CoffeeFeatured News

ಕಾಫಿ ಬೆಳೆಗಾರರಿಗೆ ಹುಸಿಯಾಗಿಯೇ ಉಳಿದ ಉಚಿತ ಕರೆಂಟ್

ಕಾಫಿ ಬೆಳೆಗಾರರಿಗೆ 10 ಹೆಚ್. ಪಿ ತನಕ ಸೆಟ್‌ಗೆ ಉಚಿತ ವಿದ್ಯುತ್ ಕೊಡಲಾಗುವುದು ಎನ್ನುವ ಸರಕಾರದ ಘೋಷಣೆ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಎಂದೇ ವಿಶ್ಲೇಷಿಸಲಾಗುತ್ತಿದೆ. ಬೆಳೆಗಾರರು ತಾವು ಬಳಸಿದ ವಿದ್ಯುತ್‌ಗೆ ಬಿಲ್‌ ಪಾವತಿಸಲೇಬೇಕಾಗಿದೆ. ಇದರಲ್ಲಿ ಎಲ್ಲಾ ತೆರಿಗೆ ಮುರಿದು ಉಳಿದ ಮೊತ್ತವನ್ನು ಡಿಬಿಟಿ ಮೂಲಕ ಬೆಳೆಗಾರರಿಗೆ ಮರುಸಾವತಿಸುವ ವ್ಯವಸ್ಥೆಯನ್ನು ಸರಕಾರ ರೂಪಿಸಿದೆ.

ಉಳಿದ ಕೃಷಿಗೂ ಇರುವಂತೆ ತಮಗೂ ನೀರಾವರಿಗೆ ಉಚಿತ ವಿದ್ಯುತ್‌ ಬೇಕು ಎನ್ನುವುದು ಕೊಡಗು ,ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ಬಳೆಗಾರರ ಬಹುವರ್ಷಗಳ ಬೇಡಿಕೆ. ಸಾಮಾನ್ಯವಾಗಿ ಕಾಫಿ ಬೆಳೆಗಾರರು ತಮ್ಮ ತೋಟಗಳಿಗೆ ನೀರು ಹಾಯಿಸಲು ವರ್ಷದಲ್ಲಿ ಕೇವಲ 2-3 ತಿಂಗಳು ಮಾತ್ರ ವಿದ್ಯುತ್‌ ಚಾಲಿತ ಪಂಪ್‌ಸೆಟ್‌ಗಳನ್ನು ಬಳಸುತ್ತಾರೆ. ಆದರೆ ಬಳಸಿದ ವಿದ್ಯುತ್‌ ಶುಲ್ಕ ಜೊತಗೆ ಕನಿಷ್ಠ ಶುಲ್ಕವನ್ನು ವರ್ಷದ ಎಲ್ಲ ತಿಂಗಳು ಕಟ್ಟಿಲೇಬೇಕು. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌, ವಿರಾಜಪೇಟೆ ಶಾಸಕ ಬೋಪಯ್ಯ ಸೇರಿದಂತೆ ಕಾಫಿ ಪ್ರದೇಶದ ಶಾಸಕರು ಬೆಳೆಗಾರರ ಪರವಾಗಿ ಈ ವಿಷಯದಲ್ಲಿ ಆಗಾಗ್ಗೆ ಧ್ವನಿ ಎತ್ತುತ್ತಲೇ ಇದ್ದರು. ಬೆಳೆಗಾರ ಸಂಘಟನೆಗಳ ಪ್ರತಿನಿಧಿಗಳೂ ಸಾಕಷ್ಟು ಬಾರಿ ವಿಧಾನಸೌಧದ ಮೆಟ್ಟಿಲು ಹತ್ತಿದರು. ಇದರ ಪರಿಣಾಮ ಎಂಬಂತೆ ಸಣ್ಣ ಮತ್ತು ಮಧ್ಯಮ ಕಾಫಿ ಮತ್ತು ಟೀ ಬೆಳೆಗಾರರ 10 HP ವರೆಗಿನ ಪಂಪ್ ಸೆಟ್ ಗಳ ವಿದ್ಯುತ್ ಶುಲ್ಕ ಮರುಪಾವತಿಸಲು ಒಂದು ಯೋಜನೆ ರೂಪಿಸಲಾಗುವುದು ಎಂದು ೨೦೨೦-೨೧ ನೇ ಸಾಲಿನ ಬಜೆಟ್ ನಲ್ಲಿ ಸರಕಾ ಪ್ರಕಟಿಸಿ ನಂತರ ಹಿಂತೆಗೆದುಕೊಂಡಿತ್ತು.

ಜನಪ್ರತಿನಿಧಿಗಳ ಒತ್ತಡ ಮತ್ತೆ ಹೆಚ್ಚಾದಾಗ ಕಳೆದ ವರ್ಷದ ಮಾರ್ಚ್‌ನಲ್ಲಿ ನಡದ ಅಧಿವೇಶನ ಸಂದರ್ಭ ಇಂಧನ ಸಚಿವರು, ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಲಾಗಿದೆ. 10 HP ತನಕ ಕಾಫಿ ಬೆಳೆಗಾರರಿಗೆ ಸಬ್ಸಿಡಿ ಕೊಡಲು ಸರಕಾರ ತೀರ್ಮಾನ ಮಾಡಿದೆ ಎಂದು ಮುಖ್ಯಮಂತ್ರಿಗಳು ಪ್ರಕಟಿಸಿದರು. ಆದರೂ ಬೆಳೆಗಾರರಿಗೆ ನಿರೀಕ್ಷಿತ ಪ್ರಯೋಜನ ಆಗದ ಕಾರಣಕ್ಕೆ ಈ ಹಿಂದಿನ ಅಧಿವೇಶನದಲ್ಲಿ ಶಾಸಕ ಅಪ್ಪಚ್ಚು ರಂಜನ್‌ಮತ್ತೆ ವಿಷಯ ಪ್ರಸ್ತಾಪಿಸಿದರು. ಆಗ ಉತ್ತರಿಸಿದ್ದ ಇಂಧನ ಸಚಿವ ಸುನಿಲ್ ಕುಮಾರ್, ಕಾಫಿ ಬೆಳೆಗಾರರ 10 HP ತನಕದ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಕೊಡಲು ಸರಕಾರ ಅನುಮೋದನೆ ನೀಡಿದೆ ಎಂದು ಪ್ರಕಟಿಸಿದ್ದರು . ಆದರೆ ಅದು ಕಾರ್ಯರೂಪಕ್ಕೆ ಬರಲೇ ಇಲ್ಲಾ . ಸರಕಾರ ಕೊಟ್ಟಿದ್ದ ಮಾತಿನಂತೆ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್‌ ಇನ್ನು ಕೂಡ ಮರೀಚಿಕೆಯೇ ಆಗಿದೆ. ತಾವು ಬಳಸಿದ ನಿದ್ಯುತ್‌ಗೆ ಬಿಲ್‌ ಪಾವತಿಸಲೇಬೇಕಾದ ಆನಿರ್ವಾಯತೆ ಬೆಳೆಗಾರರದ್ದು.

ವರದಿ: ಜನಮಿತ್ರ ಹಾಸನ

Also read  Dry Brazilian weather, fund buying boosts arabica coffee