CoffeeFeatured News

ಕಾಫಿ ರಫ್ತು ಹೆಚ್ಚಳ – ಕಾಫಿ ಬೆಳೆಗಾರರಿಗೆ ಸಂತಸದ ಸುದ್ದಿ

ಕೋವಿಡ್‌-19 ಹೊಡೆತಕ್ಕೆ ತತ್ತರಿಸಿದ್ದ ಭಾರತದ ರಫ್ತು ವಲಯ ಕಳೆದ ಏಳೆಂಟು ತಿಂಗಳಿನಿಂದ ಸತತವಾಗಿ ಚೇತರಿಸುತ್ತಿದೆ. ಕಾಫಿ, ಗೋಧಿ, ಜವಳಿ, ಆಟೋಮೊಬೈಲ್‌, ಎಂಜಿನಿಯರಿಂಗ್‌ ರಫ್ತು ಸುಧಾರಿಸಿದೆ ಎಂದು ಅಂಕಿ -ಅಂಶಗಳು ತಿಳಿಸಿವೆ. ಕಾಫಿ ರಫ್ತು ಹೆಚ್ಚಿರುವುದು ಹಲವು ವರ್ಷಗಳಿಂದ ಬೆಲೆ ಇಲ್ಲದೆ ಕಂಗೆಟ್ಟಿದ್ದ ಕಾಫಿ ಬೆಳೆಗಾರರ ಪಾಲಿಗೆ ಶುಭ ಸುದ್ದಿಯಾಗಿದೆ.

ಕಳೆದ ಜನವರಿ-ಆಗಸ್ಟ್‌ ಅವಧಿಯಲ್ಲಿ ಭಾರತದ ಕಾಫಿ ರಫ್ತಿನಲ್ಲಿ ಶೇ. 14ರಷ್ಟು ಹೆಚ್ಚಳ ದಾಖಲಾಗಿದೆ. ಭಾರತದ ಇನ್‌ಸ್ಟಂಟ್‌ ಕಾಫಿ, ಅರೆಬಿಕಾ ಮತ್ತು ಕಾಫಿಗೆ ಬೇಡಿಕೆ ಸೃಷ್ಟಿಯಾಗಿದೆ. ಜನವರಿ 1 ರಿಂದ ಆಗಸ್ಟ್‌ 31ರ ತನಕ 2.56 ಲಕ್ಷ ಟನ್‌ ಕಾಫಿ ರಫ್ತಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2.25 ಲಕ್ಷ ಟನ್‌ ರಫ್ತಾಗಿತ್ತು. ಕಳೆದ ವರ್ಷ ಕಾಫಿ ದರ ಕಡಿಮೆಯಾಗಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದರು. ಆದರೆ ಈ ಬಾರಿ ರಫ್ತು ಹೆಚ್ಚಾಗಿರುವುದರಿಂದ ಕಳೆದ ಕೆಲವು ತಿಂಗಳಿನಿಂದ ಕಾಫಿ ಬೆಲೆ ಏರುಮುಖವಾಗಿದೆ. ಆದರೆ ಕಾಫಿ ಸಂಗ್ರಹವಿಲ್ಲದೆ, ಬೆಳೆಗಾರರಿಗೆ ಮಾತ್ರ ಇದರ ಲಾಭ ಸಿಗುತ್ತಿಲ್ಲ.

”ಕಳೆದ ವರ್ಷ ಬೆಳೆ ಕುಸಿತದ ಪರಿಣಾಮ, ಈ ವರ್ಷ ನಿರೀಕ್ಷಿತ ಮಟ್ಟದಲ್ಲಿ ರಫ್ತಾಗದಿದ್ದರೂ, ಆರೋಗ್ಯಕರ ಚೇತರಿಕೆ ಆಗಿರುವುದು ತ್ರಪ್ತಿದಾಯಕವಾಗಿದೆ” ಎಂದು ಕಾಫಿ ರಫ್ತುದಾರರ ಅಸೋಸಿಯೇಶನ್‌ ಅಧ್ಯಕ್ಷ ರಮೇಶ್‌ ರಾಜ ಹೇಳಿದ್ದಾರೆ. ಮುಖ್ಯವಾಗಿ ಯುರೋಪ್‌ನಲ್ಲಿ ಭಾರತದ ಕಾಪಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

Also read  If Araku coffee can..why can't Kodagu coffee create a brand?