ಕಾಳುಮೆಣಸು ಧಾರಣೆ ಏರಿಕೆ:ಕಾಫಿ ಬೆಳೆಗಾರರಿಗೆ ಬಂಪರ್
ಹೆಚ್ಚಿದ ಬೇಡಿಕೆಯಿಂದ ಕಾಳುಮೆಣಸು ಧಾರಣೆ ಏರಿಕೆ ಕಾಣುತ್ತಿದ್ದು ಗಗನಮುಖಿಯಾಗುತ್ತಿದೆ. ಮಂಗಳವಾರ ಪ್ರತಿ ಕೆಜಿ ಗಾರ್ಬಲ್ಡ್ ಕಾಳುಮೆಣಸು ದರ 597 ರೂ. ಹಾಗೂ ಅನ್ ಗಾರ್ಬಲ್ಡ್ ದರ 577 ರೂ.ಗೆ ತಲುಪಿದೆ. ದೇಶಿಯ ಬೇಡಿಕೆ ಹೆಚ್ಚಿದರೂ ಉತ್ಪಾದನೆ ಕಡಿಮೆಯಾಗಿರುವುದು ಕಾಳುಮೆಣಸಿನ ಬೆಲೆ ಹೆಚ್ಚಾಗಲು ಕಾರಣ.
ದೇಶದ ಮಸಾಲೆ ಕಂಪನಿಗಳಿಗೆ ಹೆಚ್ಚಿನ ಕಾಳುಮೆಣಸು ಅಗತ್ಯವಿದೆ. ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಕಾಳುಮೆಣಸು ಲಭ್ಯವಿಲ್ಲ. ಹೀಗಾಗಿ ಈ ಕಂಪನಿಗಳು ಕಾಳುಮೆಣಸನ್ನು ಆಮದು ಮಾಡಿಕೊಳ್ಳುತ್ತಿವೆ. ಇದರಿಂದ ಕಾಳುಮೆಣಸಿನ ಆಮದು ಹೆಚ್ಚಿದೆ.
ಕಾಳುಮೆಣಸು ದರ ಹೆಚ್ಚುತ್ತಿದ್ದರೂ, ಬೆಲೆ ಏರಿಕೆ ನಿರೀಕ್ಷೆಯಲ್ಲಿ ಬೆಳೆಗಾರರು ಮಾರಾಟಕ್ಕೆ ಮುಂದಾಗುತ್ತಿಲ್ಲ. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಕಾಳುಮೆಣಸು ಮಾರುಕಟ್ಟೆಗೆ ಬರುತ್ತಿಲ್ಲ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಟನ್ ಭಾರತದ ಕಾಳುಮೆಣಸಿಗೆ 7,250 ಡಾಲರ್ ಇದೆ. ವಿಯೆಟ್ನಾಂ ಕಾಳುಮೆಣಸಿಗೆ 4,600 ಡಾಲರ್, ಬ್ರೆಜಿಲ್ ಕಾಳುಮೆಣಸಿಗೆ 4,300 ಡಾಲರ್ ಮತ್ತು ಶ್ರೀಲಂಕಾದ ಕಾಳುಮೆಣಸಿಗೆ 6,200 ಡಾಲರ್, ಇಂಡೋನೇಷ್ಯಾದ ಕಾಳುಮೆಣಸಿಗೆ 5,000 ಡಾಲರ್ ಬೆಲೆ ಇದೆ.
ಒಂದೆಡೆ ಕಾಳುಮೆಣಸು ದರ ಗಗನಕ್ಕೇರಿದ್ದರೆ, ಇನ್ನೊಂದೆಡೆ ರೊಬಸ್ಟಾ ಕಾಫಿ ದರವೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರಿಂದ ಕಾಫಿ ಬೆಳೆಗಾರರಿಗೆ ಏಕಕಾಲಕ್ಕೆ ಎರಡೆರಡು ಕಡೆ ಲಾಭ ದೊರೆಯುತ್ತಿದೆ.