CoffeeFeatured News

50 ವರ್ಷಗಳ ಬಳಿಕ ಕಾಫಿನಾಡಿಗೆ ಬರಗಾಲ: ಹೆಚ್ಚಿದ ಬೋರರ್ ಹಾವಳಿ

ಕಾಫಿ ಬೆಳೆಯುವ ಮಲೆನಾಡು ಜಿಲ್ಲೆಗಳಾದ ಕೊಡಗು,ಚಿಕ್ಕಮಗಳೂರು,ಹಾಸನ ಜಿಲ್ಲೆಗಳಲ್ಲಿ ವಾಡಿಕೆಯಂತೆ ಮಳೆ ಬಾರದೇ ಕಾಫಿ,ಕಾಳುಮೆಣಸು,ಅಡಕೆ ಮತ್ತಿತರೆ ಬೆಳೆಗಳು ಶೇ. 40 ರಷ್ಟು ನೆಲಕಚ್ಚುವ ಸ್ಥಿತಿಗೆ ತಲುಪಿವೆ.ಈಗಾಗಲೇ ಕಾಫಿ ಫಸಲು ಬಂದಿದ್ದು, ಕಾಫಿ ಬೆಳೆ ಜೊತೆ ಕಾಫಿ ತೋಟವನ್ನು ಉಳಿಸಿಕೊಳ್ಳಲು ಬೆಳೆಗಾರರು ಜೆಟ್​ಗಳ ಮೂಲಕ ಸ್ಪಿಂಕ್ಲರ್ ಮಾಡುತ್ತಿದ್ದಾರೆ.

ಕಳೆದ 50 ವರ್ಷದಲ್ಲಿ ಬೇರಾವ ವರ್ಷವೂ ಇಷ್ಟೊಂದು ಪ್ರಮಾಣದಲ್ಲಿ ಮಳೆ ಕಡಿಮೆಯಾಗಿರಲಿಲ್ಲ.ಈ ವರ್ಷ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಕೆಲ ಭಾಗಗಳಲ್ಲಿ ಮಾತ್ರ 150 ಮಿ.ಮೀ. ಮಳೆಯಾಗಿದ್ದು ಬಿಟ್ಟರೆ ಕೆಲ ಭಾಗಗಳಲ್ಲಿ ಮಳೆಯೇ ಸುರಿದಿಲ್ಲ. ಇದರಿಂದ ಕಾಫಿ ಮತ್ತು ಕಾಳು ಮೆಣಸು ಬೆಳೆಗೆ ಕಂಟಕವಾಗಿದೆ.

ಮಳೆ ಅಭಾವದಿಂದಾಗಿ ಕಾಫಿ ಗಿಡದಲ್ಲಿ ಕಪ್ಪು ಕೊಳೆ (ಬ್ಲಾಕ್‌ ರಾಟ್‌) ಆಗಿದ್ದು, ಗಿಡದ ಕೊನೆಗಳು ನಾಶವಾಗಿ ನೆಲಕ್ಕುರುಳಲಾರಂಭಿಸಿದೆ. ಅರೇಬಿಕಾ ಕಾಫಿ ಗಿಡಗಳಲ್ಲಿ ಕಾಂಡ ಕೊರಕ, ಬೋರರ್‌ ಯತೇಚ್ಛವಾಗಿ ಆವರಿಸಿಕೊಳ್ಳಲಾರಂಭಿಸಿದೆ.

ಮುಂಗಾರು ಮತ್ತು ಹಿಂಗಾರು ಮಳೆ ದುರ್ಬಲಗೊಂಡಿದ್ದರಿಂದ ಕಾಫಿ, ಕಾಳುಮೆಣಸು, ಅಡಕೆ, ಏಲಕ್ಕಿ ಮತ್ತು ಭತ್ತದ ಬೆಳೆಗಳ ಮೇಲೆ ಬಾರಿ ಪರಿಣಾಮ ಬೀರಿದೆ. ಕಾಫಿ ಬೆಳೆ ನಾಶದ ಬಗ್ಗೆ ಕಾಫಿ ಮಂಡಳಿ, ಕಂದಾಯ, ತೋಟಗಾರಿಕಾ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ, ವರದಿ ತಯಾರಿಸಿ ನಷ್ಟವಾದ ಬೆಳಗೆ ಸೂಕ್ತ ಪರಿಹಾರ ಒದಗಿಸಬೇಕು. ಕಾಫಿ ಬೆಳೆಗೂ ವಿಮೆ ನೀಡಬೇಕು.- ಬಿ.ಎಸ್‌.ಜಯರಾಂ, ಕೆಜಿಎಫ್‌ ಮಾಜಿ ಅಧ್ಯಕ್ಷರು.

ಜಿಲ್ಲಾದ್ಯಂತ ಜುಲೈ 15 ರಿಂದ ಇಲ್ಲಿಯವರೆಗೂ ಮಳೆ ಇಲ್ಲ. ಇದರಿಂದ ಕಾಫಿ ಹಣ್ಣಾಗಿ, ಬಿಸಿಲಿಗೆ ಕಾಫಿ ಕರಗಿ ಕೊಳೆತು ಹೋಗುತ್ತಿದೆ. ಕಾಫಿ ಗಿಡಗಳನ್ನು ಕಾಂಡಕೊರಕ ಆವರಿಸಿದೆ. ಭತ್ತದ ಗದ್ದೆಯಲ್ಲಿನೀರಿಲ್ಲದೇ ಸಸಿ ಮಡಿ ಕೀಳಲು ಸಾಧ್ಯವಾಗುತ್ತಿಲ್ಲ. ಸರಕಾರ ಮೂಡಿಗೆರೆ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿ, ಬೆಳೆಗಾರರ ನೆರವಿಗೆ ಬರಬೇಕು.-ಬಿ.ಆರ್‌.ಬಾಲಕೃಷ್ಣ, ಅಧ್ಯಕ್ಷರು, ಬೆಳೆಗಾರರ ಸಂಘ ಮೂಡಿಗೆರೆ

Also read  CALENDAR OF COFFEE ESTATE OPERATIONS-APRIL