ಕಾಳುಮೆಣಸು ಧಾರಣೆ ಇನ್ನಷ್ಟು ಹೆಚ್ಚಳ ಸಾಧ್ಯತೆ
ಕಾಳುಮೆಣಸು ಧಾರಣೆಯಲ್ಲಿ ದಿನೇದಿನೆ ಹೆಚ್ಚಳವಾಗುತಿದ್ದು ಕೆಲವು ದಿನಗಳಲ್ಲಿಯೇ ಇನ್ನಷ್ಟು ಏರಿಕೆ ಸಾಧ್ಯತೆಯ ಬಗ್ಗೆ ಮಾರುಕಟ್ಟೆ ಸುಳಿವು ನೀಡಿದೆ. ಆ. 5ರಂದು ಹೊರ ಮಾರುಕಟ್ಟೆ ಯಲ್ಲಿ ಕೆ.ಜಿ.ಗೆ 640ರಿಂದ 665 ರೂ. ತನಕವೂ ಖರೀದಿಯಾಗಿದೆ. ಪುತ್ತೂರು ಕ್ಯಾಂಪ್ಕೋದಲ್ಲಿ 610 ರೂ. ತನಕ ಇತ್ತು. ಹೊರ ಮಾರುಕಟ್ಟೆ ಮತ್ತು ಸಹಕಾರ ಸಂಘಗಳು ಧಾರಣೆ ಏರಿಕೆಯಲ್ಲಿ ಪೈಪೋಟಿ ಆರಂಭಿಸಿವೆ. ಆದರೂ ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ.
ಕಾಳುಮೆಣಸು ಕೊರತೆ, ವಿದೇಶದಿಂದ ಆಮದು ನಿಯಂತ್ರಣದ ಕಾರಣದಿಂದ ಧಾರಣೆ ಏರಿಕೆ ಕಂಡಿದೆ. ಧಾರಣೆ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ. – ಕಿಶೋರ್ ಕುಮಾರ್ ಕೊಡ್ಗಿ, ಅಧ್ಯಕ್ಷ, ಕ್ಯಾಂಪ್ಕೋ
ಆಗಸ್ಟ್‌ನಲ್ಲಿ ಏರಿಕೆ ಮುಂದುವರಿಕೆ
ಈ ಹಿಂದಿನ ಮೂರು ವರ್ಷಗಳಲ್ಲಿ 500 ರೂ. ಗಡಿ ದಾಟದ ಧಾರಣೆ ಈ ವರ್ಷದ ಜುಲೈಯಲ್ಲಿ 600 ರೂ. ಸನಿಹಕ್ಕೆ ಬಂದಿತ್ತು. ಆಗಸ್ಟ್ ಮೊದಲ ವಾರದಲ್ಲಿ 630ರಿಂದ 650 ರೂ. ಸನಿಹಕ್ಕೆ ತಲುಪಿದೆ. ಲಭ್ಯ ಮಾಹಿತಿ ಪ್ರಕಾರ ಸದ್ಯದಲ್ಲೇ 650 ರೂ. ದಾಟಿ ಮುಂದುವರಿಯುವ ಸಾಧ್ಯತೆ ಇದೆ. ಬೆಳೆಗಾರರು ಮಾರಾಟ ಮಾಡದೆ ಕಾದು ನೋಡುವ ತಂತ್ರಗಾರಿಕೆ ಅನುಸರಿಸಿದ್ದಾರೆ.
ಹಲವು ಕಾರಣ ಕಾಳುಮೆಣಸು ದಾಸ್ತಾನು ಇರುವ ರೈತರು ಚೌತಿಯ ತನಕ ತಾಳ್ಮೆ ವಹಿಸುವುದು ಉತ್ತಮ ಅನ್ನುವುದು ಕೆಲವರ ಅಭಿಪ್ರಾಯ. ಚೌತಿಯ ಬಳಿಕ ಅಂತಾರಾಷ್ಟ್ರೀಯ ಸರಬರಾಜು ನವೆಂಬರ್ 2ನೇ ವಾರದ ತನಕ ತೆರೆದಿರುತ್ತದೆ. ಈ ಸಮಯದಲ್ಲಿ ಕಾಳುಮೆಣಸು ಧಾರಣೆಯಲ್ಲಿ ಹೆಚ್ಚಳವಾಗುತ್ತದೆ ಅನ್ನುವುದು ಇದಕ್ಕೆ ಕಾರಣ. ಇನ್ನೊಂದು ಮೂಲದ ಪ್ರಕಾರ ಅಂತಾರಾಷ್ಟ್ರೀಯ ಸಂಬಾರ ಜೀನಸು ಮಾರುಕಟ್ಟೆಗೆ 18 ರಿಂದ 22 ದಿವಸದಲ್ಲಿ ಕಾಳುಮೆಣಸು ತಲುಪುವ ಕಾರಣ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು ಅನ್ನುತ್ತಿದೆ. ಈ ಎರಡು ಅಭಿಪ್ರಾಯಗಳ ಆಧಾರದಲ್ಲಿ ಕಾಳುಮೆಣಸು ಧಾರಣೆ ಹೆಚ್ಚಳವಾಗುವ ಸುಳಿವು ದೊರೆತಿದೆ.
ಆಮದು ಇಲ್ಲ
ವಿದೇಶದಿಂದ ಬರುತ್ತಿದ್ದ ಕಾಳುಮೆಣಸು ನಿಯಂತ್ರಣಕ್ಕೆ ಬಂದಿರುವ ಕಾರಣ ಭಾರತದಲ್ಲಿ ಕೊರತೆಯಾಗಿದೆ. ದೇಶಿಯ ಕಾಳು ಮೆಣಸಿಗೆ ಪೈಪೋಟಿ ನೀಡುತ್ತಿದ್ದ ವಿಯೆಟ್ನಾಂ, ಶ್ರೀಲಂಕಾ ದೇಶಗಳಲ್ಲಿ ಕಡಿಮೆ ಪ್ರಮಾಣದಲ್ಲಿ ದಾಸ್ತಾನು ಇರುವುದು ಕೂಡ ಧಾರಣೆ ಹೆಚ್ಚಳಕ್ಕೆ ಮುಖ್ಯ ಕಾರಣ. ದೇಶೀಯವಾಗಿಯು ಉತ್ಪಾದನೆ ಕುಸಿದಿರುವುದರಿಂದ ಕಾಳುಮೆಣಸು ಆಧಾರಿತ ಉತ್ಪಾದನ ವಲಯಕ್ಕೆ ಕೊರತೆಯ ಬಿಸಿ ತಟ್ಟಿದೆ.
Source: Udayavani.com