CoffeeFeatured News

ಮನ್ ಕೀ ಬಾತ್‌ನಲ್ಲಿ ಕಾಫಿ ಪ್ರಶಂಸೆ — ಕರ್ನಾಟಕದ ಬೆಳೆಗಾರರಿಗೆ ಗೌರವ

ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಭಾರತದಲ್ಲಿ ಬೆಳೆಯುವ ಕಾಫಿಯ ವೈವಿಧ್ಯವನ್ನು ಶ್ಲಾಘಿಸಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಕಾಫಿ ಜಗತ್ಪ್ರಸಿದ್ಧಿ ಪಡೆಯುತ್ತಿದೆ ಎಂದು ಹೇಳಿದ್ದಾರೆ. ಅವರು ಕಾಫಿ ಕೃಷಿಯು ಹಲವಾರು ಮಹಿಳೆಯರ ಬದುಕು ಹಸನಾಗಿಸಿರುವುದನ್ನು ಮೆಚ್ಚಿಕೊಂಡಿದ್ದಾರೆ.

ಭಾರತದ ಒಟ್ಟು ಕಾಫಿ ಉತ್ಪಾದನೆಯ ಶೇಕಡಾ 70ರಷ್ಟು ಕರ್ನಾಟಕದಲ್ಲಿಯೇ ಬೆಳೆಯುತ್ತದೆ. ಕೊಡಗು ಜಿಲ್ಲೆಯೊಂದರಲ್ಲೇ ಸುಮಾರು 1.1 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗುತ್ತದೆ — ಇದು ರಾಜ್ಯದ ಅರ್ಧಕ್ಕಿಂತ ಹೆಚ್ಚು ಮತ್ತು ಭಾರತದ ಸುಮಾರು 35% ಹಂಚಿಕೆಗೆ ಸಮಾನ. ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳು ಅರೇಬಿಕಾ ಮತ್ತು ರೋಬಸ್ಟಾ ಕಾಫಿ ಬೆಳೆಯುವ ಪ್ರಮುಖ ಪ್ರದೇಶಗಳಾಗಿವೆ.

ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕಾಫಿ ತೋಟಗಳಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ ಹವಾಮಾನ ಬದಲಾವಣೆ, ಕೊಳೆ ರೋಗ, ಮತ್ತು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಬೆಳೆಗಾರರಿಗೆ ಸವಾಲಾಗಿದೆ. ಆರ್ಥಿಕ ಭದ್ರತೆ ಇಲ್ಲದ ಕಾರಣ ಅವರ ಬದುಕು ಕಷ್ಟಕರವಾಗಿದೆ.

ಸರ್ಕಾರವು ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಕೈಗೊಳ್ಳಬೇಕು. 2023–24ರ ಬಜೆಟ್‌ನಲ್ಲಿ ಘೋಷಿಸಲಾದ “ಕರ್ನಾಟಕ ಕಾಫಿಗೆ ಬ್ರ್ಯಾಂಡ್ ರೂಪ ನೀಡುವುದು” ಎಂಬ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಚಿಕ್ಕಮಗಳೂರು, ಕೊಡಗು ಮತ್ತು ಬಾಬಾ ಬುಡನಗಿರಿಯ ಅರೇಬಿಕಾ ಕಾಫಿಗೆ ಈಗಾಗಲೇ ಜಿಐ (GI) ಟ್ಯಾಗ್ ಸಿಕ್ಕಿದೆ.

ಕಾಫಿ ಎಕೊ-ಟೂರಿಸಂಗೆ ಉತ್ತೇಜನ ನೀಡಿ, ಮೌಲ್ಯವರ್ಧನೆ ಮತ್ತು ಬ್ರ್ಯಾಂಡಿಂಗ್ ಮೂಲಕ ಕರ್ನಾಟಕದ ಕಾಫಿಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚು ಜನಪ್ರಿಯಗೊಳಿಸುವ ಅಗತ್ಯವಿದೆ. ಹೊಸ ನವೋದ್ಯಮಗಳಿಗೆ ಪ್ರೋತ್ಸಾಹ ನೀಡುವುದರಿಂದ ಕಾಫಿ ಕ್ಷೇತ್ರದಲ್ಲಿ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆ ಹೆಚ್ಚುವ ಸಾಧ್ಯತೆ ಇದೆ.

Also read  Coffee Prices (Karnataka) on 13-05-2022