CoffeeFeatured News

ಹವಾಮಾನ ವೈಪರೀತ್ಯದಿಂದ ಅರೇಬಿಕ ಕಾಫಿಗೆ ಕೊಳೆ ರೋಗ – ಆತಂಕದಲ್ಲಿ ಬೆಳೆಗಾರರು

ಕೊಟ್ಟಿಗೆಹಾರ, ಬಣಕಲ್, ಬಾಳೂರು ,ಸಕಲೇಶಪುರ ಸುತ್ತಮುತ್ತ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ ಹವಾಮಾನ ವೈಪರೀತ್ಯ ಪರಿಣಾಮ ಅರೇಬಿಕಾ ಕಾಫಿ ಅವಧಿ ಪೂರ್ವವಾಗಿ ಹಣ್ಣಾಗಿದೆ. ಇನ್ನು ಸುರಿಯುತ್ತಿರುವ ಮಳೆಯಿಂದ ಶೇ.50ಕ್ಕೂ ಹೆಚ್ಚು ಅರೇಬಿಕಾ ಕಾಫಿಯ ಜತೆ ರೋಬಾಸ್ಟ ಕಾಫಿಯೂ ಉದುರುತ್ತಿದ್ದು ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ.

ಬೆಳೆಗಳಿಗೆ ಕೊಳೆರೋಗ ಬಾಧಿಸಿದ್ದ,ಬೆಳೆಗಾರರು ಆತಂಕ ಪಡುವಂತಾಗಿದೆ. ಕಳೆದ ವಾರದಿಂದ ಪ್ರತಿನಿತ್ಯ ಮಳೆ ಆಗುತ್ತಿರುವುದರಿಂದ ಹೇಮಾವತಿ ನದಿ ಸೇರುವ ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯಿಂದ ಕಾಫಿನಾಡಿನ ರೈತರು ಹೈರಾಣಾರಾಗಿದ್ದು ಬೆಳೆ ನಷ್ಟದಿಂದ ವ್ಯಥೆ ಪಡುವಂತಾಗಿದೆ. ಮಳೆಯಿಂದ ಕಾಫಿ ತೋಟಗಳಲ್ಲಿ ಅರೇಬಿಕಾ ಕಾಫಿ ಉದುರುತ್ತಿದ್ದು ಅದನ್ನು ಹೆಕ್ಕಿ ಒಣಗಿಸಲಾಗದೆ ಬೆಳೆಗಾರರು ಅಸಹಾಯಕರಾಗಿದ್ದಾರೆ.

ಸೆಪ್ಟೆಂಬರ್‌, ಅಕ್ಟೋಬರ್‌ ನಲ್ಲಿ ಅರೇಬಿಕಾಕಾಫಿ ಗಿಡಗಳಲ್ಲಿ ಹಣ್ಣಾಗುವುದು ವಾಡಿಕೆಯಾಗಿದ್ದು ನವೆಂಬರ್‌ ನಲ್ಲಿ ಅರೇಬಿಕಾಕಾಫಿ ಕೊಯ್ಲು ಮಾಡುವುದು ಮಲೆನಾಡಿನಲ್ಲಿ ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ಡಿಸೆಂಬರ್‌ ಹಾಗೂ ಜನವರಿಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಅರೇಬಿಕಾಕಾಫಿ ಕಳೆದ ಜುಲೈ ಅಂತ್ಯ ಹಾಗೂ ಆಗಸ್ಟ್‌ನಲ್ಲಿ ಹಣ್ಣಾಗಿದ್ದು ಇದೀಗ ಸೆಪ್ಟೆಂಬರ್‌ನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಂಪೂರ್ಣವಾಗಿ ಕೊಳೆಯುತ್ತಿದೆ. ಹಾಗೆಯೇ ಇದೀಗ ಸುರಿಯುತ್ತಿರುವ ಮಳೆಗೂ ತಾಲೂಕಿನ ಎಲ್ಲಾ ಭಾಗಗಳಲ್ಲಿ ರೋಬಾಸ್ಟಕಾಫಿ ಉದುರುವಿಕೆ ಹಾಗೂ ಕೊಳೆ ರೋಗಕ್ಕೆ ತುತ್ತಾಗುತ್ತಿದೆ.

ಅಡಕೆ ಕೂಡಾ ಶೀತಕ್ಕೆ ಉದುರುತ್ತಿದೆ. ಅತಿಯಾದ ಶೀತ ಕಾಫಿ, ಅಡಕೆ ಬೆಳೆ ಉದುರುವಿಕೆಗೆ ಕಾರಣವಾಗಿದೆ. ಈಗಾಗಲೆ ಕೂಲಿ ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ಕೂಲಿ ಕಾರ್ಮಿಕರ ವೆಚ್ಚ,ಕಾಡಾನೆ ಹಾವಳಿ, ಹೆಚ್ಚುತ್ತಿರುವ ನಿರ್ವಹಣೆ ವೆಚ್ಚಗಳಿಂದ ಕಾಫಿ ಬೆಳೆಗಾರರು ಆತಂಕಕ್ಕೀಡಾಗಿದ್ದು ಇದೀಗ ಹವಾಮಾನ ವೈಪರೀತ್ಯದಿಂದ ಸುರಿಯುತ್ತಿರುವ ಮಳೆಗೆಕಾಫಿ ಬೆಳೆಗಾರರು ಸಂಪೂರ್ಣವಾಗಿ ತತ್ತರಿಸಿದ್ದಾರೆ.

“ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅರೇಬಿಕ ಕಾಫಿ ಬಗೆಯ ದರ ಏರಿಕೆಯಾಗಿದ್ದರೆ, ಇತ್ತ ಹವಾಮಾನ ಬದಲಾವಣೆ, ಮಳೆಯ ಬದಲಾವಣೆಗಳಿಂದಾಗಿ ಕೊಡಗಿನಲ್ಲಿರುವ ಈ ವಿಧದ ಕಾಫಿ ಬೆಳೆಗಾರರು ಬೆಳೆಯನ್ನು ನಿಭಾಯಿಸಲು ಹೆಣಗಾಡುವ ಪರಿಸ್ಥಿತಿ ಉಂಟಾಗಿದೆ. ಕಳೆದ ಮೂರು ವರ್ಷಗಳಿಂದ ಕಾಫಿ ಬೆಳೆಗಾರರು ಅತೀವ ನಷ್ಟ ಎದುರಿಸಿದ್ದು, ಅರೇಬಿಕ ವಿಧದ ಕಾಫಿ ಬೆಳೆಯನ್ನು ಸಣ್ಣ ಕಾಫಿ ಬೆಳೆಗಾರರು ಊಹೆ ಮಾಡುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ” – ಚೆಟ್ಟಳ್ಳಿಯ ಕಾಫಿ ಬೆಳೆಗಾರ ಕೆ ಸುಬ್ಬಯ್ಯ ಹೇಳಿದ್ದಾರೆ.

“ಅರೇಬಿಕ ಮಾದರಿಯ ಕಾಫಿ ಗಿಡಗಳಿಗೆ ಕಪ್ಪು ಕೊಳೆತ ರೋಗ ಹೆಚ್ಚು ಕಾಡಲಿದ್ದು ಕುಸಿತ ಉಂಟಾಗುತ್ತಿದೆ. ಅರೇಬಿಕ ಮಾದರಿಯ ಕಾಫಿ ಬೆಳೆ ಉತ್ತರ ಕೊಡಗಿನಲ್ಲಿ ಹೆಚ್ಚು ಕಂಡುಬರುತ್ತದೆ. ಅಕಾಲಿಕ ಮಳೆ ಹಾಗೂ ಪ್ರವಾಹದ ಪರಿಣಾಮ ಬೆಳೆಗಳು ಬೆಳಗಾರರ ಕೈಗೆ ಸಿಗದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡರೂ ಸಹ ಅದರ ಪ್ರಯೋಜನ ಪಡೆಯಲು ಸಾಧ್ಯವಾಗದೇ ಕಾಫಿ ಬೆಳೆಗಾರರು ಕೈ ಚೆಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದ್ದಾರೆ. ಕಾಫಿ ಬೆಳೆಗಳ ಕ್ಷೇತ್ರವನ್ನು ಉತ್ತೇಜಿಸಲ್ಪು ಸರ್ಕಾರ ಯಂತ್ರೋಪಕರಣಗಳ ಮೇಲಿನ ಸಬ್ಸಿಡಿ ಹಾಗೂ ವಿಮೆಯ ನೀತಿಗಳನ್ನು ಜಾರಿಗೊಳಿಸಬೇಕಿದೆ” – ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಡಾ.ಕಾವೇರಪ್ಪ.

“ಹವಾಮಾನ ವೈಪರೀತ್ಯದಿಂದಕಾಫಿ ಬೆಳೆಗಾರರಿಗೆ ಬಹಳ ತೊಂದರೆಯಾಗುತ್ತಿದೆ.ಕಳೆದ ಜುಲೈ ಅಂತ್ಯದಲ್ಲೇ ಸ್ವಲ್ಪ ಪ್ರಮಾಣದಲ್ಲಿ ಅರೇಬಿಕಾ ಕಾಫಿ ಅಕಾಲಿಕವಾಗಿ ಹಣ್ಣಾಗಿದ್ದು ಇದೀಗ ಮಳೆಯಿಂದಾಗಿ ಕೊಳೆಯುತ್ತಿದೆ. ಜತೆಗೆ ರೋಬಾಸ್ಟ ಕಾಫಿಯೂ ಉದುರುತ್ತಿದೆ. ಸರ್ಕಾರಕೂಡಲೇ ಬೆಳೆಗಾರರ ನೆರವಿಗೆ ಧಾವಿಸಬೇಕಾಗಿದೆ.” – ರಾಜೀವ್‌ ಭಟ್‌, ಕಾಫಿ ಬೆಳೆಗಾರರು, ಹಳ್ಳಿ ಬೈಲು ಗ್ರಾಮ

“ಅತಿಯಾದ ಮಳೆಯಿಂದ ಕಾಫಿನಾಡು ಶೀತದಿಂದ ಕೂಡಿದ್ದು ಕಾಫಿ, ಮೆಣಸು, ಅಡಿಕೆ ಮತ್ತಿತರ ಬೆಳೆಗಳು ನೆಲಕಚ್ಚುತ್ತಿವೆ. ಅತಿಯಾದ ಮಳೆಗೆ ಬೆಳೆಗೆ ಕೊಳೆರೋಗ ತಗುಲಿದೆ. ಅಕಾಲಿಕ ಮಳೆಗೆ ಅರೇಬಿಕಾ ಮೊದಲೇ ಹಣ್ಣಾದ ಕಾರಣ ಕಾಫಿ ಒಣಗಿಸಲಾಗದೆ ಅಪಾರ ನಷ್ಟ ಉಂಟಾಗಿದೆ. ಕಾಡು ಪ್ರಾಣಿಗಳಿಂದಲೂ ಸತತವಾಗಿ ಬೆಳೆಹಾನಿ ಆಗಿದೆ. ಸರ್ಕಾರ ಪರಿಹಾರ ನೀಡಿ ರೈತರನ್ನು ಪ್ರೋತ್ಸಾಹಿಸಬೇಕು –ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಾಲಕೃಷ್ಣ ಬಾಳೂರು.

‘ಅತಿವೃಷ್ಟಿ ಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂಡಿಗೆರೆ ತಾಲ್ಲೂಕು ಅತಿವೃಷ್ಟಿಯ ಪಟ್ಟಿಗೆ ಸೇರ್ಪಡೆಯಾಗಿರುವುದರಿಂದ ಬೆಳೆ ಹಾನಿ ಸಮೀಕ್ಷೆ ನಡೆಸಿ, ಬೆಳೆವಿಮೆ ಹಾಗೂ ಪರಿಹಾರ ನೀಡುವ ಅಗತ್ಯವಿದೆ. ಅರೇಬಿಕಾ ಕಾಫಿಯಂತೂ ತೋಟದಲ್ಲಿ ಉದುರಿ ಅಪಾರ ಹಾನಿಯಾಗಿದೆ’–ರೈತ ಸಂಘದ ರಾಜ್ಯ ಘಟಕದ ಮಹಿಳಾ ಉಪಾಧ್ಯಕ್ಷೆ ವನಶ್ರೀ ಲಕ್ಷ್ಮಣ್‍ಗೌಡ

Also read  Coffee Prices (Karnataka) on 28-07-2023