ಇಂದಿನಿಂದ ರಾಜ್ಯದ ಕೆಲವು ಕಡೆ ಲಘು ಮಳೆ ಸಾಧ್ಯತೆ
ಸಮುದ್ರ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಕಾರಣ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆಯಿದ್ದು, ಮಂಗಳವಾರದಿಂದ 5 ದಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಸಾಧಾರಣ ಮಳೆ ಆಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬುಧವಾರ ಬೆಳಗ್ಗೆ ವರೆಗಿನ ಅವಧಿಯಲ್ಲಿ ಕರಾವಳಿಯ ಕೆಲವು ಕಡೆ ಲಘು ಮಳೆಯಾಗುವ ಸಾಧ್ಯತೆ ಇದೆ. ಮಾ. 14-15ರಂದು ಕಾಸರಗೋಡು ಸೇರಿದಂತೆ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳಲ್ಲಿ ಮೋಡ, ಕೆಲವು ಕಡೆ ತುಂತುರು ಮಳೆಯಾಗಲಿದೆ.
ಮಂಗಳೂರಿನಲ್ಲಿ ಮಾ. 14, 15 ರಂದು ಮೋಡ-ಬಿಸಿಲು ಇರಲಿದ್ದು 36 ಡಿಗ್ರಿ ಸೆ. ತಾಪಮಾನ ಇರಲಿದೆ. ಮಾ. 16, 17 ಮತ್ತು 18ರಂದು ಉಷ್ಣಾಂಶ 38 ಡಿಗ್ರಿ ಸೆ. ವರೆಗೆ ಹೆಚ್ಚುವ ಸಾಧ್ಯತೆಯಿದ್ದು, ಮೋಡದ ವಾತಾವರಣ, ಮಳೆ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ಮಾ.17 ಮತ್ತು 18ರಂದು ಸಾಧಾರಣ ಮಳೆ ಆಗುವ ಸಂಭವವಿದೆ ಎಂದು ತಿಳಿಸಿದೆ.