ಜೀರಿಗೆ ಮೆಣಸು – ಈ ಛೋಟ್ ಮೆಣಸಿನಕಾಯಿ ಬಲು ಕಾರ

ಮಲೆನಾಡು ಎಂದ ತಕ್ಷಣ ನೆನಪಾಗುವುದು ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳು ಮೆಣಸು, ಏಲಕ್ಕಿ, ಅಡಕೆ. ಹೀಗಿದ್ದರೂ, ಪ್ರಸ್ತುತ ದಿನಗಳಲ್ಲಿ ಹಳ್ಳಿ ಮನೆಗಳ ಹಿತ್ತಲಲ್ಲಿ ಹುಟ್ಟಿ ಬೆಳೆದ ಬೆಳೆಯೊಂದು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.

ಜೀರಿಗೆ ಮೆಣಸು, ಸಣ್ಣಮೆಣಸು ,ಕಾಂತರಿ ಅಥವಾ ಬರ್ಡ್’ಸ್ ಐ ಚಿಲಿ ಅಂತ ಎಂದೆಲ್ಲಾ ಕರೆಸಿಕೊಳ್ಳುವ, ಒಂದು ಬೆಳ್ಳುಳ್ಳಿ ಎಸಳಷ್ಟು ಗಾತ್ರ ಹೊಂದಿರುವ ಸಣ್ಣ ಮೆಣಸಿನಕಾಯಿ, ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಪ್ಪು ಬಂಗಾರ ಎಂದೇ ಹೆಸರು ಪಡೆದಿರುವ ಕಾಳು ಮೆಣಸಿಗೆ ಪೈಪೋಟಿ ನೀಡುತ್ತಿದೆ.

ಮೂಲತಃ ದಕ್ಷಿಣ ಅಮೆರಿಕಾದ ಈ ಗಿಡವನ್ನು 16 ಶತಮಾನದಲ್ಲಿ ಪೋರ್ಟುಗೇಸರ ಮೂಲಕ ನಮ್ಮ ಭಾರತಕ್ಕೆ ಬಂದ ಈ ಛೋಟ್ ಮೆಣಸಿನಕಾಯಿ ಕೇರಳ ಹಾಗೂ ಮಲೆನಾಡ್ ಪ್ರದೇಶದಲ್ಲಿ ತುಂಬಾ ಉಪಯೋಗಿಸಲ್ಪಡುತದೆ.

ಸಾಮಾನ್ಯವಾಗಿ ಹಳ್ಳಿ ಮನೆಗಳ ಹಿತ್ತಲಲ್ಲಿ, ಮನೆಯ ಸುತ್ತ ಮುತ್ತ ಹಾಗೂ ತೋಟಗಳ ಬದಿಯಲ್ಲಿ ಹಕ್ಕಿಗಳು ತಿಂದು ಬೀಳಿಸಿದ ಬೀಜಗಳಲ್ಲಿ ಹುಟ್ಟಿ ಬೆಳೆದು ಕಾಯಿ ಬಿಡುತ್ತವೆ , ಮಲೆನಾಡಿನ ಕಾಫಿ ತೋಟಗಳಲ್ಲಿ ಬೆಳೆಯುವ ಈ ಮೆಣಸಿನ ಗಿಡಗಳ ತುಂಬ ಸಣ್ಣ ಕಾಯಿ ಬಿಡುತ್ತವೆ.

ಬೇಡಿಕೆಗೆ ಕಾರಣ:
ಹಿತ್ತಲಿನ ಗಿಡವಾಗಿ ಮನೆಯವರಿಗೆ ಮಾತ್ರ ಪರಿಚಿತವಾಗಿದ್ದ ಜೀರಿಗೆ ಮೆಣಸು ಬೇಡಿಕೆ ಪಡೆದುಕೊಳ್ಳಲು ಕಾರಣ ಅದರಲ್ಲಿರುವ ಔಷಧೀಯ ಗುಣ. ಆಯುರ್ವೇದದಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಇತರೆ ಮೆಣಸಿನ ಕಾಯಿಗಳಿಗಿಂತ ಉತ್ತಮ ರುಚಿ ಮತ್ತು ಸುವಾಸನೆ ಹೊಂದಿರುವ ಜೀರಿಗೆ ಮೆಣಸು, ಯಾವುದೇ ಔಷಧೋಚಾರ, ಕೀಟ ನಾಶಕಗಳ ಸಿಂಪರಣೆಯಿಲ್ಲದೆ ನೈಸರ್ಗಿಕವಾಗಿ ಬೆಳೆಯುವುದರಿಂದ ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದೆ. ಅಲ್ಲದೆ, ಮಾಂಸಾಹಾರಿ ಅಡುಗೆಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಿರುವುದೂ ಒಂದು ಕಾರಣ.

ಕೆ ಜಿ ಯೊಂದಕ್ಕೆ 300ರಿಂದ 400 ರೂ. ವರೆಗೆ ಬೆಲೆ ಇದ್ದ ಈ ಮೆಣಸಿನಕಾಯಿ, ದಿಢೀರ್ ಎಂದು ತನ್ನ ಬೆಲೆಯನ್ನು ಏರಿಸಿಕೊಂಡಿದೆ. ಎಷ್ಟೆಂದರೆ ಒಣಗಿಸಿದ ಮೆಣಸಿನಕಾಯಿ ಕೆ.ಜಿ.ಗೆ 700 ರೂ.ವರೆಗೆ ಮಾರಾಟವಾಗುತ್ತಿದೆ.

ಪ್ರಸ್ತುತ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳುಮೆಣಸು, ಅಡಕೆ, ಏಲಕ್ಕಿಗಳು ಬೆಲೆ ಕಳೆದುಕೊಳ್ಳುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಮುಂದೊಂದು ದಿನ ಹಿತ್ತಲ ಗಿಡವಾಗಿದ್ದ ಜೀರಿಗೆ ಮೆಣಸು ಪ್ರಮುಖ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಳ್ಳುತ್ತದೆಯೇ ಎಂಬ ಕುತೂಹಲ ಉಂಟುಮಾಡಿದೆ.

ಜೀರಿಗೆ ಮೆಣಸಿನ ಗಿಡಗಳನ್ನು ಯಾವುದೇ ಖರ್ಚು ಮಾಡಿ ಬೆಳೆಯುತ್ತಿಲ್ಲ, ಮನೆಯ ಸುತ್ತ ಮುತ್ತ ಹಾಗೂ ತೋಟಗಳ ಬದಿಯಲ್ಲಿ ಹಕ್ಕಿಗಳು ತಿಂದು ಬೀಳಿಸಿದ ಬೀಜಗಳಲ್ಲಿ ಹುಟ್ಟಿ ಬೆಳೆದು ಕಾಯಿ ಬಿಡುತ್ತವೆ.

ವರಧಿ:ವಿಜಯ ಕರ್ನಾಟಕ

Also read  ನಾಳೆ ಕಾಳುಮೆಣಸು,ಶುಂಠಿ,ಅರಿಷಿಣ ಕೃಷಿ ತರಬೇತಿ