿತ್ತು.

ಕೊಡಗಿನಲ್ಲಿ ಹೆಚ್ಚು ಕಾಡು ಇತ್ತು. ಅಲ್ಲದೆ ಯಥೇಚ್ಛವಾಗಿ ಮಳೆ ಸುರಿಯುತ್ತಿದ್ದರಿಂದ ಆ ಹವಾಗುಣಕ್ಕೆ ಏಲಕ್ಕಿ ಹೊರತುಪಡಿಸಿ ಬೇರೆ ಕೃಷಿ ಮಾಡುವುದು ಕಷ್ಟದ ಕೆಲಸವಾಗಿತ್ತು. ಇದಲ್ಲದೆ ಕಾಫಿ ಬೆಳೆಯೋಣ ಎಂದರೆ ಸಾಮಾನ್ಯರಿಗೆ ಅದನ್ನು ಬೆಳೆಯುವುದು ಸಾಧ್ಯವಿರಲಿಲ್ಲ. ಅದು ಸಂಪೂರ್ಣ ಕಾಫಿ ಮಂಡಳಿಯ ಹಿಡಿತದಲ್ಲಿತ್ತು. ಪರವಾನಗಿ ಮೂಲಕವೇ ಕಾಫಿ ಬೆಳೆಯಬೇಕಾಗಿತ್ತು. ಹೀಗಾಗಿ ಅದರ ಉಸಾಬರಿ ಬೇಡವೆಂದು ಎಲ್ಲರೂ ಏಲಕ್ಕಿಯನ್ನೇ ಬೆಳೆಯುತ್ತಿದ್ದರು.ಏಲಕ್ಕಿಯನ್ನು ಬೆಳೆದು ಜೋಪಾನವಾಗಿ ಮನೆಯಲ್ಲಿಟ್ಟುಕೊಳ್ಳುತ್ತಿದ್ದ ರೈತ ತನಗೆ ಹಣದ ಅವಶ್ಯಕತೆಯಿದ್ದಾಗ ಮಾತ್ರ ಮಾರಾಟ ಮಾಡುತ್ತಿದ್ದನು. ಒಟ್ಟಾರೆ ಆ ದಿನಗಳು ಏಲಕ್ಕಿ ಬೆಳೆಗಾರನ ಪಾಲಿಗೆ ಸುವರ್ಣಮಯ ದಿನಗಳಾಗಿದ್ದವು.

Also read  ಕಾಫಿ ಬೋರ್ಡಿನ ಅಧ್ಯಕ್ಷನಾದ ಬೆಳೆಗಾರ

ಆದರೆ ಅವತ್ತಿನ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಸಂಬಾರ ರಾಣಿ ಏಲಕ್ಕಿ ಇದೀಗ ಕೊಡಗಿನಲ್ಲಿ ಸಂಪೂರ್ಣ ಮರೆಯಾಗಿದೆ. ಅದರ ಜಾಗವನ್ನು ಕಾಫಿ ಆಕ್ರಮಿಸಿಕೊಂಡಿದೆ.ಕೊಡಗಿಗೊಂದು ಸುತ್ತುಹೊಡೆದರೆ ಹಿಂದೆ ಏಲಕ್ಕಿ ತೋಟಗಳಾಗಿದ್ದದ್ದು ಕಾಫಿ ತೋಟವಾಗಿ ಮಾರ್ಪಟ್ಟಿರುವುದು ಕಾಣಸಿಗುತ್ತವೆ. ಕೆಲವೇ ಕೆಲವು ಸ್ಥಳಗಳಲ್ಲಿ ಮಾತ್ರ ಕಂಡು ಬರುತ್ತಿದೆಯಾದರೂ ಶೇಕಡ 10ರಷ್ಟು ಭಾಗವೂ ಏಲಕ್ಕಿ ತೋಟ ಇಲ್ಲದಿರುವುದು ಮಾತ್ರ ದುರಂತ. ಏಲಕ್ಕಿ ಕೊಡಗಿನಿಂದ ಕಣ್ಮರೆಯಾಗುವಲ್ಲಿ ಅದಕ್ಕೆ ಬಾಧಿಸುತ್ತಿದ್ದ ಕಟ್ಟೆರೋಗ ಪ್ರಮುಖ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

Also read  Coffee & Pepper Prices – Fresh Daily Report 25-Sep-2025

ಕೃಷಿ ಸಂಶೋಧನಾ ಕೇಂದ್ರದ ಮಾಹಿತಿ ಪ್ರಕಾರ ಕಟ್ಟೆ ರೋಗ ಎಂಬುದು ಒಂದು ನಂಜು ರೋಗವಾಗಿದ್ದು, ಇದು ಪೆಂಟಲೋನಿಯಾ ನೈಗ್ರೋನೆರ್ವೋಸಾ ಎಂಬ ಒಂದು ಜಾತಿಯ ಗಿಡಹೇನು(ಕೀಟ)ವಿನಿಂದ ಬರುತ್ತದೆ. ಆಂಗ್ಲ ಭಾಷೆಯಲ್ಲಿ ಮೊಸಾಯಿಕ್ ಅಥವಾ ಮಾರ್ಬಲ್ ಎಂದು ಕರೆಯಲಾಗುತ್ತಿದೆ.

ಬೆಳೆಗಾರರು ಗಿಡಗಳನ್ನು ನೆಟ್ಟು ಇನ್ನೇನು ಫಸಲು ಬರುತ್ತೆ ಎನ್ನುವಾಗಲೇ ಈ ರೋಗ ತಗುಲಿ ಗಿಡಗಳು ಬೆಳವಣಿಗೆಯಲ್ಲಿ ಕುಂಠಿತಗೊಂಡು ಗಾತ್ರದಲ್ಲಿ ಚಿಕ್ಕದಾಗಿ, ತೆಳ್ಳನೆಯ ಕೃಶವಾದ ತಾಳುಗಳನ್ನು ಹೊಂದಿ ಚಿಕ್ಕದಾದ ಕೊತ್ತುಗಳನ್ನು (ಪುಷ್ಪ ಗೊಂಚಲು) ಬಿಟ್ಟು ಸದ್ದಿಲ್ಲದೆ ಸತ್ತು ಹೋಗುತ್ತಿದ್ದವು. ಇದು ಒಂದು ರೀತಿಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಾಗಿತ್ತು.

ತೊಂಬತ್ತರ ದಶಕದ ನಂತರ ಕಟ್ಟೆರೋಗದ ತೀವ್ರತೆ ಹೆಚ್ಚಾದ ಕಾರಣ ಅದರ ಬಗ್ಗೆ ಆಸಕ್ತಿಯನ್ನು ಬೆಳೆಗಾರ ಕಳೆದುಕೊಳ್ಳತೊಡಗಿದನು. ಅಲ್ಲದೆ ಅದೇ ವೇಳೆಗೆ ಕಾಫಿ ಮಂಡಳಿಯ ಹಿಡಿತದಲ್ಲಿದ್ದ ಕಾಫಿ ಮುಕ್ತ ಮಾರುಕಟ್ಟೆಗೆ ಬಂದಿತು. ಯಾರು ಬೇಕಾದರು ಕಾಫಿ ಬೆಳೆಯಬಹುದು ಮತ್ತು ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ದೊರೆಯಿತು.ಅದಾಗಲೇ ಏಲಕ್ಕಿಯೊಂದಿಗೆ ಹೆಣಗಾಡಿ ಸುಸ್ತಾಗಿದ್ದ ಬೆಳೆಗಾರ ಏಲಕ್ಕಿ ತೋಟವನ್ನು ಕಾಫಿ ತೋಟವನ್ನಾಗಿ ಮಾರ್ಪಡಿಸಿದನು. ಕಳೆದೊಂದು ದಶಕದಲ್ಲಿ ಏಲಕ್ಕಿ ಬೆಲೆ ಕುಸಿತಗೊಂಡು ಚೇತರಿಸಿಕೊಳ್ಳದ ಕಾರಣ ಸಂಪೂರ್ಣ ಆಸಕ್ತಿ ಕಳೆದು ಕೊಳ್ಳುವಂತಾಗಿದೆ. ಇದೀಗ ಸರಾಸರಿ ಕೆಜಿಯೊಂದಕ್ಕೆ 700 ರೂ. ದರ ದೊರೆಯುತ್ತಿದ್ದರೂ ಏಲಕ್ಕಿಯೇ ಇಲ್ಲದಾಗಿದೆ.ಈಗ ಅಳಿದುಳಿದ ಕಡೆಗಳಲ್ಲಿ ಏಲಕ್ಕಿ ಕಂಡು ಬರುತ್ತಿದೆಯಾದರೂ ಅದನ್ನು ಆಸಕ್ತಿಯಿಂದ ಬೆಳೆಸುವವರ ಸಂಖ್ಯೆ ಕಡಿಮೆಯಾಗಿದೆ. ಮೊದಲಿಗೆ ಹೋಲಿಸಿದರೆ ಶೇ.೧೦ರಷ್ಟು ಭಾಗ ಮಾತ್ರ ಏಲಕ್ಕಿ ಮಾರುಕಟ್ಟೆಗೆ ಬರುತ್ತಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.

Also read  Coffee May Promote Better Team Work

ಕೊಡಗಿನಲ್ಲಿ ಏಲಕ್ಕಿ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದರೆ ಅತ್ತ ಕೇರಳದಲ್ಲಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ನೆಲ್ಯಾಣಿ ಎಂಬ ಹೊಸತಳಿಯನ್ನು ಅಲ್ಲಿ ಬೆಳೆಸಲಾಗುತ್ತಿದೆ. ಈ ತಳಿ ಸಾಂಪ್ರದಾಯಿಕ ತಳಿಗಿಂತ ಹತ್ತು ಪಟ್ಟು ಇಳುವರಿ ನೀಡುತ್ತದೆ.
ಕೊಡಗಿನಲ್ಲಿ ಎಕರೆಗೆ ಹೆಚ್ಚೆಂದರೆ ಐವತ್ತರಿಂದ ನೂರು ಕೆಜಿ ಬೆಳೆದರೆ ಕೇರಳದಲ್ಲಿ ಐನೂರು ಕೆಜಿ ಬೆಳೆಯುತ್ತಿದ್ದಾರಂತೆ. ಹೀಗಾಗಿ ಮಾರುಕಟ್ಟೆಗೆ ಕೇರಳದ ನೆಲ್ಯಾಣಿ ಏಲಕ್ಕಿ ಲಗ್ಗೆಯಿಟ್ಟಿದ್ದು, ಕೊಡಗಿನ ಏಲಕ್ಕಿ ಸದ್ದಿಲ್ಲದೆ ನೇಪಥ್ಯಕ್ಕೆ ಸರಿಯುತ್ತಿದೆ.

Also read  Exporters upset over new Pepper Import Policy

Source:

bp9news.com

Leave a Reply