CardamomFeatured News

‘ಮಂಜರಾಬಾದ್‌ ಏಲಕ್ಕಿ’-ಸಕಲೇಶಪುರ ಭಾಗದ ಹೆಗ್ಗಳಿಕೆ ಈ ಏಲಕ್ಕಿ ತಳಿ

ದೇಶಿಯ ಮಾರುಕಟ್ಟೆಯಲ್ಲಿ ಬಹುತೇಕ ಕೇರಳ ತಳಿಯ ಗ್ರೀನ್‌ ಏಲಕ್ಕಿ ಮಾರುಕಟ್ಟೆ ಆವರಿಸಿದ್ದು ,ಹೆಚ್ಚಿನ ಜನರಿಗೆ ‘ಮಂಜರಾಬಾದ್‌ ಏಲಕ್ಕಿ’ ಬಗ್ಗೆ ಮಾಹಿತಿ ಇಲ್ಲ. ಕೊಡಗು, ಚಿಕ್ಕಮಗಳೂರು, ಸಕಲೇಶಪುರ ಭಾಗದಲ್ಲಿ ಮಾತ್ರ ಸಿಗುವ ಈ ಏಲಕ್ಕಿ ಚಿನ್ನದ ಬಣ್ಣ ಹಾಗೂ ವಿಶೇಷ ಪರಿಮಳ ಹೊಂದಿದ್ದು, ಗಾತ್ರದಲ್ಲಿ ದೊಡ್ಡದಿರುತ್ತದೆ. ಪಶ್ಚಿಮ ಘಟ್ಟದ ಹಸಿರು ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಈ ಏಲಕ್ಕಿಗೆ ಸುಮಾರು 70 ವರ್ಷಗಳ ಇತಿಹಾಸವಿದೆ.

ಮಂಜರಾಬಾದ್ ಏಲಕ್ಕಿ ಒಂದು ವೈವಿಧ್ಯಮಯ ಹಸಿರು ಏಲಕ್ಕಿಯಾಗಿದ್ದು, ಇದನ್ನು ಭಾರತದ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಬೆಳೆಯಲಾಗುತ್ತದೆ. ಇದನ್ನು ಮಲಯ ಯಾಲಕ್ಕಿ ಎಂದೂ ಕರೆಯುತ್ತಾರೆ ಮತ್ತು 2009 ರಲ್ಲಿ ಇದನ್ನು “ಕೂರ್ಗ್ ಗ್ರೀನ್ ಏಲಕ್ಕಿ” ಎಂದು ನೋಂದಾಯಿಸಲಾಗಿದೆ.

ಒಂದು ಕಾಲದಲ್ಲಿ ಸಕಲೇಶಪುರ ಭಾಗದ ಹೆಗ್ಗಳಿಕೆಯಾಗಿದ್ದ ಈ ಏಲಕ್ಕಿ ತಳಿ ದೇಶ-ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿತ್ತು.ಸಕಲೇಶಪುರದ ಬಿಎಂ ರಸ್ತೆಯಲ್ಲಿರುವ ಏಲಕ್ಕಿ ಹರಾಜು ಹಾಗೂ ಖರೀದಿ ಕೇಂದ್ರಗಳಿಗೆ ಗುಜರಾತ್‌ ,ಮುಂಬೈ, ಹೊಸದಿಲ್ಲಿಯಿಂದ ದೊಡ್ಡ ದೊಡ್ಡ ವ್ಯಾಪಾರಸ್ಥರು ಬಂದು ಉತ್ತಮ ಬೆಲೆಗೆ ಇಲ್ಲಿನ ಏಲಕ್ಕಿಯನ್ನು ಖರೀದಿಸಿ ದೇಶ ಹಾಗೂ ವಿದೇಶಿ ಮಾರುಕಟ್ಟೆಗೆ ರಫ್ತು ಮಾಡುತ್ತಿದ್ದರು. ಇದರಿಂದ ಸ್ಥಳೀಯ ಬೆಳೆಗಾರರಿಗೆ ಬಂಪರ್‌ ಲಾಭ ಸಿಗುತ್ತಿತ್ತು.

ಎರಡು ದಶಕಗಳ ಹಿಂದೆ ಸಕಲೇಶಪುರ ಭಾಗ ‘ಏಲಕ್ಕಿಗಳ ಕಣಜ’ಎಂದೇ ಪ್ರಖ್ಯಾತಿ ಪಡೆದಿತ್ತು. ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟ ವ್ಯಾಪ್ತಿಯ ಹೆತ್ತೂರು ಹೋಬಳಿಯ ಹೊಂಗಡ ಹಳ್ಳ, ಕಾಗಿನೆರೆ, ಅತ್ತಿಹಳ್ಳಿ, ಯರಗಳ್ಳಿ , ಮಾವನೂರು, ಕಡ್ರಳ್ಳಿ, ಪಟ್ಲ, ಬಿಸಿಲೆ, ಮಂಕನಹಳ್ಳಿ ಹಾಗೂ ಯಸಳೂರು ಹೋಬಳಿಯ ಚಂಗಡಹಳ್ಳಿ, ಉಚ್ಚಂಗಿ, ತಂಬಲಗೇರಿ, ಮಾಗೇರಿ, ಹಾನುಬಾಳು ಹೋಬಳಿಯ ಅಗ್ನಿ ಬಿಳಿನೆಲೆ, ವಡಚಹಳ್ಳಿ ಸುತ್ತಮುತ್ತ ನೂರಾರು ಗ್ರಾಮಗಳಲ್ಲಿ ಸಾವಿರಾರು ಟನ್‌ ಏಲಕ್ಕಿ ಬೆಳೆಯಲಾಗುತ್ತಿತ್ತು.

ಆದರೀಗ ಹವಾಮಾನ ಬದಲಾವಣೆ, ವಿಪರೀತ ಮಳೆಯಿಂದ ಮಣ್ಣಿನ ಫಲವತ್ತತೆ ನಾಶ, ಕಟ್ಟೆ ರೋಗ, ಕೊಳೆ ರೋಗ, ಸ್ಥಿರ ಬೆಲೆ ಕುಸಿತ, ಕಾರ್ಮಿಕರ ಕೊರತೆ, ಕಾಡಾನೆ-ಕಾಡು ಹಂದಿ ಹಾವಳಿ, ಏರಿಕೆಯಾಗದ ದರ ಇನ್ನಿತರ ಪ್ರಮುಖ ಕಾರಣಗಳಿಂದ ‘ಮಂಜರಾಬಾದ್‌ ಏಲಕ್ಕಿ’ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಬೆಳೆಗಾರರು ಸಹ ಬೆಳೆಯಿಂದ ವಿಮುಖರಾಗಿದ್ದಾರೆ.

ಎರಡು ದಶಕಗಳ ಹಿಂದೆ ಒಂದು ಕೆಜಿ ಏಲಕ್ಕಿಗೆ 1500 ರೂ. ಇತ್ತು. ಇದೀಗ 2,600 ರೂ. ಇದೆ. ಕಳೆದ 20 ವರ್ಷಗಳಿಂದ ಕೇವಲ 1,200 ರೂ. ಬೆಲೆ ಮಾತ್ರ ಏರಿಕೆಯಾಗಿದ್ದು, ಬೆಳೆಗಾರರು ಏಲಕ್ಕಿ ಕೃಷಿ ಬಗ್ಗೆ ಆಸಕ್ತಿ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಅಲ್ಲದೆ ದೀರ್ಘಕಾಲದ ಬೆಳೆಯಾದ ಕಾಫಿ , ಕಾಳು ಮೆಣಸು ಬೆಳೆಗಳಿಂದ ರೈತರಿಗೆ ಬಂಪರ್‌ ಲಾಭ ಸಿಗುತ್ತಿದ್ದು, ಏಲಕ್ಕಿ ಬೆಳೆ ಕಡಿಮೆಯಾಗಲು ಮತ್ತೊಂದು ಕಾರಣ ಎನ್ನಲಾಗಿದೆ.

ನೈಸರ್ಗಿಕವಾಗಿ ಬೆಳೆಯುವ ‘ಮಂಜರಾಬಾದ್‌ ಏಲಕ್ಕಿ’ ತಳಿ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ಕೊರತೆ ಇದೆ. ಸಾಂಬಾರ ಮಂಡಳಿ ಅಕಾರಿಗಳು ಬೆಳೆಗಾರರಿಗೆ ಅರಿವು ಮೂಡಿಸಬೇಕಿದೆ.

Also read  Pepper cultivation declines in Wayanad within 15 years

Leave a Reply