ವೈಜ್ಞಾನಿಕ ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಯಶಸ್ಸು ಕಂಡ ರೈತ
ಶ್ರೀಯುತ ಮದನ್‌ರವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ತನಿಕಲ್ ಗ್ರಾಮದವರು. ಇವರ 5.5 ಎಕರೆ ಜಮೀನಿನಲ್ಲಿ ವೈಜ್ಞಾನಿಕವಾಗಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಇವರು ಯುವ ಪ್ರಗತಿಪರ ರೈತರಾಗಿದ್ದು, ಬಿ.ಕಾಂ. ವಿದ್ಯಾಭ್ಯಾಸ ಮುಗಿಸಿದ ನoತರ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ತಮ್ಮ ಹುಟ್ಟೂರಿಗೆ ಬ೦ದು ಕೃಷಿಯಲ್ಲಿ ತೊಡಗಿಸಿ ಕೊಳ್ಳುವುದರ ಜೊತೆಗೆ ಹಲವಾರು ಯುವಕರಿಗೆ ದಾರಿದೀಪವಾಗಿದ್ದಾರೆ.
ಮದನ್ ಅವರು ಅನುಸರಿಸಿದ ಸಮಗ್ರ ಕೃಷಿ ಪದ್ಧತಿ
ಇವರು ತಮ್ಮ 2.5 ಎಕರೆ ಜಮೀನಿನ ಅಡಿಕೆಯಲ್ಲಿ ಅಂತರ ಬೆಳೆಯಾಗಿ ಕಾಫಿ, ಕೋಕೋ, ಏಲಕ್ಕಿ, ಕಾಳುಮೆಣಸು, ವೆನಿಲ್ಲಾ, ಬಾಳೆ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು 1 ಎಕರೆ ಜಮೀನಿನಲ್ಲಿ ಶುಂಠಿಯನ್ನು,1 ಎಕರೆ ಜಮೀನಿನಲ್ಲಿ ತೆ೦ಗು, ಗೇರು, ಮಾವು, ಸಿಲ್ಜರ್ ಮತ್ತು ತೇಗವನ್ನು ಹಾಗೂ 1 ಎಕರೆಯಲ್ಲಿ ತರಕಾರಿ ಬೆಳೆಗಳಾದ ಕುಂಬಳಕಾಯಿ, ಸಾಂಬಾರ್ ಸೌತೆ, ಬೆಂಡೆಕಾಯಿ, ಹಾಗೂ ಕೊತ್ತಂಬರಿ ಸೊಪ್ಪನ್ನು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬೆಳೆದು ಅಧಿಕ ಲಾಭ ಪಡೆದು ಸುಸ್ಥಿರ ಜೀವನ ಸಾಗಿಸುತ್ತಿದ್ದಾರೆ.
ಮೀನು ಸಾಕಾಣಿಕೆ
ಇವರು ತನಿಕಲ್ ಗ್ರಾಮದ ಕೆರೆಯುನನ್ನು ಗ್ರಾಮ ಪಂಚಾಯಿತಿವತಿಯಿಂದ ಗುತ್ತಿಗೆ ಪಡೆದು ರೋಹು, ಗೌರಿ ಮತ್ತು ಕಾಟ್ಲಾ ಮೀನುಗಳನ್ನು ಸಾಕಿ ಲಾಭವನ್ನು ಪಡೆಯುತ್ತಿದ್ದಾರೆ. ಗ್ರಾಮ ಪಂಚಾಯಿತಿಗೆ ವರ್ಷಕ್ಕೆ ಒಂದು ಸಾವಿರದ ಐದುನೂರು ರೂ. ಬಾಡಿಗೆಕಟ್ಟುತ್ತಾರೆ. ಸುಮಾರು 7 ರಿಂದ 8 ಕ್ವಿಂಟಾಲ್‌ನಷ್ಟು ಮೀನು ಉತ್ಪಾದನೆ ಮಾಡಿ 60 ಸಾವಿರ ಆದಾಯ ಪಡೆಯುತ್ತಿದ್ದಾರೆ.
ಹೈನುಗಾರಿಕೆ
ಹೈನುಗಾರಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, 2 ಜರ್ಸಿ ಹಸುಗಳನ್ನು ಸಾಕಿರುತ್ತಾರೆ. ಇದರ ಸಗಣಿಯನ್ನು ಗೋಬರ್ ಗ್ಯಾಸ್ ಮತ್ತು ಬಯೋ ಡೈಜಿಸ್ಟರ್‌ಗೆ ಉಪಯೋಗಿಸುವುದಲ್ಲದೇ ಇದರಿಂದ ಎರೆಹುಳು ಗೊಬ್ಬರವನ್ನು ತಯಾರಿಸಿ ಜಮೀನಿಗೆ ಬಳಸುತ್ತಿದ್ದಾರೆ.
ಕೋಳಿ ಸಾಕಾಣಿಕೆ
ಇವರು ಕೋಳಿ ಸಾಕಾಣಿಕೆಯ ಬಗ್ಗೆ ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗದಿಂದ ತರಬೇತಿಯನ್ನು ಪಡೆದು, ನಾಟಿ ಕೋಳಿ ಮತ್ತು ಕಡಕ್‌ನಾಥ್ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ.
ಸ್ಥಳೀಯ ತಾಂತ್ರಿಕ ಜ್ಞಾನ ಅಳವಡಿಕೆ
ತಾವೇ ತಯಾರು ಮಾಡಿದ ಸಾವಯವ ದ್ರವರೂಪದ ಗೊಬ್ಬರವಾದ ಜೀವಾಮೃತ, ಬೆಳ್ಳುಳ್ಳಿ ಕಷಾಯ, ಶುಂಠಿ ಕಷಾಯ, ಮೆಣಸಿನಕಾಯಿ ಕಷಾಯಗಳನ್ನು ತರಕಾರಿ ಮತ್ತು ಸೊಪ್ಪಿನ ಬೆಳೆಗಳಲ್ಲಿ ಕಂಡುಬರುವ ಕೀಟ ಮತ್ತು ರೋಗಗಳ ನಿರ್ವಣಣೆಗೆ ಬಳಸುತ್ತಿದ್ದಾರೆ.
ಜಮೀನಿಗೆ ಬೇವಿನ ಹಿಂಡಿ ಹಾಗೂ ಹೊಂಗೆ ಹಿಂಡಿ, ಶಿಲೀಂಧ್ರನಾಶಕಗಳಾದ ಟ್ರೈಕೋಡರ್ಮಾ ಮತ್ತು ಸುಡೊಮೊನಾಸ್ ಮತ್ತು ಜೈವಿಕ ಗೊಬ್ಬರಗಳಾದ ಅಜೋಸ್ಟೈರಿಲಂ ಹಾಗೂ ಅಜಟೋಬ್ಯಾಕ್ಟರ್ ಬಳಸುತ್ತಿದ್ದಾರೆ.
ನರ್ಸರಿ ನಿರ್ವಹಣೆ
ಇವರು ವೈಜ್ಞಾನಿಕವಾಗಿ ರೈತರ ಬೇಡಿಕೆಯ ಅನುಸಾರವಾಗಿ ಅಡಿಕೆ ಸಸಿಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ.
ಮಾರುಕಟ್ಟೆ: ಇವರು ಮಾರುಕಟ್ಟೆಯಲ್ಲಿ ನಿಪುಣರಾಗಿದ್ದು, ವಿಶೇಷವಾಗಿ ತರಕಾರಿ ಬೆಳೆಗಳಾದ ಕುಂಬಳಕಾಯಿ ಮತ್ತು ಸಾಂಬಾರು ಸೌತೆಯನ್ನು ಮಾರುಕಟ್ಟೆಗೆ ಅನುಗುಣವಾಗಿ ಬೆಳೆದು ಲಾಭವನ್ನು ಪಡೆಯುತ್ತಿದ್ದಾರೆ. ಅಡಿಕೆ. ಮತ್ತು ಕೋಕೋವನ್ನು ಸಂಸ್ಕರಣೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಕೃಷಿಯ ಉಪ ಕಸುಬುಗಳಾದ ಮೀನು ಸಾಕಾಣಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಹಾಗೂ ಕುರಿ ಸಾಕಾಣಿಕೆಯಲ್ಲಿ ಹೆಚ್ಚಿನ ಮಾರುಕಟ್ಟೆ ಜ್ಞಾನವನ್ನು ಹೊಂದಿದ್ದಾರೆ. ಇವರು ವೈಜ್ಞಾನಿಕವಾಗಿ ಕೃಷಿಯ ಜೊತೆಗೆ ಕೃಷಿಯ ಉಪಕಸುಬುಗಳನ್ನು ಮಾಡುವುದರಿಂದ ವಾರ್ಷಿಕ 11 ಲಕ್ಷ ಆದಾಯವನ್ನು ಪಡೆಯುತ್ತಿದ್ದಾರೆ.
ತರಬೇತಿ
ಇವರು ತರಬೇತಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ವಿಶೇಷವಾಗಿ ಕೃಷಿ ವಿಜ್ಞಾನ ಕೇ೦ದ್ರ, ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಮತ್ತು ಅಂತರ ರಾಜ್ಯಗಳಿಗೆ ಭೇಟಿ ನೀಡಿ ತೋಟಗಾರಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ ಮತ್ತು ಹೈನುಗಾರಿಕೆಗೆ ಸಂಬಂಧಪಟ್ಟ ತರಬೇತಿಯನ್ನು ಪಡೆದು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿದ್ದಾರೆ.
ಸಂದ ಪುರಸ್ಕಾರಗಳು
ಶ್ರೀಯುತರಿಗೆ ಕೃಷಿ ವಿಶ್ವವಿದ್ಯಾನಿಲಯ, ಬೆ೦ಗಳೂರು ವತಿಯಿಂದ 2011-12ನೇ ಸಾಲಿನಲ್ಲಿ “ತಾಲ್ಲೂಕು ಮಟ್ಟದ ಶ್ರೇಷ್ಠ ಯುವ ರೈತ‘ ಪ್ರಶಸ್ತಿ, ರೋಟರಿ ಸಂಸ್ಥೆ ತೀರ್ಥಹಳ್ಳಿ ವತಿಯಿಂದ “ಉತ್ತಮ ಕೃಷಿಕ ಪ್ರಶಸ್ತಿ, ಹೈನುಗಾರಿಕೆಯಲ್ಲಿ “ಯಶಸ್ಸಿ ರೈತ‘ ಪ್ರಶಸ್ತಿ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ “ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ‘ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಸಮಗ್ರ ಕೃಷಿ ಪದ್ಧತಿಯ ಘಟಕಗಳು ಹಾಗೂ ನಿವ್ಹಳ ಆದಾಯ
ಕ್ರಸಂ. |
ಬೆಳೆಗಳು |
ವಿಸ್ತೀರ್ಣ |
ನಿವ್ವಳ ಆದಾಯ (ರೂ.) |
1. |
ಅಡಿಕೆ | 2.5 ಎಕರೆ | 475000.00 |
2. |
ಅಡಿಕೆಯಲ್ಲಿ ಅಂತರ ಬೆಳೆಯಾಗಿ ಬಾಳೆ |
35000.00 | |
3 |
ಅಂತರ ಬೆಳೆಗಳಾಗಿ ಜಾಯಿಕಾಯಿ,ಕೋಕೋ,ಕಾಳುಮೆಣಸು, ಏಲಕ್ಕಿ |
115000.00 | |
4 |
ತೆಂಗು |
1 ಎಕರೆ | 68000.00 |
5 |
ಶುಂಠಿ |
1 ಎಕರೆ | 175000.00 |
6 |
ಹೈನುಗಾರಿಕೆ |
2 ಜರ್ಸಿ ಹಸು | 25000.00 |
7 |
ತರಕಾರಿ ಬೆಳೆಗಳು |
1 ಎಕರೆ | 110000.00 |
8 |
ಕೋಳಿ ಸಾಕಾಣಿಕೆ |
150 ಮರಿಗಳು | 28000.00 |
9 |
ಕುರಿ ಸಾಕಾಣಿಕೆ |
3 ಕುರಿ | 7000.00 |
10 |
ಮೀನು ಸಾಕಾಣಿಕೆ |
1 ಕೆರೆ | 60000.00 |
11 |
ಜೇನು ಸಾಕಾಣಿಕೆ |
4 ಕುಟುಂಬ | 7500.00 |
12 |
ಎರೆಹುಳು ಗೊಬ್ಬರ |
3 ತೊಟ್ಟಿ | 15000.00 |
|
ಒಟ್ಟು ನಿವ್ವಳ ಆದಾಯ | 1120500.00 |
ಅನುಭವದ ಮಾತು
ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ತಾಂತ್ರಿಕ ತರಬೇತಿ ಪಡೆದು, ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಅಳವಡಿಸಿಕೊಂಡರೆ ವರ್ಷಪೂರ್ತಿ ಆದಾಯವನ್ನು ಗಳಿಸಬಹುದು. ಜೊತೆಗೆ ಯಾಂತ್ರೀಕೃತ ಕೃಷಿ, ಅಡಿಕೆ ಮರ ಹತ್ತುವ ಯಂತ್ರ, ಅಡಿಕೆ ಸುಲಿಯುವ ಯಂತ್ರ ಮತ್ತು ತರಕಾರಿ ಬೆಳೆಗಳಲ್ಲಿ ಯಂತ್ರಗಳ ಬಳಕೆಯಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭವನ್ನು ಪಡೆಯಬಹುದು. “ಮನಸ್ಸಿದ್ದರೆ ಮಾರ್ಗ‘ ಎನ್ನುವ ಇವರು ಕೃಷಿಯಲ್ಲಿ ಶ್ರಮ ವಹಿಸಿದರೆ ಅಧಿಕ ಲಾಭವನ್ನು ಪಡೆಯಬಹುದೆಂದು ತಮ್ಮ ಅನುಭವದಿಂದ ಹೇಳುತ್ತಾರೆ.
ಎಂ. ಬಸವರಾಜ,ಬಿ. ಸಿ. ಹನುಮಂತಸ್ಥಾಮಿ ಮತ್ತು ಅರುಣ್‌ಕುಮಾರ್ ಪಿ, ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ