ಹವಾಮಾನ ಇಲಾಖೆ ಮುನ್ಸೂಚನೆ:ಕರಾವಳಿ, ಮಲೆನಾಡಿನಲ್ಲಿ ಮೂರು ದಿನ ಮಳೆ
ಬಂಗಾಳ ಕೊಲ್ಲಿಯ ವಾಯುವ್ಯ ಭಾಗದಲ್ಲಿ ಒಡಿಶಾ ಕರಾವಳಿ ಪ್ರದೇಶದ ಉತ್ತರ ವಲಯದ ಬಳಿ ವಾಯುಭಾರ ಕುಸಿತ ಉಂಟಾಗಿರುವುದರ ಪರಿಣಾಮವಾಗಿ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಸೋಮವಾರ ಬೆಳಿಗ್ಗೆ ಸಂದೇಶ ರವಾನಿಸಿರುವ ಹವಾಮಾನ ಇಲಾಖೆ, ‘ವಾಯುಭಾರ ಕುಸಿತದಿಂದ ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂಗಾರು ಮತ್ತೆ ಬಲಗೊಂಡಿದೆ. ಈ ಕಾರಣದಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಸೋಮವಾರದಿಂದ ಬುಧವಾರದವರೆಗೆ ಹೆಚ್ಚಿನ ಮಳೆಯಾಗಲಿದೆ. ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯೂ ಇದೆ’ ಎಂದು ತಿಳಿಸಿದೆ.