ಹೈಡ್ರೋಫೊನಿಕ್‌ನಿಂದ ಮಣ್ಣಿಲ್ಲದೆ ಮೇವು ಬೆಳೆದ ರೈತನಿಗೆ ಸರ್ಕಾರದ ಮೆಚ್ಚುಗೆ
ಕಡಿಮೆ ವೆಚ್ಚದಲ್ಲಿ ಹೈಡ್ರೋಪೊನಿಕ್ ಮೂಲಕ ಹೆಚ್ಚು ಪೌಷ್ಟಿಕಾಂಶ ಮೇವು ಬೆಳೆಯುವುದು, ಹೈನುಗಾರಿಕೆ ಕುರಿತಾಗಿ ಕುಸುಗಲ್ಲ ಬಳಿ ಹುಬ್ಬಳ್ಳಿ ರೈತರೊಬ್ಬರು ಕೈಗೊಂಡ ಶ್ರಮಕ್ಕೆ ದೇಶದ 19 ರಾಜ್ಯಗಳ ನಬಾರ್ಡ್ ಅಧಿಕಾರಿಗಳ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. ರೈತರ ಆದಾಯ ದುಪ್ಪಟ್ಟು ಯತ್ನಗಳಲ್ಲಿ ಇದನ್ನು ಮಾದರಿಯಾಗಿ ಅಳವಡಿಕೆ ನಿಟ್ಟಿನಲ್ಲಿ ಮಹತ್ವದ ಮಾಹಿತಿ ಪಡೆದುಕೊಂಡಿದ್ದಾರೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಬಿ.ಎಫ್. ವಿಜಾಪುರ ಅವರ ಪುತ್ರ ಪ್ರಕಾಶ ವಿಜಾಪುರ ಪದವೀಧರರಾದರೂ ಕೃಷಿ ಕಡೆಗೆ ಮುಖ ಮಾಡಿದ್ದು, ಹೈನುಗಾರಿಕೆಗೆ ಒತ್ತು ನೀಡಿದ್ದಾರೆ. ಜಾನುವಾರುಗಳಿಗೆ ಪೌಷ್ಟಿಕ ಆಹಾರ, ಮೇವು ಒದಗಿಸಲು ಮಣ್ಣಿಲ್ಲದೆ ನೀರಿನ ಆಸರೆಯಲ್ಲೇ ಪೌಷ್ಟಿಕ ಮೇವು ಬೆಳೆಸುವ ಹೈಡ್ರೋಪೋನಿಕ್ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ.
ಹೈಡ್ರೋಫೋನಿಕ್ ಮೇವು ಸೇವನೆಯಿಂದ ಹಸುಗಳ ಹಾಲು ನೀಡಿಕೆ ಹಾಗೂ ಹಾಲಿನ ಕೊಬ್ಬಿನಂಶವೂ ಹೆಚ್ಚಳವಾಗಿದೆ.
2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಆಗಬೇಕು ಎಂಬುದು ಪ್ರಧಾನಿ ಮೋದಿಯವರ ಆಶಯ. ಅದರ ಅಂಗವಾಗಿಯೇ ಇತ್ತೀಚೆಗೆ 19 ರಾಜ್ಯಗಳ ನಬಾರ್ಡ್ ಅಧಿಕಾರಿಗಳ ತಂಡವೊಂದು ಕುಸುಗಲ್ಲಗೆ ಭೇಟಿ ನೀಡಿ ಹೈಡ್ರೋಫೊನಿಕ್‌ನಿಂದ ಪೌಷ್ಟಿಕ ಮೇವು ಹಾಗೂ ಹೈನುಗಾರಿಕೆ ಕುರಿತಾಗಿ ಮಾಹಿತಿ ಪಡೆದಿದ್ದಾರೆ.
ವಿವಿಧ ಜಿಲ್ಲೆಗಳ ರೈತರ ಭೇಟಿ:
ಪ್ರಕಾಶ ವಿಜಾಪುರ ಅವರ ಡೈರಿ ಹಾಗೂ ಹೊಲ ರೈತರಿಗೆ ಪ್ರಯೋಗ ಶಾಲೆಯಂತಾಗಿದೆ. ವಿವಿಧ ಜಿಲ್ಲೆಗಳ ರೈತರು ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದಿಂದ ಸುಮಾರು 40 ರೈತರು, ದಾವಣಗೆರೆ ಜಿಲ್ಲೆ ಕೃಷಿ ಇಲಾಖೆಯಿಂದ 45 ರೈತರು ಹಾಗೂ ಹಾವೇರಿ ಜಿಲ್ಲೆ ಕೃಷಿ ಇಲಾಖೆಯಿಂದ 45 ಜನ ರೈತ ಮಹಿಳೆಯರನ್ನು ಕರೆತಂದು ವೀಕ್ಷಣೆ ಮಾಡಿಸಲಾಗಿದೆ.
ಹೈಡ್ರೋಫೊನಿಕ್ ಅಳವಡಿಕೆ, ನಿರ್ವಹಣೆ, ಮೇವು ಬೆಳೆಯುವ ವಿಧಾನ, ಈ ಮೇವು ಸೇವನೆಯಿಂದ ಹಸು ಹಾಗೂ ಹೈನುಗಾರಿಕೆಗೆ ಆಗಿರುವ ಪ್ರಯೋಜನ, ಲಾಭ ಕುರಿತಾಗಿ ರೈತ ಪ್ರಕಾಶ ವಿಜಾಪುರ ಅವರೊಂದಿಗೆ ಸಂವಾದ ನಡೆಸಿದ್ದಾರೆ.
Read more here : ಉದಯವಾಣಿ