Featured NewsWeather

ಕೇರಳಕ್ಕೆ ನೈಋತ್ಯ ಮುಂಗಾರು ಆಗಮನ ವಿಳಂಬ ಸಾಧ್ಯತೆ

ದೇಶದ ಕೃಷಿ ಕ್ಷೇತ್ರದ ಜೀವನಾಡಿಯಾಗಿರುವ, ಆರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರುವ ಮುಂಗಾರು ಮಾರುತಗಳು ಆರು ದಿನಗಳ ಸ್ತಬ್ಧತೆ ಬಳಿಕ ಇದೀಗ ಚಲನಶೀಲವಾಗಿದ್ದು, ದಕ್ಷಿಣ ಶ್ರೀಲಂಕಾವನ್ನು ಪ್ರವೇಶಿಸಿವೆ. ಇನ್ನು ಕೇರಳಕ್ಕೆ ಆಗಮಿಸುವುದು ಮಾತ್ರವೇ ಬಾಕಿ ಇದೆ. ಈ ಹಿಂದೆ ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆ ಅನ್ವಯ ಜೂ.27ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶವಾಗಬೇಕಿತ್ತು. ಆದರೆ ಈಗಿನ ಹವಾಮಾನದ ಅನ್ವಯ ಕೇರಳಕ್ಕೆ ಮುಂಗಾರು ಪ್ರವೇಶದಲ್ಲಿ ಕೆಲ ದಿನಗಳ ವಿಳಂಬವಾಗುವ ಸಾಧ್ಯತೆ ಇದೆ.

ಮುಂಗಾರು ಮಾರುತ ಭಾರತಕ್ಕೆ ಪಸರಿಸುವ ಮುನ್ನ ತನ್ನ ಬಲವನ್ನು ಕಳೆದುಕೊಳ್ಳಲಿದ್ದು, ಕೇರಳ ಪ್ರವೇಶಿಸಿದ ಬಳಿಕ ಮುಂಗಾರು ಮಾರುತದ ಪ್ರಗತಿ ಕುಂಠಿತವಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ.

ಭಾರತದ ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ, ಮೇ 27ರ ಸುಮಾರಿಗೆ ಮುಂಗಾರು ಮಾರುತ ಕೇರಳವನ್ನು ಪ್ರವೇಶಿಸಲಿದೆ. ಅಂದಾಜಿಸುವಿಕೆಯ ಲೋಪವನ್ನು ಪರಿಗಣಿಸಿದರೆ ನಾಲ್ಕು ದಿನ ಹೆಚ್ಚು ಅಥವಾ ಕಡಿಮೆಯಾಗುವ ಸಾಧ್ಯತೆ ಇದೆ. ಈ ವರ್ಷ ಅಂದಾಜಿಸಿದ ದಿನಾಂಕಕ್ಕೆ ಕೇರಳವನ್ನು ಮುಂಗಾರು ಪ್ರವೇಶಿಸಿದರೂ, ಆ ಬಳಿಕ ಮುಂಗಾರು ಪ್ರಗತಿ ಕೆಲ ದಿನಗಳ ವರೆಗೆ ತೀರಾ ನಿಧಾನವಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇರಳ ಪ್ರವೇಶಿಸಿದ ಬಳಿಕ ಮುಂಗಾರು ಮಾರುತ ವೇಗ ಕಳೆದುಕೊಳ್ಳಲಿದೆ ಎಂದು ಐಎಂಡಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

“ಹವಾಮಾನ ಮಾದರಿಯಿಂದ ತಿಳಿದುಬರುವಂತೆ, ಕೇರಳ ಪ್ರವೇಶಿಸಿದ ಬಳಿಕ ಮುಂಗಾರು ಪ್ರವಾಹ ಬಂಗಾಳ ಕೊಲ್ಲಿಯ ನೈರುತ್ಯಭಾಗವನ್ನು ತಲುಪಲು ಕೆಲ ದಿನಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ. ಸಾಮಾನ್ಯವಾಗಿ ಕೇರಳ ಹಾಗೂ ನೈರುತ್ಯ ಬಂಗಾಳಕೊಲ್ಲಿಯನ್ನು ಏಕಕಾಲಕ್ಕೆ ಮುಂಗಾರು ಪ್ರವೇಶಿಸುತ್ತದೆ. ಇದರಿಂದ ಮುಂಗಾರು ಪ್ರಗತಿಗೆ ಅಡ್ಡಿಯಾಗುವ ಸಾಧ್ಯತೆ ಇದೆ” ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂಗಾರು ಸಾಮಾನ್ಯವಾಗಿ ಪರ್ಯಾಯವಾಗಿ ಪ್ರಬಲ ಹಾಗೂ ದುರ್ಬಲ ನಾಡಿಮಿಡಿತವನ್ನು ಹೊಂದಿರುತ್ತದೆ. ಪ್ರಸ್ತುತ ನಾವು ಪ್ರಬಲ ಮಿಡಿತವನ್ನು ಕಾಣುತ್ತಿದ್ದು, ದುರ್ಬಲ ಮಿಡಿತ ಮುಂದೆ ಅನುಭವಕ್ಕೆ ಬರಲಿದೆ. ಮುಂಗಾರು ಪ್ರಗತಿ ವೇಗ ಪಡೆಯಲು ಕೆಲ ದಿನಗಳು ಬೇಕಾಗಬಹುದು ಎಂದು ಅಂದಾಜಿಸಿದ್ದಾರೆ.

ಮುಂಗಾರು ಮಾರುತದ ಅರಬ್ಬಿ ಸಮುದ್ರ ಶಾಖೆ ಮೇ 30-31ರ ವೇಳೆಗೆ ಪ್ರಬಲವಾಗುವ ಸಾಧ್ಯತೆಯಿದ್ದು, ಮುಂದಿನ ಕೆಲ ದಿನಗಳಲ್ಲಿ ಸ್ಪಷ್ಟಚಿತ್ರಣ ಸಿಗಲಿದೆ ಎಂದು ಐಎಂಡಿ ಹವಾಮಾನ ಮುನ್ಸೂಚನೆ ವಿಭಾಗದ ಮುಖ್ಯಸ್ಥ ಅನುಪಮ್ ಕಶ್ಯಪಿ ವಿವರಿಸಿದ್ದಾರೆ.

ದಕ್ಷಿಣ ಅರಬ್ಬೀ ಸಮುದ್ರ, ಮಾಲ್ಡೀವ್‌್ಸ, ಲಕ್ಷದ್ವೀಪದ ಆಸುಪಾಸಿನಲ್ಲಿ ಮುಂದಿನ 48 ತಾಸುಗಳಲ್ಲಿ ಮುಂಗಾರು ತಲುಪಲು ಪೂರಕವಾದ ವಾತಾವರಣವಿದೆ. ಇದರ ಫಲವಾಗಿ ಮುಂದಿನ ಎರಡು ದಿನಗಳಲ್ಲಿ ಕೇರಳ ಹಾಗೂ ಲಕ್ಷದ್ವೀಪದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಇದರ ಜತೆಗೆ ಕೇರಳಕ್ಕೆ ಮುಂಗಾರು ಪ್ರವೇಶದ ಬಗ್ಗೆ ನಿರಂತರ ನಿಗಾ ಇಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆಸಾನಿ ಚಂಡಮಾರುತದ ಪ್ರಭಾವದಿಂದಾಗಿ ಈ ಬಾರಿ ವಾಡಿಕೆಗಿಂತ ಮೊದಲೇ ಅಂದರೆ ಮೇ 16ಕ್ಕೆ ಅಂಡಮಾನ್‌ ಅನ್ನು ತಲುಪಿದ್ದ ಮುಂಗಾರು, ಮೇ 27ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಇದರಲ್ಲಿ 4 ದಿನಗಳ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎಂದೂ ತಿಳಿಸಿತ್ತು.

Also read  ಕೊಡಗಿನಲ್ಲಿ ಪ್ರವಾಹ: ಗುಡ್ಡ ಕುಸಿದು ಲಾರಿ ಕ್ಲೀನರ್‌ ಸಾವು