Featured NewsWeather

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ:ಕರಾವಳಿ,ಮಲೆನಾಡಲ್ಲಿ ಭಾರೀ ಮಳೆ ಸಾಧ್ಯತೆ – ‘ಯೆಲ್ಲೊ ಅಲರ್ಟ್’

ಬಂಗಾಳ ಕೊಲ್ಲಿಯ ಅಂಡಮಾನ್‌ನಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದ ರಾಜ್ಯದ ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗದಲ್ಲಿ ಮೇ 16,17,18 ವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದ ಕರಾವಳಿ ಭಾಗದಲ್ಲಿ ಇದೇ 15ರಿಂದ 17ರವರೆಗೆ ಗುಡುಗು,ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯಲ್ಲಿ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಭಾಗದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾನುವಾರದವರೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.

ಅಂಡಮಾನ್‌ನಲ್ಲಿ ವಾಯುಭಾರ ಕುಸಿತ ಉಂಟಾಗಿದ್ದ,ಒಂದೆರಡು ದಿನದಲ್ಲಿ ಚಂಡಮಾರುತವಾಗಿ ರೂಪಗೊಳ್ಳುವ ಸಾಧ್ಯತೆ ಇದೆ. ಬಂಗಾಳಕೊಲ್ಲಿ ಸಮುದ್ರದಲ್ಲಿ ಈ ಚಂಡಮಾರುತ ಸಾಗಲಿದ್ದು,ಒಡಿಶಾ,ಬಾಂಗ್ಲಾ ದೇಶದ ಬಳಿ ಭೂ ಸ್ಪರ್ಶಗೊಳ್ಳಲಿದೆ. ಇದರ ಪರಿಣಾಮ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಮೇ 15 ರಿಂದ ಮೇ 17ರ ವರೆಗೆ 65 ಮಿ.ಮೀ ನಿಂದ 115 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ಎಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಿದೆ.

Also read  Arabica picking starts in Karnataka

ದಕ್ಷಿಣ ಒಳನಾಡಿನ ಚಿಕ್ಕಮಗಳೂರು,ಹಾಸನ, ಕೊಡಗು,ಶಿವಮೊಗ್ಗ ಜಿಲ್ಲೆಗಳಲ್ಲಿ ಶುಕ್ರವಾರ ಭಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲೂ ‘ಯೆಲ್ಲೊ ಅಲರ್ಟ್’ ಘೋಷಿಸಿದೆ. ಮೈಸೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಹೆಚ್ಚು ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಗುಡುಗು ಸಿಡಿಲು ಹೆಚ್ಚಾಗಿರಲಿದ್ದು, ಕೆಲವೆಡೆ ಚದುರಿದಂತೆ ಮಳೆಯಾಗಲಿದೆ.

ಅಂಡಮಾನ್‌ನಲ್ಲಿ ವಾಡಿಕೆ ಪ್ರಕಾರ ಮೇ 20ರ ವೇಳೆ ಮುಂಗಾರು ಆರಂಭವಾಗಬೇಕು. ತದನಂತರ ಜೂನ್‌ ಮೊದಲ ವಾರದಲ್ಲಿ ಕೇರಳ ಭಾಗದಿಂದ ಮುಂಗಾರು ಪ್ರವೇಶ ಪಡೆದುಕೊಳ್ಳುತ್ತದೆ, ಆದರೆ, ಈ ಬಾರಿ ಮೇ 16ಕ್ಕೆ ಅಂಡಮಾನ್‌ನಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ಪ್ರಭಾವ ಬೀರಿದರೆ ಮುಂಗಾರು ವಿಳಂಬವಾಗಲಿದೆ. ‘ಇದೀಗ ಅಂಡಮಾನ್‌ನಲ್ಲಿ ಉಂಟಾಗಿರುವ ವಾಯುಭಾರ ಮುಂಗಾರಿನ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ಈ ವರ್ಷ ವಾಡಿಕೆಯಂತೆ ಜೂನ್‌ ಮೊದಲ ವಾರದಲ್ಲಿ ಮುಂಗಾರು ಪ್ರವೇಶವಾಗಲಿದೆ. ಶೇ.71 ರಷ್ಟು ಮುಂಗಾರು ಮಳೆಯಾಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

Also read  ಕೇರಳಕ್ಕೆ ನೈಋತ್ಯ ಮುಂಗಾರು ಆಗಮನ ವಿಳಂಬ ಸಾಧ್ಯತೆ