ಉತ್ತರ ಕನ್ನಡದ ಕೃಷಿಕ ಬರೋಬ್ಬರಿ 35 ತಳಿಗಳ ಕಾಳುಮೆಣಸಿನ ಒಡೆಯ

ಇವರು ನಾರಾಯಣ್ ಹೆಗಡೆ ಅಂತ, ಸುಮಾರು 10 ವರ್ಷದಿಂದ ಕೃಷಿ ಮಾಡುತ್ತಿರೋ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಂತ್ರವಳ್ಳಿ ಬಳಿ 6 ವರ್ಷದಿಂದ ಕಾಳು ಮೆಣಸಿನ ಕೋಟೆಯನ್ನೇ ಕಟ್ಟಿದ್ದಾರೆ.

ಎಲ್ಲಿ ನೋಡಿದ್ರೂ ಹಸಿರು ಹಸಿರಾಗಿ ನಗುತ್ತಿರೋ ಕಾಳುಮೆಣಸಿನ ಬಳ್ಳಿ! ಇತ್ತ ಕಾಳುಮೆಣಸಿನ ಕೋಟೆ ಅತ್ತ ಕಾಳುಮೆಣಸಿನ ಪಿರಾಮಿಡ್, ಅಬ್ಬಬ್ಬಾ! ಇಡೀ ಊರಿನ ಕಾಳುಮೆಣಸೆಲ್ಲ ಇಲ್ಲೇ ಇದೆಯೇನೋ ಎಂಬಷ್ಟು ಬೃಹತ್ ಕಾಳುಮೆಣಸಿನ ಬಳ್ಳಿಗಳ ಸಾಮ್ರಾಜ್ಯವೇ ಇಲ್ಲಿ ಸೃಷ್ಟಿಯಾಗಿದೆ! ಇದು ಉತ್ತರ ಕನ್ನಡದ ಕೃಷಿಕರೊಬ್ಬರ ಕಾಳುಮೆಣಸಿನ ಕರಾಮತ್ತು. ಹೀಗೊಂದು ಬಳ್ಳಿಗಳ ಲೋಕವನ್ನೇ ಸೃಷ್ಟಿಸಿದ್ದು ಉತ್ತರ ಕನ್ನಡದ ಕುಮಟಾ ಪ್ರಗತಿಪರ ಕೃಷಿಕ.

ಸಾಮಾನ್ಯ ಸಾದಾ ಮಾದರಿಯಲ್ಲಿ ಕಾಳು ಮೆಣಸು ಬೆಳೆಯುವಾಗ ಸೊರಗು ರೋಗದಿಂದ ಬಳಲುತ್ತಿದ್ದ ಬಳ್ಳಿಗಳನ್ನು ಕಂಡು ನೊಂದು ಇವರು ಕಂಗಾಲಾಗಿಲ್ಲ. ಬದಲಾಗಿ, ಸುಧಾರಿತ ʼಟಿಶ್ಯೂʼ ಮಾದರಿಯಲ್ಲಿ ಕಾಳು ಮೆಣಸು ಬಳ್ಳಿ ಹಬ್ಬಿಸಿ ಉತ್ತಮ ಇಳುವರಿ ಮತ್ತು ನಿರೀಕ್ಷಿತ ಲಾಭ ಗಳಿಸುವ ಮೂಲಕ ಯಶಸ್ವಿ ಕೃಷಿಕ ಎಂದು ಜನಮನ್ನಣೆ ಗಳಿಸಿದ್ದಾರೆ. ಮಾತ್ರವಲ್ಲ, ಕಾಳು ಮೆಣಸಿನ ನರ್ಸರಿ ಕೂಡ ಮಾಡಿದ್ದು, ವಾರ್ಷಿಕವಾಗಿ ಒಂದು ಲಕ್ಷ ಕಾಳು ಮೆಣಸು ಗಿಡಗಳನ್ನು ಮಾರಾಟ ಮಾಡುತ್ತಾರೆ. ಅಂದಹಾಗೆ ಅವರು ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲೂಕಿನ ಅಂತ್ರವಳ್ಳಿ ಗ್ರಾಮದ ರೈತ ನಾರಾಯಣ್‌ ಹೆಗಡೆ. ಇವರ ವಾರ್ಷಿಕ ವಹಿವಾಟು ಒಂದು ಕೋಟಿ ರೂಪಾಯಿಯನ್ನು ದಾಟುತ್ತದೆ.

ಬರೋಬ್ಬರಿ 35 ತಳಿಗಳ ಕಾಳುಮೆಣಸಿನ ಒಡೆಯ

ಕೇವಲ ಒಂದೆರಡಲ್ಲ, ಬರೋಬ್ಬರಿ 35 ತಳಿಗಳ ಕಾಳುಮೆಣಸಿನ ಒಡೆಯ ಇವ್ರು! ಕಾಳು ಮೆಣಸಿನ ಕೊಯ್ಲಿಗೆ ಸಮಸ್ಯೆಯಾಗಬಾರದೆಂದು ಕಡಿಮೆ ಎತ್ತರದಲ್ಲೇ ಅಧಿಕ ಇಳುವರಿ ಕೊಡುವ ತಳಿಗಳನ್ನೂ ಬೆಳೆಸಿದರು. ಈಗ ಇದು ಬರೀ ನರ್ಸರಿ ಅಲ್ಲ ತೋಟಗಾರಿಕಾ ಶಿಕ್ಷಣ ನೀಡುವ ವಿಶ್ವವಿದ್ಯಾಲಯವೇ ಆಗ್ಬಿಟ್ಟಿದೆ.

“2012ರಿಂದ ನರ್ಸರಿಯನ್ನು ಆರಂಭಿಸಿದ್ದು, 10 ವರ್ಷಗಳಿಂದ ವಾರ್ಷಿಕವಾಗಿ ಒಂದು ಲಕ್ಷ ಗಿಡ ಮಾರುತ್ತೇನೆ. ಸಾಮಾನ್ಯವಾಗಿ ಮೆಣಸಿಗೆ ಕೇರಳವೇ ತವರೂರು. ಉಳಿದಂತೆ ಬಹುತೇಕ ತಳಿಗಳನ್ನು ಮಡಿಕೇರಿ, ಮಲೆನಾಡು ಪ್ರದೇಶ ಹಾಗೂ ಹೊರ ರಾಜ್ಯಗಳಿಂದ ತಂದು ಇಲ್ಲಿ ಅಭಿವೃದ್ಧಿಪಡಿಸಿದ್ದೇನೆ. ನರ್ಸರಿಯಲ್ಲಿ ಪೂರ್ಣಮಿ, ಶುಭಕರಿ, ಮಲಬಾರ್‌ ಎಕ್ಸ್‌ಎಲ್‌, ಪೂಜಾರ್‌ ಮುಂಡಿ, ಮೇಲ್‌ ಮುಂಡಿ, ಸೂರ್ಯ, ಶ್ಯಾಮಲ, ಶ್ರೀಕರ, ತೀವೇಣಿ, ಪಂಚಮಿ, ಶಕ್ತಿ, ಕೊಟ್ಟಾಯಂ ಎಂಬುವುಗಳು ಸೇರಿದಂತೆ 35 ಜಾತಿಯ ಕಾಳು ಮೆಣಸು ಗಿಡಗಳಿವೆ. ಹಲವೆಡೆ ರೈತರು ಬೆಳೆದಿರುವುದನ್ನು ನೋಡಿ ನಾನು ಕೂಡ ಅವುಗಳನ್ನು ತಂದು ಕಸಿ ಮಾಡಿದ್ದೇನೆ. ಈಗ ಬಹುತೇಕ ರೈತರು ಈ ಮಾದರಿಯಲ್ಲಿ ಕಾಳು ಮೆಣಸು ಬೆಳೆಯಲು ಮಾರ್ಗದರ್ಶನ ಮಾಡುವಂತೆ ಹಿಂದೆ ಬಿದ್ದಿದ್ದಾರೆ” ಎನ್ನುತ್ತಾರೆ ನಾರಾಯಣ್.

ಮೆಣಸು ಬೆಳೆ ಕಲಿಯೋಕೆ ಮೊದಲು ನಾರಾಯಣ ಹೆಗಡೆಯವ್ರ ಸಾಮ್ರಾಜ್ಯಕ್ಕೊಮ್ಮೆ ಹೋಗಿಬರೋದು ಬೆಸ್ಟ್.

ನಾರಾಯಣ ಹೆಗಡೆಯವರ ಸಂಪರ್ಕ ಸಂಖ್ಯೆ: 82773 94054

Also read  Coffee - Weekly Roundup 24/Mar/17