CoffeeFeatured News

ಅರೇಬಿಕಾ ಕಾಫಿ ಪಾರ್ಚ್ಮೆಂಟ್ ತಯಾರಿಕೆ ಮಾಡುವ ವಿಧಾನ

ಕಾಫಿ ಹಣ್ಣನ್ನು ನೀರು ಉಪಯೋಗಿಸಿ ಪಲ್ಪ್ ಮಾಡಿ, ತೊಳೆದು ಬಳಸುವುದರಿಂದ ಪ್ಲಾಂಟೇಶನ್ ಅಥವಾ ಪಾಚ್ಮೆಂಟ್ ಕಾಫಿಯನ್ನು ತಯಾರಿಸಬಹುದು. ಇಲ್ಲವೇ ಸೂರ್ಯನ ಬಿಸಿಲಿನಲ್ಲಿ ಇಡಿಯ ಹಣ್ಣನ್ನು ಒಣಗಿಸಿ ಚೆರಿ ಕಾಫಿಯನ್ನು ಸಿದ್ಧಪಡಿಸಬಹುದು. ಪಾರ್ಚ್ಮೆಂಟ್ ಕಾಫಿಯ ಗುಣಮಟ್ಟ ಯಾವಾಗಲೂ ಚೆರಿ ಕಾಫಿಗಿಂತ ಉತ್ತಮವಾಗಿರುತ್ತದೆ. ಆದರೆ ಚೆರಿ ಕಾಫಿಯ ತಯಾರಿಕಾ ಕ್ರಮ ಮತ್ತು ಕಾಫಿ ಬೀಜ ಹೆಚ್ಚಿನ ಸಮಯ ಹಣ್ಣಿನ ಅಂಟು ಮತ್ತು ಚಿಪ್ಪೆಯೊಂದಿಗೆ ಸಂಪರ್ಕದಲ್ಲಿರುವುದರಿಂದ ಚೆರಿ ಕಾಫಿ ಹಣ್ಣಿನ ವಾಸನೆಯನ್ನು ಹೊಂದಿರುತ್ತದೆ. ಆದುದರಿಂದ ಉತ್ತಮ ಗುಣಮಟ್ಟದ ಕಾಫಿ ತಯಾರಿಸಬೇಕಾದರೆ, ಸಾಕಷ್ಟು ಹೆಚ್ಚಿನ ಮಟ್ಟದಲ್ಲಿ ತೇವದ ವಿಧಾನದಿಂದಲೇ ಕಾಫಿಯನ್ನು ಸಂಸ್ಕರಿಸಬೇಕು. ಹೀಗೆ ಮಾಡುವುದರಿಂದ ಗುಣಮಟ್ಟವನ್ನು ಕಾಪಾಡಿಕೊಂಡು ಬರುವುದರ ಜೊತೆಗೆ ಮೌಲ್ಯವರ್ಧನೆಯಾಗಿ ಹೆಚ್ಚಿನ ಆದಾಯವನ್ನು ಪಡೆಯಬಹುದು.

ಪಲ್ಪರ್, ಪಲ್ಪರ್ ತೊಟ್ಟಿ,, ಸೈಫನ್ ಟ್ಯಾಂಕ್, ಗೋರುಮಣೆ , ವಾಷರ್ ಹಾಗೂ ಸುತ್ತ ಮುತ್ತಲಿನ ಜಾಗಗಳನ್ನು ಪ್ರತಿದಿನ ಶುದ್ಧ ನೀರಿನಿಂದ ತೊಳೆದು ಸ್ವಚ್ಛವಾಗಿಡಬೇಕು . ಹಣ್ಣಿನ ಸಿಪ್ಪೆ,,ಅಂಟು, ಪಲ್ಪ್ ಮಾಡಿದ ಕಾಫಿಯೊಂದಿಗೆ ಸೇರುವುದರಿಂದ ಇಡೀ ರಾಶಿಯ ಗುಣಮಟ್ಟ ಹಾಳಾಗುತ್ತದೆ. ಪಲ್ಪ್ ಮಾಡಲು ಮತ್ತು ಅಂಟು ತೊಳೆಯಲು ಶುದ್ಧವಾದ ನೀರನ್ನೆ ಬಳಸಬೇಕು. ನೀರಿನ ಅಭಾವವಿದ್ದಾಗ ಒಂದು ಸಲ ಪಲ್ಪ್ ಮಾಡಿದ ನೀರನ್ನು, ಪುನಃ ಅದೇ ದಿನ ಪಲ್ಪ್ ಮಾಡಲು ಉಪಯೋಗಿಸಬಹುದು(ರಿ ಸೈಕ್ಲಿಂಗ್) ಆದರೆ ಕಾಫಿಯ ಅಂಟು ತೊಳೆಯಲು ಈ ನೀರನ್ನು ಬಳಸಬಾರದು. ಯಾವುದೇ ಕಾರಣಕ್ಕೂ ಹಿಂದಿನ ದಿನ ಪಲ್ಪ್ ಮಾಡಲು ಉಪಯೋಗಿಸಿದ ನೀರನ್ನು ಮರುದಿನ ಬಳಸಬಾರದು. ಹೀಗೆ ಬಳಸಿದರೆ ಕಾಫಿಯ ಗುಣಮಟ್ಟ ಕಡಿಮೆಯಾಗುತ್ತದೆ ಏಕೆಂದರೆ ಈ ನೀರು ಕಲುಷಿತ ಪದಾರ್ಥಗಳಿಂದ ಕೂಡಿರುತ್ತದೆ. ಪಲ್ಪರ್ ಗಳನ್ನು ಸರಿಯಾಗಿ ಹಣ್ಣಿನ ಗಾತ್ರಗಳಿಗೆ ಹೊಂದಿಸದ ಪಕ್ಷದಲ್ಲಿ, ಬೀಜಗಳು ಚೂರಾಗಿ ದೋಷ ಪೂರ್ಣ ಪಾರ್ಚ್ಮೆಂಟ್ ಉತ್ಪಾದನೆ ಆಗುತ್ತದೆ. ಹಣ್ಣುಗಳನ್ನು ಪಲ್ಪ್ ರಿಗೆ ಹಾಕುವ ಮುಂಚೆ, ಜೊಳ್ಳು, ಕಸ, ಕಡ್ಡಿ ಮತ್ತು ಎಲೆಗಳನ್ನು ಜಾಗರೂಕತೆಯಿಂದ ಬೇರ್ಪಡಿಸಿ, ಒಳ್ಳೆಯ ಹಣ್ಣುಗಳನ್ನೇ ಪಲ್ಪರಿನ ಸಾಮರ್ಥನುಗುಣವಾಗಿ ನೀರಿನ ಮೂಲಕ ಬಿಡಬೇಕು. ಕಾಫಿ ಹಣ್ಣುಗಳನ್ನು ಕೊಯ್ದ ದಿನವೇ ಪಲ್ಪ್ ಮಾಡಬೇಕು. ಒಂದು ವೇಳೆ ಎಲ್ಲಾ ಹಣ್ಣುಗಳನ್ನು ಪಲ್ಪ್ ಮಾಡಲು ಸಾಧ್ಯವಾಗದಿದ್ದರೆ ಅಂತಹ ಹಣ್ಣುಗಳನ್ನು ತಾತ್ಕಾಲಿಕವಾಗಿ( 10 ಗಂಟೆಗಳಿಗೆ ಮೀರದಂತೆ) ನೀರಿನಲ್ಲಿ ದಾಸ್ತಾನು ಮಾಡಿ, ಮರುದಿನ ಬೆಳಿಗ್ಗೆ ಪಲ್ಪ್ ಮಾಡಬೇಕು ಹಣ್ಣುಗಳನ್ನು ಪಲ್ಪ್ ಮಾಡದೆ, ಹಾಗೆಯೇ 10 ಗಂಟೆಗಳು ಹೆಚ್ಚಿನ ಕಾಲ ರಾಶಿ ಹಾಕಿದ್ದರೆ ಅಂತ ಹಣ್ಣುಗಳಿಂದ ತಯಾರಿಸಿದ ಪಾರ್ಶ್ವಮೇಂಟ್ ಕಾಫಿ ಕಷಾಯ ಹಣ್ಣಿನ ವಾಸನೆಯಿಂದ ಕೂಡಿರುತ್ತದೆ.

ಕಣದಲ್ಲಿ ಒಣಗುತ್ತಿರುವ ಪಾರ್ಚ್ಮೆಂಟ್ ಕಾಫಿ
ಕಣದಲ್ಲಿ ಒಣಗುತ್ತಿರುವ ಪಾರ್ಚ್ಮೆಂಟ್ ಕಾಫಿ

ಪಲ್ಪ್ ಮಾಡಿದ ಬೀಜಗಳ ಮೇಲಿನ ಅಂಟನ್ನು ಸಾಮಾನ್ಯವಾಗಿ ನಾಲ್ಕು ವಿಧಗಳಿಂದ ತೆಗೆಯಬಹುದು ಆದರೆ ಬಹಳ ಚಾಲ್ತಿಯಲ್ಲಿರುವ ಎರಡು ವಿಧಾನಗಳೆಂದರೆ ಸ್ವಾಭಾವಿಕ ಹುದುಗುವಿಕೆ( ನ್ಯಾಚುರಲ್ ಫರ್ಮಂತೇಷನ್) ಮತ್ತು ಆಕ್ವಾ ಪಲ್ಪರ್ ಯಂತ್ರಗಳಲ್ಲಿ ಉಜ್ಜುವುದು.

ಸ್ವಾಭಾವಿಕ ಹುದುಗುವಿಕೆ ಅಥವಾ ನ್ಯಾಚುರಲ್ ಫಾರ್ಮೆಂಟೇಶನ್ ಕ್ರಮವನ್ನು ಅನುಸರಿಸುವುದರಿಂದ ಅತ್ಯುತ್ತಮ ಕಾಫಿಯನ್ನು ಪಡೆಯಬಹುದು. ಕಾಫಿ ಹಣ್ಣುಗಳನ್ನು ಪಲ್ಪ್ ಮಾಡಿದ ಮೇಲೆ ಜಿಗುಟಿನ ಸಮೇತ ಇಂತಹ ಬೀಜಗಳನ್ನು ಹುದುಗು ತೊಟ್ಟಿಗಳಲ್ಲಿ ಶೇಖರಿಸಿ ಇಟ್ಟಾಗ ಹಣ್ಣುಗಳಲ್ಲಿ ಸ್ವಾಭಾವಿಕವಾಗಿ ಇರುವ ಕಿಣ್ವಗಳಿಂದ ಪೆಕಿನ್ಟ್ ಅಂಶಗಳ ಜಲ ವಿಶ್ಲೇಷಣೆ ಕಾರ್ಯ ಪ್ರಾರಂಭವಾಗಿ ಅಂಟು ಪದಾರ್ಥಗಳ ಸಡಿಲಿಕೆಯಾಗುತ್ತದೆ. ಸ್ವಾಭಾವಿಕ ಹುದುಗುವಿಕೆ, ಅರೇಬಿಕ ಕಾಫಿಯಲ್ಲಿ ಸುಮಾರು 24 ರಿಂದ 36 ಗಂಟೆಗಳಲ್ಲಿ ಪೂರ್ಣಗೊಳ್ಳುತ್ತದೆ. ತಂಪು ಹವೇ ಇದ್ದರೆ ಹುದುಗುವಿಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಉದುಗುವಿಕೆ ಹೆಚ್ಚಾದರೆ ಬೀಜಗಳು ಹುಳಿಯಾಗಿ ಕಾಫಿ ಕಷಾಯ ಹುಳಿಯಾಗುವುದರಿಂದ ಈ ಹಂತದ ಸಂಸ್ಕರಣೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಸರಿಯಾಗಿ ಹುದುಗಿಸಿದ ಬೀಜಗಳನ್ನು ಶುದ್ಧವಾದ ನೀರಿನಲ್ಲಿ ಮೂರರಿಂದ ನಾಲ್ಕು ಸಲ ಕೈಯಿಂದ ತೊಳೆಯಬೇಕು. ಇಲ್ಲವೇ ವಾಷರ್ ಯಂತ್ರವನ್ನು ಉಪಯೋಗಿಸುವುದಾದರೆ ಒಂದು ರಾತ್ರಿಗಳ ಕಾಲ ನೀರಿನಲ್ಲಿ ಇಟ್ಟು ತೊಳೆಯಬೇಕು. ನೀರಿನ ಲಭ್ಯತೆ ಹೆಚ್ಚು ಇದ್ದಾಗ ಈ ರೀತಿ ತೊಳೆದ ಪಾಚ್ಮೆಂಟ್ ಕಾಫಿಯನ್ನು ನಾಲ್ಕರಿಂದ ಆರು ಗಂಟೆಗಳ ಕಾಲ ಶುದ್ಧ ನೀರಿನಲ್ಲಿ ನೆನೆಸಿ,ಅನಂತರ ತೊಳೆದರೆ ಕಾಫಿಯ ಗುಣಮಟ್ಟದಲ್ಲಿ ಹೆಚ್ಚುವರಿಕೆಯಾಗುತ್ತದೆ.

ಈ ರೀತಿ ತಯಾರಿಸಿದ ಪ್ಲಾಂಟೇಶನ್ ಕಾಫಿಯಲ್ಲಿ ಸುಮಾರು ಶೇಕಡಾ 50 ರಿಂದ 55 ನೀರಿನಂಶವಿರುತ್ತದೆ. ಪಾಚ್ಮೆಂಟ್ ತಯಾರಾದ ನಂತರ,ಅದರ ಮೇಲಿರುವ ನೀರಿನಂಶವನ್ನು ಬಸಿದು ತೆಗೆಯಬೇಕು. ನೀರನ್ನು ವಿಶೇಷವಾಗಿ ತಯಾರಿಸುವ ಬಸಿಯುವಿಕೆ ಅಟ್ಟಣಿಗೆಯಲ್ಲಿ ಅಥವಾ ರಂದ್ರಗಳಿರುವ ಕಬ್ಬಿಣದ ಜಾಲರಿಗಳಲ್ಲಿ ತೆಗೆಯಬಹುದು. ಹೀಗೆ ಬೀಜಗಳ ಮೇಲ್ಮೈನ ನೀರಿನಂಶ ತೆಗೆದ ನಂತರ ಸೂರ್ಯನ ಬೆಳಕಿನಲ್ಲಿ ನಿರ್ಮಲವಾದ ಸಿಮೆಂಟ್ ಅಥವಾ ಹಂಚಿನ ಕಣಗಳಲ್ಲಿ ನಿಗದಿತ ಮಟ್ಟದ ತೇವಾಂಶ ಬರುವವರೆಗೂ ಒಣಗಿಸಬೇಕು ( 11%). ಈ ಕಾರ್ಯಕ್ಕೆ ಏಳರಿಂದ ಹತ್ತು ದಿನಗಳು ಬೇಕಾಗುತ್ತದೆ. ಪಾರ್ಚ್ ಮೆಂಟ್ ಕಾಫಿಯನ್ನು ಕಣದಲ್ಲಿ ನಾಲ್ಕರಿಂದ ಏಳು ಸೆಂಟಿ ಮೀಟರ್ ದಪ್ಪವಾಗಿ ಹರಡಬೇಕು. ಪಾರ್ಟ್ ಮೆಂಟ್ ಕಾಫಿಯನ್ನು ಬಹು ತೆಳುವಾಗಿ ಒಣಗಲು ಹರಡಿದ್ದರೆ ಬೀಜವು ಅತಿ ಶೀಘ್ರವಾಗಿ ಒಣಗಿ,ಪಾರ್ಚ್ಮೆಂಟ್ ಕವರ್ ಒಡೆದು ಬಿರುಕು ಬಿಡುತ್ತದೆ. ಇದರಿಂದ ಕುಗ್ಗಿದ ಮತ್ತು ದೋಣಯಾಕಾರದ ಬೀಜಗಳು ಉತ್ಪತ್ತಿಯಾಗುತ್ತದೆ. ಕಾಫಿಯನ್ನು ಗಂಟೆಗೆ ಒಂದು ಸಲ ಮೆತ್ತಗೆ ತಿರುಗಿಸಿ ಹರಡಬೇಕು. ಸಂಜೆಯ ಹೊತ್ತಿಗೆ ಬೀಜಗಳನ್ನು ರಾಶಿ ಮಾಡಿ ಮುಚ್ಚಬೇಕು. ಪಾಲಿಥಿನ್,ಗೋಣಿಚೀಲ ಅಥವಾ ಟಾರ್ಪಲಿನ್ ಹಾಳೆಗಳನ್ನು ಇದಕ್ಕೋಸ್ಕರ ಉಪಯೋಗಿಸಬಹುದು. ಒಣಗುತ್ತಿರುವ ಕಾಫಿಯನ್ನು ಯಾವುದೇ ಕಾರಣಕ್ಕೂ, ಇಬ್ಬನಿ ಇರುವಾಗ ತೆರೆದಿಡಬಾರದು. ತುಂಬಾ ಪ್ರಕರವಾದ ಬಿಸಿಲಿದ್ದಾಗ ಅಂದರೆ ನಡು ಮಧ್ಯಾನ ಮೂರನೇ ಮತ್ತು ನಾಲ್ಕನೇ ದಿನ ಪಾರ್ಚ್ಮೆಂಟನ್ನು ಸೂರ್ಯನ ಬಿಸಿಲಿಗೆ ನೇರವಾಗಿ ಬಿಡುವುದು ಸರಿಯಾದ ಕ್ರಮವಲ್ಲ. ಹೀಗೆ ಬಿಟ್ಟರೆ ಬೀಜಗಳು ಬೇಗನೆ ಒಣಗಿ ಸುಕ್ಕುಗಟ್ಟುತ್ತದೆ.

Also read  Uncertainty over Brazil's imports prompts decline in robusta prices

ಹೀಗೆ ಶೇಕಡಾ 11.೦ ರ ತೇವಾಂಶಕ್ಕೆ ಒಣಗಿಸಿದ ಕಾಫಿಯನ್ನು ಶುದ್ಧವಾದ ಹೊಸ ಗೋಣಿ ಚೀಲಗಳಲ್ಲಿ ತುಂಬಿ ಶೇಖರಿಸಬೇಕು ಯಾವುದೇ ಕಲುಷಿತ ಗೋಣಿಯನ್ನು ಕಾಫಿ ಶೇಖರಿಸಲು ಉಪಯೋಗಿಸಬಾರದು.ಕಾಫಿ ಕ್ಯೂರಿಂಗ್ ವರ್ಕ್ಸ್ ಗಳಿಂದ ತಂದ ಗೋಣಿಗಳಾಗಿದ್ದರೆ ಅಂತ ಚೀಲಗಳನ್ನು ಫ್ಯೂಮಿಗೇಟ್ ಮಾಡಿಸಿ ಉಪಯೋಗಿಸಬೇಕು ಇಲ್ಲದಿದ್ದರೆ ಕಾಯಿ ಕೊರಕದ ಸೋಂಕುಬರುವ ಸಾಧ್ಯತೆ ಇರುತದೆ . ಕಾಫಿ ಕ್ಯೂರಿಂಗ್ ವರ್ಕ್ಸ್ ಗಳಿಗೆ ಗೋಣಿ ಚೀಲಗಳನ್ನು ಫ್ಯೂಮಿಗೇಟ್ ಮಾಡಿ ಕೊಡುವಂತೆ ಸೂಚಿಸಬೇಕು ಮತ್ತು ಆಗ್ರಹಿಸಬೇಕು . ಕಾಫಿ ಶೇಖರಿಸಿಡುವ ಕೋಣೆಗಳಲ್ಲಿ ಯಾವುದೇ ರಾಸಾಯನಿಕಗಳು ,ತೈಲಗಳು, ಕೀಟನಾಶಕಗಳನ್ನು ದಾಸ್ತಾನು ಮಾಡಬಾರದು. ಕಾಫಿಯನ್ನು ಉತ್ತಮ ಗಾಳಿ,ಬೆಳಕು ಇರುವ ಉಗ್ರಾಣಗಳಲ್ಲಿ ನೆಲಕ್ಕೆ ಅಥವಾ ಗೋಡೆಗೆ ತಾಗದಂತೆ ಅಟ್ಟಣಿಗೆಯ ಮೇಲೆ ಶೇಖರಿಸಬೇಕು.