ಕೈ ಕೊಟ್ಟ ರೇವತಿ ಮಳೆ: ಒಣಗಿದ ಕಾಫಿ ಬೆಳೆ, ಸಂಕಷ್ಟಕ್ಕೆ ಸಿಲುಕಿದ ಬೆಳಗಾರರು
ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಆಲೂರು ಭಾಗದಲ್ಲಿ ಕಾಫಿ ಹೂ ಬೇಸಿಗೆಯ ಸುಡುಬಿಸಿಲಿನ ತಾಪಕ್ಕೆ ಒಣಗತೊಡಗಿದ್ದು,ಅರೆಬರೆ ಉಳಿದಿರುವ ಗಿಡಗಳನ್ನು ಉಳಿಸಿಕೊಳ್ಳಲು ಮಳೆಯಾಶ್ರಿತ ಕಾಫಿ ಬೆಳೆಗಾರರು ಹರಸಾಹಸ ಪಡುವಂತಾಗಿದೆ.
ಮಾರ್ಚ್ ಕೊನೆಯಲ್ಲಿ ಆರಂಭವಾಗುವ ರೇವತಿ ಮಳೆ ವಾಣಿಜ್ಯ, ತೋಟಗಾರಿಕೆ ಹಾಗೂ ಇನ್ನಿತರ ಬೆಳೆಗಳಿಗೆ ಪ್ರಮುಖ ಆಧಾರ. ಕಳೆದ ಹಲವಾರು ವರ್ಷಗಳಿಂದ ಮಾರ್ಚ್ ಅಂತ್ಯ ಹಾಗೂ ಏಪ್ರಿಲ್ ಆರಂಭದಲ್ಲಿ ಸುಮಾರು 4 ಇಂಚು ಮಳೆ ಬೀಳುತ್ತಿದ್ದರಿಂದ ಕಾಫಿ ಹೂ ಕಟ್ಟುತ್ತಿತ್ತು. ಈ ಬಾರಿ 20 ದಿನಗಳ ಹಿಂದೆ ಅರ್ಧ ಇಂಚಿಗೂ ಕಡಿಮೆ ಮಳೆ ಬಂತು. ಆದರೆ ಮತ್ತೆ ಅದರ ಸುಳಿವೇ ಇಲ್ಲವಾಗಿ ಬಲವಂತದಿಂದ ಹೂ ಕಟ್ಟಿ ಮಾಗುವ ಮುನ್ನವೆ ಬಿಸಿಲ ಝಳಕ್ಕೆ ಸುಟ್ಟು ಹೋಗುತ್ತಿವೆ.
ಸಾಮಾನ್ಯವಾಗಿ ಡಿಸೆಂಬರ್ ಹಾಗೂ ಜನವರಿ ತಿಂಗಳ ಅಂತ್ಯಕ್ಕೆ ಕಾಫಿ ಕಟಾವು ಮುಗಿಯುತ್ತದೆ. ಫೆಬ್ರವರಿ ತಿಂಗಳಿನಲ್ಲಿ ಬಿಸಿಲಿಗೆ ಮೈಯೊಡ್ಡುವ ಕಾಫಿ ಗಿಡಗಳಲ್ಲಿ ದಿನಕಳೆದಂತೆ ನೀರಿನ ಅಂಶ ಕಡಿಮೆಯಾದ ಲಕ್ಷಣಗಳು ಎಲೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮಾರ್ಚ್ ಅಂತ್ಯದಲ್ಲಿ ಬೀಳುವ ಮಳೆಯಿಂದ ಗಿಡಗಳು ಪುನಃ ಚೇತರಿಸಿಕೊಂಡು ಹಸಿರಿನಿಂದ ಕಂಗೊಳಿಸಿ ಹೂವಾಗಲು ನೆರವಾಗುವುದರಿಂದ ಇದನ್ನು ಕರ್ನಾಟಕದಲ್ಲಿ ‘ಕಾಫಿ ಬ್ಲಾಸಮ್’ಎನ್ನುವರು.
ನಿಗದಿತ ಸಮಯಕ್ಕೆ ಮಳೆ ಬಾರದ್ದರಿಂದ ಕೆಲವೆಡೆ ಬೆಳೆಗಾರರು ಕೃತಕವಾಗಿ ಕಾಫಿಗೆ ಸ್ಟ್ರಿಂಕ್ಲರ್ ಮೂಲಕ ನೀರು ಕೊಡುತ್ತಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆ ಹಾಗೂ ಗಗನಕ್ಕೇರಿದ ಇಂಧನದ ಬೆಲೆ ನಡುವೆಯೂ ಮುಂಬರುವ ಬೆಳೆಯನ್ನು ಉಳಿಸಿಕೊಳ್ಳಲು ವಾರಕೊಮ್ಮೆ ನೀರು ಸ್ಟ್ರಿಂಕ್ಲರ್ ಮಾಡುತ್ತಿದ್ದು. ಕೃತಕ ನೀರಾವರಿ ಸೌಲಭ್ಯವಿರದ ಸಾವಿರಾರು ಸಣ್ಣ, ಅತಿಸಣ್ಣ ಬೆಳೆಗಾರರು ಬೆಳೆ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ.