Featured NewsWeather

ಮೊದಲ ಮಳೆ ಇಳೆಗೆ ತಂದ ಸಂಭ್ರಮ!

ಒಂದು ಮಳೆ, ಒಂದೇ ಒಂದು ಹದ ಮಳೆ ಇಳೆಗೆ ತರುವ ಸಂಭ್ರಮವನ್ನು ಗಮನಿಸಿದರೆ ಸೋಜಿಗವಾಗುತ್ತದೆ. ನಿನ್ನೆ ಸಂಜೆಯ ಮಳೆ ಮಾಡಿದ ಜಾದೂ ಅದು.

ತೋಟದಲ್ಲಿ ಹಾಸಿದ ದರಕಿನ ಮೇಲೆ ಓಡಾಡಿದರೆ ಸರಬರ ಸದ್ದಿನೊಡನೆ ಪುಡಿಯಾಗುತ್ತಿತ್ತು. ಅದೀಗ ನೆನೆದು ಮೆತ್ತನೆ ರತ್ನಗಂಬಳಿ. ಇನ್ನು ಬೆಂಕಿಯ ಭಯ ದೂರ. ಅದರಡಿಯಲ್ಲಿ ಅದೆಷ್ಟು ಕೋಟಿ ಸೂಕ್ಷ್ಮ ಜೀವಿಗಳು ಸಡಗರದ ಚಟುವಟಿಕೆಯಲ್ಲಿ ತೊಡಗಿವೆಯೋ!

ನೆಲಕ್ಕೆ ಬಿದ್ದ ಅಡಿಕೆ ಹಾಳೆ, ಹೊಂಬಾಳೆಗಳೆಲ್ಲ ನೀರಿನ ಪುಟ್ಟ ಬಟ್ಟಲುಗಳು. ಯಾವ್ಯಾವ ಕೀಟ, ಹಕ್ಕಿಗಳ ದಾಹ ತಣಿಸುತ್ತವೆಯೋ ತಿಳಿಯದು. ಸೊಳ್ಳೆಗಳ ವಂಶಾಭಿವೃದ್ಧಿಗೂ ಪ್ರಶಸ್ತ ತಾಣ.

ಬಿಸಿಲಿಗೆ ಬಾಡಿ ಜೋಲುಮುಖ ಮಾಡಿದ ಬಾಳೆ, ಕಾಳುಮೆಣಸಿನ ಎಲೆಗಳಿಗೆ ಮತ್ತೆ ಜೀವಕಳೆ. ತೋಟದ ತುಂಬ ಹೆಸರೇ ಗೊತ್ತಿಲ್ಲದ ನೂರಾರು ಬಗೆಯ ಕಳೆಸಸ್ಯಗಳ ಮೊಳಕೆ. ತೇವಾಂಶದ ಕೊರತೆಯಿಂದ ಕಾಮಾಲೆ ಹಳದಿಗೆ ತಿರುಗಿದ ಅಡಿಕೆ ಗರಿಗಳಿಗೆ ಪುನಃ ಆರೋಗ್ಯಕರ ಹಸಿರು ಹೊಮ್ಮಲು ಹೆಚ್ಚು ಸಮಯ ಬೇಕಿಲ್ಲ. ಅತ್ತ ಬೇಣದಲ್ಲಿ ಸುಟ್ಟು ಕಂದಿದ ಹುಲ್ಲು ಗರಿಕೆಗೆ ಚಿಗುರುವ ಆತುರ.

ಈ ವರ್ಷ ಬೇಸಿಗೆಯ ಮಳೆ ಕರುಣೆ ತೋರಿದೆ. ಒಳ್ಳೆಯ ಮಳೆಗಾಲದ ಭರವಸೆಯ ಬೀಜ ಬಿತ್ತಿದೆ.

Source: Facebook post by Vinayaka Bhat

Also read  Dust Storm Damages Mango Harvest in Uttar Pradesh Farmers Face 40% Losses

Leave a Reply