“ಮಳೆ ರಿಜಿಸ್ಟರ್” – ಇದು ಇಂಗ್ಲಿಷರ ಒಳ್ಳೆಯ ಪಳೆಯುಳಿಕೆ!
ಭಾರತದಲ್ಲಿ ಪ್ರಪ್ರಥಮ ಬಾರಿಗೆ (1823 – 25) ಸುವ್ಯಸ್ಥಿತವಾಗಿ ಕಾಫಿ ಬೆಳೆಸಹೊರಟ ಸಾಹಸಿ ಪ್ಯಾರಿ ಆಂಡ್ ಕಂಪನಿಯ ಜಾಲಿ ಎಂಬವರು. ಈ ಯತ್ನ ನಡೆದದ್ದು ಶಿವಮೊಗ್ಗ ಜಿಲ್ಲೆಯ ಆಗುಂಬೆಯ ಹತ್ತಿರ. ಆಗುಂಬೆಯು ಹೆಚ್ಚಿನ ಮಳೆಯ ಪ್ರದೇಶ. ಜಾಲಿಯವರ ಮೊದಲ ಪ್ರಯತ್ನ ಸಫಲವಾಗಲಿಲ್ಲ.ಕಾರಣ ಹೂಮಳೆ ಸಕಾಲಕ್ಕೆ ಆಗಲಿಲ್ಲ.
ಅಂದಿನಿಂದ ಬಿಳಿ ಮನುಷ್ಯರ ಕಾಫಿ ತೋಟಗಳಲ್ಲಿ ಮಳೆ ಅಳೆದು ದಾಖಲಿಸುವ ಪರಿಪಾಠ ಶುರುವಾಯಿತು. ಕಡ್ಡಾಯ ಎಂಬಂತೆ ‘ಮಳೆ ರಿಜಿಸ್ಟರ್’ ಬರೆದಿಡುವುದೂ ಆರಂಭವಾಯಿತು. ರಿಜಿಸ್ಟರುಗಳಲ್ಲಿ ಪ್ರತಿ ದಿನದ ಹವಾಮಾನ ವರದಿಯನ್ನೂ ನಮೂದಿಸುತ್ತಿದ್ದರು.
ಉದಾ : ದಿನದ ಮಳೆಯ ವಿವರ – ಜಡಿಮಳೆ, ತುಂತುರು ಮಳೆ,ಬಿಸಿಲು ಮಳೆ, ಗಾಳಿಯ ದಿಕ್ಕು ಮತ್ತು ಮಳೆಯ ಅಳತೆ. ಮಳೆ ಇಲ್ಲದಿದ್ದರೆ ಮುಂಜಾನೆಯ ಇಬ್ಬನಿಯ ಸಾಂದ್ರತೆಯ ವಿವರ,ಒಣ ಹವೆಯ ದಾಖಲೆ, ಮೋಡದ ವಾತಾವರಣ ಅಥವಾ ಪ್ರಖರ ಸೂರ್ಯ ಕಿರಣದ ವಿವರ. ಹವಾಮಾನದ ಎಲ್ಲಾ ಬಗೆಯ ವಿವರಗಳು ಮಳೆ ರಿಜಿಸ್ಟರ್ ಸೇರುತ್ತಿದ್ದುವು.
‘ರೈನ್ ಗೇಜ್’ (ಮಳೆಮಾಪಕ) ಬಳಸಿ ಮಳೆ ಅಳೆಯುವುದು ರೂಢಿ.ಸಾಮಾನ್ಯವಾಗಿ ಅಲ್ಲಲ್ಲಿನ ಹಾರ್ಡ್‍ವೇರ್ ಅಂಗಡಿಗಳಲ್ಲಿದು ಲಭ್ಯ. ಈ ಮಾಪಕದಲ್ಲಿ ಐದು ಇಂಚು ವ್ಯಾಸದ ಆಲಿಕೆ ಮತ್ತು ಅದರ ಮೇಲೆ ಬೀಳುವ ಮಳೆಯನ್ನು ಸಂಗ್ರಹಿಸುವ ಧಾರಕ ಇರುತ್ತದೆ.ಧಾರಕಗಳಲ್ಲಿ ಸಂಗ್ರಹವಾದ ನೀರನ್ನು ಇಪ್ಪತ್ತನಾಲ್ಕು ಗಂಟೆಗಳಿಗಳಿಗೊಮ್ಮೆಇಂಚು ಅಥವಾ ಸೆಂಟಿಮೀಟರುಗಳಲ್ಲಿ ಅಳೆಯುತ್ತಾರೆ. ತೋಟದಲ್ಲಿ ದಿನಾಲೂ ಬೆಳಗ್ಗೆ ಏಳು ಗಂಟೆಗೆ ಮಳೆ ಅಳೆದು ದಾಖಲಿಸುತ್ತಾರೆ.
ಆಲಿಕೆಗೆ ಮಳೆಯ ನೀರು ಅಡೆತಡೆ ಇಲ್ಲದೆ ಬೀಳಬೇಕು. ಇದಕ್ಕಾಗಿ ರೈನ್‍ಗೇಜನ್ನು ಬಂಗಲೆಯ ಮುಂದಿನ ವಿಸ್ತಾರವಾದ ಕಣದ ಮಧ್ಯೆ ಇಡುತ್ತಾರೆ.ನೆಲಕ್ಕಿಂತ ಕನಿಷ್ಟ ಮೂರು ಅಡಿ ಎತ್ತರದ ಕಂಬಗಳ ಮೇಲೆ ರೈನ್ ಗೇಜ್ ಸ್ಥಾಪಿಸುವುದು ರೂಢಿ.ಆಯಾ ತೋಟದ ಮಳೆ ರಿಜಿಸ್ಟರುಗಳಿಂದ ಸ್ಥಳೀಯ ಹವಾಮಾನ ಮತ್ತು ಮಳೆಯ ಏರುಪೇರುಗಳನ್ನು ಅಭ್ಯಸಿಸಬಹುದು. ಹೆಚ್ಚಿನ ಹಳೆಯ ಕಾಫಿ ತೋಟಗಳಲ್ಲಿ ಇಂದಿಗೂ ನೂರು ವರುಷದಷ್ಟು ಹಳೆಯ ಮಳೆ ರಿಜಿಸ್ಟರುಗಳಿವೆ.ತಜ್ಞರ ಪ್ರಕಾರ ಇವು ಅಮೂಲ್ಯ ಹವಾಮಾನ ದಾಖಲೆಗಳು. ದೊಡ್ಡ ತೋಟಗಳಲ್ಲಿ ಗಾಳಿಯ ದಿಕ್ಕನ್ನು ಅರಿಯಲು ‘ಗಾಳಿ ಕೋಳಿ’ ಅಥವಾ ವೆದರ್ ಕಾಕ್‍ಗಳನ್ನೂ ಇಡುತ್ತಿದ್ದರು.
ಅದ್ಯಾಕೋ ಕಾಫಿ ರೈತರು ಸೆಂಟಿಮೀಟರ್, ಮಿಲ್ಲಿಮೀಟರುಗಳಲ್ಲಿ ಮಳೆ ಅಳೆಯುವುದು ಕಡಿಮೆ. ಇಂಚು, ಸೆಂಟ್‍ಗಳೇ ಅವರಿಗೆ ಇಷ್ಟ. ಗಾಜಿನ ಮಾಪಕದಲ್ಲಿ ಒಂದು ಇಂಚನ್ನು ನೂರು ಸೆಂಟ್ ಆಗಿ ವಿಂಗಡಿಸಿರುತ್ತಾರೆ. ಜಮೀನಿನ ವಿಸ್ತೀರ್ಣವನ್ನೂ ಅಷ್ಟೇ, ಕಾಫಿ ಬೆಳೆಗಾರರು ಎಕರೆ, ಸೆಂಟ್ಸ್‍ಗಳಲ್ಲೇ ಹೇಳುತ್ತಾರೆ. ಮೆಟ್ರಿಕ್ ಅಳತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ವಿಜ್ಞಾನಿಗಳು ‘ಇದು ಈ ಉದ್ಯಮ ಶುರು ಮಾಡಿದ ಇಂಗ್ಲಿಷ್ ದೊರೆಗಳ ಪಳಿಯುಳಿಕೆ’ ಎಂದು ಲೇವಡಿ ಮಾಡುವುದಿದೆ.
ಮಳೆ ಮತ್ತು ಕಾಫಿ
ಕಾಫಿ ಗಿಡ ಉತ್ತಮವಾಗಿ ಬೆಳೆಯಬೇಕಾದರೆ, ವರ್ಷದಲ್ಲಿ ಎಂಟರಿಂದ ಹತ್ತು ತಿಂಗಳ ಅವಧಿಯಲ್ಲಿ ಹಂಚಿದಂತೆ ಮಳೆಯಾಗಬೇಕು. ಬುಡದಲ್ಲಿ ನೀರು ನಿಲ್ಲುವುದು ಈ ಗಿಡಗಳಿಗೆ ಸಹ್ಯವಲ್ಲ. ಆದುದರಿಂದ ಪರ್ವತಗಳ ತಪ್ಪಲಿನ ಇಳಿಜಾರು ಪ್ರದೇಶಗಳಲ್ಲಿ ಕಾಫಿ ಬೆಳೆಯುತ್ತೇವೆ.
ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳ ತಪ್ಪಲುಗಳು ಕಾಫಿಗೆ ಪ್ರಶಸ್ತ. ದಕ್ಷಿಣ ಭಾರತದಲ್ಲಿ ನೈರುತ್ಯ ಮತ್ತು ಈಶಾನ್ಯ ವಾಣಿಜ್ಯ ಮಾರುತಗಳಿಂದ ಮಳೆಯಾಗುವ ಬೆಟ್ಟದ ಪ್ರದೇಶಗಳಲ್ಲಿ ಕಾಫಿಗೆ ಸರಿಯೆನಿಸುವ ಮಳೆ ಸುರಿಯುವ ಕ್ರಮ (ರೈನ್ ಪ್ಯಾಟರ್ನ್) ಇದೆ.
ಬೆಳೆಗೆ ಅತಿ ಅಗತ್ಯವಾದ ಮೂರರಿಂದ ನಾಲ್ಕು ತಿಂಗಳ ವರೆಗಿನ ಒಣ ಹವಾಮಾನವೂ ಇಲ್ಲಿದೆ. ಬೇಸಿಗೆಯಲ್ಲಿ ಈ ರೀತಿಯ ಹವೆ ಇರುವಾಗಲಷ್ಟೇ ಕಾಫಿ ಗಿಡ ಚೆನ್ನಾಗಿ ಮೊಗ್ಗು ಹೊರಡಿಸುತ್ತವೆ. ಅರೆಬಿಕಾ ಜಾತಿಯ ಕಾಫಿಯ ಹೂ ಅರಳಿ ಹಣ್ಣಾಗಲು ಸುಮಾರು ಎಂಟು ತಿಂಗಳು ಬೇಕು. ರೋಬಸ್ಟಾ ಕಾಫಿಯಲ್ಲಿದು ಇನ್ನೂ ಒಂದು ತಿಂಗಳು ಹೆಚ್ಚು.
ಕೊಯ್ಲಿನ ನಂತರ ಗಿಡಗಳು ಮುಂದಿನ ವರುಷ ಫಸಲು ಕೊಡುವ ಹೂ ಮೊಗ್ಗುಗಳನ್ನು ಅರಳಿಸಲು ಯತ್ನಿಸುತ್ತವೆ. ಮೊಗ್ಗು ತಳೆದು ಹೂವು ಬಿಡುವ ಈ ಬೇಸಿಗೆಯ ಅವಧಿಯನ್ನು ಗಿಡಗಳ ‘ರೆಸ್ಟ್ ಪೀರಿಯಡ್’ ಎನ್ನುತ್ತಾರೆ.ರೆಸ್ಟ್ ಪೀರಿಯಡ್‍ನಲ್ಲಿ ಮೊಗ್ಗುಗಳು ಅರಳಲು ತಯಾರಾಗುವ ಮುನ್ನ ಮಳೆ ಬಿದ್ದರೆ ಇಳುವರಿ ಕಡಿಮೆ. ಮೊಗ್ಗುಗಳು ತಯಾರಾದ ನಂತರ ಬಹುಕಾಲ ಮಳೆ ಬರದೇ ಇದ್ದರೂ ನಷ್ಟವೇ. ಅವು ಒಣಗಿ ಮುರುಟಿಕೊಳ್ಳುತ್ತವೆ. ಕಾಫಿ ಬೆಳೆಯಲ್ಲಿ ಸಕಾಲಿಕ ಮಳೆಯ ಪಾತ್ರ ಬಹು ಮುಖ್ಯ.
ಕಾಫಿ ಪರಿಸರಸ್ನೇಹಿ ಬೆಳೆ. ಕಾಫಿ ಬೆಳೆಗಾರ ತನ್ನ ಪರಿಸರವನ್ನು ಪ್ರೀತಿಸಲೇಬೇಕು. ಮಳೆ ಸಕಾಲಕ್ಕೆ ಸುರಿದರೆ ಮಾತ್ರ ಕಾಫಿ ಬೆಳೆಗಾರನಿಗೆ ಬೆಳೆ! ಮಧ್ಯ ಬೇಸಿಗೆಯಲ್ಲಿ ಮೊಗ್ಗುಗಳು ಬಲಿಯುವ ಸಮಯದಲ್ಲಿ ಕಾಫಿ ಕಾನುಗಳಲ್ಲಿ ಭಾಷ್ಪೀಭವನ ಉಂಟಾಗುತ್ತದೆ. ಇದರಿಂದಾಗಿ ಸ್ಥಳೀಯವಾಗಿ ‘ಸಮ್ಮರ್ ಕಂಡೆನ್ಶೇಶನ್ ರೈನ್’ ಸುರಿಯುತ್ತದೆ. ಇದು ಮಾನ್ಸೂನ್ ಮಳೆಯಲ್ಲ.ಈ ತರಹೆಯ ಹವಾಮಾನ ಇರುವುದು ಸಾಂಪ್ರದಾಯಿಕ ಕಾಫಿ ಪ್ರದೇಶಗಳಲ್ಲಿ ಮಾತ್ರ. ಹಳೆ ಪ್ಲಾಂಟರುಗಳು ಇಂದಿಗೂ ‘ಒಳ್ಳೆಯ ಕಾಫಿ ಕಂಟ್ರಿ’ ಎಂದು ಗುರುತಿಸುವುದು ಇಂಥ ಪ್ರದೇಶಗಳನ್ನೇ. ಸೂಕ್ತ ಮಳೆಯ ಪ್ಯಾಟರ್ನ್ ಇದ್ದಲ್ಲಷ್ಟೇ ಕಾಫಿ ಬೆಳೆ ನಳನಳಿಸುತ್ತದೆ. ತೋಟಗಳ ಮಳೆ ರಿಜಿಸ್ಟರುಗಳನ್ನು ನೋಡಿದಾಗ ಈ ಮಳೆಯ ಪ್ಯಾಟರ್ನ್ ಸ್ಪಷ್ಟವಾಗುತ್ತದೆ.
ಒಂದು ಅಂದಾಜಿನಂತೆ ಇಂದು ಬರೇ ಅರುವತ್ತು ಚಿಲ್ಲರೆ ಇಂಚು ಮಳೆಯ ಪ್ರದೇಶಗಳಿಂದ ಹಿಡಿದು ಸುಮಾರು ಇನ್ನೂರು ಚಿಲ್ಲರೆ ಇಂಚಿನಷ್ಟು ಮಳೆಸುರಿಯುವ ಬೆಟ್ಟಗಳಲ್ಲಿ ಕಾಫಿ ಬೆಳೆಸುತ್ತಿದ್ದಾರೆ. ಈ ಒಣ ಬೇಸಾಯದ ಬೆಳೆಯನ್ನು ಸದಾ ಕಾಪಾಡುವುದು ಹಂಚಿದಂತೆ ಸುರಿಯುವ ಮಳೆಯ ಪ್ಯಾಟರ್ನ್.
ವರ್ಷಾನುಗಟ್ಟಳೆ ಪದೇ ಪದೇ ಹೂವಿನ ಮಳೆ ಕೈಕೊಟ್ಟರೆ? ಕೃತಕ ಮಳೆ ಒದಗಿಸಲು ನೀರು, ಸ್ಪ್ರಿಂಕ್ಲರು, ಪಂಪು ಇತ್ಯಾದಿ ಸೌಲಭ್ಯಗಳಿದ್ದರೆ ಸರಿ. ಇಲ್ಲದಿದ್ದರೆ ಬೆಳೆಗಾರ ಕಾಫಿ ಬೆಳೆಗೇ ವಿದಾಯ ಹೇಳಬೇಕಾಗುತ್ತದೆ. ಅಂದಿನ ಪರಿಸ್ಥಿತಿ ಇಂದಿಗೂ ಸತ್ಯ!