CoffeeFeatured News

ಬರದಿಂದಾಗಿ ವಿಯೆಟ್ನಾಂನಲ್ಲಿ ಉತ್ಪಾದನೆ ಕುಸಿತ:ರೊಬಸ್ಟಾ ಕಾಫಿಗೆ ಗರಿಷ್ಠ ಬೆಲೆ

ವಿಯೆಟ್ನಾಂ ದೇಶದಲ್ಲಿ ಕಾಫಿ ಉತ್ಪಾದನೆಯ ಕುಸಿತದ ಸುದ್ದಿ ಮುಟ್ಟಿದ ಬೆನ್ನಲ್ಲೇ ರೊಬಸ್ಟಾ ಕಾಫಿ ಧಾರಣೆ ಏರುತ್ತಿದೆ. ಇದರಿಂದ ಸ್ಥಳೀಯ ಬೆಳೆಗಾರರು ಸಂತಸಗೊಂಡಿದ್ದಾರೆ.

ವಿಯೆಟ್ನಾಂನಲ್ಲಿ ಸದ್ಯ ಬರ ಪರಿಸ್ಥಿತಿ ತಲೆದೋರಿದೆ. ಇದರಿಂದ ಕಾಫಿ ಉತ್ಪಾದನೆಯು ಶೇ 10ರಷ್ಟು ಕಡಿಮೆ ಆಗಬಹುದು ಎಂದು ಅಲ್ಲಿನ ಕೃಷಿ ಇಲಾಖೆಯು ಅಂದಾಜಿಸಿದೆ. ಹಾಗಾಗಿ, ಅಂತರರಾಷ್ಟ್ರೀಯ ರೊಬಸ್ಟಾ ಮಾರುಕಟ್ಟೆಯಲ್ಲಿ ಕಳೆದ 15ದಿನಗಳಿಂದ ಧಾರಣೆಯು ಏರುಗತಿಯಲ್ಲಿ ಸಾಗಿದೆ.

ಮಂಗಳವಾರ ಲಂಡನ್ ಮಾರುಕಟೆಯಲ್ಲಿ ರೊಬಸ್ಟಾ ಕಾಫಿ ಬೀಜದ ದರ ಒಂದು ಟನ್‌ಗೆ 3,021 ಪೌಂಡ್‍ (ಅಂದಾಜು ₹3.17 ಲಕ್ಷ) ಇತ್ತು.ಇದರ ಪರಿಣಾಮ ದೇಶದಲ್ಲಿ ಕಾಫಿ ಬೀಜದ ದರ ಕೆ.ಜಿಗೆ ₹255 ಆಸುಪಾಸಿನಲ್ಲಿದೆ. ಇದರಿಂದ ಬೆಳೆಗಾರರಿಗೆ ಗುಣಮಟ್ಟದ ಆಧಾರದ ಮೇಲೆ 50 ಕೆ.ಜಿ ಚೆರಿಗೆ ₹6,800ರಿಂದ ₹7,000ರ ವರೆಗೆ ಬೆಲೆ ಸಿಗುತ್ತಿದೆ.

ಬ್ರೆಜಿಲ್‌ನ ಕೆಲವು ಪ್ರಾಂತ್ಯಗಳ ಲ್ಲಿಯೂ ಮಳೆ ಕೊರತೆಯಿಂದ ಅರೇಬಿಕಾ ಕಾಫಿ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಅರೇಬಿಕಾ ಧಾರಣೆಯೂ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

‘ಜಾಗತಿಕ ಮಟ್ಟದಲ್ಲಿ ರೊಬಸ್ಟಾ ಕಾಫಿ ಧಾರಣೆ ಯಾವ ಮಟ್ಟಕ್ಕೆ ಮುಟ್ಟಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಸದ್ಯದಲ್ಲೇ ₹8 ಸಾವಿರ ತಲುಪಬಹುದು ಅಥವಾ ₹6 ಸಾವಿರಕ್ಕೂ ಕುಸಿಯಬಹುದು’ ಎಂದು ಕಳಸದ ಕಾಫಿ ವ್ಯಾಪಾರಿ ಜಾಫರ್ ಮೊಹಮ್ಮದ್ ಮಾರುಕಟ್ಟೆಯ ಅನಿಶ್ಚಿತತೆ ಬಗ್ಗೆ ವಿವರಿಸಿದರು.

ವಿಯೆಟ್ನಾಂನಲ್ಲಿ ಮಳೆ ಕೊರತೆಯಾಗಿದೆ. ಬ್ರೆಜಿಲ್‌ನಲ್ಲಿ ಮಳೆ ಸುರಿಯುವ ವಾತಾವರಣ ಇದೆ ಎಂದು ವರದಿಗಳು ಹೇಳುತ್ತಿವೆ. ಅಲ್ಲಿ ಮಳೆ ಬಂದರೆ ದರ ಕಡಿಮೆಯಾಗುವ ಸಾಧ್ಯತೆ ಇದೆ-ದಿನೇಶ್ ದೇವರುಂದ, ಕಾಫಿ ಮಂಡಳಿ ಅಧ್ಯಕ್ಷ

Source:​ಪ್ರಜಾವಾಣಿ ವಾರ್ತೆ

Also read  Arabica coffee steadies but trade jittery about Brazil frost risk