ಬಿಳಿಗಿರಿರಂಗನಬೆಟ್ಟ : ಹಿಂಗಾರು ಮಳೆ ಕೊರತೆಯಿಂದ ಹೂವಿನ ಎರೆಗಳು ಕಾಣಿಸದೆ ಕರಿಮೆಣಸು ಇಳುವರಿ ಕುಸಿಯುವ ಆತಂಕ
ಬಹುವಾರ್ಷಿಕ ಬಳ್ಳಿ ಕರಿಮೆಣಸು (ಪೈಪರ್ ನೀಗ್ರಮ್) ಹಿಂಗಾರು ಮಳೆ ಕೊರತೆಯಿಂದ ಹೂ ಕಾಣಿಸದೆ ಇಳುವರಿ ಕುಸಿಯುವ ಆತಂಕ ಎದುರಾಗಿದೆ.
ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಬಹುತೇಕ ಕೃಷಿಕರು ಕಾಫಿ, ಏಲಕ್ಕಿಯೊಡನೆ ಕರಿಮೆಣಸನ್ನು ಬೆಳೆಯುತ್ತಾರೆ. ತಂಪು ಉಷ್ಣತೆ, ಸಾಕಷ್ಟು ಮಳೆ ಹಾಗೂ ತಂಪು ಹವಾಗುಣ ಬಯಸುವ ತೋಟಗಾರಿಕಾ ಬೆಳೆ ಮೆಣಸನ್ನು ಬಹುತೇಕ ಪೋಡುಗಳ ಸುತ್ತಮುತ್ತ ಕಾಣಬಹುದು.
‘ತೋಟಗಾರಿಕಾ ಕೃಷಿಗೆ ಅಗತ್ಯವಾದ ಮಳೆ ಕಳೆದ ವರ್ಷ ಸುರಿದಿತ್ತು. 2017ರಲ್ಲಿ 1,716 ಮಿ.ಮೀ ಮಳೆ ಸುರಿದಿದೆ. 2018ರ ಜನವರಿಯಿಂದ ಜೂನ್ ಅಂತ್ಯಕ್ಕೆ 164 ಮಿ.ಮೀ ಮಳೆ ಬಂದಿದೆ. ಜೂನ್ ತಿಂಗಳಿಗೂ ಮುನ್ನ ಪೂರ್ವ ಮುಂಗಾರು ನಿರೀಕ್ಷಿಸಿದಷ್ಟು ಆಗಿಲ್ಲ. ಗುಣಮಟ್ಟದ ಕಾಳನ್ನು ಪಡೆಯಲು 10ರಿಂದ 40 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ ಹಾಗೂ ವಾರ್ಷಿಕ 125ರಿಂದ 200 ಸೆಂಟಿ ಮೀಟರ್ ಮಳೆ ಅಗತ್ಯ’ ಎನ್ನುತ್ತಾರೆ ಕೃಷಿ ಅಧಿಕಾರಿ ದೊಡ್ಡೇಗೌಡ.
ಕಳೆದ ಬಾರಿ ಮೆಣಸಿನ ಫಸಲು ಕೈಹಿಡಿದಿತ್ತು. ಉತ್ತಮ ಧಾರಣೆಯೂ ದಕ್ಕಿತ್ತು. ಈ ಬಾರಿ ನಿರೀಕ್ಷಿಸಿದಷ್ಟು ಫಸಲು ಕೈಸೇರದು ಎನ್ನುತ್ತಾರೆ ಹಿಡುವಳಿದಾರ ಸೀಗೇಗೌಡ.