Featured NewsHealth

ಮಲೆನಾಡಿನಲ್ಲಿ ಮಂಗನ ಕಾಯಿಲೆ:ಇರಲಿ ಎಚ್ಚರ

ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ ಹಾಗೂ ಸೊರಬ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ಮತ್ತೆ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಈಗಾಗಲೇ ಐವತ್ತಕ್ಕೂ ಹೆಚ್ಚು ಜನರು ಕಾಯಿಲೆಯಿಂದ ಬಳಲುತ್ತಲಿದ್ದು ಶಿವಮೊಗ್ಗ, ಸಾಗರ ಹಾಗೂ ಮಣಿಪಾಲದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆಯು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಈ ಕಾಯಿಲೆಯ ನಿಯಂತ್ರಣಕ್ಕೆ ಬರದಿರುವುದು ಈ ಭಾಗದ ಜನರನ್ನು ತೀವ್ರ ಆತಂಕಕ್ಕೆ ಗುರಿಮಾಡಿದೆ. 

ಏನಿದು ಮಂಗನ ಕಾಯಿಲೆ? 

‘ಮಂಗನ ಕಾಯಿಲೆ’ ಎಂದು ಕರೆಯಲ್ಪಡುವ ಈ ಕಾಯಿಲೆಯ ವೈದ್ಯಕೀಯ ನಾಮಧೇಯ ಕ್ಯಾಸನೂರು ಫಾರೆಸ್ಟ ಡಿಸೀಸ್. (Kyasanur Forest Disease, K. F. D.) 1957 ರಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ಕಾಯಿಲೆಯನ್ನು ಗುರುತಿಸಲಾಯಿತು. ಕಾಯಿಲೆಗೆ ಕಾರಣವಾದ ವೈರಾಣುವನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕ್ಯಾಸನೂರು ಕಾಡಿನಲ್ಲಿ ಮೊಟ್ಟಮೊದಲ ಬಾರಿಗೆ ಗುರುತಿಸಿದ್ದರಿಂದ ಇದಕ್ಕೆ ಕ್ಯಾಸನೂರು ಫಾರೆಸ್ಟ ಡಿಸೀಸ್ (Kyasanur Forest Disease) ಎಂಬ ಹೆಸರು. ಮೊದಲು ಶಿವಮೊಗ್ಗ ಜಿಲ್ಲೆಗೆ ಮಾತ್ರವೇ ಸೀಮಿತಗೊಂಡಿದ್ದ ಈ ಕಾಯಿಲೆ ನಂತರದ ದಿನಗಳಲ್ಲಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿಯೂ ಕಂಡು ಬಂದಿದೆ. 2012–13 ರಲ್ಲಿ ನೆರೆರಾಜ್ಯಗಳಾದ ಕೇರಳ ಹಾಗೂ ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿಯೂ ಈ ಕಾಯಿಲೆಯ ಪ್ರಕರಣಗಳು ಕಂಡು ಬಂದಿವೆ. ಈವರೆಗೆ ವರದಿಯಾದ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ, 1983-84ರಲ್ಲಿ ಅತಿ ಹೆಚ್ಚು ಜನರು ಈ ಕಾಯಿಲೆಯಿಂದ ಬಳಲಿದ ಅಂಶವು ಗಮನಕ್ಕೆ ಬರುತ್ತದೆ. 1983-84ರಲ್ಲಿ ಸುಮಾರು 2,167 ಜನರಲ್ಲಿ ಈ ಕಾಯಿಲೆಯು ದೃಢಪಟ್ಟಿದ್ದು, 69 ಜನರ ಸಾವಿಗೆ ಕಾರಣವಾಗಿತ್ತು. ನಂತರದ ವರ್ಷಗಳಲ್ಲಿ ಇದು ಗಣನೀಯವಾಗಿ ಕಡಿಮೆಯಾಗಿರುವುದು ಗಮನಿಸಬೇಕಾದ ವಿಚಾರ. ರೋಗಾಣು ಹಾಗೂ ರೋಗ ಹರಡುವಿಕೆ ಕೆ .ಎಫ್. ಡಿ ಕಾಯಿಲೆಯು ಫ್ಲೇವಿ ವೈರಸ್ ಎಂಬ ವೈರಾಣುವಿನಿಂದ ಬರುತ್ತದೆ. ಈ ವೈರಾಣುವು ಇಲಿ, ಹೆಗ್ಗಣ, ಅಳಿಲು ಮತ್ತು ಮಂಗಗಳಲ್ಲಿ ತನ್ನ ಸಂತತಿಯನ್ನು ಕಾಯ್ದಿರಿಸಿಕೊಂಡಿರುತ್ತದೆ. ಆದರೆ ಮಂಗಗಳೂ ಕೂಡ ಕೆ ಎಫ್. ಡಿ. ಕಾಯಿಲೆಗೆ ತುತ್ತಾಗಿ ಸಾವನ್ನಪ್ಪುವುದರಿಂದ, ವೈರಾಣುಗಳು ತಮ್ಮ ಸಂತತಿಯನ್ನು ಮುಖ್ಯವಾಗಿ ಇಲಿ ಮತ್ತು ಅಳಿಲುಗಳಲ್ಲಿಯೇ ಕಾಯ್ದಿರಿಸಿಕೊಂಡು, ವೃದ್ಧಿಗೊಳಿಸಿಕೊಳ್ಳುತ್ತವೆ. 

ವೈರಾಣು ಮನುಷ್ಯರನ್ನು ತಲುಪುವುದು ಹೇಗೆ ? 

ಜಾನುವಾರುಗಳ ರಕ್ತವನ್ನು ಹೀರಿ ಬದುಕುವ ಉಣ್ಣೆಹುಳುಗಳ ಸಹಾಯದಿಂದ ಈ ವೈರಾಣುಗಳು, ಮಂಗಗಳು ಹಾಗೂ ಇತರ ಪ್ರಾಣಿಗಳಿಂದ ಮನುಷ್ಯರನ್ನು ತಲುಪುತ್ತವೆ. ಹಾಗಾಗಿ ಮನುಷ್ಯರಿಂದ ಮನುಷ್ಯರಿಗೆ ಈ ರೋಗ ಹರಡುವ ಸಾಧ್ಯತೆಗಳು ಇಲ್ಲವೇ ಇಲ್ಲ. ಅನೇಕ ಬಗೆಯ ಉಣ್ಣೆಹುಳುಗಳು ಈ ಕಾಯಿಲೆಯನ್ನು ಹರಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಜನವರಿಯಿಂದ ಜೂನ್ ತಿಂಗಳವರೆಗಿನ ಹವಾಮಾನವು ಈ ಉಣ್ಣೆ ಹುಳುಗಳ ಸಂತಾನೋತ್ಪತ್ತಿಗೆ ಅನುಕೂಲವಾಗಿರುವುದರಿಂದ, ಕೆ. ಎಫ್. ಡಿ. ಕಾಯಿಲೆಯು ವರ್ಷದ ಮೊದಲ ಆರು ತಿಂಗಳುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಯಾರು ಕಾಯಿಲೆಯಿಂದ ಬಳಲುತ್ತಾರೆ ? ಹೆಸರೇ ಹೇಳುವಂತೆ ಇದು ಮುಖ್ಯವಾಗಿ ಮಂಗಗಳ ಕಾಯಿಲೆ. ಕಾಯಿಲೆಗೆ ತುತ್ತಾದ ಮಂಗವು ಸಾವನ್ನಪ್ಪುತ್ತದೆ. ರೋಗದಿಂದ ಬಳಲುವ ಮಂಗಗಳ ರಕ್ತವನ್ನು ಹೀರಿದ ಉಣ್ಣೆಯು ಮನುಷ್ಯರನ್ನು ಕಚ್ಚಿದಾಗ, ವೈರಾಣು ಮನುಷ್ಯರ ದೇಹವನ್ನು ಪ್ರವೇಶಿಸುತ್ತದೆ. ಹೀಗೆ, ಮನುಷ್ಯರು ಆಕಸ್ಮಿಕವಾಗಿ ಈ ಕಾಯಿಲೆಗೆ ತುತ್ತಾಗುತ್ತಾರೆ.  3ರಿಂದ 8 ದಿನಗಳ ಕಾಲ ವೈರಾಣುಗಳು ಮನುಷ್ಯರ ದೇಹದಲ್ಲಿ ವೃದ್ಧಿಗೊಂಡು ನಂತರ ಪೂರ್ಣ ಪ್ರಮಾಣದ ಕಾಯಿಲೆಯನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ 20ರಿಂದ 40ರ ವಯೋಮಾನದ ಪುರುಷರು ಈ ಕಾಯಿಲೆಗೆ ತುತ್ತಾಗುತ್ತಾರೆ. ಸುತ್ತಮುತ್ತಲೂ ಕಾಡಿನಿಂದ ಆವೃತಗೊಂಡ ಹೊಲ-ಗದ್ದೆಗಳಲ್ಲಿ ವ್ಯವಸಾಯ ಚಟುವಟಿಕೆಗಳಲ್ಲಿ ನಿರತರಾದವರು, ಕಾಡುಗಳಲ್ಲಿ ಮರ ಹಾಗೂ ಸೌದೆ ಕಡಿಯುವವರು, ಕಾಡಿನ ಸಮೀಪವೇ ಜಾನುವಾರುಗಳನ್ನು ಮೇಯಿಸುವವರು ಮುಂತಾದವರಲ್ಲಿ ಮಂಗನ ಕಾಯಿಲೆ ಸಾಮಾನ್ಯವಾಗಿ ಕಂಡುಬರುತ್ತದೆ. 

ಗುಣಲಕ್ಷಣಗಳೇನು? 

ತೀವ್ರತರವಾದ ಜ್ವರ. ತಲೆನೋವು, ಮೈ-ಕೈ ನೋವು. ಮೂಗು, ಬಾಯಿ ಅಥವಾ ದೇಹದ ಇತರ ಭಾಗಗಳಿಂದ ರಕ್ತಸ್ರಾವ. ಹೆಚ್ಚಿನ ರೋಗಿಗಳಲ್ಲಿ ಒಂದು ಅಥವಾ ಎರಡು ವಾರಗಳ ಬಳಿಕ ಪುನಃ ಕಾಯಿಲೆಯು ಮರುಕಳಿಸುತ್ತದೆ. ಆ ಸಮಯದಲ್ಲಿ ವ್ಯಕ್ತಿ ಮೆದುಳಿನ ಉರಿಯೂತ, (Meningoencephalitis) ಜ್ವರ, ಕುತ್ತಿಗೆಯಲ್ಲಿ ಬಿಗಿಯುವಿಕೆ, ವಾಂತಿ, ತಲೆನೋವು ಮುಂತಾದ ಗುಣಲಕ್ಷಣಗಳಿಂದ ಬಳಲಬಹುದು. ಒಮ್ಮೊಮ್ಮೆ ವ್ಯಕ್ತಿಯು ಅರೆ ಪ್ರಜ್ಞಾಹೀನ ಸ್ಥಿತಿಯನ್ನು ತಲುಪಬಹುದು. ರೋಗಿಯ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ವೈರಾಣುವಿನ ಅಂಶವನ್ನು ಗುರುತಿಸಿ ನಂತರವೇ ಕಾಯಿಲೆಯನ್ನು ಧೃಡಪಡಿಸಬಹುದು. ರಕ್ತದ ಮಾದರಿಯನ್ನು ಶಿವಮೊಗ್ಗದಲ್ಲಿರುವ ಕೆ. ಎಫ್. ಡಿ. ವೈರಾಣುವಿನ ಅಂಶವನ್ನು ಪತ್ತೆ ಮಾಡುವ ಸೌಲಭ್ಯವಿರುವ ಪ್ರಯೋಗಾಲಯಕ್ಕೆ ಕಳುಹಿಸಬೇಕಾಗುತ್ತದೆ.  ಕೆ.ಎಫ್.ಡಿ. ಕಾಯಿಲೆಯ ಗುಣಲಕ್ಷಣಗಳು ಕಂಡು ಬಂದ ವ್ಯಕ್ತಿಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪ್ರಾರಂಭಿಸಬೇಕು.ಪ್ರಯೋಗಾಲಯದ ವರದಿಯನ್ನು ಕಾಯದೆ, ರೋಗಲಕ್ಷಣಗಳನ್ನು ಆಧರಿಸಿಯೇ ಚಿಕಿತ್ಸೆಯನ್ನು ಆರಂಭಿಸಿ, ವ್ಯಕ್ತಿಯ ಆರೋಗ್ಯ ಸ್ಥಿತಿಯು ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು. ಕೆಲಸಕ್ಕೆ ಹೋಗುವಾಗ ದೇಹವು ಸಂಪೂರ್ಣವಾಗಿ ಮುಚ್ಚುವಂತೆ ಬಟ್ಟೆಗಳನ್ನು ಧರಿಸಬೇಕು. 

ಆರೋಗ್ಯ ಶಿಕ್ಷಣ ಮೊಟ್ಟಮೊದಲನೆಯದಾಗಿ ಜನರು ಅವರು ಕೆಲಸಕ್ಕೆ ಹೋದ ಸ್ಥಳಗಳಲ್ಲಿ ಯಾವುದಾದರೂ ಮಂಗ ಮೃತ ಪಟ್ಟಿದ್ದನ್ನು ಗಮನಿಸಿದರೆ, ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತಿಳಿಸಬೇಕು. ಏಕೆಂದರೆ ಈ ಪ್ರದೇಶಗಳಲ್ಲಿ ಕೆ.ಎಫ್.ಡಿ. ಕಾಯಿಲೆಯ ನಿಯಂತ್ರಣಕ್ಕೆಂದೇ ಆರೋಗ್ಯ ಇಲಾಖೆಯ ವತಿಯಿಂದ ಅಧಿಕಾರಿಗಳ ಒಂದು ತಂಡ ಕಾರ್ಯ ನಿರ್ವಹಿಸುತ್ತಿರುತ್ತದೆ. ಈ ತಂಡದಲ್ಲಿ ವೈದ್ಯರು, ಪಶುವೈದ್ಯರು, ಅರಣ್ಯ ಸಂರಕ್ಷಣಾಧಿಕಾರಿಗಳು, ಪ್ರಾಣಿನಿರ್ವಾಹಕರು, ಪಂಚಾಯತಿಯ ಸದಸ್ಯರು ಮೊದಲಾದವರು ಇರುತ್ತಾರೆ. ಇವರಿಗೆ ಮಂಗವು ಮೃತಪಟ್ಟಿದ್ದರ ಬಗ್ಗೆ ಮಾಹಿತಿ ಕೊಟ್ಟರೆ ಅವರು ಕೂಡಲೇ ಕಾರ್ಯೋನ್ಮುಖರಾಗುತ್ತಾರೆ. ಮೃತ ಮಂಗದ ಮರಣೋತ್ತರ ಪರೀಕ್ಷೆ ನಡೆಸಿ, ದೇಹದಿಂದ ಕೆಲವು ಅಂಗಾಂಗಗಳ ಮಾದರಿ ಹಾಗೂ ಅಲ್ಲಿ ದೊರೆಯಬಹುದಾದ ಉಣ್ಣೆಹುಳುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸುವ ಏರ್ಪಾಡನ್ನು ಮಾಡುತ್ತಾರೆ. ಅಲ್ಲದೆ ಆ ಮೃತ ಮಂಗದ ದೇಹದ ಸುತ್ತಲೂ ಉಣ್ಣೆ ನಿವಾರಕಗಳನ್ನು ಸಿಂಪಡಿಸುತ್ತಾರೆ ಹಾಗೂ ಮೃತ ಮಂಗದ ದೇಹವನ್ನು ಸುಡುತ್ತಾರೆ. ಈ ಪ್ರಕ್ರಿಯೆ ಕಾಯಿಲೆಯನ್ನು ಹತೋಟಿಗೆ ತರಲು ಬಹಳವೇ ಮುಖ್ಯ. 

ಹೊಲಗದ್ದೆಗಳಲ್ಲಿ, ಕಾಡಿನಲ್ಲಿ ಕೆಲಸ ಮುಗಿಸಿ ಮನೆಗೆ ಬಂದ ಕೂಡಲೆ ಸ್ವತಃ ದೇಹವನ್ನು ಪರೀಕ್ಷಿಸಿಕೊಂಡು, ಉಣ್ಣೆಹುಳುಗಳು ಇದ್ದಲ್ಲಿ ಅದನ್ನು ಹೊರತೆಗೆದುಕೊಳ್ಳಬೇಕು ಹಾಗೂ ಬಿಸಿನೀರಿನಲ್ಲಿ ಸ್ನಾನ ಮಾಡಬೇಕು. ಧರಿಸಿದ ಬಟ್ಟೆಗಳನ್ನು ಕೂಲಂಕಷವಾಗಿ ಗಮನಿಸಿ, ಅಲ್ಲಿರಬಹುದಾದ ಉಣ್ಣೆಹುಳುಗಳನ್ನು ತೆಗೆಯುವುದು. ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯುವುದು. ಉಣ್ಣೆಹುಳುವಿನ ಕಡಿತದಿಂದ ಪಾರಾಗಲು ನೆಲದ ಮೇಲೆ ಕೂರುವ ಹಾಗೂ ಮಲಗುವ ಮತ್ತು ಬರಿಗಾಲಿನಲ್ಲಿ ನಡೆಯುವ ಅಭ್ಯಾಸವನ್ನು ತಪ್ಪಿಸುವುದು.  ಕೆ.ಎಫ್.ಡಿ. ಕಾಯಿಲೆಯ ಯಾವುದೇ ಗುಣಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರಲ್ಲಿ ಹೋಗಿ ಚಿಕಿತ್ಸೆ ಪಡೆಯುವುದು. 
ಈ ಎಲ್ಲಾ ಮುಂಜಾಗರೂಕ ಕ್ರಮಗಳನ್ನು ಅನುಸರಿಸುವುದರಿಂದ ಹಾಗೂ ರೋಗದ ಗುಣಲಕ್ಷಣಗಳು ಕಂಡ ಕೂಡಲೇ ನಿರ್ಲಕ್ಷಿಸದೆ ವೈದ್ಯರಲ್ಲಿ ಹೋಗಿ ಸೂಕ್ತ ಚಿಕಿತ್ಸೆಯನ್ನು ಪಡೆಯುವುದರಿಂದ ಮಂಗನ ಕಾಯಿಲೆಯನ್ನು ಹತೋಟಿಯಲ್ಲಿಡಬಹುದು; ಅದರಿಂದಾಗುವ ಸಾವು–ನೋವುಗಳನ್ನೂ ಕಡಿಮೆಮಾಡಬಹುದು.  

ಮುಂಜಾಗ್ರತೆ ಹಾಗೂ ನಿಯಂತ್ರಣ ಹೇಗೆ? 

ಉಣ್ಣೆಹುಳುಗಳ ನಿಯಂತ್ರಣ: ಕಾಯಿಲೆಯು ವ್ಯಾಪಕವಾಗಿ ಕಾಣಿಸಿಕೊಂಡ ಸ್ಥಳಗಳಲ್ಲಿ ಉಣ್ಣೆನಾಶಕ ಔಷಧಗಳನ್ನು ಸಿಂಪಡಿಸಬೇಕು. ಮಂಗಗಳು ಮೃತಪಟ್ಟ ಸ್ಥಳದ ಸುತ್ತಲೂ ತೀವ್ರಗತಿಯಲ್ಲಿ ಔಷಧವನ್ನು ಸಿಂಪಡಿಸಬೇಕು. ಮೃತ ಪಟ್ಟ ಮಂಗಗಳು ದೊರೆತ ಸ್ಥಳದ ಸುತ್ತಲೂ ಸುಮಾರು ಐವತ್ತು ಮೀಟರ್ ದೂರದವರೆಗೆ ಈ ಸಿಂಪಡಣವನ್ನು ಮಾಡಬೇಕು. ಉಣ್ಣೆನಾಶಕಗಳಾದ ಕಾರ್ಬೋರಿಲ್, (carboryl) ಫೆಂತಿಯಾನ್ (Fenthion) ಮತ್ತು ಪ್ರೊಪೊಕ್ಸರ್ (Propoxur) – ಇಂಥವನ್ನು  ಹೆಕ್ಟೇರಿಗೆ ಸುಮಾರು 2.25 ಕೆ.ಜಿ.ಯಷ್ಟು ಸಿಂಪಡಿಸಬೇಕು. ಜಾನುವಾರುಗಳ ಓಡಾಟದ ನಿಯಂತ್ರಣ: ಇಂತಹ ಪ್ರದೇಶಗಳಲ್ಲಿ ಜಾನುವಾರುಗಳನ್ನು ಕಾಡುಗಳಲ್ಲಿ ಮೇಯಲು ಬಿಡುವುದನ್ನು ನಿಷೇಧಿಸಬೇಕು. ಉಣ್ಣೆಹುಳುಗಳು ಜಾನುವಾರುಗಳ ದೇಹದ ಮೇಲೆ ಆಶ್ರಯ ಪಡೆಯುವುದರಿಂದ ಅವುಗಳನ್ನು ಆದಷ್ಟು ಮನೆಯಲ್ಲಿಯೇ ಮೇವು ಒದಗಿಸಿ ನೋಡಿಕೊಳ್ಳಬೇಕು. ಜಾನುವಾರುಗಳಿಗೂ ಉಣ್ಣೆಗಳಿಂದ ರಕ್ಷಣೆಯನ್ನು ಒದಗಿಸಬೇಕು. 

ಕೆ.ಎಫ್.ಡಿ. ನಿರೋಧಕ ಲಸಿಕೆ ಮಂಗ, ಮನುಷ್ಯ ಹಾಗೂ ಉಣ್ಣೆ – ಈ ಮೂರರಿಂದ ಪಡೆದ ರಕ್ತದ ಮಾದರಿಯಲ್ಲಿ ವೈರಾಣುವಿನ ಅಂಶ ಕಂಡು ಬಂದಂತಹ ಪ್ರದೇಶ ಹಾಗೂ ಅಲ್ಲಿಂದ ಐದು ಕಿಲೋಮೀಟರ್ ಸುತ್ತಲಿನ ಪ್ರದೇಶಗಳನ್ನು ಮಂಗನ ಕಾಯಿಲೆ ಅಪಾಯವಿರುವ ಪ್ರದೇಶಗಳು ಎಂದು ಗುರುತಿಸಲಾಗುತ್ತದೆ. ಈ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಕೆ. ಎಫ್. ಡಿ. ಲಸಿಕೆಯನ್ನು ಹಾಕಲಾಗುತ್ತದೆ. ಸಾಮಾನ್ಯವಾಗಿ ಏಳರಿಂದ ಅರವತ್ತೈದು ವರ್ಷ ವಯೋಮಾನದ ಎಲ್ಲ ಸ್ತ್ರೀ–ಪುರುಷರಿಗೆ ಈ ಲಸಿಕೆಯನ್ನು ಹಾಕಲಾಗುತ್ತದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿಯೇ ಈ ಲಸಿಕೆಯನ್ನು ಹಾಕಿಸಿಕೊಳ್ಳುವುದು ಹೆಚ್ಚು ಸೂಕ್ತ. ಮೊದಲೆರಡು ಚುಚ್ಚುಮದ್ದುಗಳನ್ನು ಒಂದು ತಿಂಗಳಿನ ಅಂತರದಲ್ಲಿ ಹಾಕಿಸಿಕೊಳ್ಳಬೇಕು. ನಂತರದ ಹೆಚ್ಚುವರಿ ಚುಚ್ಚುಮದ್ದುಗಳನ್ನು ಆರು ತಿಂಗಳ ಬಳಿಕ, ಒಂದು ವರ್ಷದ ಬಳಿಕ, ನಂತರ ವರ್ಷಕ್ಕೊಂದಂತೆ ಐದು ವರ್ಷಗಳವರೆಗೆ ಹಾಕಿಸಿಕೊಳ್ಳಬೇಕು. ಶರೀರಕ್ಕೆ ಉಣ್ಣೆ ನಿವಾರಕಗಳ ಲೇಪನ: ಆರೋಗ್ಯ ಇಲಾಖೆಯು ಅಪಾಯ ಪ್ರದೇಶದ ಜನರಿಗೆ ಉಚಿತವಾಗಿ ಉಣ್ಣೆನಿವಾರಕ ಔಷಧಗಳನ್ನು (ಡೈಮಿಥೈಲ್ ಫ್ತ್ಯಾಲೇಟ್‍ Dimethylphthalate) ) ಪೂರೈಸುತ್ತದೆ. ಹೊಲಗದ್ದೆಗಳಿಗೆ ಕೆಲಸಕ್ಕೆ ಹೋಗುವ ಮೊದಲು ಈ ಔಷಧವನ್ನು ಕೈ ಕಾಲುಗಳಿಗೆ ಲೇಪಿಸಿಕೊಳ್ಳಬೇಕು. 

Also read  Mushroom Coffee : Latest healthy caffeine

Leave a Reply