ಹಸಿರು ಕಾಫಿಬೀಜ ಸಾರದಿಂದ ಸಕ್ಕರೆ ಕಾಯಿಲೆ ನಿಯಂತ್ರಣ
ಸಕ್ಕರೆ ಕಾಯಿಲೆ ಬಾಧಿತರಿಗೊಂದು ಸಿಹಿ ಸುದ್ದಿ! ಹಸಿರು(ಅಂದರೆ ಹುರಿಯದ) ಕಾಫಿಬೀಜಗಳಿಂದ ತೆಗೆಯಲಾದ ಸಾರವು ರಕ್ತದ ಸಕ್ಕರೆಯಂಶ ನಿಯಂತ್ರಿಸುವ ಮೂಲಕ ಸಕ್ಕರೆ ಕಾಯಿಲೆ ಹತೋಟಿ ಮಾಡುತ್ತದೆಯೆಂದು ಅಧ್ಯಯನದಿಂದ ತಿಳಿದು ಬಂದಿದೆ.
ಅಮೇರಿಕಾದ ಯುಎಸ್‍ಎ ದೇಶದ ಪೆನ್ಸಿಲವೇನಿಯಾದ ಸ್ಕ್ರಾನ್ಟನ್ ವಿಶ್ವವಿದ್ಯಾಲಯದ ಸಂಶೋಧಕ ಜೋ ವಿನ್ಸನ್ ನಡೆಸಿದ ಅಧ್ಯಯನದಿಂದ ತಿಳಿದ ವಿಷಯ ಹೀಗಿದೆ. ಹಸಿರು ಕಾಫಿಬೀಜಗಳಲ್ಲಿರುವ ಕ್ಲೊರೊಜೆನಕ್ ಆಮ್ಲವು(chlorogenic acid-an antioxidant) ರಕ್ತದಲ್ಲಿ ಹೆಚ್ಚಾದ ಸಕ್ಕರೆಯಂಶ ಮತ್ತು ದೇಹತೂಕವನ್ನು ಕಡಿಮೆ ಮಾಡುತ್ತದೆ.
ಕ್ಲೊರೊಜೆನಿಕ್ ಆಮ್ಲಗಳು ಸೇಬು, ಚೆರ್ರಿ, ಪ್ಲಮ್ ಇತ್ಯಾದಿ ಹಣ್ಣುಗಳಲ್ಲಿ ಮತ್ತು ತರಕಾರಿಗಳಲ್ಲಿರುವ ಅಂಶ( antioxidant).ಕಾಫಿ ಬೀಜಗಳೂ ಕ್ಲೊರೊಜೆನಿಕ್ ಆಮ್ಲಗಳ ಪ್ರಧಾನ ಆಕರ. ಹಸಿರುಕಾಫಿಬೀಜಗಳಲ್ಲಿ ಇದರ ಪರಿಮಾಣ ಜಾಸ್ತಿ. ಆದರೆ ಅಧಿಕ ಉಷ್ಣತೆಯಲ್ಲಿ ಕಾಫಿಬೀಜಗಳನ್ನು ಹುರಿಯುವಾಗ (ಕಾಫಿಹುಡಿ
ಮಾಡಲಿಕ್ಕಾಗಿ) ಅದರಲ್ಲಿರುವ ಈ ಆಮ್ಲದಂಶ ಕಡಿಮೆಯಾಗುತ್ತದೆ.ಆದ್ದರಿಂದ, ಸಕ್ಕರೆ ಕಾಯಿಲೆ ನಿಯಂತ್ರಿಸಲಿಕ್ಕಾಗಿ ಹಸಿರುಕಾಫಿಬೀಜಗಳ ಸಾರ ಸೇವಿಸುವುದು ಪರಿಣಾಮಕಾರಿ.
ಹಲವರು ಜನರ ಮೇಲೆ ನಡೆಸಿದ ಇನ್ನೊಂದು ಅಧ್ಯಯನದ ಫಲಿತಾಂಶ ಹೀಗಿದೆ ಎನ್ನುತ್ತಾರೆ ವಿನ್ಸನ್, “ಪ್ರತಿದಿನ ಎರಡು ಕಪ್ ಕಾಫಿ ಕುಡಿಯುವವರಿಗೆ ಹೋಲಿಸಿದಾಗ, ಏಳು ಕಪ್ ಕಾಫಿ ಕುಡಿಯುವವರಿಗೆ ಸಕ್ಕರೆ ಕಾಯಿಲೆ ಬಾಧಿಸುವ ಅಪಾಯ ಶೇಕಡಾ ಐವತ್ತರಷ್ಟು ಕಡಿಮೆ”.
ಕ್ಲೊರೊಜೆನಿಕ್ ಆಮ್ಲಗಳು ಸಕ್ಕರೆ ಕಾಯಿಲೆ ಬಾಧಿತರಲ್ಲಿ ಮತ್ತು ಆ ಕಾಯಿಲೆ ಇಲ್ಲದವರಲ್ಲಿ ಒಂದೇ ರೀತಿಯ ಪರಿಣಾಮ ಉಂಟು ಮಾಡುತ್ತವೆ.
ಇದರ ಸಾರ ಸೇವಿಸಿದ ಅಧಿಕ ದೇಹತೂಕದ ವ್ಯಕ್ತಿಗಳ ದೇಹತೂಕ 22 ವಾರಗಳಲ್ಲಿ ಶೇಕಡಾ ಹತ್ತು ಕಡಿಮೆಯಾಯಿತು. ಈ ಅಧ್ಯಯನದಲ್ಲಿ ಭಾಗವಹಿಸಿದ ಸಹಜ (ನಾರ್ಮಲ್) ರಕ್ತದ ಸಕ್ಕರೆಯಂಶ ಹೊಂದಿದ ಮಹಿಳೆಯರು ಮತ್ತು ಪುರುಷರು ಸಂಖ್ಯೆ 56. ಹಸಿರುಕಾಫಿಬೀಜಗಳ ಸಾರವನ್ನು ವಿವಿಧ ಪ್ರಮಾಣದಲ್ಲಿ ಸೇವಿಸಿದಾಗ ಅವರ ರಕ್ತದ ಸಕ್ಕರೆಯಂಶದಲ್ಲಿ ಏನು ಬದಲಾವಣೆ ಆಗುತ್ತದೆ ಎಂಬುದನ್ನು ದಾಖಲಿಸುವುದು ಈ ಅಧ್ಯಯನದ ಉದ್ದೇಶ.
ಅವರು ನೂರು, ಇನ್ನೂರು, ಮುನ್ನೂರು ಅಥವಾ ನಾಲ್ಕುನೂರು ಮಿಲ್ಲಿಗ್ರಾಂ ಹಸಿರುಕಾಫಿಬೀಜ ಸಾರವನ್ನು ಮಾತ್ರೆಯ ರೂಪದಲ್ಲಿ ನೀರಿನೊಂದಿಗೆ ನಿರ್ದಿಷ್ಟ ಅವಧಿ ಸೇವಿಸಿದರು. ಅವರ ರಕ್ತದ ಸಕ್ಕರೆಯಂಶ ಅಳೆಯಲಿಕ್ಕಾಗಿ ಗ್ಲುಕೋಸ್ – ಟಾಲರೆನ್ಸ್ ಪರೀಕ್ಷೆ ನಡೆಸಲಾಯಿತು.
“ಆ ಪರೀಕ್ಷೆಯ ಫಲಿತಾಂಶಗಳ ಪ್ರಕಾರ, ಹಸಿರುಕಾಫಿಬೀಜ ಸಾರದ ವಿವಿಧ ಡೋಸುಗಳಿಗೆ ಅವರ ದೇಹದ ಪ್ರತಿಕ್ರಿಯೆ ಸ್ಪಷ್ಟವಾಗಿತ್ತು ಮತ್ತು ಆಹಾರ ಪಚನಕ್ಕೆ ಸಂಬಂಧಿಸಿದಂತೆ ಯಾವುದೇ ಅಡ್ಡಪರಿಣಾಮ ಕಂಡು ಬರಲಿಲ್ಲ” ಎನ್ನುತ್ತಾರೆ ವಿನ್ಸನ್.
ಎಲ್ಲ ಡೋಸುಗಳೂ ರಕ್ತದ ಸಕ್ಕರೆಯಂಶವನ್ನು ಗಣನೀಯವಾಗಿ ಕಡಿಮೆ ಮಾಡಿದವು (ಅಧ್ಯಯನದ ಆರಂಭದ ರಕ್ತದ ಸಕ್ಕರೆಯಂಶಕ್ಕೆ ಹೋಲಿಸಿದಾಗ). ಹಸಿರುಕಾಫಿಬೀಜ ಸಾರ ಸೇವಿಸಿದ ಮೂವತ್ತುನಿಮಿಷಗಳ ನಂತರ ರಕ್ತದ ಸಕ್ಕರೆಯಂಶ ಶೇ.24 ಕಡಿಮೆಯಾಗಿತ್ತು. ಹಾಗೆಯೇ ನೂರ ಇಪ್ಪತ್ತುನಿಮಿಷಗಳ ನಂತರ ರಕ್ತದ ಸಕ್ಕರೆಯಂಶ ಶೇ.31 ಕಡಿಮೆಯಾಗಿತ್ತು ಎಂದು ವಿನ್ಸನ್ ದಾಖಲಿಸಿದ್ದಾರೆ.
ಸಕ್ಕರೆಕಾಯಿಲೆ ನಿಯಂತ್ರಣಕ್ಕೆ ಕೃತಕ ರಾಸಾಯನಿಕ ಔಷಧಿಗಳಿಗಿಂತ ನೈಸರ್ಗಿಕವಾದ ಹಸಿರುಕಾಫಿಬೀಜ ಸಾರ ಉತ್ತಮ. ಇದಕ್ಕೆ ಈಗ ಪುರಾವೆ ಸಿಕ್ಕಿದೆ ಎಂಬುದೇ ಸಿಹಿಸುದ್ದಿ.
Good Information!