CoffeeFeatured News

ಕಾಫಿ ಕಾಯಿಗೆ ಕೊಳೆರೋಗ ಬಾಧೆ :ಬೆಳೆಗಾರಲ್ಲಿ ಆತಂಕ

ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳೆಗಾರರು ಆತಂಕಗೊಳ್ಳುವಂತಾಗಿದೆ.ಜುಲೈ ತಿಂಗಳಿನಲ್ಲಿಯೇ ಬಹುತೇಕ ಕಡೆಗಳಲ್ಲಿ ಕಾಫಿ ಕೊಳೆ ರೋಗ ಕಾಣಿಸಿಕೊಳ್ಳುತ್ತಿರುವುದರೊಂದಿಗೆ ಉದುರುವಿಕೆಯೂ ಹೆಚ್ಚಾಗುತ್ತಿದೆ.ಈಗಾಗಲೇ ಹಲವೆಡೆಗಳಲ್ಲಿ ಕಾಫಿ ತೋಟಗಳಲ್ಲಿ ಈ ಸಮಸ್ಯೆ ಎದುರಾಗಿರುವ ಬಗ್ಗೆ ಬೆಳೆಗಾರರು ನೋವು ತೋಡಿಕೊಂಡಿದ್ದ,ಅಗತ್ಯ ಕ್ರಮಕ್ಕೆ ಒತ್ತಾಯಿಸಿದ್ದಾರೆ.ಕಾಯಿ ಕಟ್ಟಿರುವ ಕಾಫಿ ಗಿಡದಲ್ಲೇ ಕೊಳೆಯುತ್ತಿದೆ. ಇದರೊಂದಿಗೆ ದಿನೇ ದಿನೇ ಉದುರುವಿಕೆ ಹೆಚ್ಚುತ್ತಿದೆ.ಮಳೆಗಾಲದ ಅವಧಿ ಇನ್ನೂ ಬಾಕಿ ಉಳಿದಿದ್ದು, ಈ ಸಮಯದಲ್ಲಿ ಮತ್ತಷ್ಟು ಹಾನಿಯಾಗುವ ಸಾಧ್ಯತೆಗಳ ಬಗ್ಗೆ ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕೊಡಗಿನ ಶ್ರೀಮಂಗಲ, ಕುರ್ಚಿ, ಬೀರುಗ, ಟಿ. ಶೆಟ್ಟಿಗೇರಿ, ನೆಮ್ಮಲೆ ಭಾಗದಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಕಾಫಿ ಬೆಳೆ ನೆಲ ಕಚ್ಚಿದೆ. ಇದಲ್ಲದೇ ಜಿಲ್ಲೆಯ ವಿವಿಧೆಡೆಯೂ ಕಾಫಿಯೂ ನೆಲ ಕಚ್ಚಿದೆ. ಜೂನ್‌, ಜುಲೈನಲ್ಲಿ ಮಳೆಯ ಅಬ್ಬರಕ್ಕೆ ಶೇ. 8 – 10ರಷ್ಟು ಕಾಫಿ ಫಸಲು ಉದುರುವುದು ಸಾಮಾನ್ಯವಾದರೂ ಮಳೆ ಹೆಚ್ಚಾಗುತ್ತಲೇ ಇರುವುದು ಬೆಳೆಗಾರರ ಆತಂಕಕ್ಕೆ ಕಾರಣ.

ಅಧಿಕಾರಿಗಳಿಂದ ಪರಿಶೀಲನೆ: ಕಾಫಿ ಹಾನಿ ಬಗ್ಗೆ ಉನ್ನತ ಅಧಿಕಾರಿಗಳ ಆದೇಶದಂತೆ ಕಾಫಿ ಮಂಡಳಿಯ ಅಧಿಕಾರಿಗಳು ಶ್ರೀಮಂಗಲ, ಕುರ್ಚಿ, ಬೀರುಗ, ಟಿ. ಶೆಟ್ಟಿಗೇರಿ, ನೆಮ್ಮಲೆ ಹಾಗೂ ಸುತ್ತಮುತ್ತಲಿನ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಹಾಗೂ ವಿಜ್ಞಾನಿಗಳ ತಂಡದೊಂದಿಗೆ ಮತ್ತೊಮ್ಮೆ ಭೇಟಿ ನೀಡುವುದಾಗಿ ಕಾಫಿ ಮಂಡಳಿ ಉಪ ನಿರ್ದೇಶಕ ಶಿವಕುಮಾರ ಸ್ವಾಮಿ ವಿಕಗೆ ಪ್ರತಿಕ್ರಿಯಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲದಿನಗಳಿಂದ ಸತತವಾಗಿ ಮಳೆಯಾಗುತ್ತಿದ್ದು ಮಲೆನಾಡು ಭಾಗದ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ ಕಾಫಿತೋಟಗಳಲ್ಲಿ ಕಾಯಿ ಕೊಳೆರೋಗ ಕಾಣಿಸಿಕೊಂಡಿದೆ.ಗಿಡಗಳಲ್ಲಿ ಕಾಫಿ ಕಾಯಿಗಳು ಕಪ್ಪಾಗಿವೆ. ಕಾಯಿಗಳು ಉದುರಿವೆ. ಎಲೆಗಳು ಕಪ್ಪಾಗಿವೆ. ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.

‘ಈ ವರ್ಷ ಒಳ್ಳೆ ಫಸಲು ಇತ್ತು. ಉತ್ತಮ ಇಳುವರಿ, ಆದಾಯ ನಿರೀಕ್ಷೆ ಇತ್ತು. ಕೊಳೆರೋಗ, ‘ವೆಟ್‌ ಫೀಟ್‌’ನಿಂದಾಗಿ ಈಗ ಶೇ 15ರಿಂದ 20ರಷ್ಟು ಫಸಲು ಹಾಳಾಗಿದೆ. ಮಳೆ ಎಲ್ಲದಕ್ಕೂ ತೊಡಕಾಗಿದೆ. ಫಸಲು ಉಳಿಸಿಕೊಳ್ಳಲು ಏನು ಮಾಡಬೇಕು ಎಂದು ದಿಕ್ಕುತೋಚುತ್ತಿಲ್ಲ’ ಎಂದು ಕಳಸ ತಾಲ್ಲೂಕಿನ ಬೆಳೆಗಾರ ರಜಿತ್‌ ಕೆಳಗೂರು ಅಳಲು ತೋಡಿಕೊಂಡರು.

ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ, ತರೀಕೆರೆ (ಭಾಗಶಃ) ತಾಲ್ಲೂಕುಗಳಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಕಾಫಿಯೂ ಒಂದು.ಜಿಲ್ಲೆಯಲ್ಲಿ ಸುಮಾರು 90 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ತೋಟಗಳು ಇವೆ. ಅರೇಬಿಕಾ ಮತ್ತು ರೋಬಸ್ಟ ತಳಿಗಳು ಇವೆ. ಎರಡು ತಳಿಗಳಿಗೂ ರೋಗ ಬಾಧಿಸುತ್ತಿದೆ. ಹೆಚ್ಚು ಶೀತದ ಪರಿಣಾಮ ಬೇರಿಗೆ ಆಮ್ಲಜನಕದ ಕೊರತೆಯಾಗಿ ಹಸಿರುಕಾಯಿ ಉದುರುವ ‘ವೆಟ್ ಫೀಟ್‌’ ಕೂಡಾ ಬಾಧಿಸುತ್ತಿದೆ.

‘ಕಾಫಿ ಕಾಯಿ ಬಲಿಯುವ ಕಾಲ ಇದು. ಕೊಳೆರೋಗದಿಂದಾಗಿ ಗಿಡಗಳಲ್ಲಿ ಈಚುಗಳು ಕೊಳೆತು ನೆಲಕಚ್ಚುತ್ತಿವೆ. ಜಿಲ್ಲಾಡಳಿತ ಕಾಫಿ ಬೆಳೆ ಹಾನಿ ಸಮೀಕ್ಷೆಗೆ ಪ್ರತ್ಯೇಕ ತಂಡ ರಚಿಸಬೇಕು. ನಷ್ಟ ಅಂದಾಜಿಸಿ ಬೆಳೆಗಾರರಿಗೆ ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಕ್ರಮ ವಹಿಸಬೇಕು’ ಎಂದು ಬೆಳೆಗಾರ ಹೊಲದಗದ್ದೆ ಗಿರೀಶ್‌ ಒತ್ತಾಯಿಸುತ್ತಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಏರುಮುಖದಲ್ಲಿದೆ. ಕಾಫಿಯಿಂದ ಉತ್ತಮ ಆದಾಯ ಸಿಗಬಹುದು ಎಂಬ ನಿರೀಕ್ಷೆ ಬೆಳೆಗಾರರಲ್ಲಿ ಇತ್ತು.

Also read  ಫಸಲಿನ ಅವಧಿಯಲ್ಲೇ ಹೂ ಬಿಟ್ಟ ಕಾಫಿ