Featured NewsKrushi

ರೊಬಾಸ್ಟಾ ಕಾಫಿ:ತಿಂಗಳು ಮುಂಚೆಯೆ ಕೊಯ್ಲಿಗೆ,ಕಾರ್ಮಿಕರಿಲ್ಲದೆ ಒಣಗಿ ನೆಲಕಚ್ಚುತ್ತಿದೆ ಕಾಫಿ

ಮಲೆನಾಡು ಭಾಗದಲ್ಲಿ ಕಾರ್ಮಿಕರ ಕೊರತೆಯಿಂದಾಗಿ ರೊಬಾಸ್ಟಾ ಕಾಫಿ ಕೊಯ್ಲು ಮಾಡಲಾಗದೇ ಕಾಫಿ ಹಣ್ಣು ಗಿಡದಲ್ಲೆ ಒಣಗಿ ನೆಲ ಕಾಣುತ್ತಿದೆ.ಸಾಮಾನ್ಯವಾಗಿ ರೋಬಾಸ್ಟಾ ಕಾಫಿ ಕೊಯ್ಲು ಫೆಬ್ರವರಿ ಮೊದಲ ವಾರದಿಂದ ಪ್ರಾರಂಭವಾಗುತ್ತದೆ.ಆದರೆ ಈ ಬಾರಿ ಮಳೆಯ ಕಾಲಾವಧಿಯ ವ್ಯತ್ಯಾಸದಿಂದಾಗಿ ಒಂದು ತಿಂಗಳು ಮುಂಚೆಯೆ ರೊಬಾಸ್ಟಾ ಕಾಫಿ ಕೊಯ್ಲಿಗೆ ಬಂದಿದೆ.ಜನವರಿ ತಿಂಗಳು ಭತ್ತದ ಕೊಯ್ಲಿನ ಜತೆಗೆ ಅರೇಬಿಕಾ ಕಾಫಿಯೂ ಕೊಯ್ಲಿಗೆ ಬರುವ ಸಮಯ. ರೋಬಾಸ್ಟಾ ಕಾಫಿಯೂ ಇದೇ ತಿಂಗಳಲ್ಲೆ ಕೊಯ್ಲಿಗೆ ಬಂದಿರುವುದರಿಂದ ಕಾರ್ಮಿಕರ ಕೊರತೆ ಉಂಟಾಗಿ ಸಕಾಲಕ್ಕೆ ಕಾಫಿ ಕೊಯ್ಲು ಮಾಡಲು ಸಾಧ್ಯವಾಗದೇ ರೊಬಾಸ್ಟಾ ಕಾಫಿ ಗಿಡದಲ್ಲೆ ಒಣಗಿ ನೆಲ ಕಾಣುವಂತಾಗಿದೆ. 

Also read  Thunderstorm, Heavy Rain Across India In Next Few Days:IMD

ಕಳೆದ ಕೆಲ ವರ್ಷಗಳಿಂದ ಅಸ್ಸಾಂ ಕಾರ್ಮಿಕರು ಮಲೆನಾಡು ಭಾಗದ ಕಾಫಿತೋಟಗಳಿಗೆ ಬರುತ್ತಿದ್ದರಿಂದ ಕಾರ್ಮಿಕರ ಸಮಸ್ಯೆ ಅಷ್ಟಾಗಿ ಬಾಧಿಸುತ್ತಿರಲಿಲ್ಲ. ಆದರೆ ಇತ್ತೀಚೀನ ದಿನಗಳಲ್ಲಿ ಅಸ್ಸಾಂ ಕಾರ್ಮಿಕರು ಮಲೆನಾಡಿನ ತೋಟಗಳಿಗೆ ಬರುವುದು ಕಡಿಮೆಯಾಗಿದೆ. ಬಯಲುಸೀಮೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು ಕೃಷಿಚಟುವಟಿಕೆ ಗರಿಗೆದರಿರುವುದರಿಂದ ಬಯಲುಸೀಮೆಯಿಂದ ಕಾರ್ಮಿಕರು ಮಲೆನಾಡಿಗೆ ಬರುವುದು ಕಡಿಮೆಯಾಗಿದೆ.   

ಪರಿಸ್ಥಿತಿಯ ಲಾಭ :ಗದ್ದೆ,ಅರೇಬಿಕಾ ಮತ್ತು ರೋಬಾಸ್ಟಾ ಕಾಫಿಯ ಕೊಯ್ಲು ಏಕಕಾಲದಲ್ಲಿ ಬಂದಿರುವುದರಿಂದ ಕಾರ್ಮಿಕರಿಗೆ ಬೇಡಿಕೆ ಬಂದಿದ್ದು ಕಾರ್ಮಿಕರು ಈ ಪರಿಸ್ಥಿಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಕಾಫಿ ಕೊಯ್ಲಿಗೆ 250 ರಿಂದ 275 ಕೂಲಿ ನೀಡಲಾಗುತ್ತಿತ್ತು. ಆದರೆ ಕಾರ್ಮಿಕರ ಕೊರತೆಯಿಂದಾಗಿ 300 ರಿಂದ 400 ರೂ ಕೂಲಿ ನೀಡಿ ಕಾಫಿ ಕೊಯ್ಲು ಮಾಡುವ ಅನಿವಾರ್ಯತೆ ಕಾಫಿ ಬೆಳೆಗಾರರದ್ದಾಗಿದೆ.   

Also read  Coffee Prices (Karnataka) on 09-11-2023

ಅತಿವೃಷ್ಟಿ, ಅನಾವೃಷ್ಟಿ, ಕಡಿಮೆ ಬೆಲೆ, ಕಡಿಮೆ ಇಳುವರಿ, ಕಾಡುಪ್ರಾಣಿಗಳ ಹಾವಳಿ, ಕೊಳೆರೋಗ, ಬೆರಿಬೋರರ್‌ ಮುಂತಾದ ಸಮಸ್ಯೆಗಳ ನಡುವೆ ಕಾಫಿ ಬೆಳೆಗಾರ ನಲುಗಿ ಹೋಗಿದ್ದು ಕಾರ್ಮಿಕರನ್ನು ಹೊಂದಿಸಿಕೊಂಡು ಹೆಚ್ಚು ಕೂಲಿ ನೀಡಿ ಕೊಯ್ಲು ಮಾಡಬೇಕಾಗಿದ್ದು, ಸರಕಾರ ಬೆಳೆಗಾರರ ನೆರವಿಗೆ ಬಂದು ಬೆಂಬಲ ಬೆಲೆ ಘೋಷಿಸಿ ಕಾಫಿಬೆಳೆಗಾರರ ನೆರವಿಗೆ ಬರಬೇಕಿದೆ.

ಮಳೆಗಾಲದಲ್ಲಿ ಅತಿಯಾದ ಮಳೆಯಾಗಿದೆಯೆ ಹೊರತು ನೆಲದಲ್ಲಿ ನೀರಿನ ಒರತೆ ಉಕ್ಕಿಲ್ಲ. ಇದರಿಂದಾಗಿ ಭೂಮಿ ತೇವಾಂಶ ಕಳೆದುಕೊಂಡಿದೆ. ಆದರಿಂದ ರೋಬಾಸ್ಟಾ ಕಾಪಿ ಒಂದು ತಿಂಗಳು ಮೊದಲೇ ಕೊಯ್ಲಿಗೆ ಬಂದಿದೆ. ಇದರಿಂದಾಗಿ ಕಾಫಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಕುಡಿಯುವ ನೀರಿಗೂ ಈ ಬಾರಿ ಆಹಾಕಾರ ಪಡುವ ಪರಿಸ್ಥಿತಿ ನಿರ್ಮಾಣವಾಗಬಹುದಾಗಿದೆ. ಈ ಬಾರಿ ಕಾಳುಮೆಣಸಿನ ಕುಯ್ಲು ಬೇಗ ಬರುವುದರಿಂದ ಕಾಳುಮೆಣಸಿನ ತೂಕವೂ ಕಡಿಮೆಯಾಗುವುದರಿಂದ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.    
-ಸತೀಶ್‌, ಮಾಲೀಕರು ಕಂಬಳಕಾಡು ಎಸ್ಟೇಟ್‌ ಕೊಟ್ಟಿಗೆಹಾರ

Leave a Reply