Featured NewsKrushi

ಬಯಲು ಸೀಮೆಯಲ್ಲೊಂದು ಮಲೆನಾಡ ಕಾಫಿ ತೋಟ

5 ವರ್ಷ ಸಕಲೇಶಪುರದ ಬಾಳ್ಳುಪೇಟೆಯಲ್ಲಿರುವ ಅವಕಾಶ. ಅಲ್ಲಿನ ಕೃಷಿ ಅನುಭವವನ್ನು ತಮ್ಮ ಬಯಲುಸೀಮೆಯ ಊರಿನಲ್ಲಿ ಅನುಷ್ಠಾನಗೊಳಿಸಲೇಬೇಕೆಂಬ ದೃಢ ನಿರ್ಧಾರ. ಊರಿನ, ಸುತ್ತಮುತ್ತಲಿನ ಕೃಷಿಕರು ಇವರ ಚಿಂತನೆಗೆ ಅಣಕವಾಡಿದ್ದುಂಟು. ನಿರ್ಧಾರ ದೃಢವಾಗಿದ್ದರಿಂದ ವಿಚಲಿತರಾಗದೆ ಕಾರ್ಯೋನ್ಮುಖರಾದರು. ಅಣಕವಾಡಿದವರಿಗೆಲ್ಲ ಈಗ ಮಾದರಿ ಇವರು.

ಹೆಸರು ಗೋಪಾಲಗೌಡ. ಮಿರ್ಲೆ ಹೋಬಳಿ, ಕೃಷ್ಣರಾಜ ನಗರ ತಾಲೂಕು ಮಾಳನಾಯಕನಹಳ್ಳಿ ಗೌಡರ ಕಾರ್ಯಕ್ಷೇತ್ರ. ಭತ್ತದ ಸೀಮೆ. ವರ್ಷಕ್ಕೆರಡು ಬೆಳೆಗೆ ನೀರು ಕೊಡುತ್ತಿದ್ದಾರೆ. ಆದರೂ ಗೌಡರಿಗೆ ಬಯಲು ಸೀಮೆಯಲ್ಲೊಂದು ಮಲೆನಾಡ ತೋಟ ಮಾಡುವ ಕನಸು. ಅದೀಗ ನನಸಾಗಿದೆ. ಕಾಫಿ, ಕರಿ ಮೆಣಸು ನಳನಳಿಸುತ್ತಿವೆ. ಗೌಡರಿಗೆ ಇವುಗಳೂ ಆದಾಯದ ಪ್ರಮುಖ ಮೂಲ. ನೋಡಿದವರು ನಾವೂ ಬೆಳೆಯಬಹುದಲ್ಲ ಅನ್ನುವಂತಿವೆ.

ಇರುವ ನಾಲ್ಕೂವರೆ ಎಕರೆಯಲ್ಲಿ ಮೂರೂವರೆ ಎಕರೆ ನೀರಾವರಿ; ಉಳಿದದ್ದರಲ್ಲಿ ಒಣ ಬೇಸಾಯ. ಸಾವಯವ ಪದ್ಧತಿ ಬಗೆಗೆ ಗೌಡರಿಗೆ ವಿಶೇಷ ಒಲವು. ಅದನ್ನೇ ಸಂಪೂರ್ಣವಾಗಿ ತಮ್ಮ ಕ್ಷೇತ್ರದಲ್ಲಿ ಅಳವಡಿಸಿದ್ದಾರೆ. ಇವರದ್ದು ಸಮಗ್ರ ಸುಸ್ಥಿರ ಕೃಷಿ. ಯಶಸ್ಸಿಗೇ ಅದೇ ಪ್ರಮುಖ ಕಾರಣವೆನ್ನುವುದು ಗೌಡರ ಮಾತು.

ಮಣ್ಣು, ನೀರಿನ ಸಂರಕ್ಷಣೆ

ಜಮೀನಿನ ಕೆಲ ಭಾಗ ಇಳಿಜಾರಿರುವುದರಿಂದ ಕ್ಷೇತ್ರ ಸಮಪಾತಳಿ ನಿರ್ಮಾಣ. ಇದರಿಂದ ವ್ಯವಸಾಯ ಸುಲಭ. ತೇವಾಂಶದ ಸಮನಾದ ವಿತರಣೆ, ಮಳೆ ನೀರು ಸಂಗ್ರಹಣೆ ಸುಲಭ. ಮಣ್ಣಿನ ಕೊಚ್ಚಣಿಕೆಯೂ ನಗಣ್ಯ. ಮಳೆ ನೀರಿನ ಸಂಗ್ರಹಣೆಗೆಂದೇ ತಗ್ಗಿನಲ್ಲೊಂದು ಕೃಷಿಹೊಂಡ. ಸಂಗ್ರಹಣೆಯಾದ ಮಳೆನೀರನ್ನು ಸಿಂಚನ ಹಾಗೂ ಹನಿ ನೀರಾವರಿ ಮೂಲಕ ತೋಟದ ಬೆಳೆಗಳಿಗೆ ಸಂಪೂರ್ಣ ಬಳಕೆ. ಕಾಲುವೆ ನೀರು ಜೂನ್‌ ನಿಂದ ಲಭ್ಯ. ಜನವರಿಯಿಂದ ಜೂನ್‌ ವರೆಗೆ ಬೆಳೆಗಳಿಗೆ ಹೊಂಡದ ನೀರೇ ಆಶ್ರಯ. ಹೊಂಡದ ನೀರೂ ಸಾಲದಿದ್ದ ಪಕ್ಷದಲ್ಲಿ ಒಂದು ಕೊಳವೆಬಾವಿ ಕೂಡ ಇದೆ. ಅದರ ಮೇಲಿನ ಅವಲಂಬನೆ ತೀರಾ ಕಡಿಮೆ. ಕಾಲುವೆ ನೀರು ಹೆಚ್ಚಾಗಿ ಕೆಲವೊಮ್ಮೆ ಸಮಸ್ಯೆ ಕೂಡ ಆದದ್ದುಂಟು. ಅದಕ್ಕಾಗಿ ಬಸಿಗಾಲುವೆಗಳ ನಿರ್ಮಾಣ. ಇದರಿಂದ ಅಡಿಕೆ, ಕಾಫಿ, ಮೆಣಸಿಗೆ ಬರುವ ರೋಗ ಕೂಡ ಕಡಿಮೆ.

Also read  Arabica hit a 3-week high after the 20-month bottom

ಫಲವತ್ತತೆ ನಿರ್ವಹಣೆ

ತಮ್ಮ ಕ್ಷೇತ್ರದಲ್ಲಿಯೇ ಲಭ್ಯವಾಗುವ ಕೃಷಿ ತ್ಯಾಜ್ಯ ಬಳಸಿ 20 ಟನ್‌ನಷ್ಟು ಸಾವಯವ ಗೊಬ್ಬರ ತಯಾರಿಸಿಕೊಂಡು ಬಳಸುತ್ತಿದ್ದಾರೆ. ಜತೆಗೆ, ವರ್ಷಕ್ಕೊಮ್ಮೆ ಜಮೀನಿನಲ್ಲಿ ನಿಯಮಿತ ಅಂತರದಲ್ಲಿ ಟ್ರೆಂಚ್‌ ತೆಗೆದು ಕೃಷಿ ತ್ಯಾಜ್ಯ ತುಂಬಿ ಅಲ್ಲಿಯೇ ಕಾಂಪೋಸ್ಟ್‌ ಮಾಡುತ್ತಾರೆ. ಕೊಟ್ಟಿಗೆ ಗೊಬ್ಬರ ಕೊಡುವ ಮೊದಲು ಅಜಟೋಬ್ಯಾಕ್ಟರ್‌, ರಂಜಕ ಕರಗಿಸುವ ಜೀವಾಣು, ಸುಡೋಮೋನಾಸ್‌ಗಳನ್ನು ಮಿಶ್ರಮಾಡಿ ಅದರ ಮೌಲ್ಯವರ್ಧಿಸಿ ಬಳಸಲಾಗುತ್ತಿದೆ.

ಕಳೆ ನಿರ್ವಹಣೆ

ಸೂಕ್ತ ಸಮಯದಲ್ಲಿ ಕಳೆ ತೆಗೆದು ಅವನ್ನು ವ್ಯರ್ಥಮಾಡದೆ ಸಾವಯವ ಗೊಬ್ಬರ ತಯಾರಿಗೆ ಬಳಸುತ್ತಾರೆ. ಸಾಧ್ಯವಿರುವೆಡೆ ಅಂತರ ಬೇಸಾಯ. ಅಲ್ಲದೇ, ಕಬ್ಬಿನ ರವದಿ ಮುಂತಾದ ಕೃಷಿ ತ್ಯಾಜ್ಯ ಬಳಸಿ ಮಲ್ಚಿಂಗ್‌ (ಹೊದಿಕೆ) ಮಾಡುತ್ತಾರೆ ಗೌಡರು. ಕಡಿಮೆ ಅಂತರದ ಬೆಳೆಗಳಲ್ಲಿ ಕಳೆ ನಿರ್ವಹಣೆಗಾಗಿ ಸೈಕಲ್‌ ವೀಡರ್‌ ಬಳಸುತ್ತಾರೆ. ವೀಡ್‌ ಕಟ್ಟರ್‌ ಕೂಡ ಇದೆ.

Also read  ISRO's Satellite to find your New Coffee Plantations

ನಾನೂ ಟ್ರೈನಿಂಗ್‌ ತಗೋತೀನಿ

‘ಎಷ್ಟೇ ಸಾಧನೆ ಮಾಡಿದ್ರೂ ಕೃಷಿಕ ಕಲೀತಾನೇ ಇರ್ಬೇಕು. ಅದಕ್ಕೆ ವಿವಿಧ ಸಂಸ್ಥೆಗಳಲ್ಲಿ ಆಯೋಜಿಸುವ ತರಬೇತಿಗೆ ಹೋಗ್ತೀನಿ. ಇದರಿಂದ ಜ್ಞಾನ ಹೆಚ್ಚಿ ಹೊಸ ವಿಚಾರ ತಿಳಿಯುತ್ತೆ. ಹೆಚ್ಚು ಸಾಧನೆ ಮಾಡಿರೋ ರೈತರ ಜಮೀನಿಗೂ ಭೇಟಿ ಮಾಡ್ತೀನಿ. ನನ್ನ ಜಮೀನು ನೋಡೋಕೆ ಬರೋ ರೈತರಿಗೂ ಅಳವಡಿಸಿರೋ ಬೆಳೆ ಪದ್ಧತಿಗಳ ಬಗೆಗೆ ಹೇಳ್ತೀನಿ’ ಅವರದೇ ಮಾತಿನಲ್ಲಿ ಹೇಳುತ್ತಾರೆ.ಹತ್ತಿರದ ಶಾಲಾ ಮಕ್ಕಳಿಗೂ ಕಾಲೇಜು ವಿದ್ಯಾರ್ಥಿಗಳಿಗೂ ಕೃಷಿ ಅರಿವು ಮೂಡಿಸುವ ಪ್ರಯತ್ನ ಗೌಡರದ್ದು

ಇಳುವರಿ, ಮಾರ್ಕೆಟಿಂಗ್‌

ಈ ವರ್ಷ ಕಾಫಿ 81 ಚೀಲ ಸಿಕ್ಕಿದೆ (ಪ್ರತಿ ಚೀಲ 51 ಕಿ. ಗ್ರಾಂ). ಇದರ ಸದ್ಯದ ಮೌಲ್ಯ 2,56,000 ರೂ. 150 ಕ್ವಿಂಟಲ್‌ ಹಸಿ ಅಡಿಕೆಯನ್ನು ಕ್ವಿಂಟಲ್‌ಗೆ 3200 ರೂ . ನಂತೆ ಮಾರಿದ್ದಾರೆ. ಇದರಿಂದ ಬಂದ ಆದಾಯ 4,95,000. ಈ ವರ್ಷ 150 ಕಿ. ಗ್ರಾಂ ಕರಿಮೆಣಸು ನಿರೀಕ್ಷಿದ್ದಾರೆ.

ತೆಂಗಿನ ಗಿಡ ಇನ್ನೂ ಐದು ವರ್ಷದವು. ಫಸಲು ಬರಲು ಒಂದೆರಡು ವರ್ಷ ಬೇಕು. ಉಳಿದ ಇತರೇ ಬೆಳೆಗಳಿಂದ ಬರುವ ಆದಾಯ ಒಂದು ಲಕ್ಷ. ಈ ಎಲ್ಲ ಬೆಳೆಗಳ ಉತ್ಪಾದನಾ ವೆಚ್ಚ ಮೂರು ಲಕ್ಷ ರುಪಾಯಿ. ಪ್ರತಿ ವರ್ಷ ಬರುವ ಸರಾಸರಿ ನಿವ್ವಳ ಲಾಭ ಕನಿಷ್ಠ ಆರು ಲಕ್ಷ ರೂಪಾಯಿ. ಅಡಿಕೆ, ತೆಂಗು, ತರಕಾರಿ, ಕೃಷಿ ಬೆಳೆಯ ಉತ್ಪನ್ನಗಳನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಾರೆ. ಕಾಫಿ, ಮೆಣಸು, ಏಲಕ್ಕಿಗೆ ಸ್ಥಳೀಯ ಮಾರುಕಟ್ಟೆ ಇಲ್ಲದಿರುವುದರಿಂದ ಸಕಲೇಶಪುರದಲ್ಲಿ ಮಾರಾಟ ಮಾಡುತ್ತಾರೆ.

Also read  ಇಟಲಿ ಸೇರಿದಂತೆ ಯೂರೋಪ್ ಖರೀದಿದಾರರ ಹಿಂಜರಿಕೆ:ಭಾರತೀಯ ಕಾಫಿ ರಫ್ತಿಗೆ ಹೊಡೆತ

ತೋಟದಲ್ಲಿ ಬೆಳೆ ವೈವಿಧ್ಯತೆ

ಗೋಪಾಲಗೌಡ್ರ ತೋಟದಲ್ಲಿ ರೋಬಸ್ಟ ಕಾಫಿ 2500 ಗಿಡ, ಮೆಣಸು (1000), ತೆಂಗು (100), ಏಲಕ್ಕಿ ಬಾಳೆ (1500) ಮತ್ತು ಅಡಿಕೆ (2500) ಆದಾಯ ಕೊಡುವ ಪ್ರಮುಖ ಬೆಳೆಗಳು. ಉಳಿದಂತೆ ಚಕ್ಕೆ, ಲವಂಗ, ಸೀಬೆ, ದಾಳಿಂಬೆ, ಅಂಜೂರ ತಲಾ ಐದೈದು ಗಿಡಗಳು. ಅಡಿಕೆ ಸಾಲಿನಲ್ಲಿ ಅಂತರ ಬೆಳೆಯಾಗಿ ಏಲಕ್ಕಿ ಬಾಳೆ. ಖುಷ್ಕಿ ಬೇಸಾಯದಲ್ಲಿ ರಾಗಿ, ನವಣೆ, ಹುಚ್ಚೆಳ್ಳು, ತೊಗರಿ, ಅಲಸಂದೆ. ಮನೆಗಾಗಿ ಮಿಕಿದ್ದು ಮಾತ್ರ ಮಾರಾಟ. ಅದರಿಂದಲೂ ಸ್ವಲ್ಪ ಆದಾಯ. ಮೆಣಸಿಗೆ ಆಧಾರವಾಗಿ ಮತ್ತು ಜಮೀನಿನ ಸುತ್ತಲೂ ತಡೆಗೋಡೆಯಾಗಿ 1500 ಸಿಲ್ವರ್‌ ಓಕ್‌.

ಬಾಳೆಯ ಆರನೇ ಕೂಳೆ ಬೆಳೆ ಈಗಲೂ ಇದೆ. ಸಾಮಾನ್ಯವಾಗಿ ಬಾಳೆ ನಾಟಿ ಮಾಡಿದ ಮೇಲೆ ಒಂದು ಮುಖ್ಯ ಬೆಳೆ ಮತ್ತೊಂದು ಕೂಳೆ ಬೆಳೆ ತೆಗೆದುಕೊಳ್ಳುವುದು ವಾಡಿಕೆ. ಗೌಡರು 2010 ರಲ್ಲಿ ಹಾಕಿದ ಬಾಳೆಯ ಆರನೇ ಕೂಳೆ ಬೆಳೆ ಈಗಲೂ ಫಲ ಕೊಡುತ್ತಿದೆ. ”ಪ್ರತಿ ವರ್ಷ ಏನಿಲ್ಲವೆಂದರೂ 8-10 ಟನ್‌ ಸಿಗುತ್ತದೆ. ಅಡಿಕೆ, ತೆಂಗಿನ ನೆರಳು ಹೆಚ್ಚು. ಇಳುವರಿ ಕಡಿಮೆಯಿದ್ರೂ ಪ್ರತೀ ವರ್ಷ ಎರಡರಿಂದ ಎರಡೂವರೆ ಲಕ್ಷ ಆದಾಯಕ್ಕೇನೂ ಮೋಸ ಇಲ್ಲ ” ಅಂತಾರೆ ಗೋಪಾಲಗೌಡ್ರು.

ಗೋಪಾಲ ಗೌಡರ ಸಾಧನೆ ಪರಿಗಣಿಸಿ ಬಾಗಲಕೊಟ ತೋಟಗಾರಿಕೆ ವಿಜ್ಞಾನಗಳ ವಿಶ್ಯವಿದ್ಯಾಲಯ ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿ ನೀಡಿ ಗೌರವಿಸಿದೆ.

Also read  Coffee Prices (Karnataka) on 23-12-2024

ಕೃಪೆ:ವಿಜಯಕರ್ನಾಟಕ,Dated:Mar 27, 2017

Leave a Reply