ಮುಂದಿನ ವಾರ ಚುರುಕಾಲಿದೆ ಮುಂಗಾರು ಮಳೆ
ಮುಂಗಾರು ಮಳೆ ರಾಜ್ಯದೆಲ್ಲೆಡೆ ವ್ಯಾಪಿಸಿದ್ದರೂ ಕೆಲವೆಡೆ ವರ್ಷಧಾರೆ ಮಂದ ಗತಿಯಲ್ಲಿದೆ. ಆದರೂ, ಮುಂದಿನ ವಾರ ಉತ್ತಮ ಮಳೆ ನೀರಿಕ್ಷಿಸಲಾಗಿದೆ.
ಕೆಲ ದಿನಗಳ ಹಿಂದೆ ಬಂಗಾಳಕೊಲ್ಲಿಯ ಭಾಗದಲ್ಲಿ ಗಾಳಿಯ ಒತ್ತಡ ಉಂಟಾಗಿ ಮೋಡಗಳು ಈಶಾನ್ಯ ದಿಕ್ಕಿನತ್ತ ಸಾಗಿದ ಪರಿಣಾಮ ಉತ್ತರ ಕರ್ನಾಟಕದ ಹಲವೆಡೆ ವರ್ಷಧಾರೆಯಾಗಿದೆ. ಇದರ ಜತೆಗೆ ಘಟ್ಟ ಪ್ರದೇಶ ಹಾಗೂ ಕರಾವಳಿಯಲ್ಲಿ ಸಾಧಾರಣ ಮಳೆ ಸುರಿಯುತ್ತಿದ್ದು, ವಾರದ ಬಳಿಕ ಮತ್ತಷ್ಟು ವ್ಯಾಪಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರು ಆರಂಭದಲ್ಲಿ ಇಂಥದ್ದೇ ಭಾಗದಲ್ಲಿ ಮಳೆಯಾಗಬೇಕೆಂದಿಲ್ಲ. ಗಾಳಿಯ ಒತ್ತಡ, ಮೋಡ ಕಟ್ಟುವಿಕೆ ಇತ್ಯಾದಿ ಕಾರಣದಿಂದ ಅಲ್ಲಲ್ಲಿ ಮಳೆಯಾಗುವುದು ಸ್ವಾಭಾವಿಕ. ಈ ಬಾರಿ ಉತ್ತಮ ಮಳೆ ನೀರಿಕ್ಷಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಬೀಳಲಿದ್ದು, ಘಟ್ಟ ಪ್ರದೇಶಗಳಲ್ಲಿ ಹೆಚ್ಚಿನ ವರ್ಷಧಾರೆಯಾಗಲಿದೆ. ಜೂನ್ ತಿಂಗಳಲ್ಲಿ ವಾಡಿಕೆಯಂತೆ ಮಳೆಯಾಗುತ್ತಿದ್ದು, ಕೆಲ ದಿನಗಳ ಬಳಿಕ ಬೆಂಗಳೂರು ಸಹಿತ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಮಳೆ ಪ್ರಮಾಣ ಹೆಚ್ಚಲಿದೆ ಎಂದು ಹವಾಮಾನ ಇಲಾಖೆಯ ಅಕಾರಿಗಳು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಬರ ಆವರಿಸಿರುವ ಕಾರಣ ಮಳೆ ಸುರಿದ ಸ್ಥಳದಲ್ಲಿ ನೀರು ನಿಲ್ಲುವ ಬದಲು ಅಂತರ್ಜಲಕ್ಕೆ ಸೇರುವಂತಾಗಿದೆ. ಇದು ಮಳೆ ಬೀಳುತ್ತಿಲ್ಲ ಎಂಬ ಭಾವನೆ ಮೂಡಿಸಿದೆ. ಜುಲೈನಲ್ಲಿ ಮುಂಗಾರು ಮತ್ತಷ್ಟು ಚುರುಕಾಗಲಿದ್ದು, ಉತ್ತಮ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ಅಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಕೃಪೆ:ವಿಜಯಕರ್ನಾಟಕ,Dated:June 19, 2017